ಬೇಕಾಬಿಟ್ಟಿಯಾಗಿ ವಾಹನ ಪಾರ್ಕ್ ಮಾಡಿದರೆ ಬೀಳುತ್ತೆ ದಂಡ: ಪೇ ಆ್ಯಂಡ್‌ ಪಾರ್ಕಿಂಗ್ ವ್ಯವಸ್ಥೆಗೆ ಮುಂದಾದ ಮೈಸೂರು

| Updated By: ಗಂಗಾಧರ​ ಬ. ಸಾಬೋಜಿ

Updated on: Jun 16, 2023 | 9:29 PM

ಮೈಸೂರಿನಲ್ಲೂ ವಾಹನ ದಟ್ಟಣೆ ಹೆಚ್ಚಾಗುತ್ತಿದೆ. ಹೀಗಾಗಿ ಪ್ರಮುಖ ರಸ್ತೆಗಳಲ್ಲಿ ಜನರಿಗೆ ಪಾರ್ಕಿಂಗ್ ಸಮಸ್ಯೆ ಎದುರಾಗಿದ್ದು, ಇದಕ್ಕೆ‌ ಪರಿಹಾರವಾಗಿ‌ ನಗರದಲ್ಲಿ ಪೇ ಆ್ಯಂಡ್‌ ಪಾರ್ಕಿಂಗ್ ವ್ಯವಸ್ಥೆ ಜಾರಿಗೆ ತರಲು ಮೈಸೂರು ಮಹಾನಗರ ಪಾಲಿಕೆ ಮುಂದಾಗಿದೆ.

ಬೇಕಾಬಿಟ್ಟಿಯಾಗಿ ವಾಹನ ಪಾರ್ಕ್ ಮಾಡಿದರೆ ಬೀಳುತ್ತೆ ದಂಡ: ಪೇ ಆ್ಯಂಡ್‌ ಪಾರ್ಕಿಂಗ್ ವ್ಯವಸ್ಥೆಗೆ ಮುಂದಾದ ಮೈಸೂರು
ಪ್ರಾತಿನಿಧಿಕ ಚಿತ್ರ
Follow us on

ಮೈಸೂರು: ಮೈಸೂರು (Mysore) ಹೇಳಿ ಕೇಳಿ ಪಿಂಚಣಿದಾರರ ಸ್ವರ್ಗ. ಬೆಂಗಳೂರಿಗೆ ಹೋಲಿಸಿದರೆ ಮೈಸೂರಿನಲ್ಲಿ ವಾಹನದ ದಟ್ಟಣೆ ತುಂಬಾ ಕಡಿಮೆ. ಆದರೆ ಇತ್ತೀಚಿಗೆ ಮೈಸೂರಿನಲ್ಲೂ ವಾಹನ ದಟ್ಟಣೆ ಹೆಚ್ಚಾಗುತ್ತದೆ. ಹೀಗಾಗಿ ಪ್ರಮುಖ ರಸ್ತೆಗಳಲ್ಲಿ ಜನರಿಗೆ ಪಾರ್ಕಿಂಗ್ ಸಮಸ್ಯೆ ಎದುರಾಗಿದೆ. ಗಂಟೆ ಗಟ್ಟಲೇ ಕಾದರು ನಿಂತ ವಾಹನಗಳು ಕದಲುತ್ತಿಲ್ಲ. ಅದರಲ್ಲೂ ಕೆಲ ಅಂಗಡಿ ಮಾಲೀಕರು ಬೆಳಗ್ಗೆ ತಮ್ಮ ಕಾರನ್ನು ಪಾರ್ಕ್ ಮಾಡಿದರೆ ರಾತ್ರಿವರೆಗೂ ತೆಗೆಯುವುದೇ ಇಲ್ಲ. ಇದು ಮೈಸೂರಿನ ಕಾರು ಮಾಲೀಕರ ತಲೆ ನೋವಿಗೆ ಕಾರಣವಾಗಿದೆ. ಇದಕ್ಕೆ‌ ಪರಿಹಾರವಾಗಿ‌ ನಗರದಲ್ಲಿ ಪೇ ಆ್ಯಂಡ್‌ ಪಾರ್ಕಿಂಗ್ ವ್ಯವಸ್ಥೆ (pay and parking system) ಜಾರಿಗೆ ತರಲು ಮೈಸೂರು ಮಹಾನಗರ ಪಾಲಿಕೆ ಮುಂದಾಗಿದೆ.

