ಮೈಸೂರು ಗುಂಬಜ್ ಗುದ್ದಾಟ: ವಾರದೊಳಗೆ ಬಸ್ ನಿಲ್ದಾಣ ತೆರವುಗೊಳಿಸುವಂತೆ ಪಾಲಿಕೆಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ನೋಟಿಸ್
ಬಸ್ ನಿಲ್ದಾಣದ ಶೆಲ್ಟರ್ ತೆರವುಗೊಳಿಸುವಂತೆ ಮೈಸೂರು ಮಹಾನಗರ ಪಾಲಿಕೆ ಆಯುಕ್ತರಿಗೆ ರಾಷ್ಟ್ರಿಯ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕರು ನೋಟಿಸ್ ನೀಡಿದ್ದಾರೆ
ಮೈಸೂರು: ಮೈಸೂರಿನ ನಂಜನಗೂಡು ರಸ್ತೆಯಲ್ಲಿರುವ ಬಸ್ ಶೆಲ್ಟರ್ ವಿವಾದಕ್ಕೆ ಕಾರಣವಾಗಿದೆ. ಶೆಲ್ಟರ್ ಮೇಲಿರೋ ಗುಮ್ಮಟದ ಆಕೃತಿಯನ್ನು ತೆರವು ಮಾಡಲು ಅಧಿಕಾರಿಗಳಿಗೆ ಬಿಜೆಪಿ ಸಂಸದ ಪ್ರತಾಪ್ ಸಿಂಹ(Pratap Simha,)ಸೂಚನೆ ನೀಡಿದ್ದಾರೆ. ಇದರ ಜೊತೆಗೆ ಈಗ ಮೈಸೂರು ಪಾಲಿಕೆಗೆ(Mysore City Corporation) ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ(National Highways Authority) ನೋಟಿಸ್ ನೀಡಿದೆ. ಮೈಸೂರಿನ JSS ಕಾಲೇಜು ಬಳಿಯ ಬಸ್ ಶೆಲ್ಟರ್ ತೆರವಿಗೆ ಸೂಚಿಸಿದೆ. ಅನಧಿಕೃತವಾಗಿ ಕಟ್ಟಿರುವ ಬಸ್ ನಿಲ್ದಾಣದ ಶೆಲ್ಟರ್ ತೆರವುಗೊಳಿಸುವಂತೆ ಮೈಸೂರು ಮಹಾನಗರ ಪಾಲಿಕೆ ಆಯುಕ್ತರಿಗೆ ರಾಷ್ಟ್ರಿಯ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕರು ನೋಟಿಸ್ ನೀಡಿದ್ದಾರೆ.
ರಾಷ್ಟ್ರೀಯ ಹೆದ್ದಾರಿ ಬಲ ಭಾಗದಲ್ಲಿ ಬಸ್ ಶೆಲ್ಟರ್ ನಿರ್ಮಿಸಲಾಗಿದೆ. ಈ ಹಿಂದೆ ಅನೇಕ ಬಾರಿ ಬಸ್ ಶೆಲ್ಟರ್ ನಿರ್ಮಿಸದಂತೆ ಸೂಚಿಸಲಾಗಿತ್ತು. ಆದರೂ ಅನಧಿಕೃತವಾಗಿ ಬಸ್ ಶೆಲ್ಟರ್ ನಿರ್ಮಾಣ ಮಾಡಿದ್ದಾರೆ. ಸದ್ಯ ಈ ವಿಚಾರ ಕೋಮು ಸಮಸ್ಯೆಯಾಗಿ ಪರಿವರ್ತನೆಗೊಂಡಿದೆ. 1 ವಾರದೊಳಗೆ ವಿವಾದಾತ್ಮಕ ಬಸ್ ನಿಲ್ದಾಣ ತೆರವುಗೊಳಿಸಬೇಕು. ಇಲ್ಲದಿದ್ರೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಕಾಯ್ದೆಯಡಿ 2003ರ ಅನ್ವಯ ಕ್ರಮ ಕೈಗೊಳ್ಳಲಾಗುವುದು ಎಂದು ಮೈಸೂರು ಪಾಲಿಕೆಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ನೋಟಿಸ್ ನೀಡಿದೆ.
