ಮುಡಾದ ಮತ್ತೊಂದು ಅಕ್ರಮ ಬಯಲು: ಕ್ರಯ ಪತ್ರ ಆಗುವ ಮುನ್ನವೇ ಸೇಲ್ ಅಗ್ರಿಮೆಂಟ್!
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ (ಮುಡಾ) ಭೂಮಿ ಹಂಚಿಕೆಯಲ್ಲಿ ಹಲವಾರು ಅಕ್ರಮಗಳು ನಡೆದಿವೆ ಎಂದು ಬಹಿರಂಗಗೊಂಡಿದೆ. ಚಾಮುಂಡಿ ನಗರ ಸರ್ವೋದಯ ಸಂಘದ ಸದಸ್ಯರಿಗೆ ನೀಡಲಾದ ನಿವೇಶನಗಳನ್ನು ಕ್ರಯಪತ್ರದ ಮುಂಚೆಯೇ ಇತರರಿಗೆ ಮಾರಾಟ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಈ ಘಟನೆಯಲ್ಲಿ ಹಲವು ವ್ಯಕ್ತಿಗಳು ಭಾಗಿಯಾಗಿದ್ದು, ಇದೀಗ ತನಿಖೆ ನಡೆಯುತ್ತಿದೆ.
ಮೈಸೂರು, ಡಿಸೆಂಬರ್ 06: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (Muda) ಹಗರಣ ಕರ್ನಾಟಕದಲ್ಲಿ ಸಾಕಷ್ಟು ಸದ್ದು ಮಾಡಿದೆ. ಈ ಹಗರಣ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರಿಗೆ ಉರುಳಾಗಿ ಪರಿಣಮಿಸಿದೆ. ಇದೀಗ ಮುಡಾ ನಿವೇಶನ ಹಂಚಿಕೆಯಲ್ಲಿ ನಡೆದಿದೆ ಎನ್ನಲಾಗಿರುವ ಮತ್ತೊಂದು ಅಕ್ರಮ ಬಯಲಾಗಿದೆ. ಕ್ರಯ ಪತ್ರ ಮುನ್ನವೇ ಸೇಲ್ ಅಗ್ರಿಮೆಂಟ್ ಮಾಡಿಕೊಟ್ಟಿರುವ ಆರೋಪ ಕೇಳಿಬಂದಿದೆ.
ಏನಿದು ಪ್ರಕರಣ
ಚಾಮುಂಡಿ ನಗರ ಸರ್ವೋದಯ ಸಂಘದ ಸದಸ್ಯರು 17 ಎಕರೆ ಪ್ರದೇಶದಲ್ಲಿನ 48 ನಿವೇಶನಗಳು ನಮ್ಮದು ಎಂದು ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸುತ್ತಾರೆ. ಆದರೆ, ಮುಡಾ ಅಧಿಕಾರಿಗಳು ಈ 17 ಎಕರೆ ಪ್ರದೇಶಗಳನ್ನು ರೈತರಿಂದ ನೇರವಾಗಿ ನಾವು ಖರೀದಿಸಿದ್ದೇವೆ ಎಂದು ನ್ಯಾಯಾಲಯಕ್ಕೆ ತಿಳಿಸುತ್ತಾರೆ. ಕೊನೆಗೆ ನ್ಯಾಯಾಲಯ ಮಾನವೀಯ ದೃಷ್ಟಿಯಿಂದ ಸಂಘದ ಸದಸ್ಯರನ್ನು ಪರಿಗಣಿಸಿ, ಈ ಬಗ್ಗೆ ಸರ್ಕಾರದೊಂದಿಗೆ ಚರ್ಚಿಸಿ ಎಂದು ಮೂಡಾಗೆ ಸೂಚನೆ ನೀಡುತ್ತದೆ.
ಬಳಿಕ, ಮುಡಾ ಅಧಿಕಾರಿಗಳು ಚಾಮುಂಡಿ ನಗರ ಸರ್ವೋದಯ ಸಂಘದ ಸದಸ್ಯರಿಗೆ ನಿವೇಶನ ನೀಡಲು ನಿರ್ಧರಿಸುತ್ತದೆ. ಅದರಂತೆ ಮುಡಾ ಸಂಘದ ಸದಸ್ಯರ ಹೆಸರಿಗೆ ನಿವೇಶನಗಳ ಕ್ರಯ ಪತ್ರ ಮಾಡಿಕೊಡುತ್ತದೆ. ಆದರೆ, ಸಂಘದ ಸದಸ್ಯರು ಕ್ರಯ ಪತ್ರ ಆಗುವ ಒಂದು ತಿಂಗಳು ಮುನ್ನವೇ ಇನ್ನೊಬ್ಬರಿಗೆ ಸೇಲ್ ಅಗ್ರಿಮೆಂಟ್ ಕೊಟ್ಟಿದ್ದಾರೆ.
ಕೇಸ್ ನಂ1: ಸೂರ್ಯಕುಮಾರಿ ಎಂಬುವರ ಹೆಸರಿಗೆ 2023ರ ನವೆಂಬರ್ 29 ರಂದು ಕ್ರಯ ಪತ್ರ ಮಾಡಿಕೊಡಲಾಗುತ್ತದೆ. ಮುಡಾ ನಿವೇಶನ ಸಂಖ್ಯೆ 42ನ್ನು ಕ್ರಯ ಮಾಡಿಕೊಟ್ಟಿದೆ. ಆದರೆ, ಸೂರ್ಯಕುಮಾರಿ ಕ್ರಯ ಪತ್ರ ಆಗುವ ಮುನ್ನವೇ ಅಂದರೆ 2023ರ ಅಕ್ಟೋಬರ್ 13 ರಂದು ನಿವೇಶನವನ್ನು ವಿನೋದ್ ಕುಮಾರ್ ಎಂಬುವರಿಗೆ ಸೇಲ್ ಅಗ್ರಿಮೆಂಟ್ ಮಾಡಿಕೊಟ್ಟಿದ್ದಾರೆ.
