ನಂಜನಗೂಡು ತಾಲೂಕಿನಲ್ಲಿ ಅತಿ ಹೆಚ್ಚು ಕುಷ್ಠ ರೋಗಿಗಳು ಪತ್ತೆ; ಆರೋಗ್ಯ ಇಲಾಖೆ ಹೈ ಅಲರ್ಟ್
ನಂಜನಗೂಡು ತಾಲೂಕಿನಲ್ಲಿ ಒಟ್ಟು 27 ಕುಷ್ಠ ರೋಗಿಗಳು ಪತ್ತೆಯಾಗಿದ್ದಾರೆ. ಇಡೀ ಮೈಸೂರು ಜಿಲ್ಲೆಯಲ್ಲಿ ಇಲ್ಲೇ ಅತಿ ಹೆಚ್ಚು ರೋಗಿಗಳು ಪತ್ತೆಯಾಗಿರುವುದು ಎಂದು ಜಿಲ್ಲಾ ಕುಷ್ಠರೋಗ ನಿಯಂತ್ರಣಾಧಿಕಾರಿ ಡಾ.ಬಿ. ಬೃಂದಾ ಮಾಹಿತಿ ನೀಡಿದ್ದಾರೆ. ಆರೋಗ್ಯ ಇಲಾಖೆಯಿಂದ ಕುಷ್ಠರೋಗ ರೋಗಿಗಳಿಗೆ ಉಚಿತವಾಗಿ ಶಿಬಿರವನ್ನು ಆಯೋಜನೆ ಮಾಡಿದ್ದೇವೆ. ಸರ್ಕಾರದಿಂದ ಆರು ತಿಂಗಳು ಉಚಿತವಾಗಿ ಚಿಕಿತ್ಸೆ ನೀಡಲಾಗುತ್ತದೆ ಎಂದರು.
ಮೈಸೂರು, ಡಿ.09: ಇಡೀ ಮೈಸೂರು ಜಿಲ್ಲೆಯಲ್ಲಿಯೇ ನಂಜನಗೂಡು ತಾಲೂಕಿನಲ್ಲಿ ಅತಿ ಹೆಚ್ಚು ಕುಷ್ಠ ರೋಗ (Leprosy) ಪ್ರಕರಣಗಳು ಪತ್ತೆಯಾಗಿವೆ. ನಂಜನಗೂಡು ತಾಲೂಕಿನಲ್ಲಿ ಒಟ್ಟು 27 ಕುಷ್ಠ ರೋಗಿಗಳು ಪತ್ತೆಯಾಗಿದ್ದಾರೆ ಎಂದು ಜಿಲ್ಲಾ ಕುಷ್ಠರೋಗ ನಿಯಂತ್ರಣಾಧಿಕಾರಿ ಡಾ.ಬಿ. ಬೃಂದಾ (Dr B Brunda) ಮಾಹಿತಿ ನೀಡಿದ್ದಾರೆ. ಇತ್ತೀಚೆಗೆ ಆರೋಗ್ಯ ಇಲಾಖೆ ಸರ್ವೆ ಮಾಡಿದ್ದು ಸರ್ವೆಯಲ್ಲಿ ನಂಜನಗೂಡು ಅತಿ ಹೆಚ್ಚು ಕುಷ್ಠ ರೋಗಿಗಳನ್ನು ಹೊಂದಿದೆ ಎಂದು ಮಾಹಿತಿ ಸಿಕ್ಕಿದೆ.
