ಮೈಸೂರು, ನವೆಂಬರ್ 16: ಮುಡಾ ಹಗರಣ ಸಂಬಂಧ ಕಾಂಗ್ರೆಸ್ ಮತ್ತು ಸಿಎಂ ಸಿದ್ದರಾಮಯ್ಯ ವಿರುದ್ಧದ ದೂರುದಾರ ಸ್ನೇಹಮಯಿ ಕೃಷ್ಣ ಮಧ್ಯೆ ವಾಕ್ಸಮರ ಜೋರಾಗಿದೆ. ಅತ್ತ ಪೊಲೀಸ್ ದೂರು, ಮನವಿಗಳೂ ಸಲ್ಲಿಕೆಯಾಗಿವೆ. ಸ್ನೇಹಮಯಿ ಕೃಷ್ಣ ವಿರುದ್ಧ ಕೆಪಿಸಿಸಿ ವಕ್ತಾರ ಎಂ ಲಕ್ಷ್ಮಣ್ ಮೈಸೂರಿನ ಲಕ್ಷ್ಮೀಪುರಂ ಠಾಣೆಗೆ ದೂರು ನೀಡಿ, ಕ್ರಮಕ್ಕೆ ಆಗ್ರಹಿಸಿದ್ದಾರೆ.
‘ಸ್ನೇಹಮಯಿ ಕೃಷ್ಣ ರೌಡಿಶೀಟರ್, ಆತನ ವಿರುದ್ಧ 44 ಕೇಸ್ಗಳಿವೆ. ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ದಾಖಲೆ ಬಿಡುಗಡೆ ಮಾಡುತ್ತಿದ್ದಾನೆ. ಸಿಎಂ ಸಿದ್ದರಾಮಯ್ಯ ಬಗ್ಗೆ ಕೆಟ್ಟ ಅಭಿಪ್ರಾಯ ಮೂಡಿಸುತ್ತಿದ್ದಾನೆ’ ಎಂದು ಲಕ್ಷ್ಮಣ್ ಏಕವಚನದಲ್ಲೇ ವಾಗ್ದಾಳಿ ನಡೆಸಿದ್ದು, ಸ್ನೇಹಮಯಿ ಕೃಷ್ಣನನ್ನು ಕೂಡಲೇ ಬಂಧಿಸಬೇಕು ಎಂದು ಆಗ್ರಹಿಸಿದ್ದಾರೆ.
ರೌಡಿಶೀಟರ್ ಆಗಿರುವ ಸ್ನೇಹಮಯಿ ಸುಳ್ಳು ದಾಖಲೆ ನೀಡಿದ್ದಾನೆ. ಸಿಎಂ ಪತ್ನಿ ಪಾರ್ವತಿ ಹೆಸರಲ್ಲಿ ಸುಳ್ಳು ದಾಖಲೆಗಳನ್ನು ನೀಡಿದ್ದಾನೆ. ಆತ ಬಿಡುಗಡೆ ಮಾಡಿರುವ ಚಲನ್ ಹಣ ಕಟ್ಟಿರುವ ದಾಖಲೆ ಸುಳ್ಳು. ದಾಖಲೆಗಳು ಸುಳ್ಳು ಎಂದು ಮುಡಾ ಅಧಿಕಾರಿಗಳೇ ಹೇಳುತ್ತಾರೆ. ಕೂಡಲೇ ಸ್ನೇಹಿಮಯಿ ಕೃಷ್ಣನನ್ನು ಪೊಲೀಸರು ಬಂಧಿಸಬೇಕು. ಬಂಧಿಸದಿದ್ದರೆ ನಾಳೆಯಿಂದ ಧರಣಿ ಸತ್ಯಾಗ್ರಹ ಮಾಡುತ್ತೇವೆ ಎಂದು ಲಕ್ಷ್ಮಣ್ ಎಚ್ಚರಿಕೆ ನೀಡಿದ್ದಾರೆ.
ಕಾಂಗ್ರೆಸ್ ನೀಡಿರುವ ದೂರಿಗೆ ತಿರುಗೇಟು ನೀಡಿರುವ ಸ್ನೇಹಮಯಿ ಕೃಷ್ಣ, ಸಿಎಂ ಸಿದ್ದರಾಮಯ್ಯ ಅವರನ್ನು ಗಡಿಪಾರು ಮಾಡಬೇಕು ಎಂದಿದ್ದಾರೆ. ಮೈಸೂರಿನಲ್ಲಿ ‘ಟಿವಿ9’ಗೆ ಹೇಳಿಕೆ ನೀಡಿದ ಅವರು, ನಾನು ಕಾನೂನುಬದ್ಧವಾದ ಹೋರಾಟ ಮಾಡುತ್ತಿದ್ದೇನೆ. ಸಮಾಜಕ್ಕೆ ನ್ಯಾಯ ಕೊಡಿಸಲು ನಾನು ಹೋರಾಡುತ್ತಿದ್ದೇನೆ. ನನ್ನ ಗಡಿಪಾರು ಮಾಡಲು ಅವಕಾಶವಿಲ್ಲ. ಸಿದ್ದರಾಮಯ್ಯರನ್ನ ಗಡಿಪಾರು ಮಾಡಲು ಸಾಕಷ್ಟು ಅವಕಾಶಗಳಿವೆ. ಸುಳ್ಳು ಭಾಷಣ ಮಾಡಿ ರಾಜ್ಯದ ಜನರನ್ನ ಪ್ರಚೋದಿಸುತ್ತಿದ್ದಾರೆ. ಸಿಎಂ ಸಿದ್ದರಾಮಯ್ಯ ಸಮಾಜದ ಶಾಂತಿ ಹಾಳು ಮಾಡುತ್ತಿದ್ದಾರೆ. ಹೋರಾಟ ಮಾಡಬೇಕು ಎಂದು ಅವರು ಕರೆ ನೀಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಏತನ್ಮಧ್ಯೆ, ಮುಡಾ ಹಗರಣದ ಸಂಬಂಧ ಲೋಕಾಯುಕ್ತ ಪೊಲೀಸರಿಗೆ ಸ್ನೇಹಮಯಿ ಕೃಷ್ಣ ಮತ್ತೊಂದು ಮನವಿ ಪತ್ರ ಸಲ್ಲಿಸಿದ್ದು, ಆರೋಪಿಗಳನ್ನಾಗಿಸಬೇಕಾದವರ ಬಗ್ಗೆ ಹೆಚ್ಚುವರಿ ಮಾಹಿತಿ ನೀಡಿದ್ದಾರೆ. ಮಾನ್ಯ ನ್ಯಾಯಾಲಯದ ಆದೇಶದ ಹಿನ್ನೆಲೆಯಲ್ಲಿ ನನ್ನ ದೂರರ್ಜಿ ಆಧರಿಸಿ, ನಿಮ್ಮ ಠಾಣೆಯಲ್ಲಿ ದಾಖಲಾಗಿರುವ 11/2024 ಸಂಖ್ಯೆಯ ಪ್ರಕರಣದಲ್ಲಿ ತನಿಖೆಗೆ ಒಳಪಡಿಸಬೇಕಾದ ಸಾಕ್ಷಿದಾರರ ಬಗ್ಗೆ, ಸಂಗ್ರಹ ಮಾಡಬೇಕಾದ ದಾಖಲೆಗಳ ಬಗ್ಗೆ, ಪರಿಗಣಿಸಬೇಕಾದ ಸಾಕ್ಷ್ಯಾಧಾರಗಳ ಬಗ್ಗೆ, ಆರೋಪಿಗಳನ್ನಾಗಿಸಬೇಕಾದವರ ಬಗ್ಗೆ ನೀಡುತ್ತಿರುವ ಮತ್ತಷ್ಟು ಮಾಹಿತಿ ಎಂದು ಮನವಿ ಪತ್ರದಲ್ಲಿ ಸ್ನೇಹಮಯಿ ಕೃಷ್ಣ ಉಲ್ಲೇಖಿಸಿದ್ದಾರೆ.
ಮುಡಾದಿಂದ ಮಹೇಂದ್ರ ಎಂಬಾತ 19 ನಿವೇಶನ ಪಡೆದ ವಿಚಾರವಾಗಿ ಮಾತನಾಡಿದ ಸ್ನೇಹಮಯಿ ಕೃಷ್ಣ, ತಮ್ಮ ಆರೋಪಕ್ಕೆ ಜೆಡಿಎಸ್ ಶಾಸಕ ಜಿಟಿ ದೇವೇಗೌಡ ಅವರೊಂದಿಗೂ ಸಂಬಂಧ ಕಲ್ಪಿಸಿದ್ದಾರೆ. ಮುಡಾದಿಂದ 19 ಸೈಟ್ಗಳನ್ನು ಪಡೆದಿರುವ ಮಹೇಂದ್ರ ಎಂಬವರು ಜಿಟಿ ದೇವೇಗೌಡ ಸಹೋದರಿಯ ಮಗ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಮೈಸೂರು: 2 ಸೈಟ್ ನೀಡಬೇಕಾಗಿದ್ದ ವ್ಯಕ್ತಿಗೆ 19 ನಿವೇಶನ ನೀಡಿದ್ದ ಮುಡಾ, ಬಗೆದಷ್ಟು ಬಯಲಾಗ್ತಿದೆ ಕರ್ಮಕಾಂಡ
ಜಿಟಿಡಿ ಸುಳ್ಳು ದಾಖಲೆ ಸೃಷ್ಟಿ ಮಾಡಿ 19 ನಿವೇಶನ ಪಡೆದಿದ್ದಾರೆ. ದೇವನೂರು ಬಡವಾಣೆ ಅಭಿವೃದ್ಧಿಯಾಗಿ ಜನ ವಾಸ ಮಾಡುತ್ತಿದ್ದಾರೆ. ಕೃಷಿ ಭೂಮಿ ಎಂದು ಸುಳ್ಳು ದಾಖಲೆ ಸೃಷ್ಟಿಸಿ ನಿವೇಶನ ಪಡೆದಿದ್ದಾರೆ. ಸುಳ್ಳು ದಾಖಲೆ ಸೃಷ್ಟಿಸಿ ಮಹೇಂದ್ರ ಮುಡಾ ಸೈಟ್ ಪಡೆದಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಪತ್ನಿ ಹೇಗೆ ನಿವೇಶನ ಪಡೆದಿದ್ದಾರೋ, ಅದೇ ಮಾದರಿಯಲ್ಲಿ ಇವರು ಕೂಡ ನಿವೇಶನಗಳನ್ನು ಪಡೆದಿದ್ದಾರೆ. ಮಹೇಂದ್ರ ಶಾಸಕ ಜಿಟಿ ದೇವೇಗೌಡರ ಬೇನಾಮಿಯಾಗಿರಬಹುದು. ಬೇನಾಮಿ ಆ್ಯಕ್ಟ್ ಮೂಲಕ ಈ ಬಗ್ಗೆ ತನಿಖೆ ಆಗಬೇಕು. ಶಾಸಕರ ಪ್ರಭಾವ ಇರುವುದರಿಂದಲೇ ನಿವೇಶನಗಳನ್ನು ಪಡೆದಿದ್ದು ಎಂದು ಸ್ನೇಹಮಯಿ ಕೃಷ್ಣ ಆರೋಪಿಸಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