ಮುಡಾ ಹಗರಣ: ಪ್ರಕರಣ ಎಲ್ಲಿಗೆ ಬಂತು? ಇಂದಿನ ಬೆಳವಣಿಗೆಯ ಡಿಟೇಲ್ಸ್ ಇಲ್ಲಿದೆ

| Updated By: ರಮೇಶ್ ಬಿ. ಜವಳಗೇರಾ

Updated on: Oct 04, 2024 | 4:15 PM

ಮುಡಾ ಹಗರಣ ರಾಜ್ಯ ರಾಜಕಾರಣದಲ್ಲಿ ಭಾರೀ ಸದ್ದು ಮಾಡುತ್ತಿದೆ. ತಮಗೆ ಹಂಚಿಕೆಯಾಗಿದ್ದ 14 ಸೈಟ್​ಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯನವರ ಪತ್ನಿ ವಾಪಸ್ ಮುಡಾ ಹಸ್ತಾಂತರಿಸಿದ್ದಾರೆ. ಮತ್ತೊಂದು ಮೈಸೂರು ಲೋಕಾಯುಕ್ತರು ಸಹ ತನಿಖೆ ಚುರುಕುಗೊಳಿಸಿದ್ದಾರೆ. ಹಾಗಾದ್ರೆ, ಇಂದು ಏನೆಲ್ಲಾ ಬೆಳವಣಿಗಳು ಆಗಿವೆ ಎನ್ನುವ ವಿವರ ಇಲ್ಲಿದೆ.

ಮುಡಾ ಹಗರಣ: ಪ್ರಕರಣ ಎಲ್ಲಿಗೆ ಬಂತು? ಇಂದಿನ ಬೆಳವಣಿಗೆಯ ಡಿಟೇಲ್ಸ್ ಇಲ್ಲಿದೆ
ಸಿದ್ದರಾಮಯ್ಯ
Follow us on

ಮೈಸೂರು, (ಅಕ್ಟೋಬರ್ 04): ಸಿಎಂ ಸಿದ್ದರಾಮಯ್ಯ ವಿರುದ್ಧದ ಮುಡಾಹಗರಣದ ವಿಚಾರವಾಗಿ ಲೋಕಾಯುಕ್ತ ಅಧಿಕಾರಿಗಳು ತನಿಖೆ ಚುರುಕುಗೊಳಿಸಿದ್ದಾರೆ. ಮುಡಾ ಹಗರಣದ ತನಿಖೆ ಚುರುಕುಗೊಂಡಿದೆ.. ನಿನ್ನೆ (ಅ.03) ಇಡಿ ಸ್ನೇಹಮಯಿ ಕೃಷ್ಣ ಅವರನ್ನ ಕರೆಸಿಕೊಂಡು ಬರೋಬ್ಬರಿ 500 ಪುಟಗಳ ದಾಖಲೆ ಮತ್ತು ಮಾಹಿತಿ ಸಂಗ್ರಹಿಸಿತ್ತು. ಮತ್ತೊಂದೆಡೆ ಲೋಕಾಯುಕ್ತ ಪೊಲೀಸರು ಮೈಸೂರಿನ ಮುಡಾ ಕಚೇರಿಗೆ ಆಗಮಿಸಿದ ದಾಖಲೆಗಳನ್ನ ಪರಿಶೀಲಿಸಿದ್ರು. ಇವತ್ತು ಲೋಕಾಯುಕ್ತ ಎಸ್‌ಪಿ ಉದೇಶ್ ನೇತೃತ್ವದ ತಂಡ ಸ್ಥಳ ಮಹಜರು ನಡೆಸಿದೆ. ಎರಡು ದಿನದ ಹಿಂದೆ ಮೈಸೂರಿನ ಕೆಸರೆ ಗ್ರಾಮದ ಜಮೀನಿಗೆ ದೂರುದಾರ ಸ್ನೇಹಮಯಿ ಕೃಷ್ಣ ಅವರನ್ನ ಕರೆದುಕೊಯ್ದು ಮಹಜರು ನಡೆಸಿದ್ದ ಅಧಿಕಾರಿಗಳು, ಇಂದು ಸಿಎಂ ಪತ್ನಿ ಪಾರ್ವತಿಗೆ ನೀಡಲಾಗಿದ್ದ ಅಂದ್ರೆ, ವಿಜಯನಗರ ಬಡಾವಣೆಯ 14 ಸೈಟ್‌ಗಳಲ್ಲಿ ಸ್ಥಳ ಮಹಜರು ನಡೆಸಿದೆ.

