5 ವರ್ಷದ ಬಳಿಕ ಮೈಸೂರು ದಸರಾ ಏರ್​ ಶೋ: ಸಮಯ, ದಿನಾಂಕ, ಸ್ಥಳದ ಬಗ್ಗೆ ಮಾಹಿತಿ ನೀಡಿದ ಜಿಲ್ಲಾಧಿಕಾರಿ

| Updated By: Digi Tech Desk

Updated on: Oct 13, 2023 | 12:47 PM

ಈ ಬಾರಿ ಮೈಸೂರು ದಸರಾ ಏರ್​​ ಶೋಗೆ ಕೇಂದ್ರ ಸರ್ಕಾರ ಅನುಮತಿ ನೀಡಿದೆ. ಜಿಲ್ಲಾಧಿಕಾರಿ ಡಾ. ಕೆ.ವಿ ರಾಜೇಂದ್ರ ಅವರು ಬನ್ನಿ ಮಂಟಪದ ಮೈದಾನಕ್ಕೆ ಭೇಟಿ ನೀಡಿ ಸ್ಥಳ ಹಾಗೂ ಏರ್​ ಶೋ ನಡೆಸಲು ಬೇಕಾದ ರೂಪುರೇಷೆ ಕುರಿತು ಪರಿಶೀಲನೆ ನಡೆಸಿದ್ದಾರೆ. ಇಂದು ಏರ್​​ ಶೋ ಕುರಿತು ಸುದ್ದಿಗೋಷ್ಠಿ ನಡೆಸಿ ಸಮಯ, ದಿನಾಂಕ, ಸ್ಥಳ ಹಾಗೂ ಪಾಸ್​​ ಕುರಿತು ಮಾಹಿತಿ ನೀಡಿದ್ದಾರೆ.

5 ವರ್ಷದ ಬಳಿಕ ಮೈಸೂರು ದಸರಾ ಏರ್​ ಶೋ: ಸಮಯ, ದಿನಾಂಕ, ಸ್ಥಳದ ಬಗ್ಗೆ ಮಾಹಿತಿ ನೀಡಿದ ಜಿಲ್ಲಾಧಿಕಾರಿ
ಮೈಸೂರು ಜಿಲ್ಲಾಧಿಕಾರಿ ಡಾ. ಕೆ.ವಿ ರಾಜೇಂದ್ರ
Follow us on

ಮೈಸೂರು ಅ.10: ಸಾಂಸ್ಕೃತಿಕ ನಗರಿಯಲ್ಲಿ ದಸರಾ (Mysore Dasara) ಸಂಭ್ರಮ ಕಳೆಗಟ್ಟಿದೆ. ನಾಡಹಬ್ಬಕ್ಕೆ ಸಿದ್ಧತೆಗಳು ಜೋರಾಗಿ ನಡೆಯುತ್ತಿದೆ. ನಗರದಲ್ಲಿ ಜಗಮಗಿಸುವ ವಿದ್ಯುತ್​​ ದೀಪಗಳಿಂದ ಶೃಂಗರಿಸಲಾಗುತ್ತಿದ್ದು, ಮಧುವಣಗಿತ್ತಿಯಂತೆ ಸಜ್ಜಾಗುತ್ತಿದೆ. ಈ ಬಾರಿ ಉತ್ಸವದ ವಿಶೇಷವೆಂದರೆ ಏರ್​​ ಶೋ (Air Show) ಇರಲಿದ್ದು, ಕೇಂದ್ರ ಸರ್ಕಾರ ಈಗಾಗಲೆ ಅನುಮತಿ ನೀಡಿದೆ. ಕೇಂದ್ರ ಸರ್ಕಾರದಿಂದ ಅನುಮತಿ ದೊರೆತ ಹಿನ್ನೆಲೆಯಲ್ಲಿ ಕೆಲ ದಿನಗಳ ಹಿಂದೆ ಮೈಸೂರು ಜಿಲ್ಲಾಧಿಕಾರಿ ಡಾ. ಕೆ.ವಿ ರಾಜೇಂದ್ರ ಅವರು ಬನ್ನಿ ಮಂಟಪದ ಮೈದಾನಕ್ಕೆ ಭೇಟಿ ನೀಡಿ ಸ್ಥಳ ಹಾಗೂ ಏರ್​ ಶೋ ನಡೆಸಲು ಬೇಕಾದ ರೂಪುರೇಷೆ ಕುರಿತು ಪರಿಶೀಲನೆ ನಡೆಸಿದ್ದರು.

ಈ ಬಗ್ಗೆ ಇಂದು (ಅ.10) ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಐದು ವರ್ಷಗಳ ಬಳಿಕ ಮೈಸೂರು ದಸರಾದಲ್ಲಿ ಏರ್​ಶೋ ನಡೆಯುತ್ತಿದೆ. ಅಕ್ಟೋಬರ್​ 22 ಮತ್ತು 23ರಂದು ದಸರಾ ಏರ್​ಶೋ ನಡೆಯಲಿದೆ. ಅ.22ರಂದು ಏರ್​ಶೋ ರಿಹರ್ಸಲ್, 23 ರಂದು ಸಂಜೆ 4 ಗಂಟೆಗೆ 45 ನಿಮಿಷಕ್ಕೆ ಪಂಜಿನ ಕವಾಯತು ಮೈದಾನದಲ್ಲಿ ಮುಖ್ಯ ಏರ್​ಶೋ ನಡೆಯಲಿದೆ ಎಂದು ಮಾಹಿತಿ ನೀಡಿದರು.