ಇದನ್ನೂ ಓದಿ: ಮೈಸೂರಿನಲ್ಲಿ ಬಸ್ ನಿಲ್ದಾಣ ಬಿಟ್ಟು ಕೇವಲ ಗುಂಬಜ್ ತೆಗೆಯುತ್ತೇವೆ, ಯಾರ ಅನುಮತಿಯೂ ಬೇಕಿಲ್ಲ: ಸಂಸದ ಪ್ರತಾಪ್ ಸಿಂಹ
ವಿವಾದಿತ ಬಸ್ ಶೆಲ್ಟರ್ ಮೇಲೆ ನಾಮಫಲಕ ಅಳವಡಿಕೆ
ಇನ್ನು ಮತ್ತೊಂದೆಡೆ ರಾತ್ರೋರಾತ್ರಿ ಬಸ್ ನಿಲ್ದಾಣದಲ್ಲಿ ದಿಢೀರ್ ಬದಲಾವಣೆ ಕಂಡು ಬಂದಿದೆ. ವಿವಾದಿತ ಬಸ್ ಶೆಲ್ಟರ್ ಮೇಲೆ ಜೆಎಸ್ಎಸ್ ಕಾಲೇಜು ಬಸ್ ನಿಲ್ದಾಣ ಎಂದು ನಾಮಫಲಕ ಅಳವಡಿಸಲಾಗಿದೆ. ನಾಮಫಲಕದಲ್ಲಿ ಪ್ರಧಾನಿ ನರೇಂದ್ರ ಮೋದಿ, ಸಿಎಂ ಬೊಮ್ಮಾಯಿ, ಸುತ್ತೂರು ಶಿವರಾತ್ರಿ ಶಿವಯೋಗಿ, ರಾಜೇಂದ್ರ ಸ್ವಾಮೀಜಿ ಫೋಟೋ ಸೇರಿದಂತೆ ಗಣ್ಯರ ಫೋಟೋ ಹಾಕಿ ಬಸ್ ಶೆಲ್ಟರ್ನಲ್ಲಿ ನಾಮಫಲಕ ಅಳವಡಿಸಲಾಗಿದೆ. ಇದು ಕುತೂಹಲಕ್ಕೆ ಕಾರಣವಾಗಿದೆ. ಸದ್ಯ ಸಿಬ್ಬಂದಿ ಬಸ್ ಶೆಲ್ಟರ್‌ನ ಕಮಾನು ಕೆಲಸ ಮಾಡುತ್ತಿದ್ದಾರೆ. ತೆರವು ನೋಟಿಸ್ ಬಂದ ನಂತರವು ಕೆಲಸ ಮುಂದುವರೆದಿದೆ.
ಗುಂಬಜ್ ತೆರವಿಗೆ ಇನ್ನೆರೆಡು ದಿನ ಬಾಕಿ
ಬಿಜೆಪಿ ಶಾಸಕರ ಅನುದಾನದಲ್ಲೇ ನಿರ್ಮಾಣವಾಗಿರೋ ಬಸ್ ಶೆಲ್ಟರ್ ಈಗಾಗಲೇ ಜನರ ಸೇವೆಗೆ ನಿಂತಿದೆ. ಆದ್ರೆ ಶೆಲ್ಟರ್ ಮೇಲಿರೋ ಗುಮ್ಮಟದ ಆಕೃತಿ ಬಿಜೆಪಿ ಸಂಸದ ಪ್ರತಾಪ್ ಸಿಂಹ ಅವರ ಕಣ್ಣು ಕೆಂಪಾಗಿಸಿದೆ. ಎಡಬಲದಲ್ಲಿ ಸಣ್ಣ ಗುಂಬಜ್ ಕಟ್ಟಿ, ನಡುವೆ ದೊಡ್ಡ ಗುಂಬಜ್ ಕಟ್ಟಿದ್ದಾರೆ. ಇದು ಮಸೀದಿ ಆಕಾರದಲ್ಲಿದ್ದು ಕೂಡ್ಲೇ ಗುಮ್ಮಟವನ್ನ ತೆರವುಗೊಳಿಸಬೇಕು ಅಂತಾ ಅಧಿಕಾರಿಗಳಿಗೆ ವಾರ್ನಿಂಗ್ ನೀಡಿದ್ದಾರೆ. ನಾನು ಗಡುವು ಕೊಟ್ಟು ಎರಡು ದಿನ ಆಯ್ತು. ಇನ್ನೆರಡು ದಿನದಲ್ಲಿ ಶೆಲ್ಟರ್ ಮೇಲಿರೋ ಗುಂಬಜ್ ತೆರವು ಮಾಡದಿದ್ರೆ ನಾನೇ ತೆರವು ಮಾಡ್ತೀನಿ ಅಂತಾ ವಾರ್ನ್ ಮಾಡಿದ್ದಾರೆ.
Published On - 10:12 am, Wed, 16 November 22