Karnataka Assembly Election 2023: ಟಿಕೆಟ್ಗಾಗಿ ಖುದ್ದು ಅರ್ಜಿ ಸಲ್ಲಿಸಿದ ಡಿಕೆ ಶಿವಕುಮಾರ್
ಕರ್ನಾಟಕ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಲು ಕಾಂಗ್ರೆಸ್ ಟಿಕೆಟ್ಗಾಗಿ ಖುದ್ದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅರ್ಜಿ ಸಲ್ಲಿಸಿದ್ದಾರೆ.
ಬೆಂಗಳೂರು: 2023ರಲ್ಲಿ ನಡೆಯಲಿರುವ ಕರ್ನಾಟಕ ವಿಧಾನಸಭೆ ಚುನಾವಣೆಗೆ((Karnataka Assembly Election 2023)) ಕಾಂಗ್ರೆಸ್ ಟಿಕೆಟ್ಗಾಗಿ ಖುದ್ದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ (DK Shivakumar) ಅರ್ಜಿ ಸಲ್ಲಿಸಿದ್ದಾರೆ. ಇಂದು(ನವೆಂಬರ್ 15) ರಾಮನಗರ ಜಿಲ್ಲೆ ಕನಕಪುರ ಕ್ಷೇತ್ರದ ಟಿಕೆಟ್ಗಾಗಿ ಡಿಕೆ ಶಿವಕುಮಾರ್ ಅರ್ಜಿ ಹಾಕಿದರು. ಡಿಕೆಶಿ ಖುದ್ದು ಅರ್ಜಿ ಸಲ್ಲಿಸುವ ಮೂಲಕ ಇತರೆ ನಾಯಕರಿಗೆ ಪರೋಕ್ಷವಾಗಿ ಸಂದೇಶ ರವಾನಿಸಿದ್ದಾರೆ.
ಕಾಂಗ್ರೆಸ್ ಟಿಕೆಟ್ಗಾಗಿ ಅರ್ಜಿ ಸಲ್ಲಿಸಿದ ನಟಿ ಭಾವನಾ, ಹಾಲಿ ಶಾಸಕರ ಕ್ಷೇತ್ರಕ್ಕೆ ನಲಪಾಡ್ ಅರ್ಜಿ
ಕಾಂಗ್ರೆಸ್ ಟಿಕೆಟ್ಗಾಗಿ ಖುದ್ದು ಅಧ್ಯಕ್ಷರೇ ಅರ್ಜಿ ಸಲ್ಲಿಸಿದ್ದಾರೆ ಎನ್ನುವ ಸಂದೇಶ ನೀಡಿದ್ದಾರೆ. ಈ ಮೂಲಕ ಇತರೆ ಮೇಲ್ಪಂಕ್ತಿ ನಾಯಕರಿಗೂ ಸಹ ಟಿಕೆಟ್ಗಾಗಿ ಅರ್ಜಿ ಹಾಕಲೇಬೇಕೆಂದ ಮೆಸೇಜ್ ನೀಡಿದ್ದಾರೆ. ಕ್ಷೇತ್ರದ ಟಿಕೆಟ್ಗಾಗಿ ಅರ್ಜಿ ಸಲ್ಲಿಸಲು ನವೆಂಬರ್ 21ರ ವರೆಗೆ ಅವಕಾಶ ನೀಡಲಾಗಿದೆ. ಆದ್ರೆ, ಸಿದ್ದರಾಮಯ್ಯನವರು ಮುಂದಿನ ಚುನಾವಣೆಯಲ್ಲಿ ಯಾವ ಕ್ಷೇತ್ರದಿಂದ ಸ್ಪರ್ಧೆ ಮಾಡುತ್ತಾರೆ ಎನ್ನುವುದು ಇನ್ನೂ ಅಧಿಕೃತವಾಗಿಲ್ಲ. ಇದೀಗ ಡಿಕೆಶಿ ಅರ್ಜಿ ಹಾಕುವ ಮೂಲಕ ಕ್ಷೇತ್ರ ಆಯ್ಕೆ ವಿಚಾರವಾಗಿ ಸಿದ್ದರಾಮಯ್ಯ ನಡೆ ಬಹಿರಂಗಗೊಳಿಸಲು ತಂತ್ರ ರೂಪಿಸಿದ್ದಾರೆ ಎನ್ನಲಾಗಿದೆ.
