ಮೈಸೂರು, ಅಕ್ಟೋಬರ್ 23: ರಾಜ್ಯದಲ್ಲಿ ವಿದ್ಯುತ್ ಕೃತಕ ಅಭಾವ ಸೃಷ್ಟಿಸಲಾಗಿದೆ ಎಂಬ ಆರೋಪಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ತೀಕ್ಷ್ಣವಾಗಿ ತಿರುಗೇಟು ನೀಡಿದ್ದು, ಆರೋಪ ಮಾಡಿದ ಜೆಡಿಎಸ್ ನಾಯಕ ಹೆಚ್ಡಿ ಕುಮಾರಸ್ವಾಮಿ (HD Kumaraswamy) ಅವರೇ ಕೃತಕ ಎಂದು ವ್ಯಂಗ್ಯವಾಡಿದ್ದಾರೆ. ಮೈಸೂರು ದಸರಾ ಏರ್ಶೋವನ್ನು (Mysore Dasara Airshow) ಕುಟುಂಬ ಸಮೇತ ವೀಕ್ಷಣೆ ಮಾಡಿದ ಬಳಿಕ ಅವರು ಮಾತನಾಡಿದರು. ಬರದ ವಿಚಾರವಾಗಿ ಕುಮಾರಸ್ವಾಮಿ ಕೇವಲ ಸುಳ್ಳು ಹೇಳಿದ್ದಾರೆ. ಅವರು ಸರಿಯಾಗಿ ತಿಳಿದುಕೊಂಡಿಲ್ಲ. ಆರೋಪ ಮಾಡೋದಷ್ಟೇ ಅವರಿಗೆ ಗೊತ್ತಿರೋದು. ಕುಮಾರಸ್ವಾಮಿ ಕೇವಲ ಆರೋಪ ಮಾಡುತ್ತಾರೆ ಅಷ್ಟೆ ಎಂದು ಸಿದ್ದರಾಮಯ್ಯ ತಿರುಗೇಟು ನೀಡಿದರು.
ಕಲ್ಲಿದ್ದಲು ಸಾಮಾರ್ಥ್ಯದ ಮೇಲೆ ವಿದ್ಯುತ್ ತಯಾರಿಕೆ ಆಗುತ್ತಿದೆ. ದೇಶೀಯ ಕಲ್ಲಿದ್ದಲಿನಿಂದ ಉತ್ಪಾದನೆ ಕಡಿಮೆ ಆಗುತ್ತಿದೆ. ಇದೆಲ್ಲ ಮಾಜಿ ಸಿಎಂ ಆದವರಿಗೆ ಗೊತ್ತಿರಬೇಕು. ಸುಮ್ಮನೆ ಆರೋಪ ಮಾಡೋದಷ್ಟೇ ಅವರಿಗೆ ಗೊತ್ತಿರೋದು ಎಂದು ಸಿದ್ದರಾಮಯ್ಯ ಟೀಕಿಸಿದರು.
ಮೈಸೂರಿನ ಮಹಾರಾಣಿ ಕಾಲೇಜು ಅಭಿವೃದ್ಧಿ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಹಿಂದಿನ ಸರ್ಕಾರ ಮೈಸೂರಿನಲ್ಲಿ ಒಂದೇ ಒಂದು ಕೆಲಸ ಮಾಡಿಲ್ಲ. ಈಗಾಗಲೇ ಸೈನ್ಸ್ ಕಾಲೇಜು ಬಿದ್ದು ಹೋಗ್ತಿದೆ. ಮಹಾರಾಣಿ ಕಾಲೇಜು ಮುಂದೆ ಮಾತ್ರ ಹೆರಿಟೇಜ್ ಬಿಲ್ಡಿಂಗ್ ಇದೆ. ಈ ಕಾರಣಕ್ಕೆ ಅದನ್ನು ಒಡೆಯದೆ ಗಟ್ಟಿಗೊಳಿಸುತ್ತೇವೆ. ಕಾಲೇಜಿನ ಮೂರು ವಿಭಾಗಗಳ ಅಭಿವೃದ್ದಿಗೆ ಸೂಚನೆ ನೀಡಿದ್ದೇನೆ. 17 ಕೋಟಿ ರೂ. ವೆಚ್ಚದಲ್ಲಿ ಆರ್ಟ್ಸ್ ಕಾಲೇಜು, ಸೈನ್ಸ್ ಕಾಲೇಜಿಗೆ 51 ಕೋಟಿ ರೂ, 99 ಕೋಟಿ ರೂ. ವೆಚ್ಚದಲ್ಲಿ ಹಾಸ್ಟೆಲ್, ಕಾಮರ್ಸ್ ಕಾಲೇಜಿಗೆ ಈ ಹಿಂದೆ ಬಿಡುಗಡೆ ಮಾಡಿದ್ದ ಬಾಕಿ 40 ಕೋಟಿ ರೂ. ಇದ್ದು, ಅದರ ಬಳಕೆಯಾಗಲಿದೆ ಎಂದು ಸಿದ್ದರಾಮಯ್ಯ ಮಾಹಿತಿ ನೀಡಿದರು.
