ಮೈಸೂರು ಅ.10: ಮಹಿಷ ದಸರಾ (Mahisha Dasara) ಆಚರಿಸಿಯೇ ತೀರುತ್ತೇವೆ ಎಂದು ದಲಿತ ಸಂಘಟನೆಗಳು ಮತ್ತು ಮಹಿಷ ದಸರಾ ಸಮಿತಿಯವರು ಪಟ್ಟು ಹಿಡಿದಿದ್ದಾರೆ. ಇದನ್ನು ವಿರೋಧಿಸಿ ಕೊಡಗು-ಮೈಸೂರು ಕ್ಷೇತ್ರ ಸಂಸದ ಪ್ರತಾಪ್ ಸಿಂಹ್ (Pratap Simha) ಚಾಮುಂಡಿ ಬೆಟ್ಟ ಚಲೋ (Chamundi betta Chalo) ಜಾಥಾಗೆ ಕರೆಕೊಟ್ಟಿದ್ದಾರೆ. ಈ ಸಂಬಂಧ ಬಿಜೆಪಿ (BJP) ನಾಯಕ ಪ್ರತಾಪ್ ಸಿಂಹ್ ಇಂದು (ಅ.10) ಪೂರ್ವಭಾವಿ ಸಭೆ ನಡೆಸಿದರು. ಇನ್ನು ಮಹಿಷ ದಸರಾ ಆಚರಣೆಗೆ ಮತ್ತು ಚಾಮುಂಡಿ ಬೆಟ್ಟ ಚಲೋಗೆ ಅನುಮತಿ ನೀಡುವಂತೆ ಎರಡೂ ಕಡೆಯವರು ನಗರ ಪೊಲೀಸ್ ಆಯುಕ್ತರಿಗೆ ಮನವಿ ಸಲ್ಲಿಸಿದ್ದಾರೆ. ಈ ಬಗ್ಗೆ ಮೈಸೂರು ನಗರ ಆಯುಕ್ತ ರಮೇಶ್ ಬಾನೋತ್ (Ramesh Banoth) ಮಾತನಾಡಿ ಈವರಗೆ ನಾವು ಇಬ್ಬರಿಗೂ ಅನುಮತಿ ನೀಡಿಲ್ಲ ಎಂದು ಹೇಳಿದರು.
ಮೈಸೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ಅನುಮತಿಗಾಗಿ ಎರಡೂ ಕಡೆಯವರು ನಮಗೆ ಅರ್ಜಿ ನೀಡಿದ್ದಾರೆ. ಮಹಿಷ ದಸರಾಗೆ ಪುಷ್ಪಾರ್ಚನೆಗೆ ಅವಕಾಶ ಅನುಮತಿ ಕೋರಿದ್ದಾರೆ. ಇನ್ನು 5000 ಮಂದಿ ಮೆರವಣಿಗೆ ನಡೆಸಲು ಚಾಮುಂಡಿ ಬೆಟ್ಟ ಚಲೋಗೆ ಕೂಡ ಅನುಮತಿ ಕೇಳಿದ್ದಾರೆ. ದಸರಾ ಉದ್ಘಾಟನೆ ಇರುವ ಕಾರಣ ನಾವು ಅನುಮತಿ ನೀಡಿಲ್ಲ. ಕಾನೂನು ಸುವ್ಯವಸ್ಥೆ ಕಾಪಾಡಬೇಕಿದೆ. ಈ ಕುರಿತು ಅ.12 ರಂದು ತೀರ್ಮಾನ ತೆಗೆದುಕೊಳ್ಳುತ್ತೇವೆ. ಕಾನೂನು ಸುವ್ಯವಸ್ಥೆ ಕುರಿತು ಇಂದು ಸಂಜೆ ಸಭೆ ಕರೆದಿದ್ದೇವೆ. ಮೈಸೂರಿಗೆ ಧಕ್ಕೆ ಬಾರದ ರೀತಿ ಕ್ರಮಕೈಗೊಳ್ಳುತ್ತೇವೆ ಎಂದರು.
ಇದನ್ನೂ ಓದಿ: ಮಹಿಷ ದಸರಾಗೆ ವಿರೋಧ: ಬರಿಗಾಲಲ್ಲಿ ಬೆಟ್ಟ ಹತ್ತಿ, ದುಷ್ಟರನ್ನು ಶಿಕ್ಷಿಸು ಎಂದು ಚಾಮುಂಡೇಶ್ವರಿಗೆ ಪಾರ್ಥನೆ
ಅಕ್ಟೋಬರ್ 13 ರಂದು 144 ಸೆಕ್ಷನ್ ಜಾರಿ ಮಾಡಿ ಮಹಿಷ ದಸರಾ ಬಂದ್ ಮಾಡಿಸಿದರೆ ಅದಕ್ಕೆ ನಮ್ಮ ಸ್ವಾಗತ ಇದೆ. ನಾವಂತು ಚಾಮುಂಡಿ ಬೆಟ್ಟ ಚಲೋ ವಿಚಾರವಾಗಿ ಎಲ್ಲಾ ವಾರ್ಡ್ಗಳಲ್ಲೂ ಸಭೆ ನಡೆಸುತ್ತಿದ್ದೇವೆ. ಐದು ಸಾವಿರಕ್ಕೂ ಹೆಚ್ಚು ಜನ ಜಾಥದಲ್ಲಿ ಭಾಗವಹಿಸುತ್ತಾರೆ. ಜಾಥಕ್ಕೆ ಪೊಲೀಸರ ಅನುಮತಿ ಕೇಳಿದ್ದೇವೆ. ಪೊಲೀಸರು ಇನ್ನೂ ನಮಗೂ ಅನುಮತಿ ಕೊಟ್ಟಿಲ್ಲ, ಮಹಿಷ ದಸರಾಗೂ ಅನುಮತಿ ಕೊಟ್ಟಿಲ್ಲ. ಅನುಮತಿ ವಿಚಾರದಲ್ಲಿ ಮತ್ತೆ ಪೊಲೀಸರ ಜೊತೆ ಮಾತನಾಡುತ್ತೇನೆ ಎಂದು ಸಂಸದ ಪ್ರತಾಪ ಸಿಂಹ್ ಹೇಳಿದರು
ಚಾಮರಾಜನಗರ: ಮಹಿಷ ದಸರಾ ವಿರೋಧಿಸಿದ ಪ್ರತಾಪ್ ಸಿಂಹ ಬಂಧಿಸಿ ಗಡಿಪಾರು ಮಾಡಿ. ಮೈಸೂರಿನಲ್ಲಿ ಸಂಸದರು ಆಗಸ್ಟ್ 13 ರಂದು ಗಲಭೆ ಸೃಷ್ಟಿಸುವ ಸಾಧ್ಯತೆ ಇದೆ. ಸಂಘರ್ಷಕ್ಕೂ ರೆಡಿ ಅನ್ನೋ ಮೂಲಕ ಗೂಂಡಾ ವರ್ತನೆ ತೋರುತ್ತಿದ್ದಾರೆ. ಜನರನ್ನು ಪ್ರಚೋದಿಸುವ ಕೆಲಸಕ್ಕೆ ಪ್ರತಾಪ್ ಸಿಂಹ ಮುಂದಾಗಿದ್ದಾರೆಂದು ದಲಿತಪರ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿವೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 1:22 pm, Tue, 10 October 23