ಮೈಸೂರು, ಆಗಸ್ಟ್ 31: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ನಿವೇಶ ಹಂಚಿಕೆಯಲ್ಲಿ ನಡೆದಿದೆ ಎನ್ನಲಾಗಿರುವ ಹಗರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರ ಪಾತ್ರವೂ ಇದೆ ಅಂತ ರಾಜ್ಯಪಾಲರಿಗೆ ವಿರುದ್ಧ ದೂರು ನೀಡಿದ್ದ ಆರ್ಟಿಐ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಅವರ ವಿರುದ್ಧ ಮೈಸೂರು (Mysore) ಪೊಲೀಸ್ ಆಯುಕ್ತರಿಗೆ ಕಾಂಗ್ರೆಸ್ ನಾಯಕ ಎಂ.ಲಕ್ಷ್ಮಣ (M Laxman) ದೂರು ನೀಡಿದ್ದಾರೆ.
ಸ್ನೇಹಮಯಿ ಕೃಷ್ಣ ವಿರುದ್ಧ ರಾಜ್ಯದ ಹಲವೆಡೆ 17 ಕ್ರಿಮಿನಲ್ ಕೇಸ್ಗಳು ದಾಖಲಾಗಿವೆ. ಆಸ್ತಿ ವಿಚಾರದಲ್ಲಿ ಹಸ್ತಕ್ಷೇಪ ಮಾಡಿ ಭೂಮಿ ವಶಪಡಿಸಿಕೊಳ್ಳುವುದು, ನನ್ನನ್ನು ಸೇರಿ ನಗರದ ಗಣ್ಯರನ್ನು ಹೆದರಿಸುವ ಕೆಲಸ ಮಾಡುತ್ತಿದ್ದಾನೆ. ಆರ್ಟಿಐ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ವಿರುದ್ಧ ಕ್ರಮ ಕೈಗೊಳ್ಳಿ. ಸ್ನೇಹಮಯಿ ಕೃಷ್ಣರನ್ನು ಗಡಿಪಾರು ಮಾಡಿ ಗೂಂಡಾ ಕಾಯ್ದೆ ಪ್ರಕರಣ ದಾಖಲಿಸುವಂತೆ ಮನವಿ ಮಾಡಿದ್ದಾರೆ.
ಸ್ನೇಹಮಯಿ ಕೃಷ್ಣ ಅವರು 2022-2023ನೇ ಸಾಲಿನಲ್ಲಿ ಒಟ್ಟು 110 ಅರ್ಜಿಗಳನ್ನು RTI ಮೂಲಕ ವಿವಿಧ ಇಲಾಖೆಗಳಿಗೆ ನೀಡಿ ದಾಖಲಾತಿಗಳನ್ನು ಪಡೆದು ಕೊಂಡಿದ್ದಾರೆ ಎಂದು ಪೊಲೀಸ್ ವರದಿ ಹೇಳುತ್ತಿದೆ. ಕೆಲ ಇಲಾಖೆಗಳ ನಕಲಿ ಸೀಲ್‌ಗಳನ್ನು ಇಟ್ಟುಕೊಂಡು ಹಾಗೂ RTI ಮಾಹಿತಿ ಸೀಲ್‌ಗಳನ್ನು ನಕಲಿಯಾಗಿ ಮಾಡಿಸಿಕೊಂಡು ದಾಖಲೆಗಳನ್ನು ತಿರುಚಿ ಮತ್ತು ಕೆಲ ಅಕ್ಷರಗಳಿಗೆ whitenerನ್ನು ಹಚ್ಚಿರುವುದು ಕಂಡು ಬಂದಿದೆ.
ಇದನ್ನೂ ಓದಿ: ಮುಡಾ ಹಗರಣ ಆರೋಪಿತ ಅಧಿಕಾರಿ ಹಾವೇರಿ ವಿಶ್ವವಿದ್ಯಾಲಯದ ಕುಲಸಚಿವ!
ಇವರ ವಿರುದ್ಧ ಸುಮಾರು 17 ಕ್ರಿಮಿನಲ್ ಪ್ರಕರಣಗಳು 10 ವರ್ಷದಿಂದ ಇದ್ದರೂ ಪೊಲೀಸ್ ಇಲಾಖೆ ಸೆಕ್ಯೂರಿಟಿ ಕೇಸ್ನ್ನು 6 ತಿಂಗಳಿಗೊಮ್ಮೆ ಹಾಕಬೇಕಾಗಿರುವ ನಿಯಮವಿದ್ದರೂ ಹಾಕಿರುವುದಿಲ್ಲವೇಕೆ? ಇವರು ಒಬ್ಬ ರೌಡಿ ಶೀಟರ್ ಆಗಿದ್ದು ನಿರಂತರವಾಗಿ ನಗರದ ಗಣ್ಯರನ್ನು ಮತ್ತು ನನ್ನನ್ನು ಬ್ಲಾಕ್‌ಮೇಲ್ ಮಾಡುತ್ತಿರುವ ಚಟುವಟಿಕೆಯಲ್ಲಿ ಸಕ್ರಿಯನಾಗಿದ್ದರೂ ಇವರ ಮೇಲೆ ಸೆಕ್ಯೂರಿಟಿ ಕೇಸ್ನ್ನು ಪೊಲೀಸರು ಹಾಕದಿರುವುದು ಎಷ್ಟರಮಟ್ಟಿಗೆ ಸರಿ? ಇವನು ಒಬ್ಬ Habitual Black mailer ಆಗಿದ್ದರೂ ಮತ್ತು Extortion ನಲ್ಲಿ ತೊಡಗಿಸಿಕೊಂಡಿದ್ದರೂ ಪೊಲೀಸ್ ಇಲಾಖೆ ಜಾಣ ಕುರುಡನ್ನು ಪ್ರದರ್ಶಿಸುತ್ತಿರುವುದು ಎಷ್ಟು ಸರಿ? ಎಂದು ಪ್ರಶ್ನಿಸಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:16 am, Sat, 31 August 24