ಮೈಸೂರು ‘ಯುವ ದಸರಾ’ ವೈಭವದ ಪಟ್ಟಿ ಅಂತಿಮ: ಯಾವೆಲ್ಲ ಕಾರ್ಯಕ್ರಮಗಳಿದೆ ಗೊತ್ತಾ? ಡೇಟ್ ವೈಸ್ ಕಂಪ್ಲೀಟ್ ಶೆಡ್ಯೂಲ್ ಇಲ್ಲಿದೆ
ಮೈಸೂರು ದಸರಾ ಗಜಪಡೆಯ ಮಾವುತರು ಮತ್ತು ಕಾವಾಡಿಗಳ ಉಪಹಾರ ಕೂಟಕ್ಕೆ ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ ತಡವಾಗಿ ಬಂದಿದ್ದರಿಂದ ಕಾರ್ಯಕ್ರಮ ವಿಳಂಬವಾಯಿತು. ಇದರಿಂದ ಆಕ್ರೋಶಗೊಂಡ ಶಾಸಕ ತನ್ವೀರ್ ಸೇಠ್, ನಾಡಹಬ್ಬಕ್ಕೆ ಶ್ರಮಿಸುವವರಿಗೆ ಹೀಗೆ ಕಾಯಿಸುವುದು ಸರಿಯಲ್ಲ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿ ಸ್ಥಳದಿಂದ ನಿರ್ಗಮಿಸಿದರು. ಈ ಘಟನೆ ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಯಿತು.

ಮೈಸೂರು ಸೆ. 28: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ – 2026ರ ಕಳೆ ಹೆಚ್ಚಿಸಲು ಸಾಂಸ್ಕೃತಿಕ ನಗರ ಮೈಸೂರು ಭರದಿಂದ ಸಜ್ಜಾಗುತ್ತಿದೆ. ಇದರ ಭಾಗವಾಗಿ ಯುವಜನರ ನೆಚ್ಚಿನ ‘ಯುವ ದಸರಾ’ ಕಾರ್ಯಕ್ರಮಗಳ ಅಧಿಕೃತ ಪಟ್ಟಿಯನ್ನು ಜಿಲ್ಲಾಡಳಿತ ಅಂತಿಮಗೊಳಿಸಿದೆ. ಇನ್ನೊಂದೆಡೆ, ದಸರಾ ಗಜಪಡೆಯ ಮಾವುತರು ಮತ್ತು ಕಾವಾಡಿಗಳಿಗೆ ಏರ್ಪಡಿಸಿದ್ದ ಉಪಾಹಾರ ಕೂಟಕ್ಕೆ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ ತಡವಾಗಿ ಬಂದ ಹಿನ್ನೆಲೆಯಲ್ಲಿ ಶಾಸಕ ತನ್ವೀರ್ ಸೇಠ್ ತೀವ್ರ ಆಕ್ರೋಶ ವ್ಯಕ್ತಪಡಿಸಿ ಸ್ಥಳದಿಂದ ತೆರಳಿದ ಘಟನೆ ನಡೆದಿದೆ.
ಈ ಬಾರಿಯ ಯುವ ದಸರಾ ಕಾರ್ಯಕ್ರಮಗಳು ಅಕ್ಟೋಬರ್ 13 ರಿಂದ ಅಕ್ಟೋಬರ್ 17 ರವರೆಗೆ ಒಟ್ಟು 5 ದಿನಗಳ ಕಾಲ ಮೈಸೂರಿನ ರಿಂಗ್ ರಸ್ತೆಯ ಜ್ವಾಲಾಮುಖಿ ತ್ರಿಪುರಸುಂದರಿ ದೇವಸ್ಥಾನದ ಸಮೀಪದ ವಿಶಾಲ ಮೈದಾನದಲ್ಲಿ ವಿಜೃಂಭಣೆಯಿಂದ ನಡೆಯಲಿವೆ. ಪ್ರತಿದಿನ ಸಂಜೆ 5:30 ರಿಂದ ರಾತ್ರಿ 10:30 ರವರೆಗೆ ಪ್ರಖ್ಯಾತ ಕಲಾವಿದರಿಂದ ರಸಸಂಜೆ ಕಾರ್ಯಕ್ರಮಗಳು ಜರುಗಲಿವೆ. ಖ್ಯಾತ ನಟ, ನೃತ್ಯ ನಿರ್ದೇಶಕ ಪ್ರಭುದೇವ ಅವರು ಅಕ್ಟೋಬರ್ 13ರಂದು ಯುವ ದಸರಾಗೆ ಅಧಿಕೃತ ಚಾಲನೆ ನೀಡಲಿದ್ದಾರೆ.
5 ದಿನಗಳ ಯುವ ದಸರಾ ಕಾರ್ಯಕ್ರಮಗಳ ಪಟ್ಟಿ:
ಅಕ್ಟೋಬರ್ 13 (ಉದ್ಘಾಟನಾ ದಿನ): ಬಿ. ಅಜನೀಶ್ ಲೋಕನಾಥ್ ತಂಡದಿಂದ ಸಂಗೀತ ರಸಸಂಜೆ. ಆರ್.ಜೆ. ಆಂಡಿ , ನಕಾಶ್ ಅಜೀಜ್, ವಾಸುಕಿ ವೈಭವ್, ಸಾಯಿ ವಿಶ್ಲೇಶ್, ಅನನ್ಯಾ ಭಟ್, ಮಂಗ್ಲಿ, ಜಸ್ಕರನ್ ಸಿಂಗ್ ಹಾಗೂ ಐಶ್ವರ್ಯ ರಂಗರಾಜನ್ ಅವರಿಂದ ಧಮಾಕ.
