ಮೈಸೂರು: ಜೆಡಿಎಸ್ನವರು ಮಾತ್ರ ಮಣ್ಣಿನ ಮಕ್ಕಳಾ? ನಾವ್ಯಾರೂ ಮಣ್ಣಿನ ಮಕ್ಕಳಲ್ಲವಾ? ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ (DK Shivakumar) ನಿನ್ನೆ ಮಂಡ್ಯದಲ್ಲಿ ಭಾಷಣ ಮಾಡಿದ್ದಾರೆ. ನಮಗೆ ಜನರೇ ಮಣ್ಣಿನ ಮಕ್ಕಳು ಎಂದು ಕರೆಯುತ್ತಾರೆಯೇ ಹೊರತು ನಾವಾಗೇ ಬೋರ್ಡ್ ಹಾಕಿಕೊಂಡು ತಿರುಗಾಡುತ್ತಿಲ್ಲ. ನೀವು ಮಣ್ಣಿನ ಮಕ್ಕಳಲ್ಲ, ಕಲ್ಲಿನ ಮಕ್ಕಳು ಎಂದು ಜನರಿಗೂ ಗೊತ್ತಿದೆ. ಕೊನೆ ಹಂತದಲ್ಲಿ ಈಗ ನೀವು ಮಣ್ಣಿನ ಮಕ್ಕಳಾಗಬೇಕೆಂದು ಬಯಸಿದ್ದೀರಿ, ಅದೂ ಆಗಿಬಿಡಲಿ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್ ನಾಯಕ ಎಚ್.ಡಿ. ಕುಮಾರಸ್ವಾಮಿ (HD Kumaraswamy) ಲೇವಡಿ ಮಾಡಿದ್ದಾರೆ.
ನೀವೇ ಮಣ್ಣಿನ ಮಕ್ಕಳು ಅಂತ ಬೋರ್ಡ್ ಹಾಕಿಕೊಂಡು ತಿರುಗಾಡಿ, ನಾವೇನೂ ಬೇಡ ಅಂದಿಲ್ಲ. ಜೆಡಿಎಸ್ನವರು ಮಣ್ಣಿನ ಮಕ್ಕಳು ಅಂತ ನಾವ್ಯಾರೂ ಬೋರ್ಡ್ ಹಾಕಿಕೊಂಡು ಓಡಾಡಿಲ್ಲ. ಹಿಂದಿನಿಂದಲೂ ನಮ್ಮ ಪಕ್ಷ ರೈತರ ಬಗ್ಗೆ ಹೋರಾಟಗಳನ್ನು ಮಾಡಿಕೊಂಡು ಬಂದಿರುವುದರಿಂದ ನಮಗೆ ಒಂದು ಇತಿಹಾಸ ಇದೆ. ಅದರಿಂದ ಜನರೇ ನಮ್ಮನ್ನು ಮಣ್ಣಿನ ಮಕ್ಕಳು ಅಂತಾರೆ. ಆದ್ರೆ ನಿಮಗೆ ಜನ ಕಲ್ಲಿನ ಮಕ್ಕಳು ಅಂತ ಬೋರ್ಡ್ ಹಾಕಿದ್ದಾರೆ. ಕನಕಪುರದ ಕಡೆ ನಿಮಗೆ ಕಲ್ಲಿನ ಮಕ್ಕಳು ಅಂತಲೇ ಕರೆಯುವುದು ಎಂದು ನಮಗೆ ಗೊತ್ತಿದೆ. ಈಗೇನೋ ಮಣ್ಣಿನ ಮಕ್ಕಳಾಗಲು ಹೊರಟಿದ್ದೀರ. ನಿಮಗೆ ಒಳ್ಳೆಯದಾಗಲಿ. ಕೊನೆಯ ಹಂತದಲ್ಲಾದರೂ ಮಣ್ಣಿನ ಮಕ್ಕಳಾಗಬೇಕೆಂಬ ಬುದ್ಧಿ ಬಂತಲ್ಲ ಎಂದು ಡಿಕೆ ಶಿವಕುಮಾರ್ಗೆ ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ ಕಾಲೆಳೆದಿದ್ದಾರೆ.