ಇದನ್ನೂ ಓದಿ: ಮುಡಾ ಹಗರಣಕ್ಕೆ ಸಾಕ್ಷ್ಯ ನೀಡಿದ ಇಡಿ: ಸಿಎಂ ಸಿದ್ದರಾಮಯ್ಯಗೆ ಬಿಗಿಯಾದ ಉರುಳು
ಕೇಸ್ ನಂ 2: ಎ.ಫ್ರಾನ್ಸಿಸ್ ಎಂಬುವರಿಗೆ 2023ರ ಡಿಸೆಂಬರ್ 15 ರಂದು ಮುಡಾ ನಿವೇಶನ ಸಂಖ್ಯೆ 128ನ್ನು ಕ್ರಯ ಮಾಡಿಕೊಟ್ಟಿದೆ. ಆದರೆ, ಕ್ರಯ ಪತ್ರ ಆಗುವ ಮುನ್ನವೇ ಅಂದರೆ 2023ರ ಡಿಸೆಂಬರ್ 1 ರಂದು ಮುಂಜುನಾಥ್ ಎಂಬುವರಿಗೆ ಸೇಲ್ ಅಗ್ರಿಮೆಂಟ್ ಮಾಡಿಕೊಡಲಾಗಿದೆ.
ಕೇಸ್ ನಂ3: ರತ್ನ ಎಂಬುವರಿಗೆ 2023ರ ಡಿಸೆಂಬರ್ 15 ರಂದು ಮುಡಾ ನಿವೇಶನ ಸಂಖ್ಯೆ 13ನ್ನು ಕ್ರಯ ಮಾಡಿಕೊಟ್ಟಿದೆ. ಆದರೆ, ಕ್ರಯ ಪತ್ರ ಆಗುವ ಮುನ್ನವೇ ಅಂದರೆ 2023ರ ಡಿಸೆಂಬರ್ 1 ರಂದೇ ಮಂಜುನಾಥ್ ಎಂಬುವರಿಗೆ ಸೇಲ್ ಅಗ್ರಿಮೆಂಟ್ ಮಾಡಿಕೊಡಲಾಗಿದೆ.
ಕೇಸ್ ನಂ4: ಶಿವಮ್ಮ ಎಂಬುವರಿಗೆ 2023ರ ಡಿಸೆಂಬರ್ 15 ರಂದು ಮುಡಾ ನಿವೇಶನ ಸಂಖ್ಯೆ 17ನ್ನು ಕ್ರಯ ಮಾಡಿಕೊಟ್ಟಿದೆ. ಆದರೆ, ಕ್ರಯ ಪತ್ರ ಆಗುವ ಮುನ್ನವೇ ಅಂದರೆ 2023 ಡಿಸೆಂಬರ್ 1 ರಂದೇ ಮಂಜುನಾಥ್ ಎಂಬುವರಿಗೆ ಭೂಮಿ ಸೇಲ್ ಅಗ್ರಿಮೆಂಟ್ ಮಾಡಿಕೊಡಲಾಗಿದೆ.
ಕೇಸ್ ನಂ 5: ಮುಕುಂದ್ ಎಂಬುವರಿಗೆ 2023ರ ಡಿಸೆಂಬರ್ 15 ರಂದು ಮುಡಾ ನಿವೇಶನ ಸಂಖ್ಯೆ 22ನ್ನು ಮುಡಾ ಕ್ರಯ ಮಾಡಿಕೊಟ್ಟಿದೆ. ಆದರೆ, ಕ್ರಯ ಪತ್ರ ಆಗುವ ಮುನ್ನವೇ ಮಂಜುನಾಥ್ ಎಂಬುವರಿಗೆ ಸೇಲ್ ಅಗ್ರಿಮೆಂಟ್ ಮಾಡಿಕೊಡಲಾಗಿದೆ.
ನಾಲ್ಕು ನಿವೇಶನಗಳ ಸೇಲ್ ಅಗ್ರಿಮೆಂಟ್ ಪಡೆದ ಮಂಜುನಾಥ್ ಅಲಿಯಾಸ್ ಕಾರ್ತಿಕ ಬಡಾವಣೆ ಮಂಜುನಾಥ್ 50:50 ಅನುಪಾತದ ಮುಡಾ ಕೇಸ್ನಲ್ಲಿ ಇಡಿ ತನಿಖೆ ಎದುರಿಸುತ್ತಿದ್ದಾರೆ. ಹೀಗೆ ತಮ್ಮ ಹೆಸರಿಗೆ ಕ್ರಯ, ಖಾತೆ ಆಗದೆ ಸಂಘದ ಸದಸ್ಯರು ಇನ್ನೊಬ್ಬರಿಗೆ ಭೂಮಿ ಮಾರಿದರಾ ಎಂಬ ಅನುಮಾನ ವ್ಯಕ್ತವಾಗಿದೆ. ಆಥವಾ ಭೂಮಿ ಕಬಳಿಸುವ ಸಂಚಿನಿಂದಲೇ ಸೇಲ್ ಅಗ್ರಿಮೆಂಟ್ ಮಾಡಿಕೊಂಡರಾ ಭೂಗಳ್ಳರು ಎಂಬ ಅನುಮಾನ ವ್ಯಕ್ತವಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