ರಾಷ್ಟ್ರೀಯ ಪಕ್ಷಗಳು ರಾಜ್ಯದ ಪ್ರತಿಷ್ಠೆಗೆ ಕೊಳ್ಳಿ ಇಟ್ಟಿವೆ: ಮಾಜಿ ಸಿಎಂ ಹೆಚ್ಡಿ ಕುಮಾರಸ್ವಾಮಿ ಸರಣಿ ಟ್ವೀಟ್
ಎರಡು ವರ್ಷದಿಂದ ಕೊವಿಡ್ ಹೊಡೆತದಿಂದ ಮಲಗಿರುವ ವಿದ್ಯಾರಂಗವನ್ನು ಸರ್ವನಾಶ ಮಾಡುವ ಹುನ್ನಾರವಷ್ಟೇ ಇದು. ಬಡವರ ಮಕ್ಕಳು ಓದಿ ವಿದ್ಯಾವಂತರಾಗಬಾರದೇ? ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಟ್ವೀಟ್ ಮಾಡಿದ್ದಾರೆ.
ಬೆಂಗಳೂರು: ಎರಡೂ ರಾಷ್ಟ್ರೀಯ ಪಕ್ಷಗಳು ವಿಕೃತ ಕೇಕೆ ಹಾಕುತ್ತಿವೆ. ರಾಜ್ಯದಲ್ಲಿ ಶಾಂತಿ-ಭದ್ರತೆಗೆ ಅಪಾಯ ಎದುರಾಗಿದೆ. ಕರ್ನಾಟಕ ರಾಜ್ಯ(Karnataka state) ಅಭಿವೃದ್ಧಿ, ಆವಿಷ್ಕಾರ, ಸೃಜನಶೀಲ, ವಿಜ್ಞಾನ, ತಂತ್ರಜ್ಞಾನಕ್ಕೆ ಹೆಸರುವಾಸಿಯಾಗಿತ್ತು. ಆದರೆ ಈಗ ವಿರುದ್ಧ ದಿಕ್ಕಿನಲ್ಲಿ ವಿಶ್ವದ ಗಮನ ಸೆಳೆಯುತ್ತಿದೆ. ರಾಷ್ಟ್ರೀಯ ಪಕ್ಷಗಳು ರಾಜ್ಯದ ಪ್ರತಿಷ್ಠೆಗೆ ಕೊಳ್ಳಿ ಇಟ್ಟಿವೆ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ(H.D.Kumaraswamy) ಸರಣಿ ಟ್ವೀಟ್(Tweet) ಮಾಡಿದ್ದಾರೆ.
ಶಿಕ್ಷಣದ ಕಾಶಿ ಕರ್ನಾಟಕದ ಶಾಲೆ-ಕಾಲೇಜುಗಳಲ್ಲಿ ಸಂಘರ್ಷದ ವಾತಾವರಣ ಸೃಷ್ಟಿಸಿ ಮಕ್ಕಳಲ್ಲಿ ದ್ವೇಷದ ವಿಷವುಕ್ಕಿಸಲಾಗುತ್ತಿದೆ. ಎರಡು ವರ್ಷದಿಂದ ಕೊವಿಡ್ ಹೊಡೆತದಿಂದ ಮಲಗಿರುವ ವಿದ್ಯಾರಂಗವನ್ನು ಸರ್ವನಾಶ ಮಾಡುವ ಹುನ್ನಾರವಷ್ಟೇ ಇದು. ಬಡವರ ಮಕ್ಕಳು ಓದಿ ವಿದ್ಯಾವಂತರಾಗಬಾರದೇ? ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಟ್ವೀಟ್ ಮಾಡಿದ್ದಾರೆ.
