
ಮೈಸೂರು, ಫೆ.15: ಜಿಲ್ಲೆಯ ಜನರ ನಿದ್ದೆಗೆಡಿಸಿದ್ದ ಹುಲಿ(Tiger)ಯನ್ನು ಕೊನೆಗೂ ಸೆರೆ ಹಿಡಿಯಲಾಗಿದೆ. ಸರಗೂರು ತಾಲೂಕಿನ ಚಿಕ್ಕನಹಳ್ಳಿ ಅರಣ್ಯ ಬಳಿಯ ಜಮೀನೊಂದರಲ್ಲಿ ಇರಿಸಲಾಗಿದ್ದ ಬೋನಿಗೆ ಹುಲಿ ಬಿದ್ದಿದೆ. ಮೈಸೂರು ತಾಲೂಕಿನ ಚಿಕ್ಕಕಾನ್ಯ ಬಳಿ ಹುಲಿ ಕಾಣಿಸಿಕೊಂಡು ಆತಂಕ ಸೃಷ್ಟಿ ಮಾಡಿತ್ತು. ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಹೋಗುತ್ತಿದ್ದ ಹಿನ್ನಲೆ ಹುಲಿ ಸೆರೆಗೆ ಹಲವು ಕಡೆ ಬೋನನ್ನು ಇರಿಸಲಾಗಿತ್ತು. ಇದೀಗ ಐದು ವರ್ಷದ ಗಂಡು ಹುಲಿಯನ್ನು ಸೆರೆ ಹಿಡಿಯಲಾಗಿದೆ.
ಸಾಮಾನ್ಯವಾಗಿ ಹುಲಿಗಳು ಬೋನಿಗೆ ಬೀಳುವುದು ಅಪರೂಪದಲ್ಲೆ ಅಪರೂಪ ಪ್ರಕರಣವಾಗಿದೆ. ಈ ಸೆರೆ ಸಿಕ್ಕ ಹುಲಿಯನ್ನು ಸುರಕ್ಷಿತ ಸ್ಥಳಕ್ಕೆ ಕೊಂಡೊಯ್ದು ಪರಿಶೀಲನೆ ನಡೆಸಲಾಗುತ್ತಿದ್ದು, ಸದ್ಯ ಸ್ಥಳಕ್ಕೆ ಮೈಸೂರು ವೃತ್ತದ ಸಿ.ಎಫ್ ಡಾ. ಮಾಲ ತಿಪ್ರಿಯಾ, ಡಿ.ಸಿ.ಎಫ್ ಬಸವರಾಜ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇದೀಗ ಹುಲಿ ಆರೋಗ್ಯವಾಗಿರುವುದರಿಂದ ಮತ್ತು ಹುಲಿಯ ವಯಸ್ಸು ಚಿಕ್ಕದಾಗಿದ್ದರಿಂದ ಹುಲಿಯ ಚಲನವಲನ ಗಮನಿಸುವ ಸಲುವಾಗಿ ರೇಡಿಯೋ ಕಾಲರ್ ಅಳವಡಿಕೆ ಮಾಡಿ ಹುಲಿಯನ್ನು ಮತ್ತೆ ಕಾಡಿಗೆ ಬಿಡಲು ನಿರ್ಧರಿಸಲಾಗಿದೆ.
ಇದನ್ನೂ ಓದಿ:ಮೈಸೂರು ಜಿಲ್ಲೆಯಲ್ಲಿ ಹುಲಿ ಪ್ರತ್ಯಕ್ಷ: ಅರಣ್ಯ ಇಲಾಖೆ ಸಿಬ್ಬಂದಿಗಳಿಂದ ಕೂಂಬಿಂಗ್ ಕಾರ್ಯಾಚರಣೆ ಆರಂಭ
ಇನ್ನು ನಿನ್ನೆಯಷ್ಟೇ ಮೈಸೂರು ಜಿಲ್ಲೆಯ ಟಿ. ನರಸೀಪುರ ತಾಲ್ಲೂಕಿನ ಬನ್ನೂರು ಪಟ್ಟಣದ ಸೇತುವೆ ಬಳಿ ತೋಟಗಾರಿಕೆ ಇಲಾಖೆಯ ಸಂಶೋಧನಾ ಕೇಂದ್ರದ ಬಳಿಯಿರುವ ಕುಮಾರ್ ಎಂಬುವರಿಗೆ ಸೇರಿದ ಜಮೀನಿನಲ್ಲಿ ಹುಲಿ ಪ್ರತ್ಯಕ್ಷವಾಗಿತ್ತು. ಜೊತೆಗೆ ಹುಲಿಯನ್ನು ಕಣ್ಣಾರೆ ಕಂಡ ದಿವಾಕರ್ ಎಂಬುವವರು ಛಾಯಾಚಿತ್ರ ತೆಗೆದು ಅರಣ್ಯ ಇಲಾಖೆ ಸಿಬ್ಬಂದಿಗೆ ಮಾಹಿತಿ ರವಾನೆ ಮಾಡಿದ್ದರು. ಸುದ್ದಿ ತಿಳಿಯುತ್ತಿದ್ದಂತೆ ಟಿ ನರಸೀಪುರ ವಲಯದಲ್ಲಿ ವಲಯ ಅರಣ್ಯಾಧಿಕಾರಿಗಳು ಹಾಗೂ ಸಿಬ್ಬಂದಿಗಳು ಭೇಟಿ ನೀಡಿ ಸ್ಥಳ ಪರಿಶೀಲನೆ ಮಾಡಿದ್ದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