ಮೈಸೂರು: ಸಚಿವ ಮುನಿರತ್ನ ವಿರುದ್ಧ ಲಂಚದ ಆರೋಪ ಮಾಡಿರುವ ಕಾಂಗ್ರೆಸ್ ನಾಯಕರು ಇದೀಗ ತಮ್ಮ ಹೇಳಿಕೆಯನ್ನು ಮತ್ತೊಂದು ಆಯಾಮಕ್ಕೆ ಹೊರಳಿಸಿದ್ದಾರೆ. ಮೈಸೂರಿನಲ್ಲಿ ನಡೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ, ಲಂಚ ಪಡೆದವರು ಮತ್ತು ಕೊಟ್ಟವರು ಎಲ್ಲಿ ದಾಖಲೆ ಇಟ್ಟಿರುತ್ತಾರೆ. ಈ ಸಂಬಂಧ ನಾವು ಸಂಗ್ರಹಿಸಿರುವ ದಾಖಲೆಗಳನ್ನು ಶೀಘ್ರ ಬಿಡುಗಡೆ ಮಾಡುತ್ತೇವೆ ಎಂದು ತಿಳಿಸಿದರು. ಸಚಿವ ಮುನಿರತ್ನ ಅವರು ಕಮಿಷನ್ ಹಣ ಪಡೆಯಲು ಕೋಲಾರದ ಒಬ್ಬ ಅಧಿಕಾರಿಗೆ ಜವಾಬ್ದಾರಿ ವಹಿಸಿದ್ದಾರೆ. ಇದೀಗ ಗುತ್ತಿಗೆದಾರರ ಜತೆ ಅದೇ ಸಚಿವರು ವಾಟ್ಸ್ಯಾಪ್ನಲ್ಲಿ ಮಾತನಾಡಿ, ಈ ವಿಷಯವನ್ನು ಇಲ್ಲಿಗೆ ಬಿಡುವಂತೆ ಮನವಿ ಮಾಡಿದರು ಎಂದು ಲಕ್ಷ್ಮಣ ವಿವರಿಸಿದರು.
ಕಮಿಷನ್ ವಿಚಾರವನ್ನು ಇಲ್ಲಿಗೇ ಬಿಡುವಂತೆ ಸಚಿವರು ಮನವಿ ಮಾಡಿದ್ದಾರೆ. ಸಚಿವರ ವಾಟ್ಸ್ಯಾಪ್ ಕರೆಯ ದಾಖಲೆಗಳನ್ನು ಸಂಗ್ರಹ ಮಾಡಲಾಗಿದೆ. ಆದಷ್ಟು ಶೀಘ್ರ ಈ ಸಂಬಂಧ ಮತ್ತಷ್ಟು ಮಾಹಿತಿ ಬಹಿರಂಗಗೊಳ್ಳಲಿದೆ ಎಂದು ಹೇಳಿದರು. ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಆರೋಪ ಕುರಿತು ಪ್ರಸ್ತಾಪಿಸಿದ ಅವರು, ಕೆಂಪಣ್ಣ ಅವರು ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ್ದನ್ನು ಸಮರ್ಥಿಸಿಕೊಂಡರು.
ಬಿಜೆಪಿಯು ಮೊಸರಿನಲ್ಲಿ ಕಲ್ಲು ಹುಡುಕುವ ಪ್ರಯತ್ನ ಮಾಡುತ್ತಿದೆ. ಖುದ್ದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೇ ಇಂಥ ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ಪೂರಕ ದಾಖಲೆ ಕೊಡಿ ಎಂಬ ಸಿಎಂ ಹೇಳಿಕೆಯ ಬಗ್ಗೆ ಪ್ರಸ್ತಾಪಿಸಿದ ಅವರು, ನಾನು ಈ ಸಂಬಂಧ ದಾಖಲೆ ಬಿಡುಗಡೆ ಮಾಡುತ್ತೇನೆ ಎಂದರು. ಮುನಿರತ್ನ ಅವರು ಕೋಲಾರದ ಒಬ್ಬ ಅಧಿಕಾರಿಗೆ ಶೇ 10ರ ಕಮಿಷನ್ ಪಡೆಯುವಂತೆ ನಿರ್ದೇಶನ ನೀಡಿದ್ದಾರೆ ಎಂದು ಹೇಳಿದರು.
ಐಎಎಸ್ ಅಧಿಕಾರಿ ತುಳಸಿ ಮದ್ದಿನೇನಿಗೆ ಸಚಿವ ಮುನಿರತ್ನ ಬ್ಲ್ಯಾಕ್ಮೇಲ್ ಮಾಡಿದ್ದಾರೆ. ಅಷ್ಟೇ ಅಲ್ಲ, ಪ್ರಭಾವ ಬಳಸಿ ಹಣ ಬಿಡುಗಡೆ ಮಾಡಿಕೊಂಡಿಸಿದ್ದಾರೆ. ಸಚಿವ ಮುನಿರತ್ನ ಅವರ ಆಡಿಯೋ, ವಿಡಿಯೋ ಎರಡೂ ಇದೆ. ಅಧಿಕಾರಿ ತುಳಸಿ ಮದ್ದಿನೇನಿ ಪತಿ ಹನಿಟ್ರ್ಯಾಪ್ನಲ್ಲಿ ಸಿಲುಕಿದ್ದರು. ಅದನ್ನೇ ಬಳಸಿಕೊಂಡು ಬ್ಲ್ಯಾಕ್ಮೇಲ್ ಮಾಡಿ ಸಚಿವರು ಹಣ ಬಿಡುಗಡೆ ಮಾಡಿದ್ದಾರೆ. ಹನಿಟ್ರ್ಯಾಪ್ ಯುವತಿ ಜೊತೆ ಮುನಿರತ್ನ ಇರುವ ಫೋಟೋ ಕೂಡ ನನಗೆ ಸಿಕ್ಕಿದೆ. ಈ ಬಗ್ಗೆ ಮತ್ತಷ್ಟು ದಾಖಲೆ ಸಂಗ್ರಹಿಸಿ ಶೀಘ್ರದಲ್ಲೇ ಬಿಡುಗಡೆ ಮಾಡುತ್ತೇವೆ ಎಂದು ಸವಾಲು ಹಾಕಿದರು.
Published On - 2:37 pm, Thu, 25 August 22