ರಾಜ್ಯದಲ್ಲಿ ಶಾಂತಿ-ಭದ್ರತೆಗೆ ಅಪಾಯ ಎದುರಾಗಿದೆ. ಅಭಿವೃದ್ಧಿ, ಆವಿಷ್ಕಾರ, ಸೃಜನಶೀಲ, ವಿಜ್ಞಾನ-ತಂತ್ರಜ್ಞಾನಕ್ಕೆ ಹೆಸರಾದ ಕರ್ನಾಟಕ ಈಗ ವಿರುದ್ಧ ದಿಕ್ಕಿನಲ್ಲಿ ಜಗತ್ತಿನ ಗಮನ ಸೆಳೆದು ಕೃತಾರ್ಥವಾಗುತ್ತಿದೆ. ರಾಷ್ಟ್ರೀಯ ಪಕ್ಷಗಳೆರಡೂ ಕರ್ನಾಟಕದ ಪ್ರತಿಷ್ಠೆಗೆ ಕೊಳ್ಳಿ ಇಟ್ಟು ʼವಿಕೃತ ಕೇಕೆʼ ಹಾಕುತ್ತಿವೆ. 1/8
— H D Kumaraswamy (@hd_kumaraswamy) February 23, 2022
ಎರಡೂ ರಾಷ್ಟ್ರೀಯ ಪಕ್ಷಗಳು ರಾಜ್ಯಾದ್ಯಂತ ರಾಜಕೀಯ ಕೊರೊನಾವನ್ನು ಹಬ್ಬಿಸುತ್ತಿವೆ. ಆ ಮೂಲಕ ಜನರ ಮನಸ್ಸುಗಳನ್ನು ಹಾಳು ಮಾಡುತ್ತಿವೆ. ಈ ಮಹಾಮಾರಿಗೆ ಲಸಿಕೆ ಇಲ್ಲ. ಜನರು ಈ ಹುನ್ನಾರವನ್ನು ಅರ್ಥ ಮಾಡಿಕೊಂಡರೆ ಒಳ್ಳೆಯದು ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಟ್ವೀಟ್ ಮೂಲಕ ತಿಳಿಸಿದ್ದಾರೆ.
ಅಧಿಕೃತ ಪ್ರತಿಪಕ್ಷದ ಸ್ವಪ್ರತಿಷ್ಠೆ, ಆಡಳಿತ ಪಕ್ಷದ ಅಸಮರ್ಥತೆಗೆ ವಿಧಾನ ಕಲಾಪ ಆಪೋಶನವಾಯಿತು. ನಾನು ಹೊಡೆದಂಗೆ ಮಾಡುತ್ತೇನೆ, ನೀನು ಅತ್ತಂಗೆ ಮಾಡು ಎನ್ನುವಂತೆ ಬಿಜೆಪಿ-ಕಾಂಗ್ರೆಸ್ ಪಕ್ಷಗಳು ಕುಮ್ಮಕ್ಕಾಗಿ ಕಲಾಪಕ್ಕೆ ಕುಣಿಕೆ ಬಿಗಿದು ಜನರ ಆಶೋತ್ತರಗಳನ್ನು ಸದನದಲ್ಲೇ ಸಮಾಧಿ ಮಾಡಿದವು ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಟ್ವೀಟ್ ಮಾಡಿದ್ದಾರೆ.
ಶಿವಮೊಗ್ಗ ಘಟನೆಯ ಮೂಲಕ ರಾಷ್ಟ್ರೀಯ ಪಕ್ಷಗಳು ಹಿಂಸಾ ರಾಜಕಾರಣದ ಪೂರ್ಣ ಸಿನಿಮಾ ತೋರಿಸಲು ಹೊರಟಿದ್ದಾರೆ. ಜನರ ಸೂಕ್ಷ್ಮ ಭಾವನೆಗಳು ಹಾಗೂ ಸಮಾಜದ ಶಾಂತಿಯನ್ನು ಅಪಾಯಕ್ಕೆ ಒಡ್ಡಿ ಬೇಳೆ ಬೇಯಿಸಿಕೊಳ್ಳುತ್ತಿರುವ ‘ರಾಷ್ಟ್ರೀಯ ಪಕ್ಷಗಳ ರಕ್ಕಸ ರಾಜಕಾರಣ’ಕ್ಕೆ ಕ್ಷಮೆಯೇ ಇಲ್ಲ. 5/6
— H D Kumaraswamy (@hd_kumaraswamy) February 21, 2022
ನಿಗದಿತ ವೇಳಾಪಟ್ಟಿಗಿಂತ 3 ದಿನ ಮೊದಲೇ ಮುಗಿದ ಅಧಿವೇಶನದಲ್ಲಿ ಆರೂವರೆ ಕೋಟಿ ಕನ್ನಡಿಗರಿಗೆ ಸೊನ್ನೆ ಸುತ್ತಲಾಗಿದೆ. ಜನಪ್ರತಿನಿಧಿಗಳ ಕೇವಲ ಟಿಎ-ಡಿಎಗಾಗಿ ಮತ್ತು ವೇತನ, ಭತ್ಯೆ ಏರಿಸಿಕೊಳ್ಳಲಷ್ಟೇ ಅಧಿವೇಶನ ನಡೆದಿದೆ. ಜನರು ಏನೆಂದುಕೊಂಡಾರು? ಎಂಬ ಕನಿಷ್ಠ ಭಯವೂ ಇಲ್ಲದ ಆತ್ಮವಂಚನೆಯ ಪರಾಕಾಷ್ಠೆ ಇದು ತಿಳಿಸಿದ್ದಾರೆ.
