ಮೈಸೂರು, ಜುಲೈ 07: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ದಿಂದ 50:50 ಅನುಪಾತದಲ್ಲಿ ಬದಲಿ ಭೂಮಿ ಪಡೆದವರ ಪಟ್ಟಿಯನ್ನು ಜಾಹೀರಾತು ಮೂಲಕ ಬಹಿರಂಗಪಡಿಸಲಾಗುತ್ತೆ ಎಂದು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಹೆಚ್.ಸಿ.ಮಹದೇವಪ್ಪ (HC Mahadevappa) ತಿಳಿಸಿದರು. 50:50 ಅನುಪಾತದಲ್ಲಿ ಬದಲಿ ಭೂಮಿ ಹಂಚಿಕೆಯಲ್ಲಿ ಮುಡಾ ಅಕ್ರಮ ಎಸಗಿದೆ ಎಂಬ ಆರೋಪ ಕೇಳಿ ಬಂದ ಹಿನ್ನೆಯಲ್ಲಿ ಮೈಸೂರಿನಲ್ಲಿ (Mysore) ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಹೆಚ್ಸಿ ಮಹದೇವಪ್ಪ, ಹಗರಣದಲ್ಲಿ ಇರುವ ಭ್ರಷ್ಟರ ಪತ್ತೆಗಾಗಿ ತನಿಖೆ ನಡೆಯುತ್ತಿದೆ. ಹಗರಣ ಸಂಪೂರ್ಣ ಬಯಲಿಗೆ ಬಂದ ನಂತರ ಕ್ರಮ ಕೈಗೊಳ್ಳಲಾಗುವುದು ಎಂದರು.
ಮುಡಾ ಪ್ರಕರಣದ ತನಿಖೆ ಸಿಬಿಐಗೆ ವಹಿಸುವಂತೆ ಒತ್ತಡ ಹಾಕುತ್ತಿರುವ ವಿಚಾರವಾಗಿ ಮಾತನಾಡಿದ ಅವರು, ಇಲಿ ಹೋಯ್ತು, ಕೋತಿ ಹೋಯ್ತು ಅಂದ್ರೂ ಸಿಬಿಐಗೆ ಕೊಡಿ ಅಂದ್ರೆ ಹೇಗೆ? ನಮ್ಮ ಅಧಿಕಾರಿಗಳು ತನಿಖೆ ಮಾಡಲು ಸಮರ್ಥರಿದ್ದಾರೆ. ಬಿಜೆಪಿ ಅವಧಿಯಲ್ಲಿ ಎಷ್ಟು ಪ್ರಕರಣ ಸಿಬಿಐಗೆ ಕೊಟ್ಟಿದ್ದಾರೆ ಹೇಳಿ? ಎಂದು ಗರಂ ಆದರು.
ಮುಡಾದಲ್ಲಿನ ಜನಪ್ರತಿನಿಧಿಗಳು, ಅಧಿಕಾರಿಗಳ ಸಮಿತಿ ರದ್ದು ಮಾಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಲಹೆ ಕೊಟ್ಟಿದ್ದೇನೆ. ಮೂವರ ಮಂದಿಯ ಸಮಿತಿಯಷ್ಟೇ ಇರಲಿ ಎಂದು ಹೇಳಿದ್ದೇನೆ. ಈ ಸಲಹೆಗೆ ಮುಖ್ಯಮಂತ್ರಿಗಳು ಪೂರಕವಾಗಿ ಸ್ಪಂದಿಸಿದ್ದಾರೆ ಎಂದು ತಿಳಿಸಿದರು.
ಇದನ್ನೂ ಓದಿ: ಮುಡಾ ಅಕ್ರಮ ಆರೋಪ: ಬಾಮೈದ ಜಮೀನನ್ನ ಅರಿಶಿನ, ಕುಂಕಮ ರೀತಿಯಲ್ಲಿ ನನ್ನ ಹೆಂಡಿತಿಗೆ ಗಿಫ್ಟ್ ನೀಡಿದ್ದಾನೆ; ಸಿದ್ದರಾಮಯ್ಯ
ಮುಖ್ಯಮಂತ್ರಿಗಳ ಭಾಮೈದ ಮಲ್ಲಿಕಾರ್ಜುನ ಸ್ವಾಮಿ ಅವರು ಕಾನೂನಾತ್ಮಕವಾಗಿ ಜಮೀನು ಖರೀದಿಸಿದ್ದರು. 2010ರಲ್ಲಿ ಅರಿಶಿನ, ಕುಂಕಮ ಜೊತೆಗೆ ಗಿಫ್ಟ್ ಅಂತ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಮ್ಮ ಅವರಿಗೆ ಭೂಮಿ ನೀಡಿದ್ದಾರೆ. ಪಾರ್ವತಮ್ಮ ಅವರು ಕಾನೂನಾತ್ಮಾಕವಾಗಿ ಜಮೀನು ಪಡೆದಿದ್ದಾರೆ.
