ಬ್ರಾಹ್ಮಣರನ್ನು ನಂಬಬೇಡಿ, ದೇಶ ಹಾಳು ಮಾಡಿದ್ದು ವೇದ-ಉಪನಿಷತ್ತುಗಳು: ಸಿದ್ದರಾಮಯ್ಯ ಸಮಕ್ಷಮ ವೈದಿಕ ಸಂಸ್ಕೃತಿ ವಿರುದ್ಧ ಹರಿಹಾಯ್ದ ಮಲ್ಲೇಶ್
ವೇದಿಕೆಯ ಮೇಲಿದ್ದ ಸಿದ್ದರಾಮಯ್ಯ ಈ ಮಾತುಗಳಿಗೆ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ. ನೆರೆದಿದ್ದ ಸಭಿಕರು ಚಪ್ಪಾಳೆ ತಟ್ಟಿ ಹರ್ಷೋದ್ಗಾರ ಮಾಡಿದರು.
ಮೈಸೂರು: ‘ಯಾವ ಕಾರಣಕ್ಕೂ ಬ್ರಾಹ್ಮಣರನ್ನು, ಬ್ರಾಹ್ಮಣಿಕೆಯನ್ನು ನಂಬಬೇಡಿ. ದೇಶ ಹಾಳು ಮಾಡಿದ್ದೇ ವೇದ-ಉಪನಿಷತ್ತುಗಳು. ಬುದ್ಧನ ಕೈಹಿಡಿಯಿರಿ, ನಮಗೆಲ್ಲರಿಗೂ ಬುದ್ಧನಿದ್ದಾನೆ’ ಎಂದು ಸಿದ್ದರಾಮಯ್ಯ ಆಪ್ತ ಮಲ್ಲೇಶ್ ಹೇಳಿದರು. ‘ಸಿದ್ದರಾಮಯ್ಯ@75’ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಅವರು, ‘ಮೀಸಲಾತಿಯ ಗರಿಷ್ಠ ಮಿತಿಯನ್ನು ಶೇ 50ರಿಂದ ಶೇ 60ಕ್ಕೆ ಹೆಚ್ಚಿಸುವಲ್ಲಿಯೂ ಬ್ರಾಹ್ಮಣರ ಕೈವಾಡವಿದೆ. ಮೊದಲಿಗೆ ಬ್ರಾಹ್ಮಣರು, ಲಿಂಗಾಯಿತರು ಮಠಗಳನ್ನು ಮಾಡಿಕೊಂಡರು. ಈಚೆಗೆ 20 ವರ್ಷಗಳಿಂದ ಗೌಡರು ಮಠ ಕಟ್ಟಿಕೊಂಡರು. ಈಗ ಎಲ್ಲ ಜಾತಿಗಳು ಮಠ ಮಾಡಿಕೊಂಡಿವೆ. ಎಷ್ಟೊಂದು ಸ್ವಾಮಿಗಳು, ಎಷ್ಟೊಂದು ಮಠಗಳು. ಎಲ್ಲರೂ ಮೀಸಲಾತಿಗೆ ಒತ್ತಾಯಿಸುತ್ತಿದ್ದಾರೆ’ ಎಂದು ಆಕ್ಷೇಪಿಸಿದರು.
ವೇದಿಕೆಯ ಮೇಲಿದ್ದ ಸಿದ್ದರಾಮಯ್ಯ ಈ ಮಾತುಗಳಿಗೆ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ. ನೆರೆದಿದ್ದ ಸಭಿಕರು ಚಪ್ಪಾಳೆ ತಟ್ಟಿ ಹರ್ಷೋದ್ಗಾರ ಮಾಡಿದರು. ‘ಸಿದ್ದರಾಮಯ್ಯ ಅಧಿಕಾರಕ್ಕೆ ಬರುವುದರಲ್ಲಿ ಯಾವುದೇ ಸಂದೇಹವಿಲ್ಲ. ಆದರೆ ಅವರು ಅಧಿಕಾರಕ್ಕೆ ಬಂದ ತಕ್ಷಣ ಎಲ್ಲ ಸಮಸ್ಯೆ ಹೋಗುವುದಿಲ್ಲ. ಅವರ ಮೇಲೆ ಹೊಣೆ ವರ್ಗಾಯಿಸಿ, ನಾವು ಸುಮ್ಮನಿರಲು ಆಗುವುದಿಲ್ಲ’ ಎಂದು ಮಲ್ಲೇಶ್ ಹೇಳಿದರು. ದಿಕ್ಕೇ ಇಲ್ಲದ ಸಮಾಜವನ್ನು ಇಂದು ನಾವು ಕಟ್ಟುತ್ತಿದ್ದೇವೆ. ಪ್ರಧಾನಮಂತ್ರಿ ಎಂದರೆ ಈ ದೇಶಕ್ಕೆ ಪ್ರಮುಖರು. ಅವರು ನನಗೂ-ನಿಮಗೂ ಎಲ್ಲರಿಗೂ ಪ್ರಧಾನಿಯೇ. ಆದರೆ ಇಂದಿನವರು ಕೇವಲ ಆರ್ಎಸ್ಎಸ್ ಮತ್ತು ಬಿಜೆಪಿಯವರಿಗೆ ಮಾತ್ರವೇ ಪ್ರಧಾನಿಯಾಗಿದ್ದಾರೆ. ಆದರೆ ನಮ್ಮ ಪ್ರತಿಕ್ರಿಯೆ ಏನು? ಯುವಕರು ಏನು ಮಾಡುತ್ತಿದ್ದಾರೆ? ಇಷ್ಟೊಂದು ಅನ್ಯಾಯ ಆಗಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.
