ಪ್ರಧಾನಿ ಮೋದಿ ಓಡಾಡೋದು ಐಷಾರಾಮಿ ವಿಮಾನದಲ್ಲಿ ಅಲ್ವಾ: ಮೈಸೂರಿನಲ್ಲಿ ಸಿಎಂ ಸಿದ್ದರಾಮಯ್ಯ ಪ್ರಶ್ನೆ
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, ದೇಶದಲ್ಲಿ ಯಾವುದೇ ಸ್ಥಿತಿ ಇದ್ದರೂ ಮೋದಿ ಓಡಾಡುವ ಫ್ಲೈಟ್ ಎಂಥದ್ದು? ಮೊದಲು ಅದನ್ನು ಬಿಜೆಪಿಯವರಿಗೆ ಕೇಳಿ ಎಂದು ಹೇಳಿದರು.
ಮೈಸೂರು, ಡಿಸೆಂಬರ್ 22: ಕರ್ನಾಟಕ ವಸತಿ, ಅಲ್ಪಸಂಖ್ಯಾತರ ಕಲ್ಯಾಣ ಮತ್ತು ವಕ್ಫ್ ಸಚಿವ ಜಮೀರ್ ಅಹ್ಮದ್ ಖಾನ್ ಜತೆ ಐಷಾರಾಮಿ ವಿಮಾನದಲ್ಲಿ (luxury jet) ಪ್ರಯಾಣಿಸಿದ್ದನ್ನು ಟೀಕಿಸಿದ ಬಿಜೆಪಿಗೆ ಸಿಎಂ ಸಿದ್ದರಾಮಯ್ಯ (Siddaramaiah) ತಿರುಗೇಟು ನೀಡಿದರು. ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಯಾವ ವಿಮಾನದಲ್ಲಿ ಓಡಾಡುತ್ತಾರೆ? ಅವರದ್ದು ಐಷಾರಾಮಿ ವಿಮಾನ ಅಲ್ಲವೇ ಎಂದು ಪ್ರಶ್ನೆ ಮಾಡಿದರು.
ದೇಶದಲ್ಲಿ ಯಾವುದೇ ಸ್ಥಿತಿ ಇದ್ದರೂ ಮೋದಿ ಓಡಾಡುವ ಫ್ಲೈಟ್ ಎಂಥದ್ದು? ಮೊದಲು ಅದನ್ನು ಬಿಜೆಪಿಯವರಿಗೆ ಕೇಳಿ ಎಂದು ಸಿದ್ದರಾಮಯ್ಯ ಹೇಳಿದರು.
ಸಂಸದರ ಅಮಾನತು ಪ್ರಜಾಪ್ರಭುತ್ವದ ಕಗ್ಗೊಲೆ: ಸಿದ್ದರಾಮಯ್ಯ
ಲೋಕಸಭೆ, ರಾಜ್ಯಸಭೆಯ ವಿಪಕ್ಷ ಸಂಸದರ ಅಮಾನತು ವಿಚಾರವಾಗಿ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಸಿದ್ದರಾಮಯ್ಯ, ಇದು ಪ್ರಜಾಪ್ರಭುತ್ವದ ಕಗ್ಗೊಲೆ, ಸರ್ವಾಧಿಕಾರದ ಪರಮಾವಧಿ ಎಂದರು. ಬಿಜೆಪಿಯವರಿಗೆ ಪ್ರಜಾಪ್ರಭುತ್ವದ ಆಶಯಗಳ ಮೇಲೆ ನಂಬಿಕೆ ಇಲ್ಲ ವಿಪಕ್ಷಗಳ ಮಾತನ್ನು ಕೇಳಿಸಿಕೊಳ್ಳಲ್ಲ ಅಂದರೆ ಅರ್ಥ ಏನು? ಬಿಜೆಪಿ ಪ್ರಜಾಪ್ರಭುತ್ವವೇ ಇಲ್ಲ ಎಂಬ ವಾತಾವರಣ ಸೃಷ್ಟಿಸುತ್ತಿದೆ. ಮುಂಬರುವ ಚುನಾವಣೆಯಲ್ಲೂ ಜನ ಇವರಿಗೆ ಪಾಠ ಕಲಿಸುತ್ತಾರೆ ಎಂದು ಅವರು ಹೇಳಿದರು.
ಇದನ್ನೂ ಓದಿ: ಐಷಾರಾಮಿ ವಿಮಾನದಲ್ಲಿ ಸಿದ್ದರಾಮಯ್ಯ ಜತೆ ಜಮೀರ್ ಅಹ್ಮದ್ ಪ್ರಯಾಣ ವಿಡಿಯೋ ವೈರಲ್: ಬಿಜೆಪಿ ಕಿಡಿ
ಪ್ರವಾಸಿ ತಾಣ ಬಂದ್ ಇಲ್ಲ
ಕೋವಿಡ್ ಭೀತಿಯ ಕಾರಣಕ್ಕೆ ಪ್ರವಾಸಿ ತಾಣಗಳನ್ನು ಬಂದ್ ಮಾಡುವ ವಿಚಾರ ಸದ್ಯಕ್ಕಿಲ್ಲ ಎಂದು ಸಿದ್ದರಾಮಯ್ಯ ತಿಳಿಸಿದರು. ಕೋವಿಡ್ ಹರಡುವಿಕೆ ತಡೆಗೆ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳುವಂತೆ ಸೂಚನೆ ನೀಡಲಾಗಿದೆ. ಮೈಸೂರಿನಲ್ಲಿ 6 ಜನರಿಗೆ ಕೊವಿಡ್ ಪಾಸಿಟಿವ್ ಆಗಿದೆ. ಮೈಸೂರಿನ ಕೊರೊನಾ ಸೋಂಕಿತರಿಗೆ ಟ್ರಾವೆಲ್ ಹಿಸ್ಟರಿ ಇಲ್ಲ. ಬೇರೆ ಬೇರೆ ರೋಗದ ಹಿನ್ನೆಲೆಯಲ್ಲಿ ಪಾಸಿಟಿವ್ ಕಾಣಿಸಿಕೊಂಡಿದೆ. ಎಲ್ಲರೂ ಕೋವಿಡ್ ನಿಯಮ ಪಾಲಿಸಿ ಎಚ್ಚರಿಕೆಯಿಂದ ಇರಬೇಕು ಎಂದು ಸಿದ್ದರಾಮಯ್ಯ ಸಲಹೆ ನೀಡಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