ಮುಡಾದ ಮತ್ತೊಂದು ಹಗರಣ ಬಯಲು: ಸರ್ಕಾರದ ಬೊಕ್ಕಸಕ್ಕೆ 300 ಕೋಟಿ ರೂ. ನಷ್ಟ
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ)ದಲ್ಲಿ ಭೂಮಿ ಹಂಚಿಕೆಯಲ್ಲಿನ ಭ್ರಷ್ಟಾಚಾರದ ಹಗರಣ ಬೆಳಕಿಗೆ ಬಂದಿದೆ. ಒಂದು ಕೋಟಿ ರೂಪಾಯಿಗೂ ಹೆಚ್ಚು ಬೆಲೆ ಬಾಳುವ 23 ನಿವೇಶನಗಳನ್ನು ಕೇವಲ 3 ಸಾವಿರ ರೂಪಾಯಿಗೆ ಮಾರಾಟ ಮಾಡಲಾಗಿದೆ ಎಂಬ ಆರೋಪವಿದೆ. ಇದರಿಂದ ಸರ್ಕಾರಕ್ಕೆ 300 ಕೋಟಿಗೂ ಹೆಚ್ಚು ರೂಪಾಯಿ ನಷ್ಟವಾಗಿದೆ. ಮಾಜಿ ಆಯುಕ್ತ ದಿನೇಶ್ ಮತ್ತು ರಿಯಲ್ ಎಸ್ಟೇಟ್ ಉದ್ಯಮಿ ಮಂಜುನಾಥ್ ವಿರುದ್ಧ ತನಿಖೆ ನಡೆಯುತ್ತಿದೆ.
ಮೈಸೂರು, ಡಿಸೆಂಬರ್ 07: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (Muda) ನಿವೇಶನ ಹಂಚಿಕೆಯಲ್ಲಿ ನಡೆದಿದೆ ಎನ್ನಲಾಗಿರುವ ಹಗರಣ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಮೈಸೂರಿನ ವಿಜಯನಗರದಲ್ಲಿ ಸುಮಾರು ಒಂದು ಕೋಟಿ ರೂಪಾಯಿಗೂ ಅಧಿಕ ಬೆಲೆಬಾಳುವ 23 ನಿವೇಶನಗಳನ್ನು ಕೇವಲ 3 ಸಾವಿರ ರೂ.ಗೆ ಮಾರಾಟ ಮಾಡಿರುವ ಆರೋಪ ಮುಡಾದ ವಿರುದ್ಧ ಕೇಳಿಬಂದಿದೆ. ಇದರಿಂದ ಸರ್ಕಾರದ ಬೊಕ್ಕಸಕ್ಕೆ 300 ಕೋಟಿ ರೂಪಾಯಿಗೂ ಅಧಿಕ ನಷ್ಟವಾಗಿದೆ ಎಂದು ಹೇಳಲಾಗುತ್ತಿದೆ.
ಮುಡಾ ಮಾಜಿ ಆಯುಕ್ತ ದಿನೇಶ್ ಮತ್ತು ರಿಯಲ್ ಎಸ್ಟೇಟ್ ಉದ್ಯಮಿ ಕಾರ್ತಿಕ ಬಡಾವಣೆಯ ಮಂಜುನಾಥ್ನಿಂದ ಮಹಾ ಭೂಗಳ್ಳತನ ನಡೆದಿದೆ ಎಂಬ ಆರೋಪ ಕೇಳಿಬಂದಿದೆ. ಜಾರಿ ನಿರ್ದೇಶನಾಲಯ (ಇಡಿ) ಮುಂದೆ ವಿಚಾರಣೆಗೆ ಹಾಜರಾಗಿದ್ದ ಮುಡಾ ಮಾಜಿ ಆಯುಕ್ತ ದಿನೇಶ್ ರಿಯಲ್ ಎಸ್ಟೇಟ್ ಉದ್ಯಮಿ ಮಂಜುನಾಥ್ಗೆ ಪ್ರೋತ್ಸಾಹದಾಯಕ ಯೋಜನೆ ಹೆಸರಿನಲ್ಲಿ ಐದೇ ದಿನಗಳಲ್ಲಿ ಒಂದು ನಿವೇಶನಕ್ಕೆ 3 ಸಾವಿರ ರೂಪಾಯಿಯಂತೆ 23 ಸೈಟ್ಗಳನ್ನು ನೀಡಲಾಗಿದೆ.
ಇನ್ನು, ಕ್ರಯ ಪತ್ರದಲ್ಲಿ ಮಂಜುನಾಥ್ ಯಾವ ಭೂಮಿ ಕಳೆದುಕೊಂಡಿದ್ದರೆ ಎಂಬ ಮಾಹಿತಿ ಇಲ್ಲ. ಆದರೆ, ಪ್ರೋತ್ಸಾಹದಾಯಕ ಎಂದು ನಮೂದಿಸಿ ನಿವೇಶನಗಳನ್ನು ನೀಡಲಾಗಿದೆ. 5 ಲಕ್ಷ ಶುಲ್ಕ ಪಾವತಿ ಸ್ಥಳದಲ್ಲಿ ಕೇವಲ 600 ರೂಪಾಯಿ ಪಾವತಿ ಮಾಡಿಸಿಕೊಂಡು ನಿವೇಶನ ನೀಡಲಾಗಿದೆ.
ಇದನ್ನೂ ಓದಿ: ಮುಡಾದ ಮತ್ತೊಂದು ಅಕ್ರಮ ಬಯಲು: ಕ್ರಯ ಪತ್ರ ಆಗುವ ಮುನ್ನವೇ ಸೇಲ್ ಅಗ್ರಿಮೆಂಟ್!
ಮುಡಾ ಭ್ರಷ್ಟಾಚಾರದ ಬಗ್ಗೆ ಒಂದು ವರ್ಷದ ಹಿಂದೆಯೇ ಕೃಷ್ಣ ಎಂಬವರು ಮೈಸೂರು ಲೋಕಾಯುಕ್ತಕ್ಕೆ ದೂರು ನೀಡಿದ್ದರು. ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಆಯುಕ್ತ ಜಿ.ಟಿ.ದಿನೇಶ್‌ಕುಮಾರ್, ವಿಶೇಷ ತಹಶೀಲ್ದಾರ್ ಶಿವಕುಮಾರ್, ಹೆಚ್ಚುವರಿ ಜಿಲ್ಲಾ ನೋಂದಣಾಧಿಕಾರಿ ಶ್ರೀಮತಿ.ಕಾವ್ಯ, ರಿಯಲ್ ಎಸ್ಟೇಟ್ ಉದ್ಯಮಿ ಎನ್.ಮಂಜುನಾಥ್ ವಿರುದ್ಧ ದೂರು ದಾಖಲಿಸಿದ್ದರು.
ಪ್ರಾಧಿಕಾರದ ಸದಸ್ಯರುಗಳು, ಅಧಿಕಾರಿಗಳು, ನೌಕರರುಗಳು ಮತ್ತು ತಪ್ಪಿತಸ್ಥರುಗಳ ವಿರುದ್ಧ ಕಾನೂನು ಕ್ರಮಕ್ಕೆ ದೂರುದಾರ ಪರ ವಕೀಲ ರವಿಕುಮಾರ್ ಒತ್ತಾಯಿಸಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:27 am, Sat, 7 December 24