ಮೈಸೂರು ದಸರಾದ ಮೊದಲ ದಿನ ಮುಡಾಮಯ: ಮಹಿಷ ಮರ್ಧಿನಿ ಪೂಜೆಯಲ್ಲಿ ಮಾರ್ದನಿಸಿದ ಜಿಟಿ ದೇವೇಗೌಡ ಮಾತು
ಮೈಸೂರು ದಸರಾ ಮಹೋತ್ಸವಕ್ಕೆ ಇಂದು ಅದ್ಧೂರಿ ಚಾಲನೆಯೇ ಸಿಕ್ಕಿದೆ. ದಸರಾ ಉದ್ಘಾಟನೆ ಕಾರ್ಯಕ್ರಮದಲ್ಲಿ ಸಾವಿರಾರು ಜನ ಸೇರಿದ್ದರು. ಆದ್ರೆ ಮುಡಾ ಸಂಕಷ್ಟದಲ್ಲಿ ಸಿಲುಕಿರುವ ಸಿಎಂ ಸಿದ್ದರಾಮಯ್ಯ ಮುಖದಲ್ಲಿ ಮಾತ್ರ ನಗುವೇ ಇರಲಿಲ್ಲ. ಕಂಪ್ಲೀಟ್ ಮಂಕಾಗಿದ್ದರು. ಆದ್ರೆ ಯಾವಾಗ ವೇದಿಕೆ ಮೇಲೆ ಜೆಡಿಎಸ್ ಶಾಸಕ ಜಿ.ಟಿ.ದೇವೇಗೌಡ ಭಾಷಣ ಶುರು ಮಾಡಿದರೋ ಆಗ ಸೀನೇ ಚೇಂಜ್ ಆಗಿತ್ತು. ಸಿದ್ದರಾಮಯ್ಯಗೆ ನೂರಾನೇ ಬಲವೇ ಬಂದಂತಾಯ್ತು. ಮೈಸೂರು ದಸರಾದ ಮೊದಲ ದಿನ ಮುಡಾಮಯವಾಗಿದೆ.
ಮೈಸೂರು, (ಅಕ್ಟೋಬರ್ 03): ಪೂಜೆ ಜೊತೆಗೆ ಹಗರಣದ ಮಾತು..ನಾಡ ಹಬ್ಬದ ಉದ್ಘಾಟನೆಯಲ್ಲೂ ನಾಡದೊರೆಯ ಹೊಗಳಿಕೆ..ವಿಶ್ವ ವಿಖ್ಯಾತ ಮೈಸೂರು ದಸರಾ ಮಹತ್ಸೋವದ ಸಂಪೂರ್ಣ ಮುಡಾ ಮಯ ಆಗಿತ್ತು. ಮಹಿಷ ಮರ್ಧಿನಿ ಪೂಜೆಯಲ್ಲಿ ಮಾರ್ದನಿಸಿದ್ದು ಮುಡಾ ಮತ್ತು ಜೆಡಿಎಸ್ ಶಾಸಕ ಜಿ.ಟಿ.ದೇವೇಗೌಡ ಆಡಿದ ಮಾತು. ಹೌದು… ಮುಡಾ ಹಗರಣದಲ್ಲಿ ಸಿಲುಕಿರೋ ಸಿಎಂ, ತಮ್ಮ ಸ್ಥಾನದಿಂದ ಕೆಳಗಿಳಿಯಲೇ ಬೇಕು ಎಂದು ಬಿಜೆಪಿ, ಜೆಡಿಎಸ್ ನಾಯಕರು ಕೂಗೆಬ್ಬಿಸಿದ್ದಾರೆ. ಹೋದಲ್ಲಿ ಬಂದಲ್ಲಿ ಸಿಎಂಗೆ ರಾಜೀನಾಮೆ ಆಗ್ರಹವನ್ನೇ ಮಾಡ್ತಿದ್ದಾರೆ.ಒಂದು ಹೆಜ್ಜೆ ಮುಂದಿರೋ ಕೇಂದ್ರ ಸಚಿವ ಕುಮಾರಸ್ವಾಮಿ, ಮುಖ್ಯಮಂತ್ರಿಗಳ ವಿರುದ್ಧ ಕೆಂಡಕಾರುತ್ತಿದ್ದಾರೆ. ಆದ್ರೆ ಅದೇ ಜೆಡಿಎಸ್ ಶಾಸಕ, ಕೋರ್ ಕಮಿಟಿ ಅಧ್ಯಕ್ಷ ಜಿಟಿ ದೇವೇಗೌಡ ಸಿಎಂ ಪರ ಬ್ಯಾಟ್ ಬೀಸಿದ್ದಾರೆ. ಅಲ್ಲದೇ ಪರೋಕ್ಷವಾಗಿ ತಮ್ಮದೇ ಪಕ್ಷದ ನಾಯಕ ಕೇಂದ್ರ ಸಚಿವ ಹೆಚ್ಡಿ ಕುಮಾರಸ್ವಾಮಿಗೆ ಟಾಂಗ್ ಕೊಟ್ಟಿದ್ದಾರೆ.
