ಆಷಾಢ ಮಾಸದ ಮೊದಲ ಶುಕ್ರವಾರ, ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ಸಡಗರ ಸಂಭ್ರಮ: ಭಕ್ತರಿಗೆ ಪ್ರಸಾದವಾಗಿ ಮ್ಯಾಂಗೋ ಬರ್ಫಿ
ಇಂದು ಆಷಾಢ ಮಾಸದ ಮೊದಲ ಶುಕ್ರವಾರ ಹಿನ್ನೆಲೆಯಲ್ಲಿ ಸಾಂಸ್ಕೃತಿಕ ನಗರಿ ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ಸಡಗರ ಸಂಭ್ರಮ ಮನೆ ಮಾಡಿದೆ.

ಮೈಸೂರು : ಆಷಾಢ ಮಾಸದ ಮೊದಲ ಶುಕ್ರವಾರ Ashada Friday) ನಾಡದೇವತೆ ಚಾಮುಂಡೇಶ್ವರಿ(chamundeshwari) ವರ್ಧಂತಿ ಹಿನ್ನೆಲೆಯಲ್ಲಿ ಸಾಂಸ್ಕೃತಿಕ ನಗರಿ ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ (Mysuru Chamundi Hills) ಸಡಗರ ಸಂಭ್ರಮ ಮನೆ ಮಾಡಿದೆ. ಇಂದು ನಸುಕಿನ ವೇಳೆಯಿಂದಲೇ ತಾಯಿ ಚಾಮುಂಡೇಶ್ವರಿಗೆ ವಿಶೇಷ ಪೂಜೆ ಕೈಂಕರ್ಯ ನಡೆಯುತ್ತಿದ್ದು, ತಾಯಿ ಚಾಮುಂಡೇಶ್ವರಿ ಲಕ್ಷ್ಮೀ ಅಲಂಕಾರದಿಂದ ಕಂಗೊಳಿಸುತ್ತಿದ್ದಾಳೆ. ದೇವಾಲಯದ ಆವರಣದಲ್ಲಿ ವಿವಿಧ ಹೂ ಹಾಗೂ ಹಣ್ಣುಗಳಿಂದ ಅಲಂಕಾರಿಸಲಾಗಿದೆ. ಚಾಮುಂಡೇಶ್ವರಿಗೆ ರುದ್ರಾಭಿಷೇಕ, ಪಂಚಾಮೃತ ಅಭಿಷೇಕ, ಕುಂಕುಮಾರ್ಚನೆ ಮಹಾಮಂಗಳಾರತಿ ನಡೆದಿದ್ದು, 65 ವರ್ಷ ಮೇಲ್ಪಟ್ಟವರಿಗೆ 50 ರೂ ಟಿಕೆಟ್ ಲೈನ್ ನಲ್ಲಿ ನೇರ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.
ಭಕ್ತರಿಗೆ ಪ್ರಸಾದವಾಗಿ ಮ್ಯಾಂಗೋ ಬರ್ಫಿ
ದೇವಿ ದರ್ಶನಕ್ಕೆ ಬರುವ ಭಕ್ತರಿಗೆ ವಿಶೇಷ ಪ್ರಸಾದವಾಗಿ ಮ್ಯಾಂಗೋ ಬರ್ಫಿ ನೀಡಲಾಗುತ್ತಿದೆ. ಚಾಮುಂಡೇಶ್ವರಿ ಸೇವಾ ಸಮಿತಿಯಿಂದ ಈ ಪ್ರಸಾದ ಹಂಚಿಕೆಯಾಗಲಿದ್ದು, ಈಗಾಗಲೇ ಬರೋಬ್ಬರಿ 25 ಸಾವಿರ ಮ್ಯಾಂಗೋ ಬರ್ಫಿ ತಯಾರಿಸಲಾಗಿದೆ. 30 ಕೆಜಿ ಮೈದಾ, 200 ಕೆಜಿ ಆಲ್ಕೋವಾ, 400 ಕೆಜಿ ಸಕ್ಕರೆ, 100 ಲೀಟರ್ ಮಾವಿನಹಣ್ಣಿನ ಫಲ್ಪ್, 5 ಕೆಜಿ ಬಾದಾಮಿ, 2 ಟಿನ್ ನಂದಿನಿ ತುಪ್ಪ, 30 ಕೆಜಿ ಮಿಲ್ಕ್ ಪೌಡರ್ ಬಳಸಿ ಮ್ಯಾಂಗೋ ಬರ್ಫಿ ತಯಾರಿಸಲಾಗಿದೆ. ಒಟ್ಟು 8 ಜನ ಬಾಣಸಿಗರಿಂದ ಬರೋಬ್ಬರಿ 25 ಸಾವಿರ ಮ್ಯಾಂಗೋ ಬರ್ಫಿ ತಯಾರಾಗಿದೆ.
ಖಾಸಗಿ ವಾಹನ ಪ್ರವೇಶ ನಿಷೇಧ
ಆಗಮಿಸುವ ಭಕ್ತಾದಿಗಳ ಖಾಸಗಿ ವಾಹನ ಸಂಚಾರವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ತಾವರೆಕಟ್ಟೆ ಕಡೆಯಿಂದ, ಉತ್ತನಹಳ್ಳಿ ರಸ್ತೆ ಕಡೆಯಿಂದ ಮತ್ತು ಇಂಡಸ್‌ವ್ಯಾಲಿ ರಸ್ತೆ ಮೂಲಕ ಚಾಮುಂಡಿ ಬೆಟ್ಟಕ್ಕೆ ಹೋಗುವ ಎಲ್ಲಾ ಮಾದರಿಯ ವಾಹನಗಳ ಸಂಚಾರವನ್ನು ನಿರ್ಬಂಧಿಸಲಾಗಿದ್ದು, ಜಿಲ್ಲಾಡಳಿತದಿಂದ ಭಕ್ತರಿಗೆ ಕೆಎಸ್‌ಆರ್‌ಟಿಸಿ ಉಚಿತ ಬಸ್ ವ್ಯವಸ್ಥೆ ಮಾಡಲಾಗಿದೆ. ಅದು ಉಚಿತ ಎಂದು ನಗರ ಪೊಲೀಸ್ ಆಯುಕ್ತ ರಮೇಶ್ ಬಾನೋತ್ ಮಾಹಿತಿ ನೀಡಿದ್ದಾರೆ.
