ಮೈಸೂರಿನಲ್ಲಿ ಬಸ್ ನಿಲ್ದಾಣ ಬಿಟ್ಟು ಕೇವಲ ಗುಂಬಜ್ ತೆಗೆಯುತ್ತೇವೆ, ಯಾರ ಅನುಮತಿಯೂ ಬೇಕಿಲ್ಲ: ಸಂಸದ ಪ್ರತಾಪ್ ಸಿಂಹ

| Updated By: ಆಯೇಷಾ ಬಾನು

Updated on: Nov 15, 2022 | 12:36 PM

ಗುಂಬಜ್ ಕಟ್ಟಿದ್ದು ಪ್ರಶ್ನಿಸದಿದ್ದರೆ ಅರ್ಧ ಚಂದ್ರವನ್ನು ಕಟ್ಟಿ ಮಸೀದಿ ಮಾಡಿ ಬಿಡುತ್ತಿದ್ದರು. ಬಸ್ ಸ್ಟ್ಯಾಂಡ್ ಕಟ್ಟಿದ ಗುತ್ತಿಗೆದಾರ ತನ್ನ ಮನೆ ಮೇಲೆ ಬೇಕಾದರೆ ಗುಂಬಜ್, ಮಿನಾರ್ ಕಟ್ಟಿಕೊಳ್ಳಲಿ.

ಮೈಸೂರಿನಲ್ಲಿ ಬಸ್ ನಿಲ್ದಾಣ ಬಿಟ್ಟು ಕೇವಲ ಗುಂಬಜ್ ತೆಗೆಯುತ್ತೇವೆ, ಯಾರ ಅನುಮತಿಯೂ ಬೇಕಿಲ್ಲ: ಸಂಸದ ಪ್ರತಾಪ್ ಸಿಂಹ
ಟಿಪ್ಪು ನಿಜಕನಸು ಪುಸ್ತಕ ಬಿಡುಗಡೆ ಸಮಾರಂಭದಲ್ಲೇ ಸಂಸದ ಪ್ರತಾಪ್‌ ಸಿಂಹ
Follow us on

ಮೈಸೂರು: ಕಳೆದ ಕೆಲ ದಿನಗಳಿಂದ ಕರ್ನಾಟಕ ರಾಜ್ಯದಲ್ಲಿ ಧರ್ಮ ಸಂಘರ್ಷಗಳು ಹೆಚ್ಚಾಗುತ್ತಿವೆ. ಪುಸ್ತಕ, ಹಬ್ಬಹರಿದಿನಗಳು, ಪ್ರತಿಮೆ, ಶಾಲೆಯ ಬಣ್ಣ ಹೀಗೆ ಎಲ್ಲಾ ವಿಷ್ಯದಲ್ಲೂ ವಿವಾದಗಳು ಹುಟ್ಟಿಕೊಳ್ಳುತ್ತಿವೆ. ಇದರ ನಡುವೆ ಈಗ ಬಿಜೆಪಿ ಶಾಸಕರ ಅನುದಾನದಲ್ಲಿ ನಿರ್ಮಾಣ ಆಗಿರುವ ಬಸ್‌ ಸೆಲ್ಟರ್​ವೊಂದು ಆಕ್ರೋಶಕ್ಕೆ ಕಾರಣವಾಗಿದೆ. ಮೈಸೂರಿನಲ್ಲಿ ಬಸ್​ ನಿಲ್ದಾಣ ಮೇಲಿರುವ ಗುಂಬಜ್​ ತೆರವು ಮಾಡಿ ಇಲ್ಲದಿದ್ದರೆ ನಾವೇ ಅದನ್ನು ನೆಲಸಮ ಮಾಡುವುದಾಗಿ ಬಿಜೆಪಿ ಸಂಸದ ಪ್ರತಾಪ್ ಸಿಂಹ ಗುಡುಗಿದ್ದಾರೆ.

