ಇಂದು ಮೈಸೂರು ದಸರಾ ಗಜಪಯಣ ಆರಂಭ: ಸಚಿವ ಎಸ್​.ಟಿ ಸೋಮಶೇಖರ್ ಚಾಲನೆ

| Updated By: ಗಂಗಾಧರ​ ಬ. ಸಾಬೋಜಿ

Updated on: Aug 07, 2022 | 8:21 AM

ಈ ಬಾರಿಯ ದಸರಾ ಉತ್ಸವಕ್ಕೆ ಗೋಲ್ಡ್ ಪಾಸ್ ಇರುವುದಿಲ್ಲ ಎಂದು ಮೈಸೂರಿನಲ್ಲಿ ಸಚಿವ ಎಸ್ ಟಿ ಸೋಮಶೇಖರ್ ಹೇಳಿದ್ದಾರೆ. ಗಣ್ಯರು, ವಿದೇಶಿಗರು ಹೆಚ್ಚಾಗಿ ಗೋಲ್ಡ್ ಪಾಸ್ ಅವಲಂಬಿಸಿದ್ದರು.

ಇಂದು ಮೈಸೂರು ದಸರಾ ಗಜಪಯಣ ಆರಂಭ: ಸಚಿವ ಎಸ್​.ಟಿ ಸೋಮಶೇಖರ್ ಚಾಲನೆ
ಇಂದು ಗಜಪಯಣ ಕಾರ್ಯಕ್ರಮ
Follow us on

ಮೈಸೂರು: ವಿಶ್ವ ವಿಖ್ಯಾತ ಮೈಸೂರು ದಸರಾ (Mysore Dasara) ಮಹೋತ್ಸವದ ಮೊದಲ ಕಾರ್ಯಕ್ರಮ ಗಜಪಯಣ ಇಂದು ಆರಂಭವಾಗಲಿದೆ. ಕಾಡಿನಿಂದ ನಾಡಿಗೆ ಇಂದು ದಸರಾ ಗಜಪಡೆ ಬರಲಿದ್ದು, ಗಜಪಯಣಕ್ಕೆ ಸಚಿವ ಎಸ್​.ಟಿ ಸೋಮಶೇಖರ್ ಚಾಲನೆ ನೀಡಲಿದ್ದಾರೆ. ವೀರನಹೊಸಹಳ್ಳಿ ಅರಣ್ಯ ಪ್ರದೇಶದ ದೊಡ್ಡ ಹೆಜ್ಜೂರು ಗ್ರಾಮದಲ್ಲಿ ಗಜಪಯಣ ಕಾರ್ಯಕ್ರಮ ಆಯೋಜಿಸಲಾಗಿದೆ. ಗಜಪಡೆಗಳಿಗೆ ಸಾಂಪ್ರದಾಯಿಕ ಪೂಜೆ ಸಲ್ಲಿಕೆ ನಂತರ ಲಾರಿಗಳ ಮೂಲಕ‌ ಅಭಿಮನ್ಯು ನೇತೃತ್ವದ ಆನೆಗಳ ತಂಡ ಮೈಸೂರಿಗೆ ಆನೆಗಳು ಆಗಮಿಸಲಿವೆ. ಈ ಭಾರಿ 14 ಆನೆಗಳು ಮೈಸೂರು ದಸರೆಯಲ್ಲಿ‌ ಭಾಗವಹಿಸಲಿವೆ. ಈ ಭಾರಿ ಅದ್ದೂರಿ ಹಾಗೂ ಸಾಂಪ್ರದಾಯಿಕ ದಸರೆಗೆ ಸರ್ಕಾರ ಸಿದ್ದತೆ ನಡೆಸಿದೆ.

ಇದನ್ನೂ ಓದಿ: ನನಗೆ ರಾಜಕೀಯದ ಮೇಲೆ ಆಸಕ್ತಿ ಇಲ್ಲ, ಅರಮನೆಯ ಪರಂಪರೆ ಮುಂದುವರಿಸಿಕೊಂಡು ಹೋಗುವ ಜವಾಬ್ದಾರಿ ಇದೆ -ಯದುವೀರ್ ಒಡೆಯರ್​​​​

ಜಂಬೂಸವಾರಿಗೆ ಸಿದ್ದವಾದ ಗಜಪಡೆ

ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಜಂಬೂಸವಾರಿಗೆ ಆನೆಗಳ ಪಟ್ಟಿ ಕೂಡ ಅಂತಿಮಗೊಂಡಿದೆ. ಅಭಿಮನ್ಯು ನೇತೃತ್ವದಲ್ಲಿ ಗಜಪಡೆ ಮೈಸೂರಿಗೆ ಕಾಲಿಡಲಿದ್ದು,  4 ಹೆಣ್ಣಾನೆಗಳು ಸೇರಿದಂತೆ 14 ಅನೆಗಳ ಪಟ್ಟಿ ಅಂತಿಮಗೊಂಡಿದೆ. ಮತ್ತಿಗೋಡು ಆನೆ ಶಿಬಿರದಿಂದ 39 ವರ್ಷದ ಗೋಪಾಲಸ್ವಾಮಿ, 57 ವರ್ಷದ ಅಭಿಮನ್ಯು, 22 ವರ್ಷ ಭೀಮ, 38 ವರ್ಷದ ಮಹೇಂದ್ರ, ಬಳ್ಳೆ ಆನೆ ಶಿಬಿರದಿಂದ 63 ವರ್ಷದ ಅರ್ಜುನ  ಮೈಸೂರು ದಸರಾದಲ್ಲಿ ಪಾಲ್ಗೊಳ್ಳಲಿವೆ.