ನನ್ನ ಕ್ಷೇತ್ರ ಕ್ಲಿಯರ್ ಇದೆ, ನೀವೆಲ್ಲಿಂದ ಸ್ಪರ್ಧಿಸುತ್ತೀರಿ ಎಂಬಂತೆ CLP ನಾಯಕ ಸಿದ್ದರಾಮಯ್ಯಗೆ KPCC ಅಧ್ಯಕ್ಷ ಡಿಕೆಶಿ ಸವಾಲು ಹಾಕಿದಂತಿದೆ. ಡಿಕೆ ಶಿವಕುಮಾರ್ ಟಿಕೆಟ್ಗಾಗಿ ಅರ್ಜಿ ಸಲ್ಲಿಸಿರುವ ರಾಜ್ಯ ಕಾಂಗ್ರೆಸ್ನಲ್ಲಿ ಹಲವು ನಾನಾ ಚರ್ಚೆಗಳಿಗೆ ಗ್ರಾಸವಾಗಿದೆ.
ಈಗಾಗಲೇ ಹಲವು ನಾಯಕರು ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ಆಕಾಂಕ್ಷಿಗಳು ಟಿಕೆಟ್ಗಾಗಿ ಡಿಡಿ ಹಣ ತುಂಬಿ ಅರ್ಜಿ ಸಲ್ಲಿಸಿದ್ದಾರೆ. ಇನ್ನು ಕೆಲ ನಾಯಕರು ಐದು ಸಾವಿರ ರೂಪಾಯಿ ನೀಡಿ ಅರ್ಜಿ ಸ್ವೀಕರಿಸಿದ್ದು, ಇನ್ನೂ ಎರಡು ಲಕ್ಷ ರೂಪಾಯಿ ಡಿಡಿ ತುಂಬಿ ಅರ್ಜಿ ಹಾಕಿಲ್ಲ.
ಅರ್ಜಿ ಅವಧಿ ವಿಸ್ತರಣೆ
ಮುಂಬರುವ ಕರ್ನಾಟಕ ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್ ಟಿಕೆಟ್ಗಾಗಿ ಅರ್ಜಿ ಸಲ್ಲಿಸಲು ಕೊನೆ ದಿನಾಂಕವನ್ನು ವಿಸ್ತರಿಸಲಾಗಿದೆ. ಈ ಮೊದಲು ಅರ್ಜಿ ಸಲ್ಲಿಕೆಗೆ ಇಂದು(ನವೆಂಬರ್ 15) ಕೊನೆ ದಿನವಾಗಿತ್ತು. ಆದ್ರೆ, ಇದೀಗ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ (DK Shivakumar), ಅವರು ನವೆಂಬರ್ 21 ರ ವರೆಗೆ ವಿಸ್ತರಿಸಿದ್ದಾರೆ.
ಠೇವಣಿ ಬಾಂಡ್ ಸಲ್ಲಿಕೆ ಸಾಮಾನ್ಯ ಕಾರ್ಯಕರ್ತರಿಗೆ ತಲೆ ಬಿಸಿ ಉಂಟು ಮಾಡಿದೆ. ಪರಿಶಿಷ್ಟ ಕ್ಷೇತ್ರಗಳ ಟಿಕೆಟ್ ಆಕಾಂಕ್ಷಿಗಳು ಒಂದು ಲಕ್ಷ ರೂ, ಸಾಮಾನ್ಯ ಕ್ಷೇತ್ರದ ಅಭ್ಯರ್ಥಿಗಳು 2 ಲಕ್ಷ ರೂ. ಠೇವಣಿ ಬಾಂಡ್ ನೀಡಬೇಕಿದೆ. ಕೆಲವು ಕ್ಷೇತ್ರಗಳಲ್ಲಿ ಐದಾರು ಮಂದಿ ಅರ್ಜಿ ಸಲ್ಲಿಸಿದ್ದಾರೆ. ಇನ್ನು ಕೆಲವು ಕಡೆ ಹಾಲಿ ಶಾಸಕರಿರುವ ಕ್ಷೇತ್ರಗಳಿಗೂ ಸ್ಥಳೀಯ ನಾಯಕರು ಅರ್ಜಿ ಹಾಕಿರುವುದು ಕುತೂಹಲ ಮೂಡಿಸಿದೆ. ಕೆಲವು ನಾಯಕರು ತಾವು ಅರ್ಜಿ ಸಲ್ಲಿಸಿದ್ದು, ತಮ್ಮ ಕುಟುಂಬದ ಸದಸ್ಯರಿಂದಲೂ ಅರ್ಜಿ ಹಾಕಿಸಿದ್ದಾರೆ. ಇದರಿಂದ ಇದನ್ನು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹೇಗೆ ನಿಭಾಯಿಸುತ್ತಾರೆ ಎನ್ನುವುದನ್ನು ಕಾದುನೋಡಬೇಕಿದೆ.
ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 10:11 pm, Tue, 15 November 22