ಮೈಸೂರು: ನಾಡ ಅಧಿದೇವತೆ ತಾಯಿ ಚಾಮುಂಡೇಶ್ವರಿಯನ್ನ ಚಿನ್ನದ ಅಂಬಾರಿಯಲ್ಲಿ ಹೊತ್ತು ರಾಜಬೀದಿಗಳಲ್ಲಿ ಗಾಂಭೀರ್ಯವಾಗಿ ಸಾಗುತ್ತಿದ್ದ ಬಲರಾಮ (67) ಇದೀಗ ಸಾವನ್ನಪ್ಪಿದ್ದಾನೆ. ಬರೋಬ್ಬರಿ 14 ಬಾರಿ ಅಂಬಾರಿಯನ್ನು ಹೊತ್ತಿದ್ದ ಸೌಮ್ಯ ಸ್ವಭಾವದ ಬಲರಾಮನ (Balarama) ಬಾಯಕಲ್ಲಿ ಹುಣ್ಣಾಗಿತ್ತು. ಕಳೆದ ಹತ್ತು ದಿನಗಳಿಂದ ನೋವಿನಿಂದ ಬಳಲುತ್ತಿದ್ದ ಬಲರಾಮನಿಗೆ ಆಹಾರ ಸೇವನೆ ಕಷ್ಟವಾಗುತ್ತಿತ್ತು. ಇಂದು ಅಸ್ವಸ್ಥಗೊಂಡಿದ್ದನು. ಕೂಡಲೇ ನಾಗರಹೊಳೆ ಉದ್ಯಾನದ ಹುಣಸೂರು ರೇಂಜ್‌ನ ಭೀಮನಕಟ್ಟೆ ಆನೆ ಶಿಬಿರದಲ್ಲಿ ಚಿಕಿತ್ಸೆ ನೀಡಲಾಯಿತಾದರೂ ಚಿಕಿತ್ಸೆ ಫಲಿಸದೆ ಕೊನೆಯುಸಿರೆಳೆದಿದ್ದಾನೆ.
ವಿಶ್ವ ಪ್ರಸಿದ್ಧ ಮೈಸೂರು ದಸರಾ ಮೆರವಣಿಗೆಯ ಪ್ರಮುಖ ಆನೆಗಳಲ್ಲಿ ಬಲರಾಮನೂ ಒಬ್ಬನಾಗಿದ್ದ. ಬಲರಾಮನನ್ನು 1987 ರಲ್ಲಿ ಕರ್ನಾಟಕದ ಕೊಡಗು ಪ್ರದೇಶದ ಸೋಮವಾರಪೇಟೆ ಬಳಿಯ ಕಟ್ಟೆಪುರ ಅರಣ್ಯದಲ್ಲಿ ಸೆರೆಹಿಡಿಯಲಾಗಿತ್ತು. ನಂತರ ಈತನನ್ನು ತರಬೇತಿ ಮೂಲಕ ಪಳಗಿಸಲಾಗಿತ್ತು. ದ್ರೋಣನ ನಂತರ ಅಂಬಾರಿಯನ್ನು ಹೊರಲು ಬಲರಾಮ ಆಯ್ಕೆಯಾದನು. ಆದರೆ ಅಂಬಾರಿ ಹೊರಲು ಬಲರಾಮ ಮೊದಲ ಆಯ್ಕೆಯಾಗಿರಲಿಲ್ಲ. 5,600 ಕಿಲೋ ತೂಕ ಇರುವ ಆನೆ ಅರ್ಜುನ, ಆಕಸ್ಮಿಕವಾಗಿ ಮಾವುತನನ್ನು ಕೊಂದಿದ್ದಕ್ಕಾಗಿ ಅಂಬಾರಿ ಹೊರುವ ಅವಕಾಶದಿಂದ ವಂಚಿತನಾಗಿದ್ದನು. ಹೀಗಾಗಿ ಬಲರಾಮನನ್ನು ಆಯ್ಕೆ ಮಾಡಲಾಯಿತು. ಅದರಂತೆ 1999 ಮತ್ತು 2011 ರ ನಡುವೆ ಒಟ್ಟು 14 ಬಾರಿ ಚಾಮುಂಡೇಶ್ವರಿಯನ್ನು ಚಿನ್ನದ ಅಂಬಾರಿಯಲ್ಲಿ ಹೊತ್ತು ಸಾಗಿದ್ದನು.
ಬಲರಾಮನನ್ನು ಬದಲಿಸುವ ಮುನ್ನವೇ ಆತ ತನ್ನ ತೂಕವನ್ನು ಕಳೆದುಕೊಂಡಿದ್ದನು. ಹೀಗಾಗಿ ಆತನಿಗೆ ವಿಶ್ರಾಂತಿಯನ್ನು ನೀಡಲಾಗಿತ್ತು. ಪರಿಣಾಮ ಬಲರಾಮನ ನಂತರ ಅಂಬಾರಿ ಹೊರಲು ಅರ್ಜುನ ಆಯ್ಕೆಯಾದನು. ಬಲರಾಮ ಪ್ರಮುಖ ಆನೆಯಾಗಿ ಮೆರವಣಿಗೆಯನ್ನು ಮುನ್ನಡೆಸುತ್ತಿದ್ದನು.
ಮಾವುತನ ಸೂಚನೆಯನ್ನು ಚಾಚು ತಪ್ಪದೇ ಪಾಲಿಸುತ್ತಿದ್ದ ಬಲರಾಮನಿಗೆ ಮಾವುತನೇ ಎಲ್ಲವೂ ಆಗಿದ್ದನು. ಮಾವುತನನ್ನು ಹೊರತುಪಡಿಸಿ ಬೇರೆ ಯಾರೇ ಆಹಾರ ನೀಡಿದರೂ ಸೇವಿಸುತ್ತಿರಲಿಲ್ಲ. ತನ್ನ ಭವ್ಯವಾದ ನೋಟ ಮತ್ತು ಅವನ ಶಾಂತ ಸ್ವಭಾವದಿಂದಲೇ ಜನರ ಹೃದಯವನ್ನು ಗೆದ್ದಿದ್ದನು. ಈತ 2.7 ಮೀಟರ್ ಎತ್ತರ, ಸುಮಾರು 4590 ಕಿಲೋಗ್ರಾಂಗಳಷ್ಟು ಭಾರ ಇದ್ದನು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:22 pm, Sun, 7 May 23