
ಮೈಸೂರು, ಡಿಸೆಂಬರ್ 26: ಮೈಸೂರು ಅರಮನೆ ಬಳಿ ಹೀಲಿಯಂ ಸಿಲಿಂಡರ್ ಸ್ಫೋಟ ಪ್ರಕರಣಕ್ಕೆ (cylinder Blast case) ಸಂಬಂಧಿಸಿದಂತೆ ಇದೀಗ ಮೃತರ ಸಂಖ್ಯೆ 3ಕ್ಕೆ ಏರಿಕೆ ಆಗಿದೆ. ಮೈಸೂರಿನ ಕೆ.ಆರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಬೆಂಗಳೂರು ಮೂಲದ ಲಕ್ಷ್ಮೀ ಎನ್ನುವವರು ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ (death). ಲಕ್ಷ್ಮೀ ಕುಟುಂಬದವರ ಜೊತೆಗೆ ಮೈಸೂರು ಪ್ರವಾಸಕ್ಕೆ ಬಂದಿದ್ದ ವೇಳೆ ದುರಂತ ಸಂಭವಿಸಿತ್ತು. ಇನ್ನು ಲಕ್ಷ್ಮೀ ಅವರ ಮಗಳು ಡಿಂಪಲ್ ದುರಂತದಿಂದ ಬಚಾವ್ ಆಗಿದ್ದಾರೆ. ಸದ್ಯ ತಾಯಿ ಮೃತಪಟ್ಟ ಹಿನ್ನೆಲೆ ಪುತ್ರಿ ಕಣ್ಣೀರು ಹಾಕಿದ್ದಾಳೆ.
ಕ್ರಿಸ್‌ಮಸ್ ರಜೆ ಹಿನ್ನೆಲೆಯಲ್ಲಿ ಮೈಸೂರಿನಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚಾಗಿದೆ. ವ್ಯಾಪಾರ ಕೂಡಾ ಜೋರಾಗಿತ್ತು. ಅದ್ರಂತೆ ಗುರುವಾರ ರಾತ್ರಿ 8.30 ರ ಹೊತ್ತಲ್ಲಿ ಉತ್ತರ ಪ್ರದೇಶ ಮೂಲದ ಸಲೀಂ, ಅರಮನೆಯ ಜಯಮಾರ್ತಾಂಡ ದ್ವಾರದ ಬಳಿ ಹೀಲಿಯಂ ಬಲೂನ್ ಮಾರಾಟ ಮಾಡುತ್ತಿದ್ದ. ಬಲೂನ್‌ಗೆ ಗ್ಯಾಸ್ ತುಂಬಿಸುತ್ತಿದ್ದ ವೇಳೆ ಏಕಾಏಕಿ ಸಿಲಿಂಡರ್ ಸ್ಫೋಟವಾಗಿದ್ದು, ಸಲೀಂ ಅಲ್ಲೇ ಪ್ರಾಣ ಬಿಟ್ಟಿದ್ದ. ನಾಲ್ಕೈದು ಜನ ಗಾಯಗೊಂಡು ಆಸ್ಪತ್ರೆ ಸೇರಿದ್ದರು.
ಇದನ್ನೂ ಓದಿ: ಮೈಸೂರು ಪ್ಯಾಲೆಸ್ ಮುಂಭಾಗ ಸ್ಫೋಟ: ಸಾವಿನ ಸಂಖ್ಯೆ 2ಕ್ಕೆ ಏರಿಕೆ, ಪ್ರಕರಣದ ಸುತ್ತ ಅನುಮಾದ ಹುತ್ತ
ಸ್ಫೋಟದ ತೀವ್ರತೆಗೆ ಸಲೀಂ ಸ್ಥಳದಲ್ಲೇ ಪ್ರಾಣ ಬಿಟ್ಟರೆ, ನಂಜನಗೂಡಿನ ಮಂಜುಳ ಇಂದು ಆಸ್ಪತ್ರೆಯಲ್ಲಿ ಉಸಿರು ನಿಲ್ಲಿಸಿದ್ದಾರೆ. ಮೈಸೂರಿನಲ್ಲಿ ಹೂವು ಮಾರಾಟ ಮಾಡುತ್ತಿದ್ದ ಮಂಜುಳ ವ್ಯಾಪಾರ ಮುಗಿಸಿಕೊಂಡು ಬಸ್ ಹತ್ತಲು ಹೋಗುತ್ತಿದ್ದರು. ಹೀಗೆ ಹೋಗುವಾಗಲೇ ಸಿಲಿಂಡ್ ಸ್ಫೋಟಕ್ಕೆ ಬಲಿ ಆಗಿದ್ದಾರೆ.
ಸ್ಫೋಟಕ್ಕೆ ಬಲಿ ಆಗಿರುವ ಸಲೀಂ 15 ದಿನಗಳ ಹಿಂದಷ್ಟೇ ಮೈಸೂರಿಗೆ ಬಂದಿದ್ದ. ಲಷ್ಕರ್ ಮೊಹಲ್ಲಾದ ಷರೀಫ್ ಲಾಡ್ಜ್‌ನಲ್ಲಿ ಉಳಿದುಕೊಂಡಿದ್ದ. ಮೂರು ಜನ ಸ್ನೇಹಿತರು ಜತೆಗೆ ಬಲೂನ್ ಮಾರಾಟ ಮಾಡುತ್ತಿದ್ದರು. ಆದರೆ ಗುರುವಾರ ರಾತ್ರಿ ಸಲೀಂ ಒಬ್ಬನೇ ಬಂದು ಮಾರಾಟ ಮಾಡಿರೋದು ಹತ್ತಾರು ಅನುಮಾನ ಮೂಡಿಸಿದೆ. ಕ್ರಿಸ್‌ಮಸ್ ಹೊತ್ತಲ್ಲೇ ದುರಂತ ಆಗಿರೋದ್ರಿಂದ ಎನ್‌ಐಎ ಕೂಡಾ ಮಾಹಿತಿ ಪಡೆದಿದೆ. ಇನ್ನು ಸಲೀಂ ಜತೆಗಿದ್ದ ಇಬ್ಬರನ್ನ ವಶಕ್ಕೆ ಪಡೆಯಲಾಗಿದ್ದು, ವಿಚಾರಣೆ ನಡೆಸಿದ್ದಾರೆ. ಆಸ್ಪತ್ರೆಗೆ ಸಂಸದ ಯದುವೀರ್, ಸಚಿವ ಮಹಾದೇವಪ್ಪ ಭೇಟಿ ನೀಡಿ ಗಾಯಾಳುಗಳ ಆರೋಗ್ಯ ವಿಚಾರಿಸಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.