ಮೈಸೂರು ದಸರಾ ಉದ್ಘಾಟನೆಯಲ್ಲೂ ಮುಡಾ ಪಾಲಿಟಿಕ್ಸ್!
ಇಂದು (ಅಕ್ಟೋಬರ್ 03) ಬೆಳಗ್ಗೆ 9.15ರಿಂದ 9.40ರೊಳಗಿನ ಶುಭ ವೃಶ್ಚಿಕ ಲಗ್ನದಲ್ಲಿ ನಾಡ ಹಬ್ಬ ದಸರಾಗೆ ಚಾಲನೆ ನೀಡಲಾಯ್ತು. ಹಿರಿಯ ಸಾಹಿತಿ ಡಾ. ಹಂಪ ನಾಗರಾಜಯ್ಯ ದಸರಾ ಉದ್ಘಾಟಿಸಿದ್ರು. ಪ್ರತೀ ವರ್ಷದಂತೆ ಈ ಕಾರ್ಯಕ್ರಮ ನಡೆದಿತ್ತು ಅಷ್ಟೇ..ಆ ಬಳಿಕ ಇಡೀ ವೇದಿಕೆ ಕಾರ್ಯಕ್ರಮ ಮುಡಾ ಮಯ ಆಗಿತ್ತು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಚಾಮುಂಡೇಶ್ವರಿ ಕ್ಷೇತ್ರದ ಶಾಸಕರೂ ಆಗಿರೋ ಜಿಟಿ ದೇವೇಗೌಡ, ಮಾತ್ ಮಾತಿನಲ್ಲೂ ಸಿಎಂ ಸಿದ್ದರಾಮಯ್ಯನವರನ್ನು ಹಾಡಿಹೊಗಳಿದ್ರು. ಅದರಲ್ಲೂ ನೇರವಾಗಿ ಮುಡಾ ಅಖಾಡಕ್ಕೆ ಇಳಿದ ಜಿಟಿಡಿ, ಎಫ್‌ಐಆರ್ ಆದ್ರೆ ರಾಜೀನಾಮೆ ಕೊಡಬೇಕಾ? ಹಾಗಾಂತ ಕಾನೂನು ಇದ್ಯಾ? ಕುಮಾರಸ್ವಾಮಿಯನ್ನ ಕೇಳಿದರೆ ಕೊಡುತ್ತಾರಾ ಎಂದು ನೇರಾ ತಮ್ಮ ನಾಯಕನನ್ನೇ ಪ್ರಶ್ನಿಸಿದ್ದಾರೆ.