ನಂಜನಗೂಡಿನ ಸಾರ್ವಜನಿಕ ಆಸ್ಪತ್ರೆಯಲ್ಲಿ ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೊಸೈಟಿ, ಜಿಲ್ಲಾ ಕುಷ್ಠರೋಗ ನಿರ್ಮೂಲನಾ ವಿಭಾಗ, ನಂಜನಗೂಡು ತಾಲ್ಲೂಕು ಆರೋಗ್ಯಾಧಿಕಾರಿ ಸಹಯೋಗದಲ್ಲಿ ಉಚಿತ ಕುಷ್ಠರೋಗ ತಪಾಸಣಾ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ನಂಜನಗೂಡಿನಲ್ಲಿ ಹೆಚ್ಚಾಗಿ ಕುಷ್ಠರೋಗದ ರೋಗಿಗಳು ಕಂಡು ಬಂದಿದ್ದಾರೆ. ಇನ್ನು ನಂಜನಗೂಡಿನಲ್ಲಿ ಹೆಚ್ಚು ರೋಗಿಗಳು ಕಂಡು ಬಂದ ಹಿನ್ನೆಲೆ ಆರೋಗ್ಯ ಇಲಾಖೆಯಿಂದ ಕುಷ್ಠರೋಗ ರೋಗಿಗಳಿಗೆ ಉಚಿತವಾಗಿ ಶಿಬಿರವನ್ನು ಆಯೋಜನೆ ಮಾಡಿದ್ದೇವೆ. ಸರ್ಕಾರದಿಂದ ಆರು ತಿಂಗಳು ಉಚಿತವಾಗಿ ಚಿಕಿತ್ಸೆ ನೀಡಲಾಗುತ್ತದೆ. ಈ ಕಾಯಿಲೆಯನ್ನು ತೋರಿಸಿಕೊಳ್ಳದೆ ಇದ್ದಲ್ಲಿ ಅಂಗವಿಕಲತೆಯಾಗಬಹುದು. ತಂಪು ಪ್ರದೇಶಗಳಲ್ಲಿ ಈ ರೋಗವು ಹೆಚ್ಚು ಕಾಣಿಸಿಕೊಳ್ಳುತ್ತದೆ. ಶರೀರವನ್ನು ನೀವು ತಪಾಸಣೆ ಮಾಡಿಸಿಕೊಳ್ಳಬೇಕು. ಸ್ಪರ್ಶ ಜ್ಞಾನವಿಲ್ಲದ ವ್ಯಕ್ತಿಗಳು ನಿಮ್ಮ ಹತ್ತಿರದ ಆಸ್ಪತ್ರೆಗಳಿಗೆ ತೆರಳಿ ಚಿಕಿತ್ಸೆ ಪಡೆದುಕೊಳ್ಳಬೇಕು. ರೋಗಿಗಳಿಗೆ ಅವಶ್ಯ ವಸ್ತುಗಳು ಹಾಗು ಔಷಧಿಗಳನ್ನು ನೀಡಿದ್ದೇವೆ ಎಂದು ಜಿಲ್ಲಾ ಕುಷ್ಠರೋಗ ನಿಯಂತ್ರಣಾಧಿಕಾರಿ ಡಾ.ಬಿ. ಬೃಂದಾ ತಿಳಿಸಿದರು.
ಇದನ್ನೂ ಓದಿ: ಪಿಎಸ್ಐ ಹಗರಣ: ಆರ್.ಡಿ. ಪಾಟೀಲ್ ವಿರುದ್ಧದ ತನಿಖೆಗೆ ನೀಡಿದ್ದ ತಡೆಯಾಜ್ಞೆ ತೆರವು
ಕುಷ್ಠರೋಗ ಒಂದು ದೀರ್ಘಕಾಲ ಕಾಡುವ ಮತ್ತು ದಿನದಿಂದ ದಿನಕ್ಕೆ ಹೆಚ್ಚಾಗುವ ಬ್ಯಾಕ್ಟೀರಿಯಾ ಸೋಂಕು ಎನ್ನಲಾಗಿದ್ದು, ದೇಹದ ಅಂಗಾಂಗಗಳ ಆಕಾರವನ್ನು ಮತ್ತು ಆರೋಗ್ಯವನ್ನು ಹದಗೆಡಿಸುತ್ತದೆ. ಬಹುಮುಖ್ಯವಾಗಿ ಚರ್ಮದ ಮೇಲೆ ಅಲ್ಸರ್ ಉಂಟು ಮಾಡುತ್ತದೆ ಮತ್ತು ನಮ್ಮ ದೇಹದ ಮೇಲ್ಭಾಗದ ಉಸಿರಾಟ ನಾಳವನ್ನು, ರಕ್ತನಾಳಗಳನ್ನು ಮತ್ತು ಕಣ್ಣುಗಳ ಭಾಗವನ್ನು ಹಾನಿಗೊಳಗಾಗುವಂತೆ ಮಾಡುತ್ತದೆ. ನಮ್ಮ ದೇಹದ ಮಾಂಸ ಖಂಡಗಳು ಇದರಿಂದ ತೊಂದರೆಗೆ ಒಳಗಾಗುತ್ತವೆ ಮತ್ತು ಇದನ್ನು ಹಾಗೆ ಬಿಟ್ಟರೆ ದೈಹಿಕವಾದ ಅಸಮರ್ಥತೆ ಎದುರಾಗುತ್ತದೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