ಮೈಸೂರು: ದಿನೇ ದಿನೇ ಕಾಡು ಪ್ರಾಣಿ ಮಾನವ ಸಂಘರ್ಷ ತಾರಕಕ್ಕೇರಿದೆ. ಅದರಲ್ಲೂ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಕಾಡಿನಿಂದ ನಾಡಿಗೆ ಬರುತ್ತಿರುವ ಕಾಡು ಪ್ರಾಣಿಗಳು ಜನರ ನಿದ್ದೆಗೆಡಿಸಿವೆ. ಹುಲಿ, ಚಿರತೆ, ಆನೆಗಳು ನಿರಂತರವಾಗಿ ನಾಡಿಗೆ ಬಂದು ಆತಂಕವನ್ನುಂಟು ಮಾಡಿವೆ. ಅದರಲ್ಲೂ ಇತ್ತೀಚೆಗೆ ಚಿರತೆ (Leopard) ಕಾಟ ಹೆಚ್ಚಾಗಿದೆ. ಈ ಒಂದು ವಾರದ ಅಂತರದಲ್ಲಿ 5ಕ್ಕೂ ಹೆಚ್ಚು ಚಿರತೆಗಳನ್ನು ಸೆರೆ ಹಿಡಿದು ಕಾಡಿಗೆ ಬಿಡಲಾಗಿದೆ.
ಇನ್ನು ಚಿರತೆಯನ್ನು ಸೆರೆ ಹಿಡಿಯುವುದು ಅಷ್ಟು ಸುಲಭದ ಕೆಲಸವಲ್ಲ. ಸಾಕಷ್ಟು ಕಷ್ಟಕರವಾದ ಕೆಲಸ. ಸಾಮಾನ್ಯವಾಗಿ ಚಿರತೆ ಕಾಡಿನಿಂದ ನಾಡಿಗೆ ಬಂದ ಬಗ್ಗೆ ಗ್ರಾಮಸ್ಥರಿಂದ ಮಾಹಿತಿ ಬಂದ ತಕ್ಷಣ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಾರೆ. ಸಾಮಾನ್ಯವಾಗಿ ಹುಲಿಯ ರೀತಿ ಚಿರತೆಯ ಹೆಜ್ಜೆ ಗುರುತುಗಳು ಸಿಗುವುದಿಲ್ಲ. ಗ್ರಾಮಸ್ಥರು ನೀಡುವ ಮಾಹಿತಿಯನ್ನಾಧರಿಸಿಯೇ ಕಾರ್ಯಾಚರಣೆ ನಡೆಸಬೇಕಾಗುತ್ತದೆ. ಮೊದಲು ಚಿರತೆ ಸೆರೆಗೆ ಬೋನನ್ನು ಸೂಕ್ತ ಸ್ಥಳದಲ್ಲಿ ಇಡಬೇಕು.
ಇದನ್ನೂ ಓದಿ: ಮೈಸೂರಿನಲ್ಲಿ ಬೋನಿಗೆ ಬಿದ್ದ ಮತ್ತೊಂದು ಚಿರತೆ
ಚಿರತೆಯ ಬೋನನ್ನು ಗಟ್ಟಿಯಾದ ಕಬ್ಬಿಣದಿಂದ ಮತ್ತು ಸ್ಟೀಲ್‌ನಿಂದ ತಯಾರಿಸಲಾಗಿರುತ್ತದೆ. ಬೋನು ಸುಮಾರು ಏಳುವರೆ ಅಡಿ ಉದ್ದ ಹಾಗೂ ಮೂರು ಕಾಲು ಅಡಿ ಅಗಲವಿರುತ್ತದೆ. ಬೋನಿನಲ್ಲಿ ಎರಡು ಭಾಗವಿರುತ್ತದೆ. ಒಂದು ಭಾಗದಲ್ಲಿ ಚಿರತೆಯನ್ನು ಆಕರ್ಷಿಸಲು ಪ್ರಾಣಿಯನ್ನು ಕಟ್ಟುವುದು, ಮತ್ತೊಂದು ಚಿರತೆಯ ಸೆರೆಗೆ ಸ್ಥಳಾವಕಾಶ. ಬೋನನ್ನು ಇರಿಸಿ ಅದರಲ್ಲಿ ಪ್ರಾಣಿಯನ್ನು ಇರಿಸಿದ ನಂತರ ಬೋನಿನ ಸುತ್ತ ಸೊಪ್ಪು ಹಾಗೂ ತೆಂಗಿನ ಗರಿಯನ್ನು ಹೊದಿಸಲಾಗುತ್ತದೆ. ಕಪ್ಪು ಬಣ್ಣದ ಟಾರ್ಪಲ್ ಮುಚ್ಚಿ ಕೊಟ್ಟಿಗೆ ರೀತಿ ಬಿಂಬಿಸಲಾಗುತ್ತದೆ. ಬೋನಿಗೆ ಹಸಿರು ಬಣ್ಣವನ್ನು ಬಳಿಯಲಾಗಿರುತ್ತದೆ.
