ಮೈಸೂರು, ಮಾರ್ಚ್ 25: ಸಾಮಾನ್ಯವಾಗಿ ಏಪ್ರಿಲ್ – ಮೇ ತಿಂಗಳಲ್ಲಿ ಶಾಲೆ ಮಕ್ಕಳ ಬೇಸಗೆ ರಜೆ ಮತ್ತು ಇತರ ರಜೆಗಳ ಕಾರಣಗಳಿಂದ ಮೈಸೂರಿಗೆ (Mysuru) ಹರಿದು ಬರುತ್ತಿದ್ದ ಪ್ರವಾಸಿಗರ (Tourists) ಪ್ರವಾಹ ಈ ವರ್ಷ ಕಡಿಮೆಯಾಗಿದೆ. ಈ ವರ್ಷ ಪ್ರವಾಸಿಗರ ಸಂಖ್ಯೆಯಲ್ಲಿ ಶೇ 50ರಷ್ಟು ಕುಸಿತವಾಗಿರುವ ಬಗ್ಗೆ ವರದಿಯಾಗಿದೆ. ಸಾಮಾನ್ಯವಾಗಿ ಮಾರ್ಚ್‌ನಲ್ಲಿ ಮಕ್ಕಳ ಬೋರ್ಡ್ ಪರೀಕ್ಷೆಗಳು ಮುಗಿದ ತಕ್ಷಣ ಪ್ರವಾಸಿಗರು ಮೈಸೂರು ಮತ್ತು ಹತ್ತಿರದ ಪ್ರವಾಸಿ ತಾಣಗಳಿಗೆ ಭೇಟಿ ನೀಡುತ್ತಾರೆ. ಆದಾಗ್ಯೂ, ಹಿಂದಿನ ವರ್ಷಗಳಿಗೆ ಹೋಲಿಸಿದರೆ ಮೈಸೂರಿಗೆ ಮತ್ತು ಸಮೀಪದ ಪ್ರವಾಸಿ ತಾಣಗಳಿಗೆ ಬುಕಿಂಗ್ಗಳು ಗಣನೀಯವಾಗಿ ಕುಸಿತ ಕಂಡಿದೆ ಎಂದು ಟೂರ್ ಆಪರೇಟರ್‌ಗಳು ತಿಳಿಸಿದ್ದಾರೆ.
ಬೇಸಗೆಯ ತಾಪ ಹೆಚ್ಚಾಗಿರುವುದು ಮತ್ತು ಮುಂಬರುವ ಲೋಕಸಭೆ ಚುನಾವಣೆಯೇ ಪ್ರವಾಸಿಗರ ಸಂಖ್ಯೆಯಲ್ಲಿ ಇಳಿಕೆಗೆ ಕಾರಣ ಎಂದು ಟೂರ್ ಆಪರೇಟರ್‌ಗಳು ಅಭಿಪ್ರಾಯಪಟ್ಟಿದ್ದಾರೆ. ಅಷ್ಟೇ ಅಲ್ಲದೆ ಈ ವರ್ಷ ಬೋರ್ಡ್ ಪರೀಕ್ಷೆ ಸಂಬಂಧ ಉಂಟಾಗಿದ್ದ ಗೊಂದಲದ ಕಾರಣ ತಡವಾಗಿ ಈಗ ಪರೀಕ್ಷೆಗಳು ನಡೆಯುತ್ತಿವೆ. ಹಾಗಾಗಿ, ಪೋಷಕರು ಪ್ರವಾಸದ ಯೋಜನೆಗಳನ್ನು ಮುಂದೂಡುತ್ತಿದ್ದಾರೆ.