ಹಿಜಾಬ್, ಕೇಸರಿ ಶಾಲು ಮತ್ತು ಶಿವಮೊಗ್ಗದಲ್ಲಿ ನಡೆದ ಯುವಕನ ಕೊಲೆ. ಇವೆಲ್ಲಾ ಯಾರಿಂದ ಯಾರಿಗಾಗಿ ನಡೆಯುತ್ತಿವೆ? ಈ ಟೂಲ್ ಕಿಟ್ ರೂವಾರಿಗಳು ಯಾರು? ಅಧಿವೇಶನವನ್ನು ಹಳ್ಳ ಹಿಡಿಸಿದ್ದಕ್ಕೂ ಈ ಎಲ್ಲಾ ಪ್ರತಿಗಾಮಿ ಘಟನೆಗಳಿಗೆ ಸಂಬಂಧ ಇದೆ ಎನ್ನುವ ಅನುಮಾನ ನನ್ನದು. ಸತ್ಯವೇನೆಂಬುದು ಜನರಿಗೆ ಗೊತ್ತಾಗಬೇಕು ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಟ್ವೀಟ್ ಮಾಡಿದ್ದಾರೆ.
ಶಾಂತಿಯನ್ನು ಕದಡಿದ ಪಾಪ ಸುಮ್ಮನೆ ಬಿಡುವುದಿಲ್ಲ: ಹೆಚ್.ಡಿ.ಕುಮಾರಸ್ವಾಮಿ ಟ್ವೀಟ್
ಸಾವಿನ ಮನೆಯಲ್ಲಿ ಮತಫಸಲು ತೆಗೆಯುವ ನಿರ್ಲಜ್ಜ ನಡೆ ಅಸಹನೀಯ. ಶಾಂತಿಯನ್ನು ಕದಡಿದ ಪಾಪ ಸುಮ್ಮನೆ ಬಿಡುವುದಿಲ್ಲ. ಹಚ್ಚಹಸರಿನ ನಿರ್ಮಲ ಮಲೆನಾಡಿನಲ್ಲಿ ಹೊತ್ತಿ ಉರಿಯುತ್ತಿರುವ ದ್ವೇಷದಳ್ಳುರಿ ಇಡೀ ರಾಜ್ಯಕ್ಕೇ ಶಾಪವಾಗಿ ಪರಿಣಮಿಸಲಿದೆ ಎಂದು ಹೆಚ್‌ಡಿಕೆ ತಿಳಿಸಿದ್ದಾರೆ.
ಸಾವಿನ ಮನೆಯಲ್ಲಿ ಮತಫಸಲು ತೆಗೆಯುವ ನಿರ್ಲಜ್ಜ ನಡೆ ಅಸಹನೀಯ. ಶಾಂತಿಯನ್ನು ಕದಡಿದ ಪಾಪ ಸುಮ್ಮನೆ ಬಿಡುವುದಿಲ್ಲ. ಹಚ್ಚಹಸರಿನ ನಿರ್ಮಲ ಮಲೆನಾಡಿನಲ್ಲಿ ಹೊತ್ತಿ ಉರಿಯುತ್ತಿರುವ ʼದ್ವೇಷದಳ್ಳುರಿʼ ಇಡೀ ರಾಜ್ಯಕ್ಕೇ ಶಾಪವಾಗಿ ಪರಿಣಮಿಸಲಿದೆ. 7/8
— H D Kumaraswamy (@hd_kumaraswamy) February 23, 2022
ರಾಜ್ಯಪಾಲರು ತಕ್ಷಣ ಮಧ್ಯಪ್ರವೇಶ ಮಾಡಬೇಕು. ಅವರು ಯಾರ ಕೈಗೊಂಬೆಯೂ ಆಗಬಾರದು ಎಂದು ನಾನು ಮತ್ತೊಮ್ಮೆ ಆಗ್ರಹಿಸುತ್ತಿದ್ದೇನೆ. ಶಾಂತಿ-ಭದ್ರತೆ ನಿರ್ವಹಣೆಯಲ್ಲಿ ವಿಫಲವಾಗಿರುವ ಸರಕಾರಕ್ಕೆ ರಾಜ್ಯಪಾಲರು ಕಿವಿ ಹಿಂಡಲೇಬೇಕು ಎಂಬುದು ನನ್ನ ಒತ್ತಾಯ ಎಂದು ಹೆಚ್.ಡಿ.ಕುಮಾರಸ್ವಾಮಿ ಟ್ವೀಟ್ ಮೂಲಕ ಹೇಳಿದ್ದಾರೆ.