ದುಬಾರೆ ಆನೆ ಶಿಬಿರದಿಂದ 59 ವರ್ಷದ ವಿಕ್ರಮ, 44 ವರ್ಷದ ಧನಂಜಯ, 45 ವರ್ಷದ ಕಾವೇರಿ, 41 ವರ್ಷದ ಗೋಪಿ, 40 ವರ್ಷದ ಶ್ರೀರಾಮ, 63 ವರ್ಷದ ವಿಜಯಾ ಆನೆ, ರಾಮಾಪುರ ಆನೆ ಶಿಬಿರದಿಂದ 49 ವರ್ಷದ ಚೈತ್ರಾ, 21 ವರ್ಷದ ಲಕ್ಷ್ಮೀ, 18 ವರ್ಷದ ಪಾರ್ಥಸಾರಥಿ ಆನೆ ಆಗಮಿಸಲಿವೆ. ಆಗಸ್ಟ್ 7 ರಂದು ಮೈಸೂರು ಜಿಲ್ಲೆ ಹುಣಸೂರು ತಾಲೂಕಿನ ವೀರನಹೊಸಹಳ್ಳಿ ಅರಣ್ಯ ವ್ಯಾಪ್ತಿಯ ದೊಡ್ಡಹೆಜ್ಜೂರು ಗ್ರಾಮದಿಂದ ಗಜಪಯಣ ಆರಂಭವಾಗಲಿದೆ. ಮೊದಲ ತಂಡದಲ್ಲಿ  9 ಆನೆಗಳು ಮೈಸೂರಿಗೆ ಆಗಮಿಸಲಿವೆ.

ಈ ಬಾರಿ ಗೋಲ್ಡ್ ಪಾಸ್ ಇಲ್ಲ- ಸಚಿವ ಎಸ್ ಟಿ ಸೋಮಶೇಖರ್

ಇನ್ನೂ ಈ ಬಾರಿಯ ದಸರಾ ಉತ್ಸವಕ್ಕೆ ಗೋಲ್ಡ್ ಪಾಸ್ ಇರುವುದಿಲ್ಲ ಎಂದು ಮೈಸೂರಿನಲ್ಲಿ ಸಚಿವ ಎಸ್ ಟಿ ಸೋಮಶೇಖರ್ (S T Somashekar) ಹೇಳಿದ್ದಾರೆ. ಗಣ್ಯರು, ವಿದೇಶಿಗರು ಹೆಚ್ಚಾಗಿ ಗೋಲ್ಡ್ ಪಾಸ್ ಅವಲಂಬಿಸಿದ್ದರು. ಒತ್ತಡ ಕಡಿಮೆ ಮಾಡುವ ಸಲುವಾಗಿ ಗೋಲ್ಡ್ ಪಾಸ್​ನ್ನು ರದ್ದು ಮಾಡಲಾಗಿದೆ ಎಂದು ತಿಳಿಸಿದ್ದಾರೆ. ವಿವಿಐಪಿ ಪಾಸ್ ಹಾಗೂ ಕರ್ತವ್ಯನಿರತ ಪಾಸ್ ಹೊರತುಪಡಿಸಿ ಉಳಿದ ಪಾಸ್‌ಗಳನ್ನು ರದ್ದು ಮಾಡಲು ಚಿಂತನೆ ಮಾಡಲಾಗಿದೆ. ಪಾಸ್‌ಗಳ ವಿಚಾರವಾಗಿ ಕೆಲವೇ ದಿನಗಳಲ್ಲಿ ಸ್ಪಷ್ಟವಾದ ತೀರ್ಮಾನಕ್ಕೆ ಬರುತ್ತೇವೆ. ಪಾಸ್‌ಗಳಿಂದ ಗೋಲ್‌ಮಾಲ್ ಉಂಟಾಗುವ ಆರೋಪ ಕೇಳಿ ಬಂದಿತ್ತು. ಅಂತಹ ಘಟನೆಗಳಿಗೆ ಈ ಬಾರಿ ಅವಕಾಶ ಇಲ್ಲ ಎಂದು ಜಿಲ್ಲಾಧಿಕಾರಿಗಳ ಕಚೇರಿಯ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ದಸರಾ ಉದ್ಘಾಟಕರ ಬಗ್ಗೆ ಸಿಎಂ ಬೊಮ್ಮಾಯಿ ನಿರ್ಧಾರ ಕೈಗೊಳ್ಳುತ್ತಾರೆ. ಐಎಎಸ್​ ಅಧಿಕಾರಿಗಳು ಒಳಗೊಂಡಂತೆ 16 ಕಮಿಟಿ ರಚಿಸಲಾಗಿದೆ. ದಸರಾಗೆ ಜಾಗತಿಕ ಮಟ್ಟದಲ್ಲಿ ಪ್ರಚಾರ ಸಿಗುವಂತೆ ನೋಡಿಕೊಳ್ಳುತ್ತೇವೆ. ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವ ದೃಷ್ಟಿಯಿಂದ ಅದ್ಧೂರಿಯಾಗಿ ದಸರಾ ಉತ್ಸವ ಮಾಡುತ್ತೇವೆ.  ಶ್ರೀರಂಗಪಟ್ಟಣ, ಚಾಮರಾಜನಗರ ದಸರಾಗೆ ತಲಾ 1 ಕೋಟಿ  ನೀಡಲಾಗಿದೆ ಎಂದು ಮಾಹಿತಿ ನೀಡಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.