ಮೈಸೂರಿನಲ್ಲಿ ಮಾತನಾಡಿದ ಬಿಜೆಪಿ ಸಂಸದ ಪ್ರತಾಪ್ ಸಿಂಹ ಆಕ್ರೋಶ ಹೊರ ಹಾಕಿದ್ದಾರೆ. ಜೆಎಸ್​ಎಸ್​ ಕಾಲೇಜು ಬಳಿ ಬಸ್​ ಶೆಲ್ಟರ್ ಮೇಲೆ ಗುಂಬಜ್ ನಿರ್ಮಾಣ ಮಾಡಲಾಗಿದೆ. ಬಸ್​ ಶೆಲ್ಟರ್​ ಮೇಲಿನ ಗುಂಬಜ್ ತೆರವಿಗೆ 4 ದಿನ ಗಡುವು ನೀಡಿದ್ದೆ. ಈಗ ಎರಡು ದಿನ ಮುಗಿದಿದೆ, ಇನ್ನೆರಡು ದಿನ ಬಾಕಿ ಇದೆ. ಈ ಎರಡು ದಿನದಲ್ಲಿ ತೆರವು ಮಾಡದೆ ಇದ್ದರೆ ನಾನು ಹೇಳಿದಂತೆ ನಾನೇ ತೆರವು ಮಾಡುತ್ತೇನೆ. ಬಸ್ ನಿಲ್ದಾಣದ ಶೆಲ್ಟರ್ ತೆರವು ಮಾಡದೇ ಕೇವಲ ಗುಂಬಜ್ ಮಾತ್ರ ತೆರವು ಮಾಡುತ್ತೇನೆ. ನಾನು ಹೇಳಿಕೆ ಕೊಡುವ ಮುನ್ನ ಬರೀ ಗುಂಬಜ್ ಇತ್ತು. ನಂತರ ರಾತ್ರೋರಾತ್ರಿ ಅದರ ಮೇಲೆ ಕಳಸ ಹೇಗೆ ಬಂತು? ಮೈಸೂರು ಅರಮನೆ ಮೇಲಿನ ಗೋಪುರಕ್ಕೂ ಮಸೀದಿ ಮೇಲಿನ ಗುಂಬಜ್ ಗೂ ವ್ಯತ್ಯಾಸ ಇಲ್ವಾ?ಅರಮನೆ ಗೋಪುರಕ್ಕೂ ಗುಂಬಜ್ ಗೂ ಹೋಲಿಕೆ ಮಾಡುವ ಮುನ್ನ ವಾಸ್ತುಶಿಲ್ಪ ಓದಿ ಕೊಳ್ಳಿ. ಅರಮನೆ ಗೋಪುರ ಇಂಡೋ-ಸಾರ್ಸೆನಿಕ್ ವಾಸ್ತುಶಿಲ್ಪದ್ದು ಬಸ್ ಸ್ಟ್ಯಾಂಡ್ ಮೇಲೆ ಇವರು ಯಾವ ವಾಸ್ತುಶಿಲ್ಪ ಸೃಷ್ಟಿಸುತ್ತಾರೆ ಹೇಳಿ?

ಗುಂಬಜ್ ಕಟ್ಟಿದ್ದು ಪ್ರಶ್ನಿಸದಿದ್ದರೆ ಅರ್ಧ ಚಂದ್ರವನ್ನು ಕಟ್ಟಿ ಮಸೀದಿ ಮಾಡಿ ಬಿಡುತ್ತಿದ್ದರು. ಬಸ್ ಸ್ಟ್ಯಾಂಡ್ ಕಟ್ಟಿದ ಗುತ್ತಿಗೆದಾರ ತನ್ನ ಮನೆ ಮೇಲೆ ಬೇಕಾದರೆ ಗುಂಬಜ್, ಮಿನಾರ್ ಕಟ್ಟಿಕೊಳ್ಳಲಿ. ಶಾಸಕ ರಾಮದಾಸ್ ಅವರು ಅರಮನೆ ಮಾದರಿಯಲ್ಲಿ 20 ಬಸ್ ಸ್ಟ್ಯಾಂಡ್ ಕಟ್ಟಲಿ. ನಾನು ಗುಂಬಜ್ ಬಗ್ಗೆ ಧ್ವನಿ ಎತ್ತಿದ್ದಕ್ಕೆ ರಾಮದಾಸ್ ಅವರು ಮೌನವಹಿಸಿದ್ದಾರೆ. ಅದರ ಅರ್ಥ ನನ್ನ ಮಾತಿಗೆ ಅವರ ಸಮ್ಮತಿ ಇದೆ ಅಂತ. ಅವರು ಹಿಂದುತ್ವದ ಹಿನ್ನೆಲೆಯಲ್ಲಿ ಬಂದವರು. ಬಹುಶಃ ಗುತ್ತಿಗೆದಾರ ಅವರ ದಾರಿ ತಪ್ಪಿಸಿದರೆ ಎಂದು ಮೈಸೂರಿನಲ್ಲಿ ಸಂಸದ ಪ್ರತಾಪಸಿಂಹ ಕೆಂಡಾಮಂಡಲರಾಗಿದ್ದಾರೆ.