ಸದನದಲ್ಲಿ ಕಾಂಗ್ರೆಸ್ ಪ್ರತಿಭಟನೆಗೆ ಹೆಚ್‌ಡಿಕೆ ಕಿಡಿ
ಜೆಡಿಎಸ್ ಎಂದೂ ಸಹ ಸದನದ ಕಲಾಪ ಅಡ್ಡಿಪಡಿಸಿಲ್ಲ. ಬಾವುಟ ತಂದವರು ಇವರೇ ಅಂತೆ, ಮಾತಾಡುವ ಸ್ವಾತಂತ್ರ್ಯ ಕೊಟ್ಟವರು ಇವರೇ ಅಂತೆ. ಅವತ್ತು ಹೋರಾಟ ಮಾಡಿದವರು ಬೇರೆ, ಇವರೇ ಬೇರೆ. ಅವತ್ತಿನ ಹೋರಾಟವನ್ನು ಹೈಜಾಕ್ ಮಾಡಿಕೊಂಡವರು ಇವರು. ಕಾಂಗ್ರೆಸ್ ಹೋರಾಟಕ್ಕೆ ಅವಾರ್ಡ್ ಇದ್ದರೆ ಕೊಡಲಿ. ಯಾವುದಾದರೂ ಅವಾರ್ಡ್ ಇದ್ದರೆ ಸ್ಪೀಕರ್ ಕೊಡಲಿ. ಸಚಿವ ಈಶ್ವರಪ್ಪ ವಿರುದ್ಧ ಯಾವುದೇ ಸಾಕ್ಷ್ಯ ಇರಲಿಲ್ಲ. ದಾಖಲೆ ಇದ್ದಿದ್ದರೆ ಮುಂದಿಟ್ಟು ಧರಣಿ ನಡೆಸಬೇಕಿತ್ತು. ದಾಖಲೆ ಇಟ್ಟು ಈಶ್ವರಪ್ಪ ರಾಜೀನಾಮೆ ಕೇಳಬೇಕಿತ್ತು. ಕಾಂಗ್ರೆಸ್ ಅಹೋರಾತ್ರಿ ಧರಣಿ ಜನರು ಒಪ್ಪುವುದಿಲ್ಲ. ಕಾಂಗ್ರೆಸ್ ನಡವಳಿಕೆಯ ಬಗ್ಗೆ ಅನುಮಾನವಿದೆ. ಕಾಂಗ್ರೆಸ್, ಬಿಜೆಪಿ ನಡುವೆ ಒಪ್ಪಂದ ಆಗಿರಬಹುದು ಎಂದು ಮೈಸೂರಿನಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ಆರೋಪ ಮಾಡಿದ್ದಾರೆ.
ಒಕ್ಕಲಿಗ ಮತಗಳ ಬುಟ್ಟಿಗೆ ಕೈಹಾಕಿದರೆ ಡಿಕೆಶಿ ಕುತ್ತಿಗೆಗೆ ಬರುತ್ತದೆ: ಹೆಚ್.ಡಿ.ಕುಮಾರಸ್ವಾಮಿ
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಯಾರನ್ನಾದ್ರೂ ಸೆಳೆಯಲಿ. ಒಕ್ಕಲಿಗ ಮತಗಳ ಬುಟ್ಟಿಗೆ ಕೈಹಾಕಿದರೆ ಡಿಕೆಶಿ ಕುತ್ತಿಗೆಗೆ ಬರುತ್ತದೆ. ಹೆಚ್‌ಡಿಡಿ ಇರುವವರೆಗೆ ಯಾರೂ ಏನನ್ನೂ ಮಾಡಲು ಸಾಧ್ಯವಿಲ್ಲ. ನನ್ನ ಸಂಪರ್ಕದಲ್ಲಿ ಕಾಂಗ್ರೆಸ್ ಶಾಸಕರು, ಮುಖಂಡರು ಇಲ್ಲ. ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಬೆಳವಣಿಗೆ ನೋಡಿ ಬರುತ್ತಾರೆ. ಆ ಪಕ್ಷದವರೇ ಜೆಡಿಎಸ್‌ಗೆ ಬರುತ್ತಾರೆ ಎಂದು ಮೈಸೂರಿನಲ್ಲಿ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಹೇಳಿಕೆ ನೀಡಿದ್ದಾರೆ.