ಸಾಮಾನ್ಯವಾಗಿ ಕಾಡಿನಿಂದ ನಾಡಿಗೆ ಬರುವ ಚಿರತೆಗಳು ಸುಲಭವಾಗಿ ಸಿಗುವ ಬೇಟೆಗಾಗಿ ಹವಣಿಸುತ್ತಿರುತ್ತವೆ. ಸಾಮಾನ್ಯವಾಗಿ ಬೋನಿನಲ್ಲಿ ಇರುವ ಪ್ರಾಣಿಯನ್ನು ನೋಡಿದ ತಕ್ಷಣ ಚಿರತೆ ಹಿಂದೆ ಮುಂದೆ ನೋಡದೆ ಅದನ್ನು ಹಿಡಿಯಲು ಧಾವಿಸುತ್ತದೆ. ಸುಲಭವಾಗಿ ಬೋನಿನ ಪಾಲಾಗುತ್ತದೆ. ಸಾಮಾನ್ಯವಾಗಿ ಬೆಳಗಿನ ಜಾವದಲ್ಲಿ ಹೆಚ್ಚಾಗಿ ಚಿರತೆಗಳು ಬೋನಿಗೆ ಬೀಳುತ್ತವೆ. ಬೋನಿಗೆ ಚಿರತೆ ಬಿದ್ದ ಮಾಹಿತಿ ಸಿಕ್ಕ ತಕ್ಷಣ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸುತ್ತಾರೆ. ಚಿರತೆಯನ್ನು ಅಲ್ಲಿಂದ ಲಾರಿಯ ಮೂಲಕ ಅರಣ್ಯ ಭವನಕ್ಕೆ ತೆಗೆದುಕೊಂಡು ಹೋಗಲಾಗುತ್ತದೆ. ಅಲ್ಲಿ ಚಿರತೆಗೆ ಪ್ರಾಥಮಿಕ ಚಿಕಿತ್ಸೆ ನೀಡಿ ಗುರುತಿನ ಚಿಪ್ ಅಳವಡಿಸಿ. ನಂತರ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳ ಅನುಮತಿ ಪಡೆದು ನಾಗರಹೊಳೆ ಅಥವಾ ಬಂಡೀಪುರ ಅಭಯಾರಣ್ಯಕ್ಕೆ ಚಿರತೆಯನ್ನು ಬಿಡಲಾಗುತ್ತದೆ.
ಇದನ್ನೂ ಓದಿ: ಅರಣ್ಯಾಧಿಕಾರಿಯ ಪ್ರತಿಷ್ಠೆಗೆ ಜನ ಕಂಗಾಲು, ಬಡ ಗ್ರಾಮಸ್ಥರಿಗೆ ಕಾಡುಮೇಡಿನ ದುರ್ಗಮ ಹಾದಿಯೇ ಗತಿ!
ನಮಗೆ ಚಿರತೆ ಸೆರೆ ಹಿಡಿಯುವುದಕ್ಕಿಂತ ಜನರನ್ನು ನಿಯಂತ್ರಿಸುವುದೇ ದೊಡ್ಡ ಸವಾಲು. ಚಿರತೆ ಸೆರೆ ಹಿಡಿಯುವ ಮುನ್ನ ಜನರು ಸಾಕಷ್ಟು ಸತಾಯಿಸುತ್ತಾರೆ. ಒಮ್ಮೆ ಇಟ್ಟ ಬೋನನ್ನು ನಮಗೆ ಗೊತ್ತಿಲ್ಲದೆ ಬೇರೆ ಕಡೆಗೆ ತೆಗದುಕೊಂಡು ಇಟ್ಟು ಬಿಡುತ್ತಾರೆ. ಕೇಳಿದರೆ ಸಾರ್ ಅಲ್ಲಿ ಚಿರತೆ ಬಂದಿತ್ತು ಅದಕ್ಕೆ ಇಟ್ಟವಿ ಅಂತಾರೆ. ಬೋನು ಇಟ್ಟ ಸ್ಥಳಕ್ಕೆ ಪದೇ ಪದೇ ಹೋಗುತ್ತಾರೆ ಇದರಿಂದ ಚಿರತೆ ಅತ್ತ ಸುಳಿಯುವುದೇ ಇಲ್ಲ. ಇದರಿಂದ ಚಿರತೆ ಸೆರೆ ಕಾರ್ಯಾಚರಣೆಗೆ ಹಿನ್ನೆಡೆಯಾಗುತ್ತದೆ
