ಮೈಸೂರು ಮೇಯರ್ ಚುನಾವಣೆ: ಕಾಂಗ್ರೆಸ್, ಜೆಡಿಎಸ್, ಬಿಜೆಪಿ ಅಭ್ಯರ್ಥಿಗಳ ನಾಮಪತ್ರ ಸಲ್ಲಿಕೆ
ಮೇಯರ್ ಸ್ಥಾನವು ಸಾಮಾನ್ಯ ವರ್ಗಕ್ಕೆ ಹಾಗೂ ಉಪಮೇಯರ್ ಸ್ಥಾನವು ಬಿಸಿಎ ವರ್ಗಕ್ಕೆ ಮೀಸಲಾಗಿದೆ.
ಮೈಸೂರು: ಮೇಯರ್, ಉಪ ಮೇಯರ್ ಚುನಾವಣೆಗೆ (Mysore Mayor Election) ಕದನಕಣ ರಂಗೇರಿದೆ. ಕಾಂಗ್ರೆಸ್‌ನಿಂದ (Congress Party) ಮೇಯರ್ ಸ್ಥಾನಕ್ಕೆ ಸಯ್ಯದ್ ಅಸ್ರತ್ ಉಲ್ಲಾ ಹಾಗೂ ಗೋಪಿ, ಜೆಡಿಎಸ್‌ನಿಂದ (JDS) ಕೆ.ವಿ.ಶ್ರೀಧರ್, ಬಿಜೆಪಿಯಿಂದ (BJP) ಶಿವಕುಮಾರ್ ನಾಮಪತ್ರ ಸಲ್ಲಿಸಿದರು. ಉಪ ಮೇಯರ್ ಹುದ್ದೆಗೆ ಕಾಂಗ್ರೆಸ್‌ನಿಂದ ಶೋಭಾ ಸುನಿಲ್, ಜೆಡಿಎಸ್‌ನಿಂದ ರೇಷ್ಮಾಬಾನು, ಬಿಜೆಪಿಯಿಂದ ರೂಪ ನಾಮಪತ್ರ ಸಲ್ಲಿಸಿದರು. ಮೇಯರ್ ಹುದ್ದಿಗೆ ನಾಮಪತ್ರ ಸಲ್ಲಿಸಿರುವ ಜೆಡಿಎಸ್ನ ಕೆ.ವಿ.ಶ್ರೀಧರ್ ಮೈಸೂರಿನ 3ನೇ ವಾರ್ಡ್ ಸದಸ್ಯರಾಗಿ ಆಯ್ಕೆಯಾಗಿದ್ದಾರೆ. ಜೆಡಿಎಸ್ ಪಕ್ಷವು ಸ್ವತಂತ್ರವಾಗಿ ಸ್ಪರ್ಧೆ ಮಾಡಲು ನಿರ್ಧರಿಸಿದೆ.
ಮೇಯರ್ ಸ್ಥಾನಕ್ಕೆ ಕಾಂಗ್ರೆಸ್‌ನಿಂದ ಸಯ್ಯದ್ ಹಸ್ರತ್ ಉಲ್ಲಾ ಮತ್ತು ಗೋಪಿ ನಾಮಪತ್ರ ಸಲ್ಲಿಸಿದ್ದಾರೆ. ಜೆಡಿಎಸ್ಗೆ ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಿಗುತ್ತಿರುವ ಅಲ್ಪಸಂಖ್ಯಾತರ ಮತಗಳನ್ನು ಸೆಳೆಯಲು ಕಾಂಗ್ರೆಸ್ ಮುಂದಾಗಿದೆ. ಇದಕ್ಕಾಗಿಯೇ ಮುಸ್ಲಿಂ ಸಮುದಾಯದ ಅಭ್ಯರ್ಥಿಯನ್ನು ಕಾಂಗ್ರೆಸ್ ಹಾಕಿದೆ ಎಂದು ಹೇಳಲಾಗುತ್ತಿದೆ. 29ನೇ ವಾರ್ಡ್‌ನ ಸದಸ್ಯರಾಗಿರುವ ಸಯ್ಯದ್ ಹಸ್ರತ್ ಉಲ್ಲಾ ಮತ್ತು 43ನೇ ವಾರ್ಡ್ ಸದಸ್ಯರಾಗಿರುವ ಗೋಪಿ ಸಿದ್ದರಾಮಯ್ಯ ಆಪ್ತರಾಗಿದ್ದಾರೆ.
