ಮೈಸೂರು (ಆ.29): ಈ ಬಾರಿಯ ಮೈಸೂರು ದಸರಾವನ್ನು (Mysuru Dasara) ಖ್ಯಾತ ಸಂಗೀತ ನಿರ್ದೇಶಕ ಹಂಸಲೇಖ (Hamsalekha) ಉದ್ಘಾಟಿಸಲಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಹೇಳಿದರು. ದಸಾರ ಅಕ್ಟೋಬರ್ 15 ರ ಬೆಳಿಗ್ಗೆ 10.15 ರಿಂದ 10.30 ಕ್ಕೆ ಸಲ್ಲುವ ಮಹೂರ್ತದಲ್ಲಿ ಮೈಸೂರು ದಸರಾ ಉದ್ಘಾಟನೆ ನೆರವೇರಲಿದ್ದು, ಪಂಜಿನ ಕವಾಯತು ವಿಜಯದಶಮಿ ದಿನದಂದು ನಡೆಯಲಿದೆ. ಸಾಂಸ್ಕೃತಿಕ ಕಾರ್ಯಕ್ರಮಗಳು, ಚಲನಚಿತ್ರೋತ್ಸವ, ರೈತರ ದಸರಾ, ಯುವ ದಸರಾ ಎಲ್ಲವನ್ನು ವ್ಯವಸ್ಥಿತವಾಗಿ ಆಯೋಜಿಸಲು ನಿರ್ಧರಿಸಲಾಗಿದೆ. ಅಲ್ಲದೇ ಈ ಬಾರಿ ದೀಪಾಲಂಕಾರ ದಸರಾ ಉದ್ಘಾಟನೆಯಾದ ದಿನದಿಂದ ದಸರಾ ಮುಗಿಯುವವರೆಗೂ ಹಾಗೂ ನಂತರ ಒಂದು ವಾರದವವರೆಗೆ ದೀಪಾಲಂಕಾರ ಇರಲಿದೆ.
ಮೈಸೂರಿನ 119 ವೃತ್ತಗಳಲ್ಲಿ ಅಂದರೇ ಬರೋಬ್ಬರಿ 135 ಕಿ.ಮೀ ರಸ್ತೆಗೆ ವಿದ್ಯುತ್ ದೀಪಾಲಂಕಾರ ಮಾಡಲು ತೀರ್ಮಾನಿಸಲಾಗಿದೆ. ಕೆ.ಆರ್.ವೃತ್ತ, ಚಾಮರಾಜ ವೃತ್ತ, ರಾಮಸ್ವಾಮಿ ವೃತ್ತ, ಗನ್ಹೌಸ್ ವೃತ್ತ, ಎಲ್ಐಸಿ ವೃತ್ತ ಸೇರಿ ನಗರದ ಹಲವು ಕಡೆ ದೀಪಾಲಂಕಾರ ಮಾಡಲಾಗುತ್ತೆ. ಮೈಸೂರಿನ ಸರ್ಕಾರಿ ಕಟ್ಟಡಗಳಿಗೂ ಝಗಮಗಿಸುವ ವಿದ್ಯುತ್ ದೀಪಾಲಂಕಾರ ಮಾಡಲಾಗುತ್ತದೆ.
ಇದನ್ನೂ ಓದಿ: Mysore Dasara 2023: ಮೈಸೂರು ದಸರಾಗೆ ರಸ್ತೆಗಿಳಿಯಲಿವೆ 300 ಹೆಚ್ಚುವರಿ ಕೆಎಸ್ಆರ್ಟಿಸಿ ಬಸ್ಗಳು
ಇನ್ನು ಮೈಸೂರು ದಸರಾ ಹಬ್ಬಕ್ಕೆ ಈಗಿನಿಂದಲೇ ಗಜಪಡೆಯ ತಾಲೀಮು ಆರಂಭವಾಗಿದೆ. ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ರಾಂಪುರ ಆನೆ ಶಿಬಿರದಿಂದ ದಸರಾ ಜಂಬೂ ಸವಾರಿಗೆ ಎರಡು ಆನೆಗಳು ಆಯ್ಕೆಯಾಗಿವೆ. ಆನೆ ಶಿಬಿರದಲ್ಲಿ ಪಾರ್ಥಸಾರಥಿ ಮತ್ತು ಕಲ್ಪನಾ ಎರಡು ಆನೆಗಳಿಗೆ ತಾಲೀಮು ನೀಡಲಾಗುತ್ತಿದೆ. ವಾಹನಗಳ ಶಬ್ದಗಳಿಗೆ ಹೆದರಬಾರದೆಂದು ಪ್ರತಿನಿತ್ಯ ಗುಂಡ್ಲುಪೇಟೆ, ಕೇರಳ ಹೆದ್ದಾರಿಯಲ್ಲಿ ಆನೆಗಳು ಪ್ರತಿದಿನ 10 ಕಿ.ಮೀ ಸಂಚಾರ ಮಾಡುತ್ತಿವೆ. ರಾಂಪುರ ಆನೆ ಶಿಬಿರದಿಂದ ಮೂಲೆಹೊಳೆ ಚೆಕ್ ಪೋಸ್ಟ್ ವರೆಗೂ ನಿತ್ಯ ತಾಲೀಮು ನೀಡಲಾಗುತ್ತಿದೆ.
ಪ್ರಸಕ್ತ ವರ್ಷ ದಸರಾ ಅಂಗವಾಗಿ ಏರ್ ಶೋ ಆಯೋಜಿಸಲು ಚಿಂತನೆ ಇದೆ. ಈ ವಿಚಾರವಾಗಿ ರಕ್ಷಣಾ ಸಚಿವರ ಜೊತೆ ಚರ್ಚೆ ಮಾಡುತ್ತೇವೆ. ಹಿಂದೆ ನಾನು ಮುಖ್ಯಮಂತ್ರಿ ಆಗಿದ್ದಾಗ ದಸರಾ ವೇಳೆ ಏರ್ ಶೋ ಆಯೋಜಿಸಿದ್ದೆವು. ಮೈಸೂರು ದಸರಾ ಮಹೋತ್ಸವದಲ್ಲಿ ಅನಗತ್ಯ ಖರ್ಚು ಇರಬಾರದು. ಶಕ್ತಿ ಯೋಜನೆ ಜಾರಿಯಾಗಿರುವ ಕಾರಣ ಮಹಿಳೆಯರು ಹೆಚ್ಚು ಬರುವ ಸಾಧ್ಯತೆ ಇದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದ್ದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:26 am, Tue, 29 August 23