ಕಾಡಿನಲ್ಲಿ ಚಿರತೆಯ ನೈಸರ್ಗಿಕ ಆಹಾರ ಮೊಲ, ಜಿಂಕೆ, ಹಂದಿ. ಅದು ನಾಡಿಗೆ ಬಂದಾಗ ನಾಯಿ ಅದರ ಫೇವರೇಟ್ ಆಹಾರ ಅದನ್ನು ಹೊರತುಪಡಿಸಿದರೆ ಎಳೆ ಕರುವನ್ನು ಚಿರತೆ ಬೇಟೆಯಾಡಿ ತಿನ್ನುತ್ತದೆ. ಇದನ್ನು ಹೊರತುಪಡಿಸಿ ಹಸು, ಎತ್ತು ಮತ್ತು ಎಮ್ಮೆ ಅಥವಾ ಮನುಷ್ಯರ ಮೇಲೆ. ಚಿರತೆ ದಾಳಿ ಮಾಡುವುದು ಕೇವಲ ತನ್ನ ಪ್ರಾಣ ರಕ್ಷಣೆಗಾಗಿ ಮಾತ್ರ ಅದು ಸಹ ಅನಿವಾರ್ಯ ಸಂದರ್ಭಗಳಲ್ಲಿ
ಚಿರತೆ ಬೆಕ್ಕಿನ ಜಾತಿಗೆ ಸೇರಿದ ಪ್ರಾಣಿ. ಅದನ್ನು ಗ್ರಾಮೀಣ ಭಾಗದಲ್ಲಿ ಕಾಡಿನ ಬೆಕ್ಕು ಅಂತಲೇ ಕರೆಯುತ್ತಾರೆ. ಚಿರತೆ ಸ್ವಭಾವತಃ ನಾಚಿಕೆಯ ಪ್ರಾಣಿ. ಚಿರತೆ ಹುಲಿಯಂತೆ ಅಟ್ಯಾಕ್ ಮಾಡುವ ಪ್ರಾಣಿಯಲ್ಲ. ಅದರಲ್ಲೂ ಮನುಷ್ಯರನ್ನು ಕಂಡರೆ ಓಡಿ ಅವಿತುಕೊಳ್ಳವಂತಹ ಪ್ರಾಣಿಯದು. ತನ್ನ ಪ್ರಾಣ ರಕ್ಷಣೆಯ ಸಮಯವನ್ನು ಹೊರತುಪಡಿಸಿ ಚಿರತೆ ಮನುಷ್ಯರ ಮೇಲೆ ಅಟ್ಯಾಕ್ ಮಾಡುವುದೇ ಇಲ್ಲ ಅಂತಲೇ ಹೇಳಬಹುದು.
ಸದ್ಯ ಮೈಸೂರು ಜಿಲ್ಲೆಯಲ್ಲಿ ಚಿರತೆ ಕಾಟ ಮುಂದುವರಿದಿದೆ. ಅದರಲ್ಲೂ ಮೈಸೂರು ಜಿಲ್ಲೆಯ ಟಿ ನರಸೀಪುರ ಭಾಗದಲ್ಲಿ ಚಿರತೆಗಳು ಮನುಷ್ಯರ ಮೇಲೆ ದಾಳಿ ಮಾಡಿ ಗಾಯಗೊಳಿಸುವುದು ಸಾಯಿಸುವುದು ನಿಜಕ್ಕೂ ಆ ಭಾಗದ ಜನರ ನೆಮ್ಮದಿ ಹಾಳು ಮಾಡಿದೆ. ಜನರು ಮನೆಯಿಂದ ಹೊರಗೆ ಬರಲು ಹೆದರುವ ಪರಿಸ್ಥಿತಿ ನಿರ್ಮಾಣವಾಗಿದೆ. ಒಟ್ಟಾರೆ ಆದಷ್ಟು ಬೇಗ ಈ ಚಿರತೆ ಮಾನವ ಸಂಘರ್ಷಕ್ಕೆ ಬ್ರೇಕ್ ಬೀಳಲಿ. ಇದಕ್ಕೊಂದು ಶಾಶ್ವತ ಪರಿಹಾರ ಸಿಗುವಂತಾಗಲಿ ಅನ್ನೋದೆ ಎಲ್ಲರ ಆಶಯ.
ವರದಿ- ರಾಮ್ ಟಿವಿ9 ಮೈಸೂರು
ಮತ್ತಷ್ಟು ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:51 pm, Wed, 28 December 22