ನಿಗದಿತ ಸಮಯಕ್ಕೆ ಕಬ್ಬು ಕಟಾವು ಮಾಡಿ ಸಾಗಣೆ ಮಾಡಿ: ಮೈಸೂರು ಜಿಲ್ಲಾಧಿಕಾರಿ ಆದೇಶ
ಟಿ ನರಸೀಪುರ ತಾಲ್ಲೂಕಿನಲ್ಲಿ ನಿಗದಿತ ಸಮಯಕ್ಕೆ ಕಬ್ಬು ಕಟಾವು ಮಾಡಿ ಸಾಗಣೆ ಮಾಡಿ ಎಂದು ಮೈಸೂರು ಜಿಲ್ಲಾಧಿಕಾರಿಯವರು ಆದೇಶ ಹೊರಡಿಸಿದ್ದಾರೆ. ಟಿ ನರಸೀಪುರ ತಾಲ್ಲೂಕಿನಲ್ಲಿ ಚಿರತೆ ದಾಳಿಗೆ ಇಬ್ಬರು ಬಲಿಯಾದ ಹಿನ್ನೆಲೆ ಈ ಆದೇಶ ಹೊರಬಿದ್ದಿದೆ.
ಮೈಸೂರು: ಜಿಲ್ಲೆಯ ಟಿ ನರಸೀಪುರ ತಾಲ್ಲೂಕಿನಲ್ಲಿ ಚಿರತೆ ದಾಳಿ (Leopard attack)ಗೆ ಇಬ್ಬರು ಬಲಿ ಹಿನ್ನೆಲೆ ತಾಲ್ಲೂಕಿನಲ್ಲಿ ನಿಗದಿತ ಸಮಯಕ್ಕೆ ಕಬ್ಬು ಕಟಾವು (Sugarcane harvest) ಮಾಡಿ ಸಾಗಣೆ ಮಾಡುವಂತೆ ಜಿಲ್ಲಾಧಿಕಾರಿ ಡಾ. ಕೆ.ವಿ ರಾಜೇಂದ್ರ (Dr.K.V.Rajendra) ಅವರು ಆದೇಶ ಹೊರಡಿಸಿದ್ದಾರೆ. ಜನರಿಗೆ ತೊಂದರೆ ಕೊಡುತ್ತಿರುವ ಹಾಗೂ ಇಬ್ಬರನ್ನು ಬಲಿ ಪಡೆದ ಚಿರತೆ ಸೆರೆಗೆ ಅರಣ್ಯ ಇಲಾಖೆ ಸಿಬ್ಬಂದಿಗಳು ಕಾರ್ಯಾಚರಣೆ ನಡೆಸುತ್ತಿದ್ದಾರೆ. ಆದರೆ ಈ ಕಬ್ಬಿನ ಗದ್ದೆಯಲ್ಲಿ ಚಿರತೆಗಳು ಆಶ್ರಯ ಪಡೆಯುತ್ತಿರುವುದರಿಂದ ಚಿರತೆ ಸೆರೆ ಕಾರ್ಯಾಚರಣೆಗೆ ಅಡ್ಡಿಯಾಗುತ್ತಿದೆ. ಹೀಗಾಗಿ ನಿಗದಿತ ಸಮಯಕ್ಕೆ ಕಬ್ಬು ಕಟಾವು ಮಾಡಿ ಸಾಗಣೆ ಮಾಡಬೇಕು. ಇದರಿಂದಾಗಿ ಚಿರತೆ ಪತ್ತೆ ಹಚ್ಚಿ ಸೆರೆ ಹಿಡಿಯಲು ಸಾಧ್ಯವಾಗಲಿದೆ ಎಂದು ಆದೇಶದಲ್ಲಿ ಮನವಿ ಮಾಡಲಾಗಿದೆ.
ಹುಣಸೂರಿಗೆ ಮೈಸೂರು ಡಿಸಿ ರಾಜೇಂದ್ರ, ಎಸ್ಪಿ ಚೇತನ್ ಭೇಟಿ
ನಾಳೆ ಹುಣಸೂರಿನಲ್ಲಿ ಅದ್ಧೂರಿಯಾಗಿ ಹನುಮ ಜಯಂತಿ ಆಚರಣೆ ಮಾಡಲಾಗುತ್ತಿದೆ. ಈ ಹಿನ್ನೆಲೆ ಮೈಸೂರು ಡಿಸಿ ರಾಜೇಂದ್ರ, ಎಸ್ಪಿ ಚೇತನ್ ಅವರು ಕಾರ್ಯಕ್ರಮದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಧಿಕಾರಿಗಳ ಜೊತೆ ಹಾಗೂ ಎಲ್ಲಾ ಸಮುದಾಯಗಳ ಮುಖಂಡರೊಂದಿಗೆ ಈಗಾಗಲೇ ಸಭೆ ನಡೆಸಲಾಗಿದೆ. ಅಲ್ಲದೆ ನಾಲ್ಕು ವರ್ಷದ ಹಿಂದೆ ವಿವಾದ ಸೃಷ್ಟಿಯಾಗಿದ್ದ ಹಿನ್ನೆಲೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸ್ ಭದ್ರತೆ ಕೈಗೊಳ್ಳಲಾಗಿದೆ. ಎಸ್ಪಿ ಆರ್.ಚೇತನ್ ಅವರು ಹುಣಸೂರಿನಲ್ಲೇ ನಿಂತು ಪರಿಶೀಲನೆ ನಡೆಸುತ್ತಿದ್ದಾರೆ. ಕಾರ್ಯಕ್ರಮದಲ್ಲಿ ಸಂಸದ ಪ್ರತಾಪ್ ಸಿಂಹ ಸೇರಿ ಹಲವು ಪ್ರಮುಖ ನಾಯಕರುಗಳು ಭಾಗಿ ಸಾಧ್ಯತೆ ಇದೆ.
ಕಾಡಿನಿಂದ ನಾಡಿಗೆ ಬಂದ ಆನೆಗಳಿಂದ ಬೆಳೆ ನಾಶ
ಮೈಸೂರಿನಲ್ಲಿ ಕಾಡು ಪ್ರಾಣಿ ಮಾನವ ಸಂಘರ್ಷ ಮುಂದುವರಿದಿದ್ದು, ಕಾಡಿನಿಂದ ನಾಡಿಗೆ ಬಂದ ಆನೆಗಳಿಂದ ಬೆಳೆ ನಾಶಗೊಳಿಸಿದೆ. ಹುಣಸೂರು ತಾಲ್ಲೂಕಿನ ಕಾಳೇನಹಳ್ಳಿ ಗ್ರಾಮದಲ್ಲಿ ರೈತರ ಜಮೀನಿಗೆ ನುಗ್ಗಿದ ಕಾಡಾನೆಗಳು ರೈತರು ಕಷ್ಟುಪಟ್ಟು ಬೆಳೆದ ಬೆಳೆಗಳನ್ನು ತುಳಿದು ನಾಶಗೊಳಿಸಿವೆ. ಪದೇ ಪದೇ ಕಾಡಿನಿಂದ ನಾಡಿಗೆ ಆನೆಗಳ ಹಿಂಡು ಬರುತ್ತಿದ್ದು, ಕಾಡು ಪ್ರಾಣಿ ಕಾಡಿನಿಂದ ನಾಡಿಗೆ ಬಾರದಂತೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕು ಎಂದು ರೈತರು ಒತ್ತಾಯಿಸುತ್ತಿದ್ದಾರೆ.
ಮತ್ತಷ್ಟು ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