ಮತ್ತೊಂದೆಡೆ, ಪರೀಕ್ಷೆಗಳು ಮುಗಿದ ನಂತರವೂ ಸರ್ಕಾರಿ ಅಧಿಕಾರಿಗಳು ಮತ್ತು ಉದ್ಯೋಗಿಗಳನ್ನು ಚುನಾವಣಾ ಕರ್ತವ್ಯಕ್ಕೆ ನಿಯೋಜಿಸಲಾಗುತ್ತಿದೆ. ಜಿಲ್ಲಾ ಚುನಾವಣಾ ಕಚೇರಿಯ ಅನುಮತಿಯಿಲ್ಲದೆ ಅವರು ಭಾನುವಾರವೂ ತಮ್ಮ ಕೇಂದ್ರ ಕಚೇರಿಯನ್ನು ಬಿಡುವಂತಿಲ್ಲ. ಅಲ್ಲದೆ, ಮಾದರಿ ನೀತಿ ಸಂಹಿತೆ ಉಲ್ಲಂಘನೆ ತಡೆಯಲು ಚುನಾವಣಾ ಅಧಿಕಾರಿಗಳು ಎಲ್ಲೆಡೆ ಚೆಕ್‌ಪೋಸ್ಟ್‌ಗಳನ್ನು ಸ್ಥಾಪಿಸಿರುವ ಕಾರಣ ಪ್ರವಾಸಿಗರು ಭೇಟಿ ನೀಡಲು ನಿರಾಕರಿಸುತ್ತಿದ್ದಾರೆ.
ಪ್ರವಾಸಿಗರ ಸಂಖ್ಯೆಯಲ್ಲಿ ಇಳಿಕೆಯಾದರೂ ಚಾಮುಂಡಿ ಬೆಟ್ಟಕ್ಕೆ ಬರುವವರ ಸಂಖ್ಯೆಯಲ್ಲಿ ಇಳಿಕೆಯಾಗಿಲ್ಲ ಎಂದು ಸ್ಥಳೀಯ ಮಾಧ್ಯಮವೊಂದು ವರದಿ ಮಾಡಿದೆ. ಆದರೆ, ಇತರ ಪ್ರವಾಸಿ ಕೇಂದ್ರಗಳಾದ ಮೃಗಾಲಯ, ಕೃಷ್ಣರಾಜ ಸಾಗರ (ಕೆಆರ್‌ಎಸ್) ಅಣೆಕಟ್ಟು, ಕಾರಂಜಿ ಕೆರೆ, ರಂಗನತಿಟ್ಟು ಪಕ್ಷಿಧಾಮ, ಶ್ರೀರಂಗಪಟ್ಟಣ, ಮೇಲುಕೋಟೆ, ಟಿಪ್ಪು ಅರಮನೆ, ನಿಮಿಷಾಂಬ ಸೇರಿದಂತೆ ಮೈಸೂರಿನ ಎಲ್ಲಾ ಪ್ರವಾಸಿ ತಾಣಗಳ ಪ್ರವಾಸಿಗರ ಸಂಖ್ಯೆಯಲ್ಲಿ ಗಣನೀಯ ಕುಸಿತವಾಗಿದೆ.
ಇದನ್ನೂ ಓದಿ: ಕಬಿನಿ ಜಲಾಶಯದಿಂದ ನದಿಗೆ 1000 ಕ್ಯೂಸೆಕ್ ನೀರು ಬಿಡುಗಡೆ: ಎಲ್ಲಿಗೆ ಹರಿಯುತ್ತಿದ್ದಾಳೆ ಕಪಿಲೆ?
ಮೈಸೂರು ಅರಮನೆಗೆ ಸಾಮಾನ್ಯವಾಗಿ ಪ್ರತಿನಿತ್ಯ 5,000 ಪ್ರವಾಸಿಗರು ಭೇಟಿ ನೀಡುತ್ತಾರೆ. ಆದರೆ, ಈ ವಾರಾಂತ್ಯದಲ್ಲಿ ಭೇಟಿ ನೀಡಿದವರ ಸಂಖ್ಯೆ ಕೇವಲ 2,500 ಇತ್ತು. ಈಗ ಕೇವಲ ಶೇ 30 ರಷ್ಟು ಹೋಟೆಲ್ ಕೊಠಡಿಗಳು ಮಾತ್ರ ಬುಕ್ ಆಗಿವೆ. ಶೇ 70 ರಷ್ಟು ಕೊಠಡಿಗಳು ಖಾಲಿ ಇವೆ ಎಂದು ಪ್ರವಾಸೋದ್ಯಮ ಕ್ಷೇತ್ರದ ಮೂಲಗಳನ್ನು ವರದಿ ಉಲ್ಲೇಖಿಸಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