ಇನ್ನು ಏರ್​ ಶೋ ವೀಕ್ಷಿಸಲು ಉಚಿತ ಪ್ರವೇಶವಿದೆ. ಏರ್​ ಶೋಗೆ ಆಗಮಿಸುವವರಿಗೆ ಪಾಸ್​​​ ನೀಡಲಾಗುವುದು. ಪಾಸ್​ ಪಡೆಯಲು ಹೇಗೆ ಅಪ್ಲೈ ಮಾಡುವುದು, ವಿತರಣೆ ಹೇಗೆ ಸೇರಿದಂತೆ ಮಹಿಷ ದಸರಾ, ಚಾಮುಂಡಿ ಬೆಟ್ಟ ಚಲೋಗೆ ಅನುಮತಿ ಮತ್ತು ಸ್ಟ್ರೀಟ್​ ಫೆಸ್ಟಿವಲ್​​ ನಡೆಸುವ ಸಂಬಂಧ ಇಂದು ಸಾಯಂಕಾಲ ಸಭೆ ನಡೆಸಿ ತಿಳಿಸಲಾಗುವುದು ಎಂದು ಹೇಳಿದರು.

ಇದನ್ನೂ ಓದಿ: ಈ ಬಾರಿ ದಸರಾದಲ್ಲಿ 36 ಸ್ತಬ್ಧಚಿತ್ರಗಳು ಭಾಗಿ; ಯಾವವು? ಇಲ್ಲಿದೆ ಮಾಹಿತಿ

ಮೈಸೂರು ದಸರಾ ಸಾಂಸ್ಕೃತಿಕ ಕಾರ್ಯಕ್ರಮ, ಫಲಪುಷ್ಪ ಪ್ರದರ್ಶನ

ಅ. 16 ರಂದು ಅರಮನೆ ಮುಂಭಾಗದ ಆವರಣದಲ್ಲಿ ಚಾಲನೆ ನೀಡಲಾಗುತ್ತದೆ.  ಅರಮನೆ ಆವರಣ ಸೇರಿದಂತೆ ವಿವಿಧೆಡೆ ಸಾಂಸ್ಕೃತಿಕ ಕಾರ್ಯಕ್ರಮಗಳ ಆಯೋಜಿಸಲಾಗುತ್ತದೆ.  ಅರಮನೆ ಆವರಣದ ವೇದಿಕೆಯ ಜೊತೆಗೆ, ಜಗನ್ಮೋಹನ ಅರಮನೆ, ಕಲಾಮಂದಿರ, ಗಾನಭಾರತಿ ವೀಣೆಶೇಷಣ್ಣ ಭವನ, ನಾದಬ್ರಹ್ಮ ಸಂಗೀತ ಸಭಾ, ಚಿಕ್ಕಗಡಿಯಾರ ವೃತ್ತ, ನಂಜನಗೂಡು ಶ್ರೀಕಂಠೇಶ್ವರ ದೇಗುಲದ ಆವರಣ, ರಮಾಗೋವಿಂದ ರಂಗಮಂದಿರ, ಪುರಭವನ, ಕಿರುರಂಗಮಂದಿರ, ನಟನ ರಂಗಮಂದಿರ ಮೊದಲಾದ ಸ್ಥಳಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ ಎಂದು ಮೈಸೂರು ಜಿಲ್ಲಾ ಪಂಚಾಯಿತಿ ಸಿಇಒ ಗಾಯತ್ರಿ ಹೇಳಿದರು

ಅಕ್ಟೋಬರ್ 15 ರಿಂದ 24 ರವರೆಗೆ ಕುಪ್ಪಣ್ಣ ಪಾರ್ಕ್​ನಲ್ಲಿ ದಸರಾ ಫಲಪುಷ್ಪ ಪ್ರದರ್ಶನ ನಡೆಯಲಿದೆ.  ಈ ಬಾರಿ 2 ಲಕ್ಷ ಗುಲಾಬಿ ಹೂವುಗಳಿಂದ ಚಂದ್ರಯಾನದ ಪರಿಕಲ್ಪನೆಯ ಕಲಾಕೃತಿ ನಿರ್ಮಾಣ ಮಾಡಲಾಗಿದೆ. ಇದರ ಜೊತೆಗೆ ಚಾಮುಂಡೇಶ್ವರಿ ದೇವಿ ಹಾಗು ದೇವಸ್ಥಾನದ ಗೋಪುರ, ಸುವರ್ಣ ಕರ್ನಾಟಕ – ಕರ್ನಾಟಕದ ಶ್ರೀಮಂತ ಪರಂಪರೆ, ಕ್ರೀಡೆಗಳ ಥೀಮ್, ಕ್ರಿಕೆಟ್ ಹೂವಿನ ಕಲಾಕೃತಿ, ಅಂಬಾರಿ ಹೂವಿನ ಕಲಾಕೃತಿ, ಕಾಫಿ ಕಪ್ ಹೂವಿನ ಕಲಾಕೃತಿಗಳು ಈ ಬಾರಿಯ ಫಲಪುಷ್ಪ ಪ್ರದರ್ಶನದ ಪ್ರಮುಖ ಆಕರ್ಷಣೆಗಳಾಗಿವೆ ಎಂದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 2:08 pm, Tue, 10 October 23