3 ಕ್ಷೇತ್ರಗಳ ಶಾರ್ಟ್ ಲಿಸ್ಟ್‌ ಮಾಡಿದ ಸಿದ್ದರಾಮಯ್ಯ: ಆದರೆ ಒಂದೇ ಕ್ಷೇತ್ರದಿಂದ ಸ್ಪರ್ಧಿಸುವುದಾಗಿ ಸ್ಪಷ್ಟನೆ

| Updated By: ವಿವೇಕ ಬಿರಾದಾರ

Updated on: Nov 18, 2022 | 2:55 PM

ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಒಂದೇ ಕ್ಷೇತ್ರದಿಂದ ಮಾತ್ರ ಸ್ಪರ್ಧೆ ಮಾಡುತ್ತೇನೆ ಎಂದು ಮೈಸೂರು ನಗರದಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದ್ದಾರೆ.

3 ಕ್ಷೇತ್ರಗಳ ಶಾರ್ಟ್ ಲಿಸ್ಟ್‌ ಮಾಡಿದ ಸಿದ್ದರಾಮಯ್ಯ: ಆದರೆ ಒಂದೇ ಕ್ಷೇತ್ರದಿಂದ ಸ್ಪರ್ಧಿಸುವುದಾಗಿ ಸ್ಪಷ್ಟನೆ
ವಿಪಕ್ಷ ನಾಯಕ ಸಿದ್ದರಾಮಯ್ಯ
Follow us on

ಮೈಸೂರು: ವಿಪಕ್ಷ ನಾಯಕ ಸಿದ್ದರಾಮಯ್ಯ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಯಾವ ಕ್ಷೇತ್ರದಿಂದ ಸ್ಪರ್ಧಿಸುತ್ತಾರೆ ಎಂಬುವುದನ್ನು ಇನ್ನೂ ಕೂಡ ಬಿಟ್ಟುಕೊಟ್ಟಿಲ್ಲ. ಆದರೆ ಒಂದಂತು ಸತ್ಯ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಹಲವು ಕ್ಷೇತ್ರಗಳಿಂದ ಸ್ಪರ್ಧೆ ಮಾಡುವಂತೆ ಒತ್ತಡ ಬಂದಿದೆ. ಆದರೆ ಒಂದೇ ಕ್ಷೇತ್ರದಿಂದ ಮಾತ್ರ ಸ್ಪರ್ಧೆ ಮಾಡುತ್ತೇನೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದ್ದಾರೆ.

ಈ ಬಗ್ಗೆ ಮೈಸೂರು ನಗರದಲ್ಲಿ ಮಾತನಾಡಿದ ಅವರು ಕೋಲಾರ, ಬಾದಾಮಿ, ವರುಣಾಕ್ಷೇತ್ರ ಶಾರ್ಟ್​​ಲಿಸ್ಟ್​​ನಲ್ಲಿದೆ. ಅಂತಿಮವಾಗಿ ಎಲ್ಲಿ ಸ್ಪರ್ಧಿಸಬೇಕೆಂದು ವರಿಷ್ಠರು ನಿರ್ಧರಿಸುತ್ತಾರೆ. ಚುನಾವಣೆ ದಿನಾಂಕ ಘೋಷಣೆ ಬಳಿಕ ಸ್ಪರ್ಧಿಸುವ ಕ್ಷೇತ್ರ ಹೇಳುತ್ತೇನೆ ಎಂದು ಹೇಳಿದರು.

ಮೋದಿ ಸರ್ವೆ ಮಾಡಿಸಿರಲಿಲ್ವಾ: ಮಾಜಿ ಸಿಎಂ ಸಿದ್ದರಾಮಯ್ಯ

ಸೋಲಿನ ಭಯದಲ್ಲಿ ಸರ್ವೆ ಮಾಡುತ್ತಿದ್ದಾರೆ ಎನ್ನುತ್ತಾರೆ. ಆದರೆ ಸರ್ವೆ ಮಾಡಿಸಿದರೆ ತಪ್ಪೇನು ? ಪ್ರಧಾನಿ ನರೇಂದ್ರ ಮೋದಿ ಎರಡು ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡಿರಲಿಲ್ವಾ? ಮೋದಿ ಸರ್ವೆ ಮಾಡಿಸಿರಲಿಲ್ವಾ ? ಸುರಕ್ಷಿತ ಕ್ಷೇತ್ರಕ್ಕಾಗಿ ಸರ್ವೆ ಮಾಡಿಸಿರುತ್ತಾರೆ. ಆದರೆ ನಾನು ಸರ್ವೆ ಮಾಡಿಸಿಲ್ಲ, ಪಕ್ಷವೂ ಸರ್ವೆ ಮಾಡಿಸಿಲ್ಲ ಎಂದು ತಿಳಿಸಿದರು.