ಇದನ್ನೂ ಓದಿ: ಗುಂಬಜ್ ಮಾದರಿಯಲ್ಲಿ ಬಸ್​ ನಿಲ್ದಾಣ ನಿರ್ಮಿಸಿದರೆ ಒಡೆದು ಹಾಕುತ್ತೇವೆ: ಪ್ರತಾಪ್ ಸಿಂಹ ಎಚ್ಚರಿಕೆ ಬೆನ್ನಲ್ಲೆ ಬದಲಾಯ್ತು ಬಸ್ ನಿಲ್ದಾಣದ ಶೆಲ್ಟರ್

ಗುಂಬಜ್ ತೆರವಿಗೆ ಯಾರ ಅನುಮತಿ ಬೇಕಿಲ್ಲ ಎಂದ ಪ್ರತಾಪ್ ಸಿಂಹ

ಗುಂಬಜ್ ತೆರವು ಶತಃಸಿದ್ಧ. ಗುಂಬಜ್ ತೆರವಿಗೆ ಜಿಲ್ಲಾಡಳಿತದ ಅನುಮತಿ ಬೇಕಿಲ್ಲ. ಬಸ್ ನಿಲ್ದಾಣದ ಶೆಲ್ಟರ್ ನಿರ್ಮಾಣ ಆಗಿರುವುದು ರಾಷ್ಟ್ರೀಯ ಹೆದ್ದಾರಿಯ ಜಾಗದಲ್ಲಿ. ಯಾವ ಅನುಮತಿ ಪಡೆಯದೆ ಬಸ್ ನಿಲ್ದಾಣದ ಶೆಲ್ಟರ್ ನಿರ್ಮಾಣ ಮಾಡಲಾಗಿದೆ. ಸಾರ್ವಜನಿಕರ ಹಣ ನಷ್ಟವಾಗಬಾರದೆಂದು ಬಸ್ ನಿಲ್ದಾಣ ಉಳಿಸಿಕೊಳ್ಳಲಾಗುತ್ತದೆ. ಬಸ್ ನಿಲ್ದಾಣದ ಮೇಲಿನ ಗುಂಬಜ್ ಮಾತ್ರ ತೆರವು ಮಾಡಲಾಗುತ್ತದೆ ಎಂದು ಸಂಸದ ಪ್ರತಾಪಸಿಂಹ ಸ್ಪಷ್ಟನೆ ನೀಡಿದ್ದಾರೆ.

ಇನ್ನು ಕೊಡಗಿನಲ್ಲಿ ಟಿಪ್ಪು ಪ್ರತಿಮೆ ನಿರ್ಮಾಣದ ಬಗ್ಗೆ ಮಾತನಾಡಿದ ಪ್ರತಾಪ್ ಸಿಂಹ, ಮೈಸೂರಿನಲ್ಲಿ ಕೇವಲ ಮಹಾರಾಜರ ಪ್ರತಿಮೆ ಸ್ಥಾಪಿಸಬೇಕು. ಬೇರೆ ಯಾರ ಪ್ರತಿಮೆಗೂ ಅವಕಾಶವಿಲ್ಲ ಎಂದಿದ್ದಾರೆ. ಬೆಂಗಳೂರು ಮಹಾನಗರ ಕೆಂಪೇಗೌಡರ ದೂರದೃಷ್ಟಿಯ ಫಲ. ಮೈಸೂರಿನಲ್ಲಿ ಟಿಪ್ಪುವಿನ ಪ್ರತಿಮೆ ಮಾಡಿದರೆ ಏನು ನೆನಪಾಗುತ್ತೆ. ಕೊಡಗಿನವರ ಹತ್ಯಾಕಾಂಡ ಮಾಡಿದರ ಬಗ್ಗೆ ಹೇಳಬೇಕಾ? ಕನ್ನಡ ಕಗ್ಗೊಲೆ ಮಾಡಿದವನ ಪ್ರತಿಮೆ ಮಾಡುತ್ತೀರಾ?
ಸಿದ್ದರಾಮಯ್ಯ ಟಿಪ್ಪು ಜಯಂತಿ ಮಾಡುವುದು ಒಂದೇ, ಅರಣ್ಯ ಇಲಾಖೆ ವೀರಪ್ಪನ್ ಜಯಂತಿ ಮಾಡುವುದು ಒಂದೇ ಎಂದು ಬಿಜೆಪಿ ಸಂಸದ ಪ್ರತಾಪ್ ಸಿಂಹ ವಾಗ್ದಾಳಿ ನಡೆಸಿದ್ದಾರೆ.

