ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ 2021 ಹಿನ್ನೆಲೆ ಸಾಂಸ್ಕೃತಿಕ ನಗರಿಯಲ್ಲಿ ಹಬ್ಬದ ಸಂಭ್ರಮ ಮೇಲೈಸಿದೆ. ದಾರಿಯುದ್ದಕ್ಕೂ ದೀಪಾಲಂಕಾರ ಪ್ರವಾಸಿಗರನ್ನು ಸ್ವಾಗತಿಸುತ್ತಿದೆ. ಇನ್ನೇನು ವಿಶ್ವವಿಖ್ಯಾತ ದಸರಾ ಜಂಬೂಸವಾರಿಗೆ ದಿನಗಣನೆ ಶುರುವಾಗಿದ್ದು ಅಕ್ಟೋಬರ್ 15ರಂದು ಅರಮನೆ ಆವರಣದಲ್ಲಿ ಜಂಬೂಸವಾರಿ ಮೆರವಣಿಗೆ ನಡೆಯಲಿದೆ.
ಜಂಬೂಸವಾರಿ ಮೆರವಣಿಗೆಗೆ ಸ್ತಬ್ಧಚಿತ್ರಗಳು ಸಿದ್ದವಾಗುತ್ತಿವೆ. ಪ್ರತಿ ಬಾರಿ 45ಕ್ಕೂ ಹೆಚ್ಚು ಸ್ತಬ್ಧಚಿತ್ರಗಳು ಭಾಗಿಯಾಗುತ್ತಿದ್ದವು ಆದ್ರೆ ಈ ಬಾರಿ 6 ಸ್ತಬ್ಧಚಿತ್ರಗಳಿಗೆ ಅವಕಾಶ ನೀಡಲಾಗಿದ್ದು ಕೊರೊನಾ ಹಿನ್ನೆಲೆಯಲ್ಲಿ ಸ್ತಬ್ಧಚಿತ್ರಗಳಿಗೆ ಕೊಕ್ ನೀಡಲಾಗಿದೆ. ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಿಂದ ಮೈಸೂರಿನ ಸೂರಿನ ಬಗ್ಗೆ ಮಾಹಿತಿಯ ಸ್ತಬ್ಧಚಿತ್ರ, ಪರಿಸರ ಇಲಾಖೆಯಿಂದ ಬೇಡ ನನಗೆ ಕೊಡಲಿ ನೆರಳನೇಕೆ ಕೊಡಲಿ ಸ್ತಬ್ಧಚಿತ್ರ, ಕೃಷಿ ಮತ್ತು ತೋಟಗಾರಿಕೆ ಇಲಾಖೆಯಿಂದ ಸಮಗ್ರ ಕೃಷಿ, ಆರೋಗ್ಯ ಇಲಾಖೆಯಿಂದ ಕೊರೊನಾ ಮುಕ್ತ ಕರ್ನಾಟಕ ಹಾಗೂ ಮೈಸೂರು ದಸರಾ ಉಪಸಮಿತಿಯಿಂದ ಆಜಾದ್ ಕಾ ಅಮೃತ ಮಹೋತ್ಸವ ಸ್ತಬ್ಧಚಿತ್ರಗಳ ಮೆರವಣಿಗೆ ನಡೆಯಲಿದೆ. ಅರಮನೆ ವಾದ್ಯಗೋಷ್ಠಿಯ ಸ್ತಬ್ಧಚಿತ್ರಗಳ ತಯಾರಿಕೆಗೆ ಸಿದ್ದತೆ ನಡೆಯುತ್ತಿದೆ.
ವಿಶೇಷ ಸಂಗೀತ ಕಾರ್ಯಕ್ರಮ
ಇನ್ನು ಅರಮನೆ ಆವರಣದಲ್ಲಿ ವಿಶೇಷ ಸಂಗೀತ ಕಾರ್ಯಕ್ರಮ ನಡೆಯುತ್ತಿದೆ. ಸೂರ್ಯೋದಯದಿಂದ ಸೂರ್ಯಾಸ್ತದವರೆಗೆ ಅಂದರೆ ಬೆಳಗ್ಗೆ 6.30ರಿಂದ ಸಂಜೆ 6.30ರವರೆಗೆ ನಿರಂತರ ಸಂಗೀತ ಕಾರ್ಯಕ್ರಮ ನಡೆಯಲಿದ್ದು ರಾತ್ರಿಯೂ ಅರಮನೆ ಆವರಣದಲ್ಲಿ ಸಂಗೀತದ ರಸದೌತಣ ಇರಲಿದೆ. ಅಮೋಘ ವರ್ಷ ಡ್ರಮ್ಸ್, ಶಾಂತಲ ವಟ್ಟಂ ಮತ್ತು ತಂಡ, ಶಮಿತಾ ಮಲ್ಲಾಡ್ ಮತ್ತು ತಂಡದಿಂದ ಕಾರ್ಯಕ್ರಮಗಳು ನಡೆಯುತ್ತಿವೆ.
ಇದನ್ನೂ ಓದಿ: KSRTC Dasara Tour: ದಸರಾದಲ್ಲಿ ಮೈಸೂರು ಸುತ್ತಬೇಕಾ?; ಕೆಎಸ್ಆರ್ಟಿಸಿಯಿಂದ ಪ್ರವಾಸದ ಪ್ಯಾಕೇಜ್ ಘೋಷಣೆ