ಇದನ್ನೂ ಓದಿ: ವಿದ್ಯುತ್ ಕೃತಕ ಅಭಾವ ಸೃಷ್ಟಿಸಿರುವ ಕಾಂಗ್ರೆಸ್ ಸರ್ಕಾರ: ಹೆಚ್ಡಿ ಕುಮಾರಸ್ವಾಮಿ ವಾಗ್ದಾಳಿ
ಈಗಾಗಲೇ ರಾಜ್ಯದಲ್ಲಿ ಬರಗಾಲ ಕಾಮಗಾರಿ ಆರಂಭವಾಗಿದೆ. ಕುಡಿಯುವ ನೀರು, ಮೇವು ಕೊಡುವ ಕೆಲಸ ಆಗ್ತಿದೆ. ಕುಡಿಯುವ ನೀರಿಗೆ ತೊಂದರೆ ಆಗದಂತೆ ಕ್ರಮವಹಿಸುವಂತೆ ಅಧಿಕಾರಿಗಳಿಗೆ ಹೇಳಿದ್ದೇನೆ. ಎಷ್ಟೇ ಹಣ ಖರ್ಚಾದರು ಕುಡಿಯುವ ನೀರಿಗೆ ತೊಂದರೆಯಾಗಬಾರದು ಅಂತ ಸೂಚಿಸಿದ್ದೇನೆ. ಮೇವಿಗೆ ಬರ ಸದ್ಯಕ್ಕೆ ಇಲ್ಲ, ನಮ್ಮಲ್ಲಿ ಸ್ಟಾಕ್ ಇದೆ. ಹಾಗಾಗಿ ಬರದ ಸಮಸ್ಯೆ ಆಗದ ರೀತಿ ಕ್ರಮ ಕೈಗೊಳ್ಳುತ್ತೇವೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.
ಮೈಸೂರು ದಸರಾ ಏರ್ ಶೋವನ್ನು ಸಿಎಂ ಸಿದ್ದರಾಮಯ್ಯ ಖುಷಿಯಿಂದ ಕುಟುಂಬ ಸಮೇತ ವೀಕ್ಷಣೆ ಮಾಡಿದರು. ಸಿಎಂ ಜೊತೆ ಅವರ ಸೊಸೆ ಸ್ಮಿತಾ ರಾಕೇಶ್, ಮೊಮ್ಮಗಳು ಕೂಡ ಇದ್ದರು. ಏರ್ ಸೋ ವೀಕ್ಷಿಸಿ ಮಾತನಾಡಿದ ಅವರು, ಕಳೆದ ಬಾರಿ ದೆಹಲಿಗೆ ಹೋದಾಗ ರಕ್ಷಣಾ ಸಚಿವರನ್ನ ಭೇಟಿಯಾಗಿ ಏರ್ ಆಯೋಜನೆ ಬಗ್ಗೆ ಮಾತಾನಾಡಿದ್ದೆ. ಪಾಪ ಅವರು ಕೂಡ ಕೂಡಲೇ ಸ್ಪಂದಿಸಿದ್ದರು. ಕೂಡಲೇ ವಾಯುಪಡೆಗೆ ಸೂಚನೆ ನೀಡಿದ್ದರು. ಅದರಂತೆ ಇಂದು ಆಯೋಜನೆ ಆಗಿದೆ. ಏರ್ ಶೋ ಕೂಡ ಚೆನ್ನಾಗಿ ಆಗಿದೆ. ಜನ ಕೂಡ ಸಂತಸ ಪಟ್ಟಿದ್ದಾರೆ. ನಾಡಿನ ಜನತೆಗೆ ವಿಜಯದಶಮಿ ಆಯುಧ ಪೂಜೆ ಶುಭಾಶಯಗಳು ಎಂದು ಹೇಳಿದರ. ಜತೆಗೆ, ವಾಯುಪಡೆಯ ಸೂರ್ಯಕಿರಣ್ ತಂಡ ಹಾಗು ವಿಂಗ್ ಕಮಾಂಡರ್ ಅರ್ಜುನ್ ಅವರನ್ನು ಅಭಿನಂದಿಸಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:00 pm, Mon, 23 October 23