ನಗರದ ಮೂರು ಕಡೆ ಪೇ ಆ್ಯಂಡ್‌ ಪಾರ್ಕಿಂಗ್ ವ್ಯವಸ್ಥೆ

ಮೈಸೂರಿನ ಇತಿಹಾಸದಲ್ಲೇ ಮೊದಲ ಬಾರಿಗೆ ಪೇ ಆ್ಯಂಡ್‌ ಪಾರ್ಕಿಂಗ್ ವ್ಯವಸ್ಥೆ ಜಾರಿ ಮಾಡಲಾಗುತ್ತಿದೆ. ಪ್ರಾಯೋಗಿಕವಾಗಿ ದೇವರಾಜ ಅರಸು ರಸ್ತೆ, ಸಯ್ಯಾಜಿ ರಾವ್ ರಸ್ತೆ ಮತ್ತು ಅಶೋಕ ರಸ್ತೆಯಲ್ಲಿ ಇದು ಜಾರಿಗೆ ಬರಲಿದೆ. ಇದಕ್ಕಾಗಿ ಮೈಸೂರು ಪಾಲಿಕೆ ಕೌನ್ಸಿಲ್ ಒಪ್ಪಿಗೆ ಸಹ ನೀಡಿದೆ. ಈ ಮೂಲಕ ಮೈಸೂರಿನ ಪ್ರಮುಖ ರಸ್ತೆಗಳಲ್ಲಿ ಬೇಕಾ ಬಿಟ್ಟಿ ಪಾರ್ಕಿಂಗ್‌ಗೆ ಬ್ರೇಕ್ ಹಾಕಬಹುದು ಅನ್ನೋದು ಪಾಲಿಕೆಯ ಅಭಿಪ್ರಾಯ.

ಇದನ್ನೂ ಓದಿ: G20 Summit: ರಾಜ್ಯದ ಪ್ರಮುಖ ಈ 3 ಸ್ಥಳಗಳಲ್ಲಿ ನಡೆಯಲಿದೆ G20 ಶೃಂಗಸಭೆ, ಇಲ್ಲಿದೆ ವೇಳಾಪಟ್ಟಿ

ಇನ್ನು ಜನ ಸಾಮಾನ್ಯರಿಗೆ ತೊಂದರೆಯಾಗದಿರಲಿ ಅಂತಾ ಮೊದಲ ಒಂದು ಗಂಟೆ ಅವಧಿಗೆ ಉಚಿತ ಪಾರ್ಕಿಂಗ್ ನೀಡಲು ಪಾಲಿಕೆ ಚಿಂತನೆ ನಡೆಸಿದೆ. ಇದಕ್ಕೆ ಮೈಸೂರಿನಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಪೇ ಆ್ಯಂಡ್‌ ಪಾರ್ಕಿಂಗ್‌ ವ್ಯವಸ್ಥೆಗೆ ಮಿಶ್ರ ಪ್ರತಿಕ್ರಿಯೆ

ಪೇ ಆ್ಯಂಡ್‌ ಪಾರ್ಕಿಂಗ್‌ನ್ನು ಕೆಲವರು ಸ್ವಾಗತಿಸಿದರೆ ಮತ್ತೆ ಕೆಲವರು ವಿರೋಧಿಸಿದ್ದಾರೆ. ಈ‌ ಮೂಲಕ ಕೆಲವರು ಅನಗತ್ಯವಾಗಿ ದಿನವಿಡಿ ಪಾರ್ಕಿಂಗ್ ಮಾಡುವುದು ತಪ್ಪಲಿದೆ ಅಂತಾ ಕೆಲವರು ಹೇಳಿದ್ದಾರೆ. ಇಗಾಗಲೇ ಬೆಲೆ ಏರಿಕೆಯಿಂದ ತತ್ತರಿಸಿದ್ದೇವೆ ಇದರ ಮಧ್ಯೆ ಇದೊಂದು ಹೊರೆ ಅಂತ ಜನ ಪಾಲಿಕೆಗೆ ಹಿಡಿ ಶಾಪ ಹಾಕುತ್ತಿದ್ದಾರೆ. ಒಟ್ಟಾರೆ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಮೊದಲ ಬಾರಿಗೆ ಜಾರಿಯಾಗುತ್ತಿರುವ ಪೇ ಆ್ಯಂಡ್‌ ಪಾರ್ಕಿಂಗ್ ಸಖತ್ ಸದ್ದು ಮಾಡಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 9:28 pm, Fri, 16 June 23