ಯುವಕರ ಮೇಲೆ ಕಾರು ಹರಿಸಿದ ಪ್ರಕರಣ: ಆರೋಪಿ ದರ್ಶನ್ ಅರೆಸ್ಟ್, ಮೂವರಿಗೆ ಮುಂದುವರಿದ ಚಿಕಿತ್ಸೆ
ಕ್ಷುಲ್ಲಕ ಕಾರಣಕ್ಕೆ ಜಗಳ ನಡೆದು ಮೂವರು ಯುವಕರ ಮೇಲೆ ಕಾರು ಹರಿಸಿದ ಪ್ರಕರಣ ಸಂಬಂಧ ಆರೋಪಿಯನ್ನು ಪೊಲೀಸರು ಬಂಧಿಸಿದ್ದು, ಗಾಯಾಳುಗಳಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ.
ಮೈಸೂರು: ಕ್ಷುಲ್ಲಕ ಕಾರಣಕ್ಕೆ ಜಗಳ ನಡೆದು ಮೂವರು ಯುವಕರ ಮೇಲೆ ಕಾರು ಹರಿಸಿದ ಪ್ರಕರಣ ಸಂಬಂಧ ಆರೋಪಿಯನ್ನು ಪೊಲೀಸರು ಬಂಧಿಸಿದ್ದು, ಗಾಯಾಳುಗಳಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ. ಟಿ ಕೆ ಬಡಾವಣೆಯಲ್ಲಿ ಮೊನ್ನೆ (ಡಿಸೆಂಬರ್ 4) ರಾತ್ರಿ ನಡೆದಿದ್ದ ಈ ಘಟನೆಯಲ್ಲಿ ರಾಹುಲ್, ಪ್ರಜ್ವಲ್ ಮತ್ತು ಆನಂದ್‌ಗೆ ಗಂಭೀರ ಗಾಯವಾಗಿತ್ತು. ಪ್ರಜ್ವಲ್, ರಾಹುಲ್ ಕಾರಿನಲ್ಲಿ ಬರುತ್ತಿದ್ದ ವೇಳೆ ಕಾರಿನಲ್ಲಿ ವೇಗವಾಗಿ ಬಂದಿದ್ದ ಆರೋಪಿ ದರ್ಶನ್, ಇಂಡಿಕೇಟರ್ ಹಾಕದೆ ಕಾರನ್ನು ತಿರುಗಿಸಿದ್ದಾನೆ. ಇದುವೇ ಈ ಎಲ್ಲಾ ಘಟನೆಗಳಿಗೆ ಕಾರಣವಾಗಿದೆ.
ರಾತ್ರಿ ಪ್ರಜ್ವಲ್ ಮತ್ತು ರಾಹುಲ್ ಕಾರಿನಲ್ಲಿ ಬರುತ್ತಿದ್ದರು. ಈ ವೇಳೆ ಮತ್ತೊಂದು ಕಾರಿನಲ್ಲಿ ಬರುತ್ತಿದ್ದ ದರ್ಶನ್ ಮತ್ತು ಆತನ ತಂದೆ ಇಂಡಿಕೇಟರ್ ಹಾಕದೆ ಕಾರನ್ನು ತಿರುಗಿಸಿದ್ದಾನೆ. ಇದಕ್ಕೆ ಪ್ರಜ್ವಲ್ ಮತ್ತು ರಾಹುಲ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ನಂತರ ಮಾತಿಗೆ ಮಾತು ಬೆಳೆದಿದೆ. ಈ ವೇಳೆ ಕೋಪಗೊಂಡ ದರ್ಶನ್ ತಂದೆ, ಪ್ರಜ್ವಲ್ ಮತ್ತು ರಾಹುಲ್ ಮೇಲೆ ಹಲ್ಲೆ ನಡೆಸಿರುವುದಾಗಿ ಆರೋಪಿಸಲಾಗಿದೆ. ಇವರ ನಡುವಿನ ಜಗಳ ನೋಡಿ ಅದೇ ದಾರಿಯಲ್ಲಿ ಹೋಗುತ್ತಿದ್ದ ಆನಂದ್ ಎಂಬಾತ ಜಗಳ ಬಿಡಿಸಲು ಬಂದಿದ್ದಾನೆ. ಆದರೆ ಮಾತಿನ ಚಕಾಮಕಿ ತೀವ್ರವಾಗಿ ಆಕ್ರೋಶಗೊಂಡಿದ್ದ ದರ್ಶನ್ ಪ್ರಜ್ವಲ್, ರಾಹುಲ್ ಮತ್ತು ಜಗಳ ಬಿಡಿಸಲು ಬಂದ ಆನಂದ್ ಮೇಲೆ ಕಾರು ಹರಿಸಿ ಪರಾರಿಯಾಗಿದ್ದಾನೆ.
ಕೂಡಲೇ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಗಾಯಾಳುಗಳ ಪೋಷಕರು ಕೃತ್ಯದ ಬಗ್ಗೆ ಸರಸ್ವತಿಪುರಂ ಠಾಣೆಗೆ ದೂರು ನೀಡಿದ್ದಾರೆ. ಘಟನೆಗೆ ತಂದೆ ತಾಯಿಯ ಕುಮ್ಮಕ್ಕಿನಿಂದ ದರ್ಶನ್ ಈ ಕೃತ್ಯ ಎಸಗಿದ್ದಾನೆ. ಅವರನ್ನು ಬಂಧಿಸಿ ಪ್ರಕರಣ ದಾಖಲಿಸುವಂತೆ ಯುವಕರ ಪೋಷಕರು ದೂರಿನಲ್ಲಿ ಮನವಿ ಮಾಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿ ದರ್ಶನ್‌ನನ್ನು ವಶಕ್ಕೆ ಪಡೆದಿದ್ದಾರೆ.
ಮತ್ತಷ್ಟು ಅಪರಾಧ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