ಮೈಸೂರು, ಸೆಪ್ಟೆಂಬರ್ 15: ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವ 2023 ರ (Mysore Dasara Mahotsav 2023) ನವರಾತ್ರಿ ಆಚರಣೆಯ (Navratri celebration) ವೇಳಾಪಟ್ಟಿಯನ್ನು ಶುಕ್ರವಾರ ಬಿಡುಗಡೆ ಮಾಡಲಾಗಿದೆ. ಅಕ್ಟೋಬರ್ 15 ಭಾನುವಾರ ಶರನ್ನವರಾತ್ರಿ ಪ್ರಾರಂಭವಾಗಲಿದೆ. ಅಂದು ಚಾಮುಂಡಿ ಬೆಟ್ಟದಲ್ಲಿ ನಾಡದೇವತೆ ಚಾಮುಂಡೇಶ್ವರಿಗೆ ಪೂಜೆ ಸಲ್ಲಿಸಲಾಗುತ್ತದೆ. ಬೆಳಗ್ಗೆ 10.15ರಿಂದ ಬೆಳಗ್ಗೆ 10.36ರ ಶುಭ ವೃಶ್ಚಿಕ ಲಗ್ನದಲ್ಲಿ ದಸರಾ ಮಹೋತ್ಸವಕ್ಕೆ ಚಾಲನೆ ನೀಡಲಾಗುತ್ತದೆ. 15ರಂದು ಸಂಜೆ 6.30ರಿಂದ ಅರಮನೆ ಪೂಜೆಗಳು ಆರಂಭಗೊಳ್ಳಲಿವೆ. ಅಕ್ಟೋಬರ್ 15ರಿಂದ ದಸರಾ ಮಹೋತ್ಸವ ನಡೆಯಲಿದೆ ಎಂದು ಈ ಹಿಂದೆಯೇ ಸರ್ಕಾರ ಘೋಷಣೆ ಮಾಡಿತ್ತು.
ಮೈಸೂರು ದಸರಾ ಮಹೋತ್ಸವಕ್ಕೆ ಈಗಾಗಲೇ ಭರದ ಸಿದ್ಧತೆ ನಡೆಯುತ್ತಿದೆ. ಈ ಬಾರಿಯ ಮೈಸೂರು ದಸರಾವನ್ನು ಖ್ಯಾತ ಸಂಗೀತ ನಿರ್ದೇಶಕ ಹಂಸಲೇಖ ಉದ್ಘಾಟಿಸಲಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಇತ್ತೀಚೆಗೆ ಘೋಷಣೆ ಮಾಡಿದ್ದಾರೆ. ಅತ್ತ ಗಜಪಡೆಯೂ ತಾಲೀಮು ನಡೆಸುತ್ತಿದ್ದು, ಜಂಬೂ ಸವಾರಿಗೆ ಹಲವು ಬಾರಿ ರಿಹರ್ಸಲ್ ನಡೆದಿದೆ.
ಇದನ್ನೂ ಓದಿ: ದಸರಾ ಉದ್ಘಾಟನೆ ನನಗೆ ಸಿಕ್ಕಿರುವುದು ಸಾಮಾಜಿಕ ಕಲಾ ನ್ಯಾಯ: ಸಂಗೀತ ನಿರ್ದೇಶಕ ಹಂಸಲೇಖ
ಇತ್ತೀಚೆಗಷ್ಟೇ ಸಚಿವ ಡಾ. ಹೆಚ್.ಸಿ.ಮಹದೇವಪ್ಪ ಅವರು ಮೈಸೂರಿನಲ್ಲಿ ಸಭೆ ನಡೆಸಿ ದಸರಾ ಸಿದ್ಧತೆ ಬಗ್ಗೆ ಅಧಿಕಾರಿಗಳಿಗೆ ಸಲಹೆ ಸೂಚನೆ ನೀಡಿದ್ದರು. ನಮ್ಮ ನಾಡಿನ ಕಲೆ, ಸಂಸ್ಕೃತಿ, ಪರಂಪರೆಯನ್ನು ಸಾರುವ ದಸರಾವನ್ನು ಜನರ ಉತ್ಸವವನ್ನಾಗಿ ಅಚ್ಚುಕಟ್ಟಾಗಿ ನೆರವೇರಿಸಬೇಕು ಎಂದು ಅವರು ತಿಳಿಸಿದ್ದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