ಜೂನ್ 23, ಜೂ. 30, ಜುಲೈ 7, 14ರ ಆಷಾಢ ಶುಕ್ರವಾರ ಮತ್ತು ಜುಲೈ 10ರಂದು ನಾಡದೇವತೆ ಚಾಮುಂಡೇಶ್ವರಿ ವರ್ಧಂತಿಯಂದು ಉಚಿತ ಬಸ್ ಸೇವೆ ಇರಲಿದೆ. ಬೆಟ್ಟಕ್ಕೆ ಬರುವ ಭಕ್ತರು ತಮ್ಮ ವಾಹನಗಳನ್ನು ಲಲಿತ ಮಹಲ್ ಮೈದಾನದಲ್ಲಿ ನಿಲುಗಡೆ ಮಾಡಿ ಜಿಲ್ಲಾಡಳಿತದ ವತಿಯಿಂದ ವ್ಯವಸ್ಥೆ ಮಾಡಿರುವ ಬಸ್‌ಗಳಲ್ಲಿ ದೇವಸ್ಥಾನಕ್ಕೆ ತೆರಳಬಹುದಾಗಿದೆ. ಮುಂಜಾನೆ 3 ಗಂಟೆಯಿಂದ ರಾತ್ರಿ 10ರವರೆಗೆ ಉಚಿತ ಬಸ್ ಸೌಲಭ್ಯವನ್ನು ಕಲ್ಪಿಸಲಾಗಿದೆ. ಇನ್ನು ಬೆಟ್ಟದ ಪಾದದಿಂದ ಮೆಟ್ಟಿಲು ಮುಖಾಂತರ ದೇವಸ್ಥಾನಕ್ಕೆ ಹೋಗುವ ಭಕ್ತರು ವಾಹನಗಳನ್ನು ಪಿಂಜರಾಪೋಲ್ ಮುಂಭಾಗದ ಮೈದಾನದಲ್ಲಿ ಹಾಗೂ ಪೊಲೀಸರು ಸೂಚಿಸುವ ಪಾರ್ಕಿಂಗ್ ಸ್ಥಳದಲ್ಲಿ ನಿಲ್ಲಿಸಿ ದೇವಸ್ಥಾನಕ್ಕೆ ಹೋಗಬೇಕು.
ಆಷಾಢ ಶುಕ್ರವಾರಕ್ಕೆ ಚಾಮುಂಡಿ ಬೆಟ್ಟದಲ್ಲಿ ಜನಸಂದಣಿ ಹೆಚ್ಚಾಗಲಿದ್ದು, ಈ ಬಗ್ಗೆ ಸಾರ್ವಜನಿಕರಿಗೆ ದೇವರ ದರ್ಶನಕ್ಕೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ನಗರದ ಪೊಲೀಸ್ ಆಯುಕ್ತರಾದ ರಮೇಶ್ ಅವರೊಂದಿಗೆ ಜಂಟಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು. ಆಷಾಢ ಮಾಸದಲ್ಲಿ ಚಾಮುಂಡಿ ಬೆಟ್ಟಕ್ಕೆ ಬರುವ ಭಕ್ತಾದಿಗಳಿಗೆ ವಿಶೇಷ ಸೂಚನೆ ನೀಡಲಾಗುತ್ತಿದೆ. ಭಕ್ತಾದಿಗಳಿಗೆ ಅನುಕೂಲವಾಗುವ ರೀತಿಯಲ್ಲಿ ಅನೇಕ ವ್ಯವಸ್ಥೆ ಮಾಡಲಾಗಿದೆ.
ವಿಶೇಷ ದರ್ಶನಕ್ಕೆ ಕೌಂಟರ್
ಸರ್ವರ ದರ್ಶನಕ್ಕೆ ದೇವಸ್ಥಾನದಲ್ಲಿ ದೇವರ ದರ್ಶನಕ್ಕೆ 300 ಮತ್ತು 50 ರೂಪಾಯಿ ಟಿಕೆಟ್ ವಿತರಣೆ ಮಾಡಲಾಗುತ್ತದೆ. ಪ್ಲಾಸ್ಟಿಕ್ ಮುಕ್ತವಾದ ಆಷಾಡಮಾಸ ಆಚರಣೆ ಮಾಡಲು ಸಿದ್ಧತೆ ಮಾಡಲಾಗಿದೆ. ಎಲ್ಲಂದರಲ್ಲಿ ಪ್ಲಾಸ್ಟಿಕ್ ಬಿಸಾಡಿದವರಿಗೆ ದಂಡ ಬೀಳಲಿದೆ. ಮೆಟ್ಟಿಲುಗಳು ಮತ್ತು ದೇವಸ್ಥಾನ ಸೇರಿದಂತೆ ಅನೇಕ ಭಾಗಗಳಲ್ಲಿ ಕ್ಯಾಮೆರಗಳ ಅಳವಡಿಕೆ ಮಾಡಲಾಗಿದೆ.
ಇನ್ನಷ್ಟು ಮೈಸೂರು ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
Published On - 6:57 am, Fri, 23 June 23