ನಂಜನಗೂಡಿನಲ್ಲಿ ನನ್ನ ಸಂಬಂಧಿಕರ ಜಮೀನು ಮೂರುವರೆ ಎಕರೆ ಜಮೀನಿನ ವ್ಯಾಜ್ಯ ಸುಮಾರು 40 ವರ್ಷ ನ್ಯಾಯಾಲಯದಲ್ಲಿತ್ತು. ನಂತರ ತೀರ್ಮಾನ ಇವರಂತೆ ಆಯಿತು. ಖಾತೆ ಮಾಡಿಸಲು ಹೋದರೆ ತಹಶೀಲ್ದಾರ್ ₹ 10 ಲಕ್ಷ ಲಂಚ ಕೇಳಿದರು. ಲಂಚ ಎನ್ನುವುದು ಸಿದ್ದರಾಮಯ್ಯನ ಕಾಲದಲ್ಲೂ ಇತ್ತು. ಆದರೆ ಈಗ ಯಾವ ಮುಲಾಜು, ಹೆದರಿಕೆಯೂ ಇಲ್ಲದೆ ಕೇಳ್ತಾರೆ. ಇವರನ್ನು ಎದುರಿಸುವುದು ಹೇಗೆ? ಈ ನಾಡಿನಲ್ಲಿ ಯುವಜನರಿಗೆ ಏನು ಭವಿಷ್ಯವಿದೆ ಎಂದು ಕೇಳಿದರು.
ನಿಮ್ಮ ಕಣ್ಣೆದುರು ಇಷ್ಟೊಂದು ಅತ್ಯಾಚಾರ ಆಗುತ್ತಿರುವಾಗ ಯಾಕೆ ಸುಮ್ಮನಿದ್ದೀರಿ? ಚಿತ್ರದುರ್ಗದ ಮುರುಘಾ ಮಠ ವಿದ್ಯಮಾನಕ್ಕೆ ನಾವ್ಯಾರೂ ಪ್ರತಿಕ್ರಿಯಿಸುತ್ತಲೇ ಇಲ್ಲ. ಎಂಥ ಅನ್ಯಾಯ, ಅಧರ್ಮ, ಅತ್ಯಾಚಾರ ಅದು. ನಾವೆಲ್ಲರೂ ತಲೆತಗ್ಗಿಸಬೇಕು. ಮುರುಘಾ ಮಠದ ಸ್ವಾಮೀಜಿ ಇಷ್ಟೊತ್ತಿಗೆ ಎಲ್ಲಿಗೋ ಹೋಗಬೇಕಿತ್ತು. ಆದರೆ ನಾವು ನಿರ್ವೀರ್ಯರಾಗಿ ಸುಮ್ಮನಿದ್ದೇವೆ. ಸುದ್ದಿ ಮಾತ್ರ ಚಪ್ಪರಿಸುತ್ತೇವೆ ಎಂದು ಬೇಸರ ವ್ಯಕ್ತಪಡಿಸಿದರು.
ಮುಂದಿನ ಸಿಎಂ ಸಿದ್ದರಾಮಯ್ಯ: ರವಿವರ್ಮ ಕುಮಾರ್
ಕಾರ್ಯಕ್ರಮದಲ್ಲಿ ಮಾತನಾಡಿದ ಹಲವರು ಸಿದ್ದರಾಮಯ್ಯ ಮುಂದಿನ ಮುಖ್ಯಮಂತ್ರಿ ಆಗಬೇಕು ಎಂದು ಬಹಿರಂಗ ಹೇಳಿಕೆ ನೀಡಿದರು. ನ್ಯಾಯವಾದಿ ಪ್ರೊ ರವಿವರ್ಮ ಕುಮಾರ್ ತಮ್ಮ ಭಾಷಣದಲ್ಲಿ, ‘ನೀವು ಮುಂದೆ ಮುಖ್ಯಮಂತ್ರಿ ಆಗಬೇಕು. ಈ ನಿಟ್ಟಿನಲ್ಲಿ ನಿಮ್ಮ ಪಕ್ಷ ಸ್ಪಷ್ಟವಾದ ನಿಲುವು ತೆಗೆದುಕೊಳ್ಳುವುದು ಅವಶ್ಯವಾಗಿದೆ. ನಿಮ್ಮ ಪಕ್ಷದಲ್ಲಿ ಈ ಬಗ್ಗೆ ಚರ್ಚೆ ಶುರು ಮಾಡಿ. ನಿಮಗಿರುವ ಸೈದ್ಧಾಂತಿಕ ಹಿನ್ನೆಲೆ ಕಾಂಗ್ರೆಸ್‌ನಲ್ಲಿ ಯಾರಿಗೂ ಇಲ್ಲ. ಅಧಿಕಾರಕ್ಕಾಗಿ ಅಧಿಕಾರಕ್ಕೆ ಬಂದವರು ಕಾಂಗ್ರೆಸ್‌ನಲ್ಲಿ ಇದ್ದಾರೆ. ಹೋರಾಟದ ಮೂಲಕ ಅಧಿಕಾರಕ್ಕೆ ಬಂದವರು ನೀವೊಬ್ಬರೇ’ ಎಂದು ಹೇಳಿದರು.
Published On - 12:41 pm, Wed, 16 November 22