ಮೈಸೂರು ಅರಮನೆ ಮುಂಭಾಗದ ಸ್ಫೋಟಕ್ಕೆ ಅಸಲಿ ಕಾರಣ ಬಹಿರಂಗ

Mysuru Blast: ಮೈಸೂರು ಅರಮನೆ ಆವರಣದಲ್ಲಿ ಹೀಲಿಯಂ ಸಿಲಿಂಡರ್ ಸ್ಫೋಟಕ್ಕೆ ಕಾರಣ ಏನೆಂಬುದು ಪ್ರಾಥಮಿಕ ತನಿಖೆಯಲ್ಲಿ ಗೊತ್ತಾಗಿದೆ. ಘಟನೆ ಸಂಬಂಧ ಇದೀಗ ಮೈಸೂರು ಪೊಲೀಸರು ಎಫ್​ಐಆರ್ ದಾಖಲಿಸಿ ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ. ಹೀಲಿಯಂ ಸಿಲಿಂಡರ್ ಸ್ಫೋಟಕ್ಕೆ ಅಸಲಿ ಕಾರಣ ಏನು? ಇಲ್ಲಿದೆ ಮಾಹಿತಿ.

ಮೈಸೂರು ಅರಮನೆ ಮುಂಭಾಗದ ಸ್ಫೋಟಕ್ಕೆ ಅಸಲಿ ಕಾರಣ ಬಹಿರಂಗ
ಮೈಸೂರು ಅರಮನೆ ಜಯಮಾರ್ತಾಂಡ ಗೇಟ್ ಬಳಿ ಸ್ಫೋಟ ಸಂಭವಿಸಿದ ಸ್ಥಳ
Edited By:

Updated on: Dec 26, 2025 | 8:14 AM

ಮೈಸೂರು, ಡಿಸೆಂಬರ್ 26: ಮೈಸೂರು ಅರಮನೆ (Mysuru Palace) ಮುಂಭಾಗದಲ್ಲಿ ಹೀಲಿಯಂ ಗ್ಯಾಸ್ ತುಂಬಿದ್ದ ಸಿಲಿಂಡರ್ ಸ್ಪೋಟಗೊಂಡು (Cylinder Blast) ಬಲೂನ್ ವ್ಯಾಪಾರಿ ಸಲೀಂ ಮೃತಪಟ್ಟ ಘಟನೆಯ ಅಸಲಿ ಕಾರಣ ಈಗ ಬಹಿರಂಗವಾಗಿದೆ. ಸಲೀಂ ಸತತವಾಗಿ ಬಲೂನ್‌ಗಳಿಗೆ ಹೀಲಿಯಂ ಗ್ಯಾಸ್ ತುಂಬುತ್ತಿದ್ದ. ಅಲ್ಲದೆ, ಸಿಲಿಂಡರ್ ಅನ್ನು ವೇಗವಾಗಿ ಆನ್–ಆಫ್ ಮಾಡಿದ್ದರಿಂದ ಒಳಭಾಗದಲ್ಲಿ ಹೀಟ್ ಉಂಟಾಗಿ ಒತ್ತಡ ಹೆಚ್ಚಾಗಿತ್ತು. ಇದರ ಪರಿಣಾಮ ಏಕಾಏಕಿ ಸಿಲಿಂಡರ್ ಸ್ಫೋಟಗೊಂಡಿದೆ ಎಂಬುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿರುವುದಾಗಿ ಮೈಸೂರು (Mysuru) ಪೊಲೀಸ್ ಮೂಲಗಳು ತಿಳಿಸಿವೆ.

ವ್ಯಾಪಾರಕ್ಕಾಗಿ ಉತ್ತರ ಪ್ರದೇಶದಿಂದ ಬಂದಿದ್ದ ಸಲೀಂ

ಉತ್ತರ ಪ್ರದೇಶ ಮೂಲದ ಸಲೀಂ ಕಳೆದ ವಾರ ವ್ಯಾಪಾರದ ನಿಮಿತ್ತ ಮೈಸೂರಿಗೆ ಆಗಮಿಸಿದ್ದ. ಒಂದು ವಾರದಿಂದ ಮೈಸೂರು ಅರಮನೆ ಸುತ್ತಮುತ್ತ, ವಿಶೇಷವಾಗಿ ವಸ್ತುಪ್ರದರ್ಶನ ಆವರಣದಲ್ಲಿ ಸೈಕಲ್ ಮೇಲೆ ಹೀಲಿಯಂ ಗ್ಯಾಸ್ ಸಿಲಿಂಡರ್ ಇಟ್ಟುಕೊಂಡು ಬಲೂನ್ ಮಾರಾಟ ಮಾಡುತ್ತಿದ್ದ. ಘಟನೆ ನಡೆದ ದಿನ ರಾತ್ರಿ ಸುಮಾರು 8.30ರ ವೇಳೆಗೆ ವರಾಹ ಗೇಟ್ ಬಳಿ ಬಲೂನ್ ಮಾರಾಟ ಮುಗಿಸಿ, ದೊಡ್ಡಕೆರೆ ಮೈದಾನದ ಎದುರುಗಡೆ ಇರುವ ಜಯಮಾರ್ತಾಂಡ ಗೇಟ್ ಬಳಿ ಬಂದಾಗ ಈ ದುರ್ಘಟನೆ ಸಂಭವಿಸಿದೆ.

