ಮೈಸೂರು, ಫೆಬ್ರವರಿ 27: ಮೈಸೂರು ಕೊಡಗು ರೈಲು ಮಾರ್ಗಕ್ಕೆ (Mysuru Kodagu Train Route) ರಾಜ್ಯ ಸರ್ಕಾರ ಭೂಸ್ವಾಧೀನ ಮಾಡಿಕೊಡಬೇಕು ಎಂದು ಸಂಸದ ಪ್ರತಾಪ್ ಸಿಂಹ (Pratap Simha) ಆಗ್ರಹಿಸಿದ್ದಾರೆ. ಮೈಸೂರು ವಿಭಾಗದ ರೈಲ್ವೆ ಯೋಜನೆಗಳಿಗೆ ಪ್ರಧಾನಿ ನರೇಂದ್ರ ಮೋದಿ ವರ್ಚುವಲ್ ಆಗಿ ಶಂಕುಸ್ಥಾಪನೆ ನೆರವೇರಿಸಿದ ನಂತರ ಸೋಮವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ರಾಜ್ಯ ಸರ್ಕಾರ ಭೂಸ್ವಾಧೀನ ಪ್ರಕ್ರಿಯೆ ಆರಂಭಿಸಿದರೆ ಮೈಸೂರು – ಕೊಡಗು ನಡುವಣ ರೈಲು ಮಾರ್ಗ ಶೀಘ್ರ ಸಾಕಾರಗೊಳ್ಳಲಿದೆ. ನಾವು ವಿವರವಾದ ಯೋಜನಾ ವರದಿಯೊಂದಿಗೆ ಸಿದ್ಧರಿದ್ದೇವೆ ಮತ್ತು ಸಮೀಕ್ಷೆಗಳು ಪೂರ್ಣಗೊಂಡಿವೆ ಎಂದು ಹೇಳಿದ್ದಾರೆ.
ಸಿದ್ದರಾಮಯ್ಯ ಸರ್ಕಾರ ಭೂಮಿ ಸ್ವಾಧೀನಪಡಿಸಿಕೊಂಡು ರೈಲ್ವೆ ಇಲಾಖೆಗೆ ಉಚಿತವಾಗಿ ಹಸ್ತಾಂತರಿಸಬೇಕು. ಮೈಸೂರಿನವರೇ ಆದ ಸಿದ್ದರಾಮಯ್ಯ ಅವರು ತವರು ಜಿಲ್ಲೆಗೆ ಇದನ್ನು ಮಾಡುತ್ತಾರೆ ಎಂಬ ಬಗ್ಗೆ ನನಗೆ ಖಾತ್ರಿಯಿದೆ ಎಂದು ಪ್ರತಾಪ್ ಸಿಂಹ ಹೇಳಿದ್ದಾರೆ.
ಮೈಸೂರಿನ ಇತರ ಮೂಲಸೌಕರ್ಯ ಯೋಜನೆಗಳ ಕುರಿತು ಉಲ್ಲೇಖಿಸಿದ ಸಂಸದರು, ಕೇಂದ್ರ ಸರ್ಕಾರವು ಸಂಚಾರ ದಟ್ಟಣೆ ನಿವಾರಿಸಲು ಕುಕ್ಕರಹಳ್ಳಿ-ಬೋಗಾದಿ ರಸ್ತೆಯ ಕ್ರಾಫರ್ಡ್ ಹಾಲ್ ಬಳಿ ರಸ್ತೆ ಕೆಳ ಸೇತುವೆ ನಿರ್ಮಾಣ ಯೋಜನೆಗೆ 42.14 ಕೋಟಿ ರೂ. ಹಂಚಿಕೆ ಮಾಡಿದೆ. ಈ ಯೋಜನೆಯನ್ನು ಮೈಸೂರು-ಚಾಮರಾಜನಗರ ಲೆವೆಲ್ ಕ್ರಾಸಿಂಗ್ 1 ರಲ್ಲಿ ಪ್ರಾರಂಭಿಸಲಾಗಿದೆ ಎಂದಿದ್ದಾರೆ.
ಅದೇ ರೀತಿ, ರಾಯಲ್ ಇನ್ ಜಂಕ್ಷನ್ ಬಳಿ ಕೆಆರ್‌ಎಸ್ ರಸ್ತೆಯಲ್ಲಿ ರಸ್ತೆ ಕೆಳ ಸೇತುವೆಗೆ ಕೇಂದ್ರ ಸರ್ಕಾರದಿಂದ 42.88 ಕೋಟಿ ರೂ. ಹಂಚಿಕೆಗೆ ಅನುಮೋದನೆ ನೀಡಲಾಗಿದೆ. ನಿರ್ದಿಷ್ಟವಾಗಿ 5 ನೇ ಲೆವೆಲ್ ಕ್ರಾಸಿಂಗ್ ಬಳಿ ಕಾಮಗಾರಿ ನಡೆಸುವ ಉದ್ದೇಶವನ್ನು ಹೊಂದಲಾಗಿದೆ. ನಾವು ಕಾಮಗಾರಿಗಳನ್ನು ಸಮರೋಪಾದಿಯಲ್ಲಿ ಪ್ರಾರಂಭಿಸಿ ಪೂರ್ಣಗೊಳಿಸುತ್ತೇವೆ ಎಂದು ಪ್ರತಾಪ್ ಸಿಂಹ ಹೇಳಿದ್ದಾರೆ.
ಇದನ್ನೂ ಓದಿ: ಮುಂದೆ ಬೆಂಗಳೂರು ಮೈಸೂರು ಮೆಟ್ರೋ: ಸಂಸದ ಪ್ರತಾಪ್ ಸಿಂಹ ಭರವಸೆ
2014ಕ್ಕೂ ಮೊದಲು ಮೈಸೂರಿಗೆ ಹೊಸ ರೈಲು ತರುವ ಪ್ರಯತ್ನವೇ ಆಗಿರಲಿಲ್ಲ. ನಾನು ಸಂಸದನಾದ ಬಳಿಕ 11 ರೈಲುಗಳನ್ನು ತಂದಿದ್ದೇನೆ. ಶೀಘ್ರದಲ್ಲೇ 12ನೇ ರೈಲು ಬರಲಿದೆ. ಮೈಸೂರು-ರಾಮೇಶ್ವರಂ ರೈಲು ಬರಲಿದೆ. ಅದೇ ರೀತಿ ಬೆಂಗಳೂರು ಮೈಸೂರು ಮೆಟ್ರೋ ಸಹ ಬರಲಿದೆ ಎಂದು ಸಂಸದ ಪ್ರತಾಪ್ ಸಿಂಹ ಕೆಲವು ದಿನಗಳ ಹಿಂದೆ ಹೇಳಿದ್ದರು.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