ಮೈಸೂರು, ಅ.21: ಅರಮನೆ ನಗರಿ ಮೈಸೂರಿನಲ್ಲಿ ದಸರಾ (Mysuru Dasara) ಸಂಭ್ರಮ ಮನೆ ಮಾಡಿದೆ. ರಾಜ್ಯ, ಹೊರ ರಾಜ್ಯದಿಂದೆಲ್ಲ ಸಾವಿರಾರು ಪ್ರವಾಸಿಗರು ಆಗಮಿಸಿ ಮೈಸೂರಿನ ಅಂದವನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ. ಇದರ ನಡುವೆ ಅಹಿತಕರ ಘಟನೆಯೊಂದು ನಡೆದಿದೆ. ಬೇಗ ಹೋಗಿ ಎಂದು ಹೇಳಿದಕ್ಕೆ ದಸರಾ ನೋಡಲು ಬಂದವರು ಪೊಲೀಸರ (Mysuru Police) ಮೇಲೆಯೇ ಹಲ್ಲೆ ನಡೆಸಿದ್ದಾರೆ. ಕರ್ತವ್ಯದಲ್ಲಿದ್ದ ಪೊಲೀಸ್ ಸಿಬ್ಬಂದಿ ವೈ.ರಾಜು, ಅರುಣ್ ಕೌಶಿಕ್ ಮೇಲೆ ನಡುರಸ್ತೆಯಲ್ಲೇ ಹಲ್ಲೆ ನಡೆಸಿದ್ದಾರೆ. ಘಟನೆ ಸಂಬಂಧ ಬೆಂಗಳೂರಿನ ಐವರ ಮೇಲೆ ಎಫ್ಐಆರ್ ದಾಖಲಾಗಿದೆ.
ಮೈಸೂರಿನ ಹಾರ್ಡಿಂಗ್ ಸರ್ಕಲ್ ವೃತ್ತದಲ್ಲಿ ಕರ್ತವ್ಯದಲ್ಲಿದ್ದ ಪೊಲೀಸ್ ಸಿಬ್ಬಂದಿ ವೈ.ರಾಜು, ಅರುಣ್ ಕೌಶಿಕ್ ಅವರು ರಸ್ತೆಯಲ್ಲಿ ಜನಸಂದಣಿ ನಿಯಂತ್ರಿಸಲು ಜನರನ್ನು ಬೇಗ ಹೋಗುವಂತೆ ಹೇಳುತ್ತಿದ್ದರು. ಟ್ರಾಫಿಕ್ ಜಾಮ್ ಆಗುತ್ತೆ ಮುಂದೆ ಹೋಗಿ. ಬೇಗ ಹೋಗಿ ಎಂದಿದ್ದಕ್ಕೆ ಐವರು ಸೇರಿಕೊಂಡು ಪೊಲೀಸರ ಮೇಲೆಯೇ ದೌರ್ಜನ್ಯ ಎಸಗಿದ್ದಾರೆ. ಘಟನೆ ಸಂಬಂದ ದಸರಾ ವೀಕ್ಷಣೆಗೆ ಬಂದಿದ್ದ ಬೆಂಗಳೂರು ಮೂಲದ ಉಮೇಶ್, ಹರೀಶ್, ಧ್ರುವ, ಲತಾ, ಗಾನವಿ ವಿರುದ್ಧ ಎಫ್ಐಆರ್ ದಾಖಲಾಗಿದೆ. ಮೈಸೂರಿನ ದೇವರಾಜ ಪೊಲೀಸ್ ಠಾಣೆಯಲ್ಲಿ FIR ದಾಖಲಾಗಿದೆ.
ಇದನ್ನೂ ಓದಿ: ಪೊಲೀಸ್ ಇಲಾಖೆಗೆ ಬೆಲ್ಜಿಯಂ ನಾಯಿಮರಿ ಉಡುಗೊರೆ ನೀಡಿದ ಕೋಲಾರ ಹೆಡ್ ಕಾನ್‌ಸ್ಟೆಬಲ್, ಏನಿದರ ವಿಶೇಷತೆ?
ಇನ್ನು ಮತ್ತೊಂದೆಡೆ ಬೆಂಗಳೂರಿನ ಪೂರ್ವ ವಿಭಾಗದ ಪೊಲೀಸರು ಕಾರ್ಯಾಚರಣೆ ನಡೆಸಿ ಬೈಕ್ ಕಳ್ಳತನ ಮಾಡ್ತಿದ್ದ ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರಿಂದ 50 ಲಕ್ಷಕ್ಕೂ ಹೆಚ್ಚು ಮೌಲ್ಯದ 60 ಬೈಕ್ಗಳನ್ನ ಜಪ್ತಿ ಮಾಡಲಾಗಿದೆ.
ರಾಮಮೂರ್ತಿ ನಗರ, ಕಮರ್ಷಿಯಲ್ ಸ್ಟ್ರೀಟ್, ಹೆಣ್ಣೂರು ಪೊಲೀಸರು ಮೂರು ಠಾಣಾ ವ್ಯಾಪ್ತಿಯಲ್ಲಿ ದ್ವಿಚಕ್ರ ವಾಹನ ಕಳ್ಳರ ವಿರುದ್ಧ ವಿಶೇಷ ಕಾರ್ಯಾಚರಣೆ ನಡೆಸಿದ್ದಾರೆ. ಕಮರ್ಷಿಯಲ್ ಸ್ಟ್ರೀಟ್ ಪೊಲೀಸರು ಕಾನೂನು ಸಂಘರ್ಷಕ್ಕೆ ಒಳಗಾದ ನಾಲ್ವರು ಬಾಲಕರನ್ನು ಬಂಧಿಸಿದ್ದಾರೆ. ಬಂಧಿತರಿಂದ 27 ಬೈಕ್ಗಳನ್ನು ಜಪ್ತಿ ಮಾಡಲಾಗಿದೆ. ಹೆಣ್ಣೂರು ಪೊಲೀಸರು ಮುಬಾರಕ್ ಎಂಬಾತನನ್ನ ಬಂಧಿಸಿ 9ಬೈಕ್ ಜಪ್ತಿ ಮಾಡಿದ್ದಾರೆ. ರಾಮಮೂರ್ತಿ ನಗರ ಪೊಲೀಸರು ಸೈಯದ್ ರಿಜ್ವಾನ್, ಮೊಹಮ್ಮದ್ ಸಲ್ಮಾನ್ ಎಂಬ ಇಬ್ಬರನ್ನ ಬಂಧಿಸಿ 16 ಬೈಕ್ ಗಳನ್ನು ಜಪ್ತಿ ಮಾಡಿದ್ದಾರೆ. ಪೂರ್ವ ವಿಭಾಗದಲ್ಲಿ ಇತ್ತೀಚೆಗೆ ದ್ವಿಚಕ್ರ ವಾಹನ ಕಳ್ಳತನ ಹೆಚ್ಚಾಗಿತ್ತು. ಈ ಬೆನ್ನಲ್ಲೇ ಸ್ಪೆಷಲ್ ಡ್ರೈವ್ ಮಾಡಿ ಹಲವರನ್ನು ಬಂಧಿಸಿದ್ದಾರೆ.
ಅಪರಾಧ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