ಮೈಸೂರು, ಡಿಸೆಂಬರ್ 09: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (MUDA)ದ ನಿವೇಶನ ಹಂಚಿಕೆಯಲ್ಲಿ ನಡೆದಿದೆ ಎನ್ನಲಾಗಿರುವ ಹಗರಣ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರಿಗೆ ಉರುಳಾಗಿ ಪರಿಣಮಿಸಿದೆ. ಪ್ರಕರಣದ ತನಿಖೆಯನ್ನು ಮೈಸೂರು ಲೋಕಾಯುಕ್ತ ಮತ್ತು ಜಾರಿ ನಿರ್ದೇಶನಾಲಯ (ಇಡಿ) ನಡೆಸುತ್ತಿರುವ ನಡುವೆಯೇ ಆರ್ಟಿಐ ಕಾರ್ಯಕರ್ತ, ದೂರುದಾರ ಸ್ನೇಹಮಯಿ ಕೃಷ್ಣ ಅವರು ಮುಡಾ ಆಯುಕ್ತರಿಗೆ ಮತ್ತೊಂದು ಪತ್ರ ಬರೆದಿದ್ದಾರೆ.
ಮುಡಾ ಪ್ರಕರಣ ಕೋರ್ಟ್ಗಳ ಆದೇಶಗಳು: ಸತ್ಯಾಸತ್ಯತೆ ಎಂಬ ಪುಸ್ತಕವನ್ನು ಜಾಗೃತ ವಕೀಲರ ವೇದಿಕೆ ಪ್ರಕಟಿಸಿದೆ. ಇದಕ್ಕೆ ಸ್ನೇಹಮಯಿ ಕೃಷ್ಣ ಅವರು ಆಕ್ಷೇಪ ವ್ಯಕ್ತಪಡಿಸಿದ್ದು, ಸತ್ಯಾಂಶವನ್ನು ಜನರಿಗೆ ತಿಳಿಸುವಂತೆ ಮುಡಾ ಆಯುಕ್ತರಿಗೆ 6 ಪುಟಗಳ ಪತ್ರದ ಮೂಲಕ ಮನವಿ ಮಾಡಿದ್ದಾರೆ.
ಕೆಸರೆ ಗ್ರಾಮದ ಸರ್ವೆ ನಂ.464 ರ ಸಂಬಂಧ ನಿಮ್ಮ ಅಧಿಕಾರಿ ಮತ್ತು ಕಾನೂನು ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿ ದಾಖಲೆಗಳೊಂದಿಗೆ ಕೂಡಲೇ ಪತ್ರಿಕಾ ಹೇಳಿಕೆಯ ಮೂಲಕ ಸತ್ಯವನ್ನು ರಾಜ್ಯದ ಜನತೆಗೆ ತಿಳಿಸಲು ಹಾಗೂ ನ್ಯಾಯಾಂಗ ನಿಂದನೆ ಆಗುವುದನ್ನು ಮತ್ತು ಸಮಾಜದ ಸ್ವಾಸ್ಥ್ಯ ಹಾಳಾಗುವುದನ್ನು ತಪ್ಪಿಸಲು ಮನವಿ ಮಾಡಿದ್ದಾರೆ.
“ಮುಡಾ ಹಗರಣದ ತನಿಖೆ ಮತ್ತು ವಿಚಾರಣೆ ನಡೆಯುತ್ತಿದೆ ಎಂಬ ಕಾರಣಗಳನ್ನು ನೀಡಿ, ಪತ್ರಿಕಾ ಹೇಳಿಕೆಯ ಮೂಲಕ ಸ್ಪಷ್ಟಿಕರಣ ಕೊಡುವುದಿಲ್ಲ, ಸತ್ಯವನ್ನು ತಿಳಿಸುವುದಿಲ್ಲ ಎಂದು ಹೇಳಬಾರದು. ಏಕೆಂದರೆ ತನಿಖೆ ಮತ್ತು ವಿಚಾರಣೆ ನಡೆಯುತ್ತಿದೆ ಎಂಬ ಕಾರಣಕ್ಕೆ ರಾಜ್ಯದ ಜನರಿಗೆ ಸತ್ಯ ತಿಳಿಸಬಾರದು ಎಂಬ ನಿಯಮ ಇರುವುದಿಲ್ಲ. ನ್ಯಾಯಾಂಗ ನಿಂದನೆಯಂತಹ ಗಂಭೀರವಾದ ವಿಚಾರ ಇರುವುದರಿಂದ, ಸಮಾಜದ ಸ್ವಾಸ್ಥ್ಯ ಹಾಳಾಗುತ್ತಿರುವುದರಿಂದ ಸದುದ್ದೇಶದಿಂದ ಜನತೆಗೆ ಸತ್ಯವನ್ನು ತಿಳಿಸಿ, ಮುಂದಿನ ದಿನಗಳಲ್ಲಿ ನ್ಯಾಯಾಂಗ ನಿಂದನೆ ಆಗುವುದನ್ನು ತಡೆಯಬೇಕೆಂದು” ಮನವಿ ಮಾಡಿದ್ದಾರೆ.
ಇದನ್ನೂ ಓದಿ: ಮುಡಾದ ಮತ್ತೊಂದು ಹಗರಣ ಬಯಲು: ಸರ್ಕಾರದ ಬೊಕ್ಕಸಕ್ಕೆ 300 ಕೋಟಿ ರೂ. ನಷ್ಟ
“ಸಮಾಜದ ಸ್ವಾಸ್ಥ್ಯ ಹಾಳಾಗುವುದನ್ನು ತಡೆಯುವುದು ನಿಮ್ಮಂತಹ ಜವಾಬ್ದಾರಿಯುತ ಅಧಿಕಾರಿಗಳ ಆದ್ಯ ಕರ್ತವ್ಯವಾಗಿದೆ. ಈ ಬಗ್ಗೆ ನಿಮ್ಮ ಕಾನೂನು ಅಧಿಕಾರಿಯಿಂದ ಕಾನೂನು ಅಭಿಪ್ರಾಯ ಪಡೆಯಬಹುದಾಗಿದೆ. ನೀವು ಈ ಮನವಿ ಪತ್ರ ಸ್ವೀಕರಿಸಿದ ಮೂರು ದಿನಗಳಲ್ಲಿ ಮೇಲ್ಕಂಡ ನನ್ನ ಮನವಿಯಂತೆ ರಾಜ್ಯದ ಜನತೆಗೆ ಸತ್ಯವನ್ನು ತಿಳಿಸದಿದ್ದಲ್ಲಿ ನ್ಯಾಯಾಂಗ ನಿಂದನೆಯಂತಹ ಕೃತ್ಯಕ್ಕೆ ಪರೋಕ್ಷವಾಗಿ ಪ್ರಚೋದನೆ ನೀಡುತ್ತಿದ್ದೀರ ಎಂದು ಪರಿಗಣಿಸಿ. ನಿಮ್ಮ ವಿರುದ್ದ ಕ್ರಮ ತೆಗೆದುಕೊಳ್ಳಲು ಮಾನ್ಯ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸುವುದು ಅನಿವಾರ್ಯವಾಗುತ್ತದೆ” ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