ಮೈಸೂರು: ಚಾಮುಂಡಿ ಬೆಟ್ಟದಲ್ಲಿ ಮೂರನೇ ಆಷಾಢ ಮಾಸದ (Ashadha Masa) ಸಂಭ್ರಮ ಹಿನ್ನೆಲೆ ಮುಂಜಾನೆಯಿಂದಲೇ ನಾಡಿನ ಅಧಿದೇವತೆಗೆ ವಿಶೇಷ ಪೂಜೆ ಸಲ್ಲಿಸಲಾಗಿದೆ. ತಾಯಿಗೆ ರುದ್ರಾಭಿಷೇಕ, ಪಂಚಾಮೃತ ಅಭಿಷೇಕ, ಕುಂಕುಮಾರ್ಚನೆ ಮಾಡಿದ್ದು, ಬೆಳಗ್ಗೆಯಿಂದ ಭಕ್ತರಿಗೆ ಚಾಮುಂಡಿ ತಾಯಿ ದರ್ಶನಕ್ಕೆ ಅವಕಾಶ ನೀಡಿದ್ದು, ಇಂದು ರಾತ್ರಿ 9.30 ರವರೆಗೆ ದರ್ಶನಕ್ಕೆ ಅವಕಾಶವಿರಲಿದೆ. ಎಂದಿನಂತೆ ಖಾಸಗಿ ವಾಹನಗಳಿಗೆ ಬೆಟ್ಟಕ್ಕೆ ಪ್ರವೇಶ ನಿಷೇಧ ಮಾಡಿದ್ದು, ಮುಂಜಾಗೃತ ಕ್ರಮವಾಗಿ ಬೆಟ್ಟದಲ್ಲಿ ಬಿಗಿ ಪೊಲೀಸ್ ಬಂದೂಬಸ್ತ ಒದಗಿಸಲಾಗಿದೆ. ಜಿಲ್ಲಾಡಳಿತ ಬೆಟ್ಟಕ್ಕೆ ಉಚಿತ ಬಸ್ ವ್ಯವಸ್ಥೆ ಮಾಡಿದೆ. ಚಾಮುಂಡಿಬೆಟ್ಟದ ವಾಹನ ಪಾಸ್ಗಳು ರದ್ದು ಮಾಡಲಾಗಿದ್ದು, ತುರ್ತು ಕರ್ತವ್ಯಕ್ಕಾಗಿ ಪಾಸ್ ವಿತರಿಸಲಾಗಿತ್ತು. ಕಳೆದ ವಾರ ಪಾಸ್ ಗೊಂದಲದಿಂದಾಗಿ ಸಾಕಷ್ಟು ಸಮಸ್ಯೆಯಾಗಿತ್ತು.
ಇದನ್ನೂ ಓದಿ: ಮೈಸೂರು ಚಾಮುಂಡಿ ಬೆಟ್ಟದಲ್ಲಿ ಆಷಾಢ ಶುಕ್ರವಾರ: ಖಾಸಗಿ ವಾಹನಗಳಿಗೆ ನಿರ್ಬಂಧ; ಪಾಸ್ ರದ್ದು
ಹಾಗಾಗಿ ಈ ವಾರ ಪಾಸ್ಗೆ ಬ್ರೇಕ್ ಹಾಕಲಾಗಿದೆ. ಜುಲೈ 15, 22ರಂದು ಆಷಾಢ ಶುಕ್ರವಾರ ಮತ್ತು ಜುಲೈ 20ರಂದು ವರ್ಧಂತಿಗೂ ಪಾಸ್ ಕೊಡದಿರಲು ನಿರ್ಧರಿಸಲಾಗಿದೆ. ಚಾಮುಂಡಿಬೆಟ್ಟಕ್ಕೆ ತೆರಳುವವರು ಬಸ್ನಲ್ಲೇ ತೆರಳುವಂತೆ ಸೂಚನೆ ನೀಡಿದ್ದಾರೆ.
ಇದನ್ನೂ ಓದಿ: ಚಾಮುಂಡಿ ಬೆಟ್ಟದಲ್ಲಿ ರೋಪ್ವೇ ಯೋಜನೆ: ಸರ್ಕಾರದ ನಿರ್ಧಾರ ಸರಿ ಇದೆ ಎಂದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್
ನಾಡದೇವತೆ ಮಹಿಷಾಸುರ ಮರ್ದಿನಿ ಚಾಮುಂಡೇಶ್ವರಿ ತಾಯಿಗೆ ಆಷಾಢ ಮಾಸದಲ್ಲಿ ವಿಶೇಷ ಪೂಜೆಗೆ ಆಗಮಿಸುವ ಭಕ್ತರು ಕಡ್ಡಾಯವಾಗಿ ಕೊರೊನಾ 2ನೇ ಡೋಸ್ ಪಡೆದಿರುವ ಜೊತೆಗೆ ನೆಗೆಟಿವ್ ವರದಿಯ ಪ್ರತಿ ಕಡ್ಡಾಯ ತರಬೇಕು ಎಂದು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಸೋಮಶೇಖರ್ ಹೇಳಿದ್ದರು. ಪ್ರತಿ ವರ್ಷ ಆಷಾಢ ಮಾಸದ ಶುಕ್ರವಾರ ಚಾಮುಂಡೇಶ್ವರಿ ದೇವಿಗೆ ವಿಶೇಷ ಪೂಜೆ ಮಾಡಲಾಗುತ್ತದೆ. ಈ ಪೂಜೆಯನ್ನು ಕಣ್ಣತುಂಬಿಕೊಳ್ಳಲು ಅಪಾರ ಸಂಖ್ಯೆಯ ಭಕ್ತರು ಬಂದು ತಾಯಿಯ ದರ್ಶನ ಪಡೆದರು.
Published On - 8:35 am, Fri, 15 July 22