ಜಿಟಿಡಿಗೆ ಸಿದ್ದರಾಮಯ್ಯ ಧನ್ಯವಾದ
ಸಿಎಂ ಸಿದ್ದರಾಮಯ್ಯರ ಅವರನ್ನು ಹೊಗಳುತ್ತಿದ್ದಂತೆ ಜೆಡಿಎಸ್ ಶಾಸಕನಿಗೆ ವೇದಿಕೆಯಲ್ಲೇ ದೊಡ್ಡ ಗೌರವ ಸಿಕ್ಕಿತ್ತು. ಭಾಷಣ ಮುಗಿಸಿ ಬಂದ ಜಿಟಿಡಿಗೆ ಎದ್ದು ನಿಂತು ಗೌರವ ಸಲ್ಲಿಸಿದರು. ಬಳಿಕ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಜಿಟಿಡಿ ತಮ್ಮ ಪರ ಮಾತನಾಡಿದ್ದಕ್ಕೆ ಧನ್ಯವಾದ ಹೇಳಿದ್ರು. ಅಷ್ಟೇ ಅಲ್ಲ ಅವರ ಮಾತಿನಿಂದ ಬಲ ಬಂದಿದೆ, ಸತ್ಯಮೇವ ಜಯತೆ ಎಂದರು. ಇನ್ನೂ ಒಂದು ಹೆಜ್ಜೆ ಮುಂದೆ ಹೋದ ಸಿಎಂ, ಚಾಮುಂಡಿ ಕೃಪೆಯಿಂದ ಈವರೆಗೆ ಯಾವುದೇ ತಪ್ಪು ಮಾಡಿಲ್ಲ. ತಪ್ಪು ಮಾಡಿದ್ರೆ ಇಷ್ಟು ವರ್ಷ ರಾಜಕಾರಣ ಮಾಡಲು ಆಗ್ತಿರಲಿಲ್ಲ ಅಂತಾ ಪರೋಕ್ಷವಾಗಿ ಮುಡಾ ಹಗರಣದಲ್ಲಿ ತಮ್ಮ ಪಾತ್ರ ಇಲ್ಲ ಎಂದು ಹೇಳಿದರು.
ಈ ಮಧ್ಯೆ, ಜಿಟಿಡಿ ಹೇಳಿಕೆ ಕಾಂಗ್ರೆಸ್ ನಾಯಕರಿಗೆ ಅಸ್ತ್ರವಾಗಿ ಸಿಕ್ಕಿದ್ದು, ಜಿಟಿಡಿ ಹೇಳಿಕೆಯನ್ನ ಸಚಿವ ಜಮೀರ್ ಅಹ್ಮದ್ ಸೇರಿದಂತೆ ಸಚಿವರು ಸ್ವಾಗತಿಸಿದ್ದಾರೆ. ಆದ್ರೆ, ಬಿಜೆಪಿ ನಾಯಕರು ಜಿಟಿಡಿ ಹೇಳಿಕೆಗೆ ಗರಂ ಆಗಿದ್ದಾರೆ. ದಸರಾ ಕಾರ್ಯಕ್ರಮವನ್ನ ರಾಜಕೀಯಕ್ಕೆ ಬಳಸಿದ್ದು ತಪ್ಪು ಎಂದು ಛಲವಾದಿ ನಾರಾಯಣ ಸ್ವಾಮಿ ಕಿಡಿ ಕಾರಿದ್ದಾರೆ.
ಒಟ್ಟಿನಲ್ಲಿ ಬಿಜೆಪಿ, ಜೆಡಿಎಸ್ ಒಟ್ಟಾಗಿ ಸಿಎಂ ರಾಜೀನಾಮೆಗೆ ಆಗ್ರಹಿಸಿದ್ರೆ, ಜೆಡಿಎಸ್ ನಾಯಕ ಮಾತ್ರ ಸಿದ್ದರಾಮಯ್ಯನವರನ್ನು ಹಾಡಿಹೊಗಳಿದ್ದಾರೆ. ರಾಜೀನಾಮೆ ಯಾಕೆ ಎಂದು ಪ್ರಶ್ನಿಸಿದ್ದಾರೆ. ಅದೇನೇ ಇರಲಿ ನಾಡಹಬ್ಬ ಮುಡಾಮಯ ಆಗಿರೋದಂತು ಸತ್ಯ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:35 pm, Thu, 3 October 24