ಅಕ್ಟೋಬರ್ 14: ಭಾರತದ ಹೆಸರಾಂತ ಸಂಗೀತ ನಿರ್ದೇಶಕರು ಹಾಗೂ ಗಾಯಕರಾದ ಶಂಕರ್-ಎಹ್ಸಾನ್-ಲಾಯ್ ತಂಡದಿಂದ ಹೈ-ವೋಲ್ಟೇಜ್ ಮ್ಯೂಸಿಕಲ್ ನೈಟ್.
ಅಕ್ಟೋಬರ್ 15: ಬಹುಭಾಷಾ ಪ್ರಸಿದ್ಧ ಗಾಯಕ ಸಿದ್ ಶ್ರೀರಾಮ್ ಅವರಿಂದ ರಸಸಂಜೆ.
ಅಕ್ಟೋಬರ್ 16 (ಸ್ಯಾಂಡಲ್‌ವುಡ್ ನೈಟ್ಸ್): ಸ್ಯಾಂಡಲ್‌ವುಡ್ ಹಬ್ಬ! ಕರುನಾಡ ಚಕ್ರವರ್ತಿ ಡಾ. ಶಿವರಾಜ್‌ಕುಮಾರ್, ನಟಿ ರಚಿತಾ ರಾಮ್, ಗಾಯಕರಾದ ವಿಜಯ್ ಪ್ರಕಾಶ್, ರಾಜೇಶ್ ಕೃಷ್ಣನ್, ಚಂದನ್ ಶೆಟ್ಟಿ, ಆಲ್ ಓಕೆ ಹಾಗೂ ಅನುರಾಧಾ ಭಟ್ ಅವರಿಂದ ಭರ್ಜರಿ ಪ್ರದರ್ಶನ.
ಅಕ್ಟೋಬರ್ 17 (ಸಮಾರೋಪ): ಪ್ರಖ್ಯಾತ ಅಂತಾರಾಷ್ಟ್ರೀಯ ಗಾಯಕಿ ಜಾಸ್ಮಿನ್ ಸ್ಯಾಂಡ್ಲಾಸ್ (Jasmine Sandlas) ಅವರಿಂದ ರಸಸಂಜೆ.
ಇದನ್ನೂ ಓದಿ: ಮೈಸೂರು ದಸರಾ 2026: ಕೊಪ್ಪಳದ ಗವಿಮಠದ ಅಭಿನವ ಗವಿಸಿದ್ದೇಶ್ವರರಿಗೂ ಮೊದಲು ದಸರಾ ಉದ್ಘಾಟಿಸಿದ್ದ ಮಠಾಧೀಶರು ಇವರು!
ಡಾ. ಯತೀಂದ್ರ ಸಿದ್ದರಾಮಯ್ಯ ವಿರುದ್ಧ ಆಕ್ರೋಶಗೊಂಡ ಶಾಸಕ ತನ್ವೀರ್ ಸೇಠ್
ಇನ್ನೊಂದೆಡೆ, ಅರಮನೆ ಆವರಣದಲ್ಲಿ ದಸರಾ ಗಜಪಡೆಯ ಮಾವುತರು, ಕಾವಾಡಿಗಳು ಹಾಗೂ ಅವರ ಕುಟುಂಬಸ್ಥರಿಗೆ ಜಿಲ್ಲಾಡಳಿತದ ವತಿಯಿಂದ ಬೆಳಗಿನ ಉಪಾಹಾರ ಕೂಟ ಮತ್ತು ನಿತ್ಯೋಪಯೋಗಿ ಕಿಟ್ ವಿತರಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಬೆಳಿಗ್ಗೆ 9:00 ಗಂಟೆಗೆ ನಿಗದಿಯಾಗಿದ್ದ ಕಾರ್ಯಕ್ರಮಕ್ಕೆ ಮಾವುತರು ಮತ್ತು ಅವರ ಕುಟುಂಬಸ್ಥರು ಆಸಕ್ತಿಯಿಂದ ಬಂದು ಕಾಯುತ್ತಿದ್ದರು. ಆದರೆ ಬೆಳಿಗ್ಗೆ 9:30 ಕಳೆದರೂ ಜಿಲ್ಲಾ ಉಸ್ತುವಾರಿ ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ ಅರಮನೆಗೆ ಆಗಮಿಸಲಿಲ್ಲ. ಸಚಿವರಿಗಾಗಿ ಕಾದು ಕಾದು ಆಕ್ರೋಶಗೊಂಡ ಶಾಸಕ ತನ್ವೀರ್ ಸೇಠ್, ಸ್ಥಳದಲ್ಲೇ ಫೋನ್ ಕರೆ ಮಾಡಿ, “ಬೇರೆ ಕಾರ್ಯಕ್ರಮಗಳಾಗಿದ್ದರೆ ಓಕೆ, ಆದರೆ ಕಾಡಿನಿಂದ ಬಂದು ನಾಡಹಬ್ಬಕ್ಕಾಗಿ ಶ್ರಮಿಸುತ್ತಿರುವ ಮಾವುತರು ಮತ್ತು ಕಾವಾಡಿಗಳನ್ನು ತಿಂಡಿಗಾಗಿ ಹೀಗೆ ಕಾಯಿಸುವುದು ಸರಿಯೇ?” ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿ ಸ್ಥಳದಿಂದ ನಿರ್ಗಮಿಸಿದರು.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:56 am, Mon, 28 September 26




