ಮೈಸೂರು: ದೆಹಲಿಯಲ್ಲಿ ನಡೆದ ಗ್ಯಾಂಗ್ ರೇಪ್.. ಹೈದ್ರಾಬಾದ್ನಲ್ಲಿ ನಡೆದ ದಿಶಾ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ.. ಉತ್ತರಪ್ರದೇಶ.. ಬಿಹಾರ.. ರಾಜಸ್ಥಾನಗಳಲ್ಲಿ ನಡೀತಿದ್ದ ಸಾಮೂಹಿಕ ಅತ್ಯಾಚಾರ ಪ್ರಕರಣಗಳ ಬಗ್ಗೆ ಕೇಳಿ ಬೆಚ್ಚಿ ಬೀಳ್ತಿದ್ವಿ. ಆದ್ರೆ, ಸುಸಂಸ್ಕೃತರ ರಾಜ್ಯ.. ಅದ್ರಲ್ಲೂ ಸಾಂಸ್ಕೃತಿಕ ನಗರಿ.. ಅರಮನೆ ನಗರಿ ಅಂತಾ ಕರೆಸಿಕೊಳ್ಳೋ ಮೈಸೂರಿನಲ್ಲಿ ಕಂಡು ಕೇಳರಿಯದ ರೀತಿ ದುಷ್ಕರ್ಮಿಗಳು ಅಟ್ಟಹಾಸ ಮೆರೆದಿದ್ದಾರೆ. ಮೈಸೂರಿನಲ್ಲಿ ನಡೆದಿರೋ ಘಟನೆಗೆ ಕೇವಲ ಮೈಸೂರಿನ ಜನ ಮಾತ್ರವಲ್ಲ ಇಡೀ ಕರ್ನಾಟಕವೇ ತಲೆ ತಗ್ಗಿಸುವಂತೆ ಮಾಡಿದೆ. ಸ್ನೇಹಿತನ ಜೊತೆ ಹೋಗಿದ್ದ ಯುವತಿಯ ಮೇಲೆ ಕಾಮ ಕ್ರಿಮಿಗಳು ಅಟ್ಯಾಕ್ ಮಾಡಿದ್ದು ಸಾಮೂಹಿಕ ಅತ್ಯಾಚಾರ ಎಸಗಿ ಪರಾರಿಯಾಗಿದ್ದಾರೆ. ಆದ್ರೆ ಈ ಕಿರಾತಕರು ವಿದ್ಯಾರ್ಥಿನಿಯ ಬೆತ್ತಲೆ ವಿಡಿಯೋ ಮಾಡಿಕೊಂಡಿದ್ದು ತಮ್ಮ ವಿರುದ್ಧ ದೂರು ನೀಡಿದರೆ ವಿಡಿಯೋ ವೈರಲ್ ಮಾಡುವುದಾಗಿ ಬೆದರಿಕೆ ಹಾಕಿದ್ದಾರಂತೆ. ಪೊಲೀಸರಿಗೆ ದೂರು ಕೊಟ್ಟರೆ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕುವುದಾಗಿ ಬೆದರಿಸಿದ್ದಾರೆ. ನಂತರ ವಿದ್ಯಾರ್ಥಿನಿಯ ಜೊತೆ ಇದ್ದ ಯುವಕನಿಗೆ ಕಲ್ಲಿನಿಂದ ಹಲ್ಲೆ ಮಾಡಿ ಪರಾರಿಯಾಗಿದ್ದಾರೆ.