ಮುಂದಿನ ಚುನಾವಣೆಯಲ್ಲಿ ಸಿದ್ದರಾಮಯ್ಯ ಹಾಗೂ ಡಿ ಕೆ.ಶಿವಕುಮಾರ್ ಸ್ಪರ್ಧೆ ಬೇಡ ಎಂಬ ಮಾಜಿ ಸಚಿವ ಸಂತೋಷ್ ಲಾಡ್ ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು ತಮ್ಮ ಅಭಿಪ್ರಾಯ ಹೇಳಿದ್ದಾರೆ. ಅದನ್ನೂ ಪರಿಗಣನೆಗೆ ತೆಗೆದುಕೊಳ್ಳೋಣ ಎಂದರು.

ಜೆಡಿಎಸ್​​ ಪಂಚರತ್ನ ಯಾತ್ರೆ ಕುರಿತು ಮಾತನಾಡಿದ ಅವರು ಯಾವ ರಥಯಾತ್ರೆ ಮಾಡಿದರು ಪರವಾಗಿಲ್ಲ. ಪಂಚರತ್ನ, ಅಷ್ಠ ರತ್ನ, ದಶರತ್ನ ಬೇಕಾದರು ಮಾಡಲಿ. ಬೇರೆಯವರ ಸಂಘಟನೆ ಬಗ್ಗೆ ನಾನು ತಲೆಕೆಡಿಸಿಕೊಳ್ಳಲ್ಲ ಎಂದು ನುಡಿದರು.

ಆಪರೇಷನ್ ಕಮಲ ಭ್ರಷ್ಟಾಚಾರದ ಮುಂದುವರಿದ ಭಾಗ

ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿ ಅಕ್ರಮ ನಡೆದಿರುವ ಆರೋಪ ಕೇಳಿಬಂದಿರುವ ವಿಚಾರವಾಗಿ ಮಾತನಾಡಿದ ಅವರು ಇದು ಆಪರೇಷನ್ ಕಮಲ ಭ್ರಷ್ಟಾಚಾರದ ಮುಂದುವರಿದ ಭಾಗ. ಗೆಲ್ಲೋಕೆ ಏನೆಲ್ಲಾ ಆಟ ಆಡುತ್ತಾರೆ ಅನ್ನೋದಕ್ಕೆ ಇದು ಉದಾಹರಣೆ. ಆಪರೇಷನ್ ಕಮಲ ಹುಟ್ಟುಹಾಕಿದ್ದೇ ಬಿ.ಎಸ್.ಯಡಿಯೂರಪ್ಪ ಎಂದು ಹೇಳಿದ್ದಾರೆ.

ಚುನಾವಣಾ ಆಯೋಗ ಸ್ವೀಪ್ ಹೆಸರಿನಲ್ಲಿ ಕಾರ್ಯಕ್ರಮ ಹಮ್ಮಿಕೊಂಡಿದೆ. ಇವರು ಕಾಂಪಿಟೇಟಿವ್ ಬಿಡ್ ಕರೆಯಬೇಕಿತ್ತು. ಉಚಿತವಾಗಿ ಪರಿಷ್ಕರಣೆ ಮಾಡುತ್ತೇವೆ ಎಂದಿದ್ದಕ್ಕೆ ಚಿಲುಮೆ ಮತ್ತು ಹೊಂಬಾಳೆಗೆ ಕೊಟ್ಟಿದ್ದಾರೆ. ಇದಕ್ಕೆ ಕೋಟ್ಯಾಂತರ ರೂ ಖರ್ಚಾಗುತ್ತದೆ. ಆ ಕಂಪನಿ ಲಾಭ ಇಲ್ಲದೆ ಇದನ್ನು ಮಾಡುತ್ತದೆಯೇ? ಅಲ್ಪಸಂಖ್ಯಾತ, ದಲಿತರು, ಹಿಂದುಳಿದವರು ಕಾಂಗ್ರೆಸ್​​ಪರ ಇರುತ್ತಾರೆ. ಈ ಮತದಾರರ ಮಾಹಿತಿ ಡಿಲೀಟ್ ಮಾಡಿ ಬಿಜೆಪಿಗೆ ಅನುಕೂಲ ಮಾಡಿಕೊಟ್ಟಿದ್ದಾರೆ. ನಾವು ಆರೋಪ ಮಾಡಿದ ಮೇಲೆ ಬಿಬಿಎಂಪಿ ಆಯುಕ್ತರು ರಕ್ಷಣಾತ್ಮಕವಾಗಿ ಹೇಳಿಕೆ ನೀಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು  ಇಲ್ಲಿ ಕ್ಲಿಕ್ ಮಾಡಿ

Published On - 2:51 pm, Fri, 18 November 22