ರಾಜ್ಯದಲ್ಲಿ ಶಾಂತಿ-ಭದ್ರತೆಗೆ ಅಪಾಯ ಎದುರಾಗಿದೆ. ಅಭಿವೃದ್ಧಿ, ಆವಿಷ್ಕಾರ, ಸೃಜನಶೀಲ, ವಿಜ್ಞಾನ-ತಂತ್ರಜ್ಞಾನಕ್ಕೆ ಹೆಸರಾದ ಕರ್ನಾಟಕ ಈಗ ವಿರುದ್ಧ ದಿಕ್ಕಿನಲ್ಲಿ ಜಗತ್ತಿನ ಗಮನ ಸೆಳೆದು ಮುಖಭಂಗ ಅನುಭವಿಸುವಂತಾಗಿದೆ. ರಾಷ್ಟ್ರೀಯ ಪಕ್ಷಗಳೆರಡೂ ಕರ್ನಾಟಕದ ಪ್ರತಿಷ್ಠೆಗೆ ಕೊಳ್ಳಿ ಇಟ್ಟು ʼವಿಕೃತ ಕೇಕೆʼ ಹಾಕುತ್ತಿವೆ ಎಂದು ಹೆಚ್ಡಿ ಕುಮಾರಸ್ವಾಮಿ ಟ್ವೀಟ್ ಮೂಲಕವೂ ಬಿಜೆಪಿ, ಕಾಂಗ್ರೆಸ್ ವಿರುದ್ಧ ಹರಿಹಾಯ್ದಿದ್ದಾರೆ.
ಎರಡೂ ರಾಷ್ಟ್ರೀಯ ಪಕ್ಷಗಳು ರಾಜ್ಯಾದ್ಯಂತ ರಾಜಕೀಯ ಕೊರೊನಾವನ್ನು ಹಬ್ಬಿಸುತ್ತಿವೆ. ಆ ಮೂಲಕ ಜನರ ಮನಸ್ಸುಗಳನ್ನು ಹಾಳು ಮಾಡುತ್ತಿವೆ. ಈ ಮಹಾಮಾರಿಗೆ ಲಸಿಕೆ ಇಲ್ಲ. ಜನರು ಈ ಹುನ್ನಾರವನ್ನು ಅರ್ಥ ಮಾಡಿಕೊಂಡರೆ ಒಳ್ಳೆಯದು. ಕಾಂಗ್ರೆಸ್ನ ಸ್ವಪ್ರತಿಷ್ಠೆ, ಬಿಜೆಪಿಯ ಅಸಮರ್ಥತೆಗೆ ವಿಧಾನ ಕಲಾಪ ಆಪೋಶನವಾಯಿತು. ಜೆಡಿಎಸ್ ಎಂದೂ ಸಹ ಸದನದ ಕಲಾಪ ಅಡ್ಡಿಪಡಿಸಿಲ್ಲ. ಬಾವುಟ ತಂದವರು ಇವರೇ ಅಂತೆ, ಮಾತಾಡುವ ಸ್ವಾತಂತ್ರ್ಯ ಕೊಟ್ಟವರು ಇವರೇ ಅಂತೆ. ಅವತ್ತು ಹೋರಾಟ ಮಾಡಿದವರು ಬೇರೆ, ಇವರೇ ಬೇರೆ. ಅವತ್ತಿನ ಹೋರಾಟವನ್ನು ಹೈಜಾಕ್ ಮಾಡಿಕೊಂಡವರು ಇವರು. ಕಾಂಗ್ರೆಸ್ ಹೋರಾಟಕ್ಕೆ ಅವಾರ್ಡ್ ಇದ್ದರೆ ಸ್ಪೀಕರ್ ಕೊಡಲಿ. ಎರಡೂ ರಾಷ್ಟ್ರೀಯ ಪಕ್ಷಗಳಿಗೆ ಕೊರೊನಾ ಬಂದಿದೆ. ಬಿಜೆಪಿ, ಕಾಂಗ್ರೆಸ್ ಒಂದೇ ನಾಣ್ಯದ 2 ಮುಖಗಳು ಎಂದು ಮೈಸೂರಿನಲ್ಲಿ ಮಾಜಿ ಮುುಖ್ಯಮಂತ್ರಿ ಎಚ್. ಡಿ ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.
ಇದನ್ನೂ ಓದಿ: ರಾಷ್ಟ್ರೀಯ ಪಕ್ಷಗಳು ರಾಜ್ಯದ ಪ್ರತಿಷ್ಠೆಗೆ ಕೊಳ್ಳಿ ಇಟ್ಟಿವೆ: ಮಾಜಿ ಸಿಎಂ ಹೆಚ್ಡಿ ಕುಮಾರಸ್ವಾಮಿ ಸರಣಿ ಟ್ವೀಟ್
ಯುವಕನ ಹತ್ಯೆ ವಿಚಾರದಲ್ಲಿ ಬಿಜೆಪಿ ಕಾಂಗ್ರೆಸ್ ವೋಟ್ ಬ್ಯಾಂಕ್ ರಾಜಕಾರಣ ಮಾಡುತ್ತಿದೆ: ಹೆಚ್ಡಿ ಕುಮಾರಸ್ವಾಮಿ ಆಕ್ರೋಶ