ಕಾಲೇಜು ವಿದ್ಯಾರ್ಥಿನಿ ಮೇಲೆ ಕಾಮುಕರಿಂದ ಗ್ಯಾಂಗ್ ರೇಪ್
ತಾಯಿ ಚಾಮುಂಡಿ ನೆಲೆಸಿರೋ ಚಾಮುಂಡಿ ಬೆಟ್ಟದಲ್ಲಿ ಕುರುಚಲು ಕಾಡು ಬೆಳೆದಿದೆ. ಇದು ದೇವಿಯ ದರ್ಶನಕ್ಕೆ ಹೋಗುವವರಿಗೆ ಮುದ ನೀಡುತ್ತೆ. ಬೆಟ್ಟದಲ್ಲಿ ಬೆಳೆದಿರೋ ಹಚ್ಚ ಹಸರನ್ನ ಕಂಡಾಗ ಮನಸು ಉಲ್ಲಸಿತವಾಗುತ್ತೆ. ಆದ್ರೆ ಇಂತಾ ಜಾಗದಲ್ಲಿ ನಡೆಯಬಾರದ ಕೃತ್ಯ ನಡೆದಿದೆ. ಅಬಲೆಯೊಬ್ಬಳ ಮೇಲೆ ನಾಲ್ಕೈದು ಜನ ಕಾಮುಕರು ಗ್ಯಾಂಗ್ ರೇಪ್ ಎಸಗಿದ್ದಾರೆ. ಈ ಘಟನೆಯಿಂದ ಇಡೀ ರಾಜ್ಯವೇ ತಲೆ ತಗ್ಗಿಸುವಂತಾಗಿದೆ. ಸ್ನೇಹಿತನ ಜೊತೆ ಹೋಗಿದ್ದ ವಿದ್ಯಾರ್ಥಿನಿಯ ಮೇಲೆ ಸಾಮೂಹಿಕ ಅತ್ಯಾಚಾರ ಪ್ರಕರಣದ ತನಿಖೆಯನ್ನ ಡಿಸಿಪಿ ಪ್ರದೀಪ್ ಗುಂಟಿ ನೇತೃತ್ವದಲ್ಲಿ ನಡೆಸಲಾಗ್ತಿದೆ.
ಗ್ಯಾಂಗ್ ರೇಪ್ ಪ್ರಕರಣದ ಆರೋಪಿಗಳು ಪತ್ತೆಯೇ ಇಲ್ಲ
ಯುವತಿಯ ಮೇಲೆ ಗ್ಯಾಂಗ್ ರೇಪ್ ಮಾಡಿದ ಆರೋಪಿಗಳು ನಾಪತ್ತೆಯಾಗಿದ್ದಾರೆ. ಪೊಲೀಸರು ತನಿಖೆ ನಡೆಸಿದ್ರೂ ಇದುವರೆಗೆ ಆರೋಪಿಗಳು ಪತ್ತೆಯಾಗಿಲ್ಲ. ಮದ್ಯದ ನಶೆಯಲ್ಲಿ ಗ್ಯಾಂಗ್ ರೇಪ್ ಮಾಡಿದವರು ಯಾರು ಅನ್ನೋದನ್ನ ಪತ್ತೆ ಹಚ್ಚಲು ಪೊಲೀಸರು ಸಾಧ್ಯವಾಗಿಲ್ಲ. ಹೀಗಾಗಿ ಎಡಿಜಿಪಿ ಪ್ರತಾಪ್ ರೆಡ್ಡಿ ನೇತೃತ್ವದಲ್ಲಿ ತನಿಖಾ ತಂಡ ರಚನೆ ಮಾಡಲಾಗಿದೆ. ಯುವತಿ ಜೊತೆ ಇದ್ದ ಸ್ನೇಹಿತನ ಮಾಹಿತಿ ಆಧರಿಸಿ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ. ಯುವತಿ ಆಸ್ಪತ್ರೆಯಲ್ಲಿದ್ದು ಆಕೆ ಆರೋಗ್ಯವಾಗಿದ್ದಾಳೆ ಅಂತಾ ಮೈಸೂರು ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಹೇಳಿದ್ದಾರೆ.
ಸಭೆ ಬಳಿಕ ಮಾತನಾಡಿದ ಮೈಸೂರು ನಗರ ಪೊಲೀಸ್ ಆಯುಕ್ತ ಡಾ.ಚಂದ್ರಗುಪ್ತ, ಘಟನೆಯ ಎಲ್ಲಾ ವಿವರಗಳನ್ನು ಮಾಧ್ಯಮಗಳಿಗೆ ಹೇಳಲು ಸಾಧ್ಯವಿಲ್ಲ. ಇದು ಸೂಕ್ಷ್ಮ ಪ್ರಕರಣ. ಇದರ ಬಗ್ಗೆ ಅಷ್ಟೇ ಗಂಭೀರವಾದ ತನಿಖೆ ಆರಂಭಿಸಿದ್ದೇವೆ. ದೂರುದಾರ, ಸಂತ್ರಸ್ತೆ ಬಗ್ಗೆ ವಿವರಗಳನ್ನ ಬಹಿರಂಗಪಡಿಸಲ್ಲ ಅಂದ್ರು.
