ಮೈಸೂರು ಅರಮನೆ ಮುಂಭಾಗ ಭಾರೀ ಸ್ಫೋಟ, ಓರ್ವ ಸಾವು, ಹಲವರಿಗೆ ಗಂಭೀರ ಗಾಯ
ಕರ್ನಾಟಕದಲ್ಲಿಂದು ಸಾಲು ಸಾಲು ಅಗ್ನಿ ಅವಘಡ ಸಂಭವಿಸಿವೆ. ಚಿತ್ರದುರ್ಗದ ಹಿರಿಯೂರು ಬಳಿ ಖಾಸಗಿ ಬಸ್ ಹೊತ್ತಿ ಉರಿದು ಒಟ್ಟು ಆರು ಜನರು ಸಾವನ್ನಪ್ಪಿದ್ದಾರೆ. ಇನ್ನು ದಾವಣಗೆರೆಯಲ್ಲಿ ಜಮೀನಿಗೆ ಬಿದ್ದಿದ್ದ ಬೆಂಕಿ ನಂದಿಸಲು ಹೋಗಿ ಓರ್ವ ರೈತ ಸಜೀವ ದಹನವಾಗಿದ್ದಾರೆ. ಯಾದಗಿರಿಯಲ್ಲಿ ಮನೆಗೆ ಬೆಂಕಿ ಕಾಣಿಸಿಕೊಂಡು ಹಣ, ಒಡವೆಗಳು ಸುಟ್ಟು ಭಸ್ಮವಾಗಿವೆ. ಇದೀಗ ಮೈಸೂರು ಅರಮನೆ ಮುಂಭಾಗದಲ್ಲೂ ಸಹ ಅನಾಹುತ ಸಂಭವಿಸಿದ್ದು, ಓರ್ವ ಸಾವನ್ನಪ್ಪಿದ್ದು, ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಮೈಸೂರು, (ಡಿಸೆಂಬರ್ 25): ನೈಟ್ರೋಜನ್ ಗ್ಯಾಸ್ ಸ್ಫೋಟಗೊಂಡು (Nitrogen Gas Blast) ಓರ್ವ ಸಾವನ್ನಪ್ಪಿದ್ದು, ಮೂವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ವಿಶ್ವವಿಖ್ಯಾತ ಮೈಸೂರು ಅರಮನೆ (Mysuru Palace) ಮುಂಭಾಗದಲ್ಲಿ ನಡೆದಿದೆ. ಇಂದು (ಡಿಸೆಂಬರ್ 25) ರಾತ್ರಿ ಪ್ಯಾಲೆಸ್ ಮುಂಭಾಗ ಬಲೂನ್‌ಗೆ ಗ್ಯಾಸ್ ತುಂಬಿಸುವಾಗ ಸ್ಫೋಟವಾಗಿದ್ದು, ಇದರ ತೀವ್ರತೆ ಎಷ್ಟಿತ್ತು ಎಂದರೆ ಸಿಲಿಂಡರ್ ಛಿದ್ರ ಛೀದ್ರವಾಗಿದೆ. ಸ್ಥಳಕ್ಕೆ ಕೆ ಆರ್ ಪೊಲೀಸರು ಭೇಟಿ ಪರಿಶೀಲನೆ ನಡೆಸಿದ್ದು,ಈ ಸ್ಫೋಟಕ್ಕೆ ಸಾಂಸ್ಕೃತಿಕ ನಗರಿ ಜನ ಬೆಚ್ಚಿಬಿದ್ದಿದ್ದಾರೆ.
ಬಲೂನ್ ಗೆ ಗ್ಯಾಸ್ ತುಂಬುವಾಗ ದುರ್ಘಟನೆ
ಅರಮನೆಯ ಜಯ ಮಾರ್ತಾಂಡ ಗೇಟ್ ಬಳಿ ಘಟನೆ ಸಂಭವಿಸಿದ್ದು, ಬಲೂನ್‌ಗೆ ಗ್ಯಾಸ್ ತುಂಬುವ ವೇಳೆ ಬ್ಲಾಸ್ಟ್ ಆಗಿದೆ. ಬ್ಲಾಸ್ಟ್ ತೀವ್ರತೆಗೆ ಓರ್ವನ ದೇಹ ಛಿದ್ರ ಛಿದ್ರಗೊಂಡಿದೆ. ಇನ್ನು ಘಟನೆಯಲ್ಲಿ ಮೂವರಿಗೆ ಗಂಭೀರವಾಗಿ ಗಾಯಗಳಾಗಿದ್ದು, ಈ ಪೈಕಿ ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ.