ಆ ಸಮಯದಲ್ಲಿ ಸಾರ್ವಜನಿಕರು ಬಲೂನ್ ಖರೀದಿಗೆ ಸೇರಿದ್ದರಿಂದ ಸಲೀಂ ನಿರಂತರವಾಗಿ ಗ್ಯಾಸ್ ತುಂಬುತ್ತಿದ್ದ. ಈ ವೇಳೆ ಸಿಲಿಂಡರ್ ಅನ್ನು ವೇಗವಾಗಿ ಮತ್ತೆ ಮತ್ತೆ ಆನ್–ಆಫ್ ಮಾಡಿದ್ದರಿಂದ ಒಳಭಾಗದಲ್ಲಿ ತಾಪಮಾನ ಹೆಚ್ಚಾಗಿ ಒತ್ತಡ ಉಂಟಾಗಿದೆ. ಇದರಿಂದ ಏಕಾಏಕಿ ಸಿಲಿಂಡರ್ ಸ್ಪೋಟಗೊಂಡು ಸಲೀಂ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಸಲೀಂ ಪಕ್ಕದಲ್ಲೇ ನಿಂತಿದ್ದ ನಾಲ್ವರಿಗೆ ಗಂಭೀರ ಗಾಯಗಳಾಗಿದ್ದು, ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ. ಗಾಯಾಳುಗಳಲ್ಲಿ ಒಬ್ಬರಿಗೆ ಮೈಸೂರಿನ ಜೆ.ಎಸ್.ಎಸ್ ಆಸ್ಪತ್ರೆಯಲ್ಲಿ, ಮೂವರಿಗೆ ಕೆ.ಆರ್ ಆಸ್ಪತ್ರೆಗೆ ಚಿಕಿತ್ಸೆ ನೀಡಲಾಗುತ್ತಿದೆ.

ತಪ್ಪಿದ ಭಾರೀ ಅನಾಹುತ

ಸ್ಫೋಟದ ವೇಳೆ ಸಲೀಂ ವರಾಹ ಗೇಟ್ ಬಳಿಯಿಂದ, ಜಯಮಾರ್ತಾಂಡ ಗೇಟ್ ಬಳಿ ಬಂದಿದ್ದ. ಘಟನೆ ವರಾಹ ಗೇಟ್ ಬಳಿ ಸ್ಫೋಟ ಸಂಭವಿಸದೇ ಜಯಮಾರ್ತಾಂಡ ಗೇಟ್ ಆಗಿದ್ದರಿಂದ ದೊಡ್ಡ ಅನಾಹುತ ತಪ್ಪಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ವರಾಹ ಗೇಟ್ ಹೆಚ್ಚಿನ ಜನಸಂದಣಿ ಇತ್ತು. ಹೀಗಾಗಿ ಅಲ್ಲಿ ಸ್ಪೋಟವಾಗಿದ್ದರೆ ಹೆಚ್ಚಿನ ಸಾವು-ನೋವು ಸಂಭವಿಸುತ್ತಿತ್ತು ಎನ್ನಲಾಗಿದೆ.

ಇದನ್ನೂ ಓದಿ: ಮೈಸೂರು ಅರಮನೆ ಮುಂಭಾಗ ಭಾರೀ ಸ್ಫೋಟ, ಓರ್ವ ಸಾವು, ಹಲವರಿಗೆ ಗಂಭೀರ ಗಾಯ

ಘಟನೆ ಸಂಬಂಧ ಮೈಸೂರು ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ. ಎಫ​​ಎಸ್​​ಎಲ್ ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಸಿಲಿಂಡರ್ ಸುರಕ್ಷತಾ ಕ್ರಮಗಳ ಉಲ್ಲಂಘನೆ, ವ್ಯಾಪಾರಕ್ಕೆ ಅಗತ್ಯ ಪರವಾನಗಿಗಳಿದ್ದವೆಯೇ ಎಂಬ ಅಂಶಗಳ ಬಗ್ಗೆಯೂ ಪೊಲೀಸರು ತನಿಖೆ ಮಾಡುತ್ತಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