ಮೇಕೆದಾಟು ಎರಡನೇ ಹಂತದ ಪಾದಯಾತ್ರೆ ಈಗ ಯಾಕೆ?
ನೀವೇ ಮಣ್ಣಿನ ಮಕ್ಕಳೆಂದು ಬೋರ್ಡ್ ಹಾಕಿಕೊಂಡು ಹೋಗಿ. ನಿಮಗೆ ಕಲ್ಲಿನ ಮಕ್ಕಳು ಅಂತ ಕರೆಯುತ್ತಾರೆ. ಮೇಕೆದಾಟು ಎರಡನೇ ಹಂತದ ಪಾದಯಾತ್ರೆ ಈಗ ಯಾಕೆ? ನಾವೆಂದು ಮಣ್ಣಿನಮಕ್ಕಳು ಅಂತ ಹೇಳಿಕೊಂಡಿಲ್ಲ. ಈಗೇನೋ ಮಣ್ಣಿನ ಮಕ್ಕಳು ಅಂತ ಬಿಂಬಿಸಿಕೊಳ್ಳಲು ಬೋರ್ಡ್ ಹಾಕಿಕೊಳ್ಳಿ ಎಂದು ಮೈಸೂರಿನಲ್ಲಿ ಡಿ.ಕೆ ಬ್ರದರ್ಸ್‌ಗೆ ಕುಮಾರಸ್ವಾಮಿ ಟಾಂಗ್ ಕೊಟ್ಟಿದ್ದಾರೆ.
ಬಿಜೆಪಿ, ಕಾಂಗ್ರೆಸ್ ಒಂದೇ ನಾಣ್ಯದ 2 ಮುಖಗಳು: ಮಾಜಿ ಸಿಎಂ ಕುಮಾರಸ್ವಾಮಿ
ಹಿಜಾಬ್‌ಗೂ, ಶಿವಮೊಗ್ಗ ಪ್ರಕರಣಕ್ಕೂ ಸಂಬಂಧವಿಲ್ಲ. ಶೇ. 200 ಹೇಳ್ತಿನಿ. ಅದಕ್ಕೂ ಇದಕ್ಕೂ ಸಂಬಂಧ ಇಲ್ಲ. ಮುಂದಿನ ಚುನಾವಣೆವರೆಗೆ ಇಂಥಾ ಗಲಾಟೆ ಆಗುತ್ತಿರುತ್ತದೆ. ಕೋಮು ಸೌಹಾರ್ದತೆ ವಿಚಾರದಲ್ಲಿ ರಾಜಕೀಯ ಪಕ್ಷಗಳ ಮುಖಂಡರ ಮಕ್ಕಳು ಸಾಯಲ್ಲ. ಎರಡೂ ರಾಷ್ಟ್ರೀಯ ಪಕ್ಷಗಳಿಗೆ ಕೊರೊನಾ ಬಂದಿದೆ. ಬಿಜೆಪಿ, ಕಾಂಗ್ರೆಸ್ ಒಂದೇ ನಾಣ್ಯದ 2 ಮುಖಗಳು ಎಂದು ಮೈಸೂರಿನಲ್ಲಿ ಮಾಜಿ ಸಿಎಂ ಎಚ್. ಡಿ ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.
ಇದನ್ನೂ ಓದಿ: ಯುವಕನ ಹತ್ಯೆ ವಿಚಾರದಲ್ಲಿ ಬಿಜೆಪಿ ಕಾಂಗ್ರೆಸ್ ವೋಟ್ ಬ್ಯಾಂಕ್ ರಾಜಕಾರಣ ಮಾಡುತ್ತಿದೆ: ಹೆಚ್ಡಿ ಕುಮಾರಸ್ವಾಮಿ ಆಕ್ರೋಶ
Published On - 10:52 am, Wed, 23 February 22