ಮೈಸೂರು, ಅ.16: ವಿಶ್ವವಿಖ್ಯಾತ ಮೈಸೂರು ದಸರಾ (Mysuru Dasara) ಮಹೋತ್ಸವ ಪ್ರಯುಕ್ತ ಪ್ರವಾಸಿಗರ ಅನುಕೂಲಕ್ಕೆ ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ಆಕರ್ಷಿಸುವ ನಿಟ್ಟಿನಲ್ಲಿ ಕರ್ನಾಟಕ ಸರ್ಕಾರವು ಹೊರ ರಾಜ್ಯದ ವಾಹನಗಳಿಗೆ ತೆರಿಗೆ ವಿನಾಯತಿ ನೀಡಿ ಆದೇಶಿಸಿದೆ. ಅಕ್ಟೋಬರ್ 16 ರಿಂದ ಅಕ್ಟೋಬರ್ 24ರ ವರೆಗೆ ತೆರಿಗೆ ವಿನಾಯಿತಿ ನೀಡಿ ಆದೇಶ ಹೊರಡಿಸಲಾಗಿದೆ.
ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಕೆಆರ್ಎಸ್ ಜಲಾಶಯ, ಮೈಸೂರು ವೀಕ್ಷಿಸಲು ಹೊರ ರಾಜ್ಯಗಳಿಂದ ಆಗಮಿಸುವ ಕರ್ನಾಟಕ ಹೊರತುಪಡಿಸಿ ಇತರೆ ರಾಜ್ಯಗಳಲ್ಲಿ ನೋಂದಾಯಿಸಲ್ಪಟ್ಟ ಆ ರಾಜ್ಯದಲ್ಲಿ ತೆರಿಗೆ ಪಾವತಿಸಿರುವ ವಾಹನಗಳಿಗೆ ತೆರಿಗೆ ಪಾವತಿಯಿಂದ ವಿನಾಯಿತಿ ನೀಡಿ ಆದೇಶಿಸಲಾಗಿದೆ.
ಇದನ್ನೂ ಓದಿ: ಒಡೆಯರ ದಸರಾ ಹೇಗಿರುತ್ತೆ? ಹೇಗೆಲ್ಲ ಆಚರಿಸುತ್ತಾರೆ? ಮೈಸೂರು ದಸರಾ ನಡೆದು ಬಂದಿದ್ಹೇಗೆ? ಸಂಪೂರ್ಣ ಇತಿಹಾಸ ಇಲ್ಲಿದೆ
ವಿಶ್ವವಿಖ್ಯಾತ ನಾಡ ಹಬ್ಬ ದಸರಾ ಮಹೋತ್ಸವಕ್ಕೆ ನಿನ್ನೆ ಚಾಮುಂಡಿ ಬೆಟ್ಟದಲ್ಲಿ ಖ್ಯಾತ ಸಂಗೀತ ನಿರ್ದೇಶಕ ಹಂಸಲೇಖ ವಿಧ್ಯುಕ್ತವಾಗಿ ಚಾಲನೆ ನೀಡಿದ್ದಾರೆ. ಇಂದು ದಸರಾ ಸಂಭ್ರಮ ಎರಡನೇ ದಿನಕ್ಕೆ ಕಾಲಿಟ್ಟಿದೆ. ಬೆಳಗ್ಗೆ 6.30ಕ್ಕೆ ನಂಜನಗೂಡಿನ ನಂಜುಂಡೇಶ್ವರ ದೇವಸ್ಥಾನದ ಆವರಣದಲ್ಲಿ ಗ್ರಾಮೀಣ ಯೋಗ & ಸಾಮೂಹಿಕ ಯೋಗಾಭ್ಯಾಸ ನಡೆದಿದ್ದು, ಬೆಳಗ್ಗೆ 9.30ಕ್ಕೆ ಮಹಿಳೆಯರಿಗಾಗಿ ರಂಗೋಲಿ ಸ್ಪರ್ಧೆಯೂ ನಡೆಯಿತು.
ಬೆಳಗ್ಗೆ 11 ಗಂಟೆಗೆ ಮಹಿಳಾ ದಸರಾ-2023ಕ್ಕೆ ಮಹಿಳಾ & ಮಕ್ಕಳ ಕಲ್ಯಾಣ ಇಲಾಖೆ ಸಚಿವ ಲಕ್ಷ್ಮೀ ಹೆಬ್ಬಾಳ್ಕರ್ ಚಾಲನೆ ನೀಡಿದ್ದು, ವಸ್ತು ಪ್ರದರ್ಶನ & ಮಾರಾಟ ಮೇಳವೂ ಆರಂಭಗೊಂಡಿದೆ. ನಾಳೆ ಬೆಳಗ್ಗೆ 11ಕ್ಕೆ ಲಲಿತ ಕಲೆ ಮತ್ತು ಕರಕುಶಲ, ಮಕ್ಕಳು ಚಿತ್ರ ಬಿಡಿಸುವ ಸ್ಪರ್ಧೆ ನಡೆಯಲಿದೆ. ಕರ್ನಾಟಕ ಕಲಾಮಂದಿರ ಒಳ ಆವರಣದಲ್ಲಿ ಬೆ.11.30ಕ್ಕೆ ಕಾವ್ಯ ಸಂಭ್ರಮ, ಹಾಸ್ಯ-ಮಟುಕು-ಜಾನಪದ ಕಾರ್ಯಕ್ರಮ ನಡೆಯಲಿದೆ. ಇದೇ ರೀತಿ ಒಂಬತ್ತು ದಿನಗಳ ಕಾಲ ನವರಾತ್ರಿ ಉತ್ಸವದೊಂದಿಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಕೂಡ ನಡೆಯಲಿವೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:26 pm, Mon, 16 October 23