ಮೈಸೂರು ಮೇಯರ್ ಚುನಾವಣೆಗೆ ಅಂತಿಮ ಹಂತದ ಕಸರತ್ತು ನಡೆಯುತ್ತಿದೆ. ಮರಿತಿಬ್ಬೇಗೌಡ, ಬಿಎಸ್‌ಪಿ ಅಭ್ಯರ್ಥಿಗಳ ಮತವೇ ಮೇಯರ್-ಉಪಮೇಯರ್ ಆಯ್ಕೆಗೆ ನಿರ್ಣಾಯಕವಾಗಲಿದೆ. ಪ್ರಸ್ತುತ ವಿಧಾನ ಪರಿಷತ್ ಸದಸ್ಯ ಮರಿತಿಬ್ಬೇಗೌಡ ಜೆಡಿಎಸ್‌ನಿಂದ ಅಂತರ ಕಾಯ್ದುಕೊಂಡಿದ್ದಾರೆ. ಅವರು ಕಾಂಗ್ರೆಸ್ ಪರ ಮತ ಚಲಾಯಿಸುವ ಸಾಧ್ಯತೆಯಿದೆ. ಜೆಡಿಎಸ್ ಜೊತೆ ಗುರುತಿಸಿಕೊಂಡಿರುವ ಬಿಎಸ್‌ಪಿ ಸದಸ್ಯೆ ಪಲ್ಲವಿ ಮೈತ್ರಿ ಸಾಧ್ಯವಾಗದ ಹಿನ್ನೆಲೆ ಕಾಂಗ್ರೆಸ್ ಪರ ಮತ ಚಲಾಯಿಸುವ ಸಾಧ್ಯತೆಯಿದೆ. ಜೆಡಿಎಸ್ ಮತಗಳನ್ನು ಸೆಳೆಯಲು ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳು ಕಸರತ್ತು ನಡೆಸುತ್ತಿವೆ. ಮೈಸೂರು ಮಹಾನಗರ ಪಾಲಿಕೆ ಮೇಯರ್ ಚುನಾವಣೆಯಲ್ಲಿ ಜೆಡಿಎಸ್-ಕಾಂಗ್ರೆಸ್ ಅಥವಾ ಜೆಡಿಎಸ್-ಬಿಜೆಪಿ ಮೈತ್ರಿಯಾಗಬಬಹುದು ಎಂಬ ನಿರೀಕ್ಷೆಯಿತ್ತು. ಆದರೆ ಯಾವುದೇ ಮೈತ್ರಿ ಸಾಧ್ಯತೆ ಕಾರ್ಯರೂಪಕ್ಕೆ ಬಾರದ ಹಿನ್ನೆಲೆಯಲ್ಲಿ ಮೂರೂ ಪಕ್ಷಗಳು ಸ್ವತಂತ್ರವಾಗಿ ಸ್ಪರ್ಧಿಸಿವೆ.
ಮೈಸೂರು ಮಹಾನಗರ ಪಾಲಿಕೆ ಕೌನ್ಸಿಲ್ ಸಭಾಂಗಣದಲ್ಲಿ ಪ್ರಾದೇಶಿಕ ಆಯುಕ್ತ ಪ್ರಕಾಶ್ ನೇತೃತ್ವದಲ್ಲಿ ಚುನಾವಣೆ ನಡೆಯಲಿದೆ. ಮೇಯರ್ ಗಾದಿ ಪಡೆಯಲು ಮೂರು ಪಕ್ಷದಿಂದ ಕಸರತ್ತು ನಡೆಸಿವೆ. ಮೇಯರ್ ಸ್ಥಾನವು ಸಾಮಾನ್ಯ ವರ್ಗಕ್ಕೆ ಹಾಗೂ ಉಪಮೇಯರ್ ಸ್ಥಾನವು ಬಿಸಿಎ ವರ್ಗಕ್ಕೆ ಮೀಸಲಾಗಿದೆ. ಮೈಸೂರಿನ 60ನೇ ಮೇಯರ್‌ಗಾಗಿ ಇಂದು ಚುನಾವಣೆ ನಡೆಯಲಿದೆ. ಈವರೆಗೆ 59 ಮೇಯರ್ಗಳು ಮೈಸೂರು ಮಹಾನಗರಪಾಲಿಕೆಯ ಆಡಳಿತ ನಡೆಸಿದ್ದಾರೆ. ಈ ಪೈಕಿ ಕಾಂಗ್ರೆಸ್ ಪಕ್ಷದ ಆಡಳಿತವೇ ಹೆಚ್ಚು. ನಂತರದ ಸ್ಥಾನದಲ್ಲಿ ಜೆಡಿಎಸ್ ಇದೆ. ಬಿಜೆಪಿಗೆ ಒಮ್ಮೆ ಮಾತ್ರ ಮೇಯರ್ ಸ್ಥಾನ ಸಿಕ್ಕಿದೆ.
Published On - 10:39 am, Tue, 6 September 22