ಸಮಾಜದಲ್ಲಿ ಅಶಾಂತಿ ನಿರ್ಮಾಣ ಮಾಡಲು ಹೊರಟಿದ್ದಾರೆ -ಸಿದ್ದರಾಮಯ್ಯ

ಇನ್ನು ಮೈಸೂರಲ್ಲಿ ಬಸ್​ ನಿಲ್ದಾಣದ ಮೇಲೆ ಗುಂಬಜ್ ನಿರ್ಮಾಣ ವಿಚಾರಕ್ಕೆ ಸಂಬಂಧಿಸಿ ಮಾಜಿ ಸಿಎಂ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ. ಸಮಾಜದಲ್ಲಿ ಅಶಾಂತಿ ನಿರ್ಮಾಣ ಮಾಡಲು ಹೊರಟಿದ್ದಾರೆ. ಒಬ್ಬ ಸಂಸದನಿಗೆ ಸಾಮಾನ್ಯ ಜ್ಞಾನ ಇಲ್ಲ ಅಂದ್ರೆ​ ಏನು ಹೇಳೋದು? ಇತಿಹಾಸವನ್ನು ತಿರುಚಲು ಯಾರೂ ಹೋಗಬಾರದು ಎಂದು ಪ್ರತಾಪ್ ಸಿಂಹ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಘಟನೆ ಹಿನ್ನೆಲೆ

ಮೈಸೂರು ನಂಜನಗೂಡು ರಸ್ತೆಯಲ್ಲಿ ಹೊಸದಾಗಿ ಬಸ್‌ ಸೆಲ್ಟರ್‌ ನಿರ್ಮಾಣ ಮಾಡಲಾಗಿದೆ. ಕೃಷ್ಣರಾಜ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಎಸ್‌.ಎ. ರಾಮ್‌ದಾಸ್‌ ಅವರ ಅನುದಾನದಲ್ಲೇ ಪ್ರಯಾಣಿಕರ ತಂಗುದಾಣ ನಿರ್ಮಾಣವಾಗಿದೆ. ಆದ್ರೆ ಇದೇ ನಿಲ್ದಾಣದ ವಿನ್ಯಾಸ ಈಗ ಆಕ್ರೋಶಕ್ಕೆ ಕಾರಣವಾಗಿದೆ. ನಿಲ್ದಾಣದ ಮೇಲೆ ಗುಮ್ಮಟದ ರೀತಿ ಆಕೃತಿ ಮಾಡಲಾಗಿದ್ದು ಇದು ಇಸ್ಲಾಂ ಶೈಲಿ ಅಂತಾ ಆರೋಪಿಸಲಾಗ್ತಿದೆ. ಅಷ್ಟೇ ಅಲ್ಲ ಟಿಪ್ಪು ನಿಜಕನಸು ಪುಸ್ತಕ ಬಿಡುಗಡೆ ಸಮಾರಂಭದಲ್ಲೇ ಈ ಬಗ್ಗೆ ಮಾತನಾಡಿದ ಮೈಸೂರು ಸಂಸದ ಪ್ರತಾಪ್‌ ಸಿಂಹ, ಮೂರು ದಿನದಲ್ಲಿ ಗುಮ್ಮಟ ತೆರವು ಮಾಡದಿದ್ರೆ, ನಾನೇ ಜೆಸಿಬಿ ತರ್ತೀನಿ ಅಂತಾ ಗುಡುಗಿದ್ದರು.

ಇನ್ನು ತಂಗುದಾಣದ ಎಡ ಬಲದಲ್ಲಿ ಚಿಕ್ಕ ಗುಮ್ಮಟ ಮಧ್ಯ ಒಂದು ದೊಡ್ಡ ಗುಮ್ಮಟ ಇದೆ. ಇಂಥಾ ಆಕಾರ ಇದ್ರೆ ಅದು ಮಸೀದಿ ಅಂತಾ ಪ್ರತಾಪ್‌ ಸಿಂಹ ನೇರವಾಗಿ ಆರೋಪಿಸಿದ್ದಾರೆ. ಇನ್ನು ತೆರವುಗೊಳಿಸಿ ಅಂತಾ ಗುಡುತ್ತಿದ್ದಂತೆ ಗೋಪುರದ ಮೇಲೆ ಈಗ ಕಳಸಗಳು ಪ್ರತಿಷ್ಟಾಪನೆಗೊಂಡಿವೆ. ಇದನ್ನ ಕೆಆರ್‌ಐಡಿಎಲ್‌ ನವರು ಮೈಸೂರಿನ ದಂತಿ ಕನ್‌ಸ್ಟ್ರಕ್ಷನ್‌ನ ಮಹದೇವ್‌ ಅನ್ನೋರಿಗೆ ಗುತ್ತಿಗೆ ನೀಡಿದ್ದು, ಮೂರು ತಿಂಗಳ ಹಿಂದೆಯೇ ನಿರ್ಮಾಣ ಆಗಿದೆ. ಕೃಷ್ಣರಾಜ ಕ್ಷೇತ್ರದ ಹಲವು ಕಡೆ ಇದೇ ರೀತಿಯ ಬಸ್ ಶೆಲ್ಟರ್ ನಿರ್ಮಾಣ ಮಾಡಲಾಗಿದೆ.

Published On - 11:42 am, Tue, 15 November 22