ಇದನ್ನೂ ಓದಿ: ಕರ್ನಾಟಕದಲ್ಲಿ ಸಾಲು ಸಾಲು ಅಗ್ನಿ ದುರಂತ: ಬೆಳೆ ರಕ್ಷಿಸಿಕೊಳ್ಳಲು ಹೋಗಿ ರೈತ ಸಜೀವದಹನ
ಬಲೂನ್ ಗೆ ಗ್ಯಾಸ್ ತುಂಬುವ ಹಿಲಿಯಂ ಗ್ಯಾಸ್ ಸಿಲಿಂಡರ್ ಸ್ಪೋಟವಾಗಿದ್ದು, ಬಲೂನ್ ಮಾರುತ್ತಿದ್ದ ವ್ಯಕ್ತಿ ಸಾವನ್ನಪ್ಪಿದ್ದರೆ ಬೆಂಗಳೂರು ಮೂಲದ ಲಕ್ಷ್ಮಿ ಸ್ಥಿತಿ ಗಂಭೀರವಾಗಿದೆ. ಇನ್ನು ಮೈಸೂರು ಜಿಲ್ಲೆಯ ನಂಜನಗೂಡು ಮೂಲದ ಮಂಜುಳಾ, ಕೋಲ್ಕತ್ತಾ ಮೂಲದ ಶಾಹಿನಾ ಶಬ್ಬಿರ್ , ರಾಣೆಬೆನ್ನೂರು ಮೂಲದ ಕೊಟ್ರೇಶ್ ಎಂಬುವರಿಗೂ ಗಾಯಗಳಾಗಿದ್ದು, ಸದ್ಯ ಇವರನ್ನು ಮೈಸೂರಿನ ಕೆ.ಆರ್.ಆಸ್ಪತ್ರೆಗೆ ದಾಖಲಿಸಲಾಗಿದೆ.
ವಿಶ್ವವಿಖ್ಯಾತ ಮೈಸೂರು ಅರಮನೆ ಸದಾ ಪ್ರವಾಸಿಗರಿಂದ ತುಂಬಿ ತುಳುಕುತ್ತಿರುತ್ತೆ. ಇನ್ನು ಅರಮನೆ ಮುಂಭಾಗ ಮಕ್ಕಳ ಆಟಿಕೆ ಸಾಮಾನುಗಳು, ತಿಂಡಿ ತಿನಿಸು ವ್ಯಾಪರ ಜೋರು ಇರುತ್ತೆ. ಅದರಲ್ಲೂ ಮಕ್ಕಳ ಪ್ರಮುಖ ಆಕರ್ಷಣೆಯಾಗಿರುವ ನೈಟ್ರೋಜನ್ ಬಲೂನ್ ಎಲ್ಲೆಡೆ ಲಭ್ಯವಿದೆ. ಹೀಗೆ ಅರಮನೆಯ ಜಯಮಾರ್ತಂಡ ದ್ವಾರ ಬಳಿ ನೈಟ್ರೋಜನ್ ಬಲೂನ್ ಮಾರಾಟ ಮಾಡುತ್ತಿದ್ದ ವ್ಯಾಪಾರಿಗಳ ಬಳಿ ಗ್ರಾಹಕರು ಬಲೂನ್ ಖರೀದಿಸಲು ತೆರಳಿದ್ದಾರೆ. ಈ ವೇಳೆ ಬಲೂನ್‌ಗೆ ಗ್ಯಾಸ್ ತುಂಬುವ ವೇಳೆ ಸ್ಫೋಟವಾಗಿದೆ. ಗ್ಯಾಸ್ ಬಲೂನ್ ಸಿಡಿದ ಬೆನ್ನಲ್ಲೇ ನೈಟ್ರೋಜನ್ ಸಿಲಿಂಡರ್ ಸ್ಫೋಟಗೊಂಡಿದ್ದು, ಬಲೂನ್ ಮಾರುವ ವ್ಯಕ್ತಿ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಇನ್ನು ಸ್ಫೋಟದ ತೀವ್ರತೆಗೆ ಸಿಲಿಂಡರ್ ಛಿದ್ರ ಛಿದ್ರವಾಗಿದ್ದು, ಭಾರೀ ಅನಾಹುತ ತಪ್ಪಿದೆ.
ಘಟನೆ ನಡೆದಾಗ ಕೂಗಳತೆ ದೂರದಲ್ಲಿದ್ದ ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದು, ಗಾಯಾಳುಗಳನ್ನು ಆಸ್ಪತ್ರೆ ರವಾನಿಸಿದ್ದು, ಘಟನೆ ನಡೆದ ಸ್ಥಳದಲ್ಲಿ ಬಿದ್ದಿದ್ದ ವಸ್ತುಗಳು ಸಂಗ್ರಹಿಸಿದ್ದಾರೆ. ಇದೇ ವೇಳೆ ಮೈಸೂರು ಅರಮನೆ ಹಾಗೂ ನಗರದ ಸುತ್ತ ಮುತ್ತ ನೈಟ್ರೋಜನ್ ಬಲೂನ್ ಮಾರಾಟ ಎಷ್ಟು ಸುರಕ್ಷಿತ ಅನ್ನೋ ಕುರಿತು ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 10:13 pm, Thu, 25 December 25