ಜಮೀನು ಗ್ರ್ಯಾಂಟ್ ಆಗಿ ಬಂದಿಲ್ಲ, ಮೂಲ ಮಾಲೀಕ ಖರೀದಿ ಮಾಡಿದ್ದಾರೆ. ನಿವೇಶನ ಇಂತಹ ಕಡೆನೇ ಕೊಡಿ ಅಂತಾ ಸಿಎಂ ಕುಟುಂಬ ಕೇಳಿಲ್ಲ. ಮುಡಾ ಮಾಡಿದ್ದು ತಪ್ಪು, ತಪ್ಪು ಒಪ್ಪಿಕೊಂಡು ನಿವೇಶನ ನೀಡಿದ್ದಾರೆ. ಮುಡಾ ಸಭೆಯಲ್ಲಿ ಈ ಬಗ್ಗೆ ಚರ್ಚೆ ಮಾಡಿ ನಿರ್ಧಾರ ಕೈಗೊಳ್ಳಲಾಗಿದೆ. ಇದು ಶೇ100 ರಷ್ಟು ಕಾನೂನುಬದ್ಧ ಆಸ್ತಿ, ಮುಡಾದವರು ತಪ್ಪು ಮಾಡಿದ್ದಾರೆ. ಇದರಲ್ಲಿ ಕೆಲವರು ರಾಜಕೀಯ ಲಾಭ ಪಡೆಯಲು ಮುಂದಾಗಿದ್ದಾರೆ ಎಂದರು.
ಹಿಂದೆ ಕರ್ನಾಟಕ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಜಮೀನು ಪರಭಾರೆ ನಿಷೇಧ ಕಾಯ್ದೆ ರದ್ದಾಗಿತ್ತು. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಜಮೀನು ಬೇರೆಯವರಿಗೆ ಹೋಗಬಾರದೆಂದು ಕಾಯ್ದೆ ಮರು ಜಾರಿ ಮಾಡಲಾಗಿದೆ. ಹಿಂದಿನ ಪ್ರಕರಣಗಳೂ ಅನ್ವಯವಾಗುವಂತೆ ಜಾರಿ ಮಾಡಲಾಗಿದೆ. ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ದಲಿತರ ಪರ ಇದೆ ಎಂದು ಭರವಸೆ ನೀಡಿದರು.
ಗ್ಯಾರಂಟಿ ಯೋಜನೆಗೆ ಎಸ್ಸಿಎಸ್ಪಿ, ಟಿಎಸ್ಪಿ ಅನುದಾನ ಬಳಕೆ ವಿಚಾರಗಿ ಮಾತನಾಡಿದ ಅವರು, ಎಸ್ಸಿಎಸ್ಪಿ, ಟಿಎಸ್ಪಿ ಅನುದಾನ ಅದೇ ಸಮುದಾಯಕ್ಕೆ ಬಳಕೆಗೆ ಅವಕಾಶವಿದೆ. ಅದಕ್ಕಾಗಿ 14 ಸಾವಿರ ಕೋಟಿ ಹಣ ಮೀಸಲು ಇಟ್ಟಿದ್ದೇವೆ. ಇದನ್ನು ಬೇರೆಯವರಿಗೆ ಬಳಕೆ ಮಾಡಲಾಗಿದೆ ಎಂದು ಹೇಳಲು ಆಗಲ್ಲ. ಬೇರೆ ಉದ್ದೇಶಕ್ಕಾಗಿ ಹಣ ಬಳಸಲು ಡಿ ಸೆಕ್ಷನ್ ತೆಗೆದುಹಾಕಲಾಗಿದೆ. ಬಿಜೆಪಿ ಸರ್ಕಾರದ ಅವಧಿಯಲ್ಲಿ ಕೊವಿಡ್ ಸಂದರ್ಭದಲ್ಲಿ ಬಳಸಿದ್ದರು. ಅದೇ ರೀತಿ ಕಾಂಗ್ರೆಸ್ ಸರ್ಕಾರ ಅವಧಿಯಲ್ಲಿ ಬಳಕೆ ಮಾಡಲಾಗಿತ್ತು. ಸೆಕ್ಷನ್ ಡಿ ತೆಗೆದು ಹಾಕಿರುವುದರಿಂದ ಬೇರೆ ಉದ್ದೇಶಕ್ಕೆ ಬಳಸುವಂತಿಲ್ಲ ಎಂದು ಮಾಹಿತಿ ನೀಡಿದರು.
ರಾಜ್ಯಕ್ಕೆ ಹೋಲಿಸಿದರೆ ಮೈಸೂರು ಜಿಲ್ಲೆಯಲ್ಲಿ ಡೆಂಘೀ ಪ್ರಕರಣ ಕಡಿಮೆ ಇದೆ. ಮುಂದಿನ ವಾರದಿಂದ ಆಷಾಢ ಶುಕ್ರವಾರ ಹಿನ್ನೆಲೆಯಲ್ಲಿ ಚಾಮುಂಡಿಬೆಟ್ಟಕ್ಕೆ ದರ್ಶನಕ್ಕೆ ಎಲ್ಲ ವ್ಯವಸ್ಥೆ ಮಾಡಲಾಗಿದೆ. ಆಷಾಢ ಶುಕ್ರವಾರದ ದರ್ಶನಕ್ಕೆ ಯಾವುದೇ ಪಾಸ್ ಇಲ್ಲ. ಖಾಸಗಿ ವಾಹನಗಳ ಪ್ರವೇಶಕ್ಕೆ ನಿರ್ಬಂಧಿಸಲಾಗಿದೆ. ಕಳೆದ ಬಾರಿಯಂತೆ ಉಚಿತ ಬಸ್ ವ್ಯವಸ್ಥೆ ಮಾಡಲಾಗಿದೆ ಎಂದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