ಅಂದಹಾಗೆ, ಸಿಎಂ ಸಿದ್ದರಾಮಯ್ಯ ಪತ್ನಿ ಈಗಾಗಲೇ ಮುಡಾಗೆ ಸೈಟ್ ವಾಪಸ್ ಕೊಟ್ಟಿದ್ದಾರೆ. ಸದ್ಯ ಇದೇ ವಿಚಾರವಾಗಿ ಪ್ರತಿಕ್ರಿಯೆ ನೀಡಿರುವ ದೂರುದಾರ ಸ್ನೇಹಮಯಿ ಕೃಷ್ಣ, ಸೈಟ್ ವಾಪಸ್ ಕೊಟ್ಟಿರೋದೇ ಪ್ರಕರಣಕ್ಕೆ ಮಹತ್ವದ ಸಾಕ್ಷಿಯಾಗಲಿದೆ ಎಂದಿದ್ದಾರೆ. ಮತ್ತೊಂದೆಡೆ ನಿನ್ನೆ ಶಾಸಕ ಜಿ.ಟಿ.ದೇವೇಗೌಡ ಸಿಎಂ ಸಿದ್ದರಾಮಯ್ಯ ಮಾತನಾಡಿದ್ದಾರೆ. ಈ ಬಗ್ಗೆಯೂ ಪ್ರತಿಕ್ರಿಯೆ ನೀಡರುವ ಸ್ನೇಹಮಯಿ ಕೃಷ್ಣ, ಮುಡಾದಲ್ಲಿ ಜಿ.ಟಿ.ದೇವೇಗೌಡರ ಅಕ್ರಮ ಇರಬಹುದು. ಅದಕ್ಕಾಗೇ ಹೀಗೆ ಮಾತಾಡಿದ್ದಾರೆ ಎಂದು ಆರೋಪಿಸಿದ್ದಾರೆ.

ಇದನ್ನೂ ಓದಿ: ಮೈಸೂರು ದಸರಾದ ಮೊದಲ ದಿನ ಮುಡಾಮಯ: ಮಹಿಷ ಮರ್ಧಿನಿ ಪೂಜೆಯಲ್ಲಿ ಮಾರ್ದನಿಸಿದ ಜಿಟಿ ದೇವೇಗೌಡ ಮಾತು

ಇನ್ನು ನಿನ್ನೆ ಜಿಟಿಡಿ ಹೇಳಿಕೆಯನ್ನ ಸಚಿವ ಕೃಷ್ಣಭೈರೇಗೌಡ ಸಮರ್ಥಿಸಿಕೊಂಡಿದ್ದಾರೆ. 40 ವರ್ಷದಿಂದ ಸಿದ್ದರಾಮಯ್ಯ ಅವರು ರಾಜಕೀಯದಲ್ಲಿ ಇದ್ದಾರೆ. ಜಿಟಿ ದೇವೇಗೌಡರು ಸಿದ್ದರಾಮಯ್ಯ ಜೊತೆಗೆ, ಎದುರಾಳಿಯಾಗಿ, ವಿರೋಧಿಯಾಗಿ ಇದ್ದವರು. ಅವರ ಅನುಭವದ ಮಾತನ್ನ ಹೇಳಿದ್ದಾರೆ ಎಂದಿದ್ದಾರೆ. ಆದ್ರೆ, ಬಿಜೆಪಿ ಶಾಸಕ ಶ್ರೀವತ್ಸ ಮುಡಾದಲ್ಲಿ ಸರ್ಕಾರ ಮೇಲಿಂದ ಮೇಲೆ ತಪ್ಪು ಮಾಡ್ತಿದೆ, ತರಾತುರಿಯಲ್ಲಿ ನಿವೇಶನ ವಾಪಸ್‌ ಅನುಮಾನಕ್ಕೆ ಕಾರಣವಾಗಿದೆ ಎಂದಿದ್ದಾರೆ. ಬಿಜೆಪಿ ಆರೋಪಕ್ಕೆ ತಿರುಗೇಟು ಕೊಟ್ಟಿರುವ ಸಚಿವ ಶಿವರಾಜ್ ತಂಗಡಗಿ, ಮುಡಾದಲ್ಲಿ ರಾಜಕೀಯ ಕುತಂತ್ರ ನಡೆದಿದೆ ಎಂದಿದ್ದಾರೆ

ಒಟ್ಟಾರೆ ಮೂಡಾ ಹಗರಣದ ವಿಚಾರವಾಗಿ ಒಂದಡೆ ತನಿಖೆ ಚುರುಕಾಗಿದ್ರೆ, ಮತ್ತೊಂದಡೆ, ರಾಜಕೀಯ ಜಟಾಪಟಿಯೂ ತಾರಕಕ್ಕೇರಿದೆ. ತನಿಖೆ ಬಳಿಕ ಸತ್ಯಾಸತ್ಯತೆ ಹೊರಗೆ ಬರಲಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