ಆರೋಪಿಗಳ ವಿರುದ್ಧ ಕಠಿಣ ಕ್ರಮಕ್ಕೆ ಸಿಎಂ ಬೊಮ್ಮಾಯಿ ಆದೇಶ
ಮೈಸೂರಿನ ಗ್ಯಾಂಗ್ ರೇಪ್ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕೂಡ ಪ್ರತಿಕ್ರಿಯಿಸಿದ್ದು, ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಎಸಗಿದ್ದಾರೆ ಅಂತಾ ಗೊತ್ತಾಗಿದೆ. ಈ ಕೃತ್ಯ ಎಸಗಿದವರು ಯಾರೇ ಆದ್ರೂ ಅವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲು ಅಧಿಕಾರಿಗಳಿಗೆ ಆದೇಶಿಸಿದ್ದೇನೆ ಅಂತಾ ಹೇಳಿದ್ದಾರೆ.
ರಾಜ್ಯ ಸರ್ಕಾರದ ವಿರುದ್ಧ ಚಾಟಿ ಬೀಸಿದ ಸಿದ್ದರಾಮಯ್ಯ
ಮೈಸೂರಿನಲ್ಲಿ ನಡೆದಿರೋ ಗ್ಯಾಂಗ್ ರೇಪ್ ಬಗ್ಗೆ ಟ್ವೀಟ್ ಮಾಡಿರೋ ಸಿದ್ದರಾಮಯ್ಯ, ರಾಜ್ಯ ಸರ್ಕಾರದ ವಿರುದ್ಧ ಮುಗಿ ಬಿದ್ದಿದ್ದಾರೆ. ಅಲ್ದೆ, ಮೈಸೂರು ಕ್ರೈಂ ಸಿಟಿಯಾಗಿ ಬದಲಾಗ್ತಿದೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಅಂತಾ ಆರೋಪಿಸಿದ್ದಾರೆ.
ಮೈಸೂರಿನಲ್ಲಿ ನಡೆದಿರೋ ಈ ಘಟನೆ ಕರುನಾಡಿಗೆ ಮಸಿ ಬಳಿದಿದೆ. ಅದ್ರಲ್ಲೂ ಸಾಂಸ್ಕೃತಿ ನಗರಿ ಮೈಸೂರಿನಲ್ಲಿ ಕೆಲವೇ ದಿನಗಳ ಅವಧಿಯಲ್ಲಿ ನಡೆದಿರೋ ಶೂಟೌಟ್, ಗ್ಯಾಂಗ್ ರೇಪ್ ಪ್ರಕರಣಗಳು ಜನರಲ್ಲಿ ಆತಂಕ ಮೂಡಿಸಿವೆ. ಪಿಂಚಣಿದಾರರ ಸ್ವರ್ಗ ಅಂತಾ ಕರೆಸಿಕೊಳ್ಳೋ ಮೈಸೂರಿನಲ್ಲಿ ನಡೀತಿರೋ ಅಪರಾಧ ಪ್ರಕರಣಗಳಿಂದ ಜನ ಬೆಚ್ಚಿ ಬಿದ್ದಿದ್ದಾರೆ. ಶೂಟೌಟ್ ಪ್ರಕರಣದ ಆರೋಪಿಗಳನ್ನೂ ಇನ್ನೂ ಪೊಲೀಸರು ಬಂಧಿಸಿಲ್ಲ. ಈಗ ಗ್ಯಾಂಗ್ ರೇಪ್ ಪ್ರಕರಣದ ಆರೋಪಿಗಳು ಯಾರು ಅಂತಲೂ ಗೊತ್ತಾಗ್ತಿಲ್ಲ. ಹೀಗಾಗಿ ಮೈಸೂರಿನಲ್ಲಿ ಪೊಲೀಸರು ಇದ್ದಾರಾ ಇಲ್ವಾ ಅನ್ನೋ ಪ್ರಶ್ನೆಯನ್ನ ಜನ ಕೇಳ್ತಿದ್ದಾರೆ. ಆರೋಪಿಗಳನ್ನ ಬಂಧಿಸೋ ಮೂಲಕ ಪೊಲೀಸರು ಈ ಪ್ರಶ್ನೆಗೆ ಉತ್ತರ ನೀಡಬೇಕಿದೆ.
ಇದನ್ನೂ ಓದಿ: ಕರ್ನಾಟಕದಲ್ಲಿ ಕಾನೂನು ಸುವ್ಯವಸ್ಥೆ ಕುಸಿದಿದೆ: ಮೈಸೂರು ಸಾಮೂಹಿಕ ಅತ್ಯಾಚಾರ ಪ್ರಸ್ತಾಪಿಸಿ ಸಿದ್ದರಾಮಯ್ಯ ಟೀಕೆ
Published On - 8:32 am, Thu, 26 August 21