ಮೈಸೂರು, ಸೆ.17: ಮಹಿಳಾ ಪಿಎಸ್ಐ ಪುತ್ರನ ದ್ವಿಚಕ್ರ ವಾಹನ ವ್ಹೀಲಿಂಗ್ (Bike Wheeling) ಹುಚ್ಚಾಟಕ್ಕೆ ವೃದ್ಧರೊಬ್ಬರು ಸಾವನ್ನಪ್ಪಿದ ಘಟನೆ ಜಿಲ್ಲೆಯ ನಂಜನಗೂಡು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಹಿಮ್ಮಾವು ಬಳಿ ನಡೆದಿದೆ. ಪ್ರಕರಣ ಸಂಬಂಧ ಆರೋಪಿ ಸೈಯ್ಯದ್ ಐಮಾನ್ನನ್ನು ಪೊಲೀಸರು ತಡರಾತ್ರಿ ಬಂಧಿಸಿದ್ದಾರೆ.
ನಂಬರ್ ಪ್ಲೇಟ್ ಇಲ್ಲದ ಬೈಕ್ನಲ್ಲಿ ವ್ಹೀಲಿಂಗ್ ಮಾಡಿದ್ದ ಸೈಯ್ಯದ್, ಉದಯಗಿರಿ ನಿವಾಸಿ ವೃದ್ಧ ಗುರುಸ್ವಾಮಿ ಅವರಿಗೆ ಡಿಕ್ಕಿ ಹೊಡೆದಿದ್ದನು. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡ ಗುರುಸ್ವಾಮಿ ಅವರನ್ನು ಕುಟುಂಬಸ್ಥರು ಆಸ್ಪತ್ರೆಗೆ ದಾಖಲಿಸಿದ್ದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಘಟನೆ ನಂತರ ಸ್ಥಳದಿಂದ ಪರಾರಿಯಾಗಲು ಯತ್ನಿಸಿದಾಗ ಹಿಡಿದ ಸ್ಥಳೀಯರು ವಿಚಾರಣೆ ನಡೆಸಿದಾ ತಾನು ನಂಜನಗೂಡು ಸಂಚಾರಿ ಪೊಲೀಸ್ ಠಾಣೆ ಪಿಎಸ್ಐ ಯಾಸ್ಮಿನ್ ತಾಜ್ ಅವರ ಪುತ್ರ ಎಂದು ಹೇಳಿದ್ದಾನೆ. ಘಟನೆಯಲ್ಲಿ ಸಣ್ಣಪುಟ್ಟ ಗಾಯಗಳಾಗಿದ್ದರಿಂದ ಸೈಯ್ಯದ್ನನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.
ಇದನ್ನೂ ಓದಿ: ದಕ್ಷಿಣ ಕನ್ನಡ: ಕಾರು, ಬೈಕ್ ನಡುವೆ ಡಿಕ್ಕಿ; ಓರ್ವ ಯುವತಿ ಸಾವು; ಅಪಘಾತ ದೃಶ್ಯ ಸಿಸಿಕ್ಯಾಮರಾದಲ್ಲಿ ಸೆರೆ
ಇತ್ತ ತಂದೆಯನ್ನು ಕಳೆದುಕೊಂಡ ಗುರುಸ್ವಾಮಿ ಪುತ್ರ ಮಹದೇವಸ್ವಾಮಿ ಅವರು ಪೊಲೀಸರಿಗೆ ದೂರು ನೀಡಿದ್ದಾರೆ. ವೀಲ್ಹಿಂಗ್ ಮಾಡಿ ಡಿಕ್ಕಿ ಹೊಡೆದು ನನ್ನ ತಂದೆಯನ್ನ ಸಾಯಿಸಲಾಗಿದೆ. ಅಪಾಯಕಾರಿಯಾಗಿ ಬೈಕ್ ಓಡಿಸಿ ಡಿಕ್ಕಿ ಹೊಡೆದು ಸಾಯಿಸಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖಾ ಭಾಗವಾಗಿ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದಾಗ ಸೈಯ್ಯದ್ ವ್ಹೀಲಿಂಗ್ ಮಾಡಿದ ಬಜಾಜ್ ಪ್ಲಾಟಿನಾ ಬೈಕ್ ಪತ್ತೆಯಾಗಿದೆ. ಕೂಡಲೇ ನಂಬರ್ ಪ್ಲೇಟ್ ಇಲ್ಲದ ಬೈಕ್ ವಶಕ್ಕೆ ಪಡೆದ ನಂಜನಗೂಡು ಠಾಣಾ ಪೊಲೀಸರು, ತಡರಾತ್ರಿ ಸೈಯ್ಯದ್ನನ್ನು ಬಂಧಿಸಿದ್ದಾರೆ.
ಈ ಹಿಂದೆ ಕೂಡ ಸೈಯ್ಯದ್ ಐಮಾನ್ ಅಪಾಯಕಾರಿ ವ್ಹೀಲಿಂಗ್ ಮಾಡಿದ್ದನು. ಈ ಸಂಬಂಧ ಖುದ್ದು ಪೊಲೀಸರು ಆತನನ್ನು ವಶಕ್ಕೆ ಪಡೆದು ದಂಡ ವಿಧಿಸಿ ಕಳುಹಿಸಿದ್ದರು. ಅಷ್ಟೇ ಅಲ್ಲದೆ, ಈತನ ವಿರುದ್ಧ ಕಳ್ಳತನ ಆರೋಪವೂ ಇದೆ.
ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