ಮೈಸೂರು: ಜೂನ್ 21ರಂದು ಮೈಸೂರಿನಲ್ಲಿ (Mysore) ಅಂತಾರಾಷ್ಟ್ರೀಯ ಯೋಗ ದಿನಾಚರಣೆ (International Yoga Day) ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ( PM Narendra Modi) ಕಾರ್ಯಕ್ರಮದ ವೇದಿಕೆಯಲ್ಲಿ ಐವರಿಗೆ ಮಾತ್ರ ಅವಕಾಶ ನೀಡಿರುವ ವಿವಾದಕ್ಕೆ ಸಂಸದ ಪ್ರತಾಪ್ ಸಿಂಹ (Pratap Simha) ಸ್ಪಷ್ಟನೆ ನೀಡಿ ನಾನು ಹೇಳಿರುವುದು ಜನಪ್ರತಿನಿಧಿಗಳ ವಿಚಾರ, ಗಣ್ಯರ ಪಟ್ಟಿ ಸಿದ್ಧವಾಗುತ್ತಿದೆ. ಮಹಾರಾಜರ ಕೊಡುಗೆ ಹಿನ್ನೆಲೆ ಅರಮನೆ ಆವರಣದಲ್ಲಿ ಕಾರ್ಯಕ್ರಮ ಮಾಡಲಾಗುತ್ತಿದೆ. ಮಹಾರಾಜರು, ರಾಜಮಾತೆ, ಯತಿಗಳು ಮೈಸೂರಿನಲ್ಲೇ ಇದ್ದಾರೆ. ಯೋಗ ದಿನಾಚರಣೆ ಕಾರ್ಯಕ್ರಮಕ್ಕೆ ಗಣ್ಯರ ಪಟ್ಟಿ ಅಂತಿಮವಾಗಿಲ್ಲ. ನಾನು ಅಂದು ಹೇಳಿದ್ದು ವೇದಿಕೆಯ ಜನಪ್ರತಿನಿಧಿಗಳ ಬಗ್ಗೆ ಮಾತ್ರ. ನಾನು ಹೇಳಿರುವುದನ್ನು ಬೇರೆ ರೀತಿಯಲ್ಲಿ ಬಿಂಬಿಸಲಾಗುತ್ತಿದೆ. ಮೈಸೂರು ಮಹಾರಾಜರನ್ನು ಬಿಟ್ಟು ಕಾರ್ಯಕ್ರಮವೆಂದು ಗಾಳಿ ಸುದ್ದಿ. ಇಂತಹ ಗಾಳಿ ಸುದ್ದಿಗೆ ಕಿವಿಗೊಡದಂತೆ ಮನವಿ ಮಾಡಿದ್ದಾರೆ.
ವಿವಾದದ ಹಿನ್ನಲೆ
ಜೂನ್ 21ರಂದು ಅಂತರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ಮೈಸೂರಿನಲ್ಲಿ ನಡೆಯುವ ಯೋಗ ದಿನಾಚರಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಭಾಗಿಯಾಗಲಿದ್ದು, ಕಾರ್ಯಕ್ರಮದ ವೇದಿಕೆಯಲ್ಲಿ ಯದುವಂಶದವರಿಗೆ ಅವಕಾಶ ನೀಡದಿರುವುದಕ್ಕೆ ಮೈಸೂರು ಜಿಲ್ಲಾ ಪಂಚಾಯತಿ ಬಳಿ ಯದುವೀರ ಭಾವಚಿತ್ರ ಹಿಡಿದು ಕಾಂಗ್ರೆಸ್ ಪಾಲಿಕೆ ಸದಸ್ಯ ಲೋಕೇಶ್ ಪಿಯಾ ನೇತೃತ್ವದಲ್ಲಿ ಕಾರ್ಯಕರ್ತರು ಪ್ರತಿಭಟನೆ ಮಾಡಿದರು.
ಯಾವ ಶಾಸಕರಿಗೂ ವೇದಿಕೆ ಮೇಲೆ ಅವಕಾಶವಿಲ್ಲ
ಪ್ರಧಾನಿ ನರೇಂದ್ರ ಮೋದಿ ಅವರು ಯೋಗ (Yoga) ಮಾಡುವ ವೇದಿಕೆ ರಾಜಕೀಯ ವೇದಿಕೆಯಲ್ಲ. ಸಭಾ ಕಾರ್ಯಕ್ರಮದಲ್ಲಿ ನನಗೂ ಅವಕಾಶವಿಲ್ಲ. ಯಾವುದೇ ಸ್ಥಳೀಯ ಶಾಸಕರಿಗೂ ಅವರ ವೇದಿಕೆಯಲ್ಲಿ ಸ್ಥಾನ ಇರುವುದಿಲ್ಲ ಎಂದು ಸಂಸದ ಪ್ರತಾಪ್ ಸಿಂಹ ಹೇಳಿದರು. ಮೋದಿ ಅವರ ಜೊತೆ ಮುಖ್ಯಮಂತ್ರಿ, ರಾಜ್ಯಪಾಲರು, ಕೇಂದ್ರ ಆಯುಷ್ ಸಚಿವರು ಮತ್ತು ಜಿಲ್ಲಾ ಉಸ್ತುವಾರಿ ಸಚಿವರಿಗೆ ಮಾತ್ರ ಅವಕಾಶವಿದೆ. ನಾವೆಲ್ಲರೂ ವೇದಿಕೆಯ ಕೆಳಭಾಗದ ಒಂದು ಬದಿಯಲ್ಲಿರುತ್ತೇವೆ. ಇದರಲ್ಲಿ ಯಾವ ಬದಲಾವಣೆಗಳು ಇಲ್ಲ ಎಂದು ಹೇಳಿದರು. ನನ್ನ ಮತ್ತು ರಾಮದಾಸ್ ನಡುವೆ ಈ ವಿಚಾರದಲ್ಲಿ ಕ್ರೆಡಿಟ್ ವಾರ್ ನಡೆಯುತ್ತಿಲ್ಲ. ಮೋದಿ ಅವರ ವೇದಿಕೆ ಮುಂಭಾಗ 7 ಸಾವಿರ ಜನಕ್ಕೆ ಅವಕಾಶ ಇರುತ್ತದೆ. ಒಟ್ಟಾರೆ ಅರಮನೆಯ ಎಲ್ಲಾ ಭಾಗವೂ ಸೇರಿ 15 ಸಾವಿರ ಜನಕ್ಕೆ ಅವಕಾಶವಾಗಬಹುದು. ಆದರೆ ಎಲ್ಲರಿಗೂ ಮೋದಿ ಅವರು ಕಾಣುವುದಿಲ್ಲ ಎಂದು ಮೈಸೂರು ಸಂಸದ ಪ್ರತಾಪ ಸಿಂಹ ಹೇಳಿದ್ದಾರೆ.
ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 7:10 pm, Tue, 14 June 22