ಮೈಸೂರು: ಕೊರೊನಾ ನಿಯಂತ್ರಣಕ್ಕಾಗಿ ರಾಜ್ಯದ ಕೆಲ ಜಿಲ್ಲೆಗಳಲ್ಲಿ ವೀಕೆಂಡ್ ಕರ್ಫ್ಯೂ (Weekend Curfew) ಹೇರಲಾಗಿದೆ. ಆದರೆ, ಸರ್ಕಾರದ ಈ ಕ್ರಮವನ್ನು ವಿರೋಧಿಸಿ ಮೈಸೂರಿನ ವರ್ತಕರು, ಕೆಲ ಸಂಘ ಸಂಸ್ಥೆಗಳು ಕರ್ಫ್ಯೂ ಪಾಲನೆಗೆ ಅಸಹಾಕಾರ ಸೂಚಿಸಿದ್ದರು. ಇದೀಗ ಅವರು ತಮ್ಮ ಪಟ್ಟು ಸಡಿಲಿಸಿದ್ದು, ವೀಕೆಂಡ್ ಲಾಕ್‌ಡೌನ್‌ಗೆ (Weekend Lockdown) ಸಹಕರಿಸಲು ನಿರ್ಧರಿಸಿದ್ದಾರೆ. ಸಚಿವ ಎಸ್.ಟಿ ಸೋಮಶೇಖರ್ ಹಾಗೂ ಪೊಲೀಸ್ ಕಮಿಷನರ್ ಡಾ.ಚಂದ್ರಗುಪ್ತ ಮನವಿಗೆ ಸ್ಪಂದಿಸಿದ ವ್ಯಾಪಾರಿಗಳು ವಾರಾಂತ್ಯದ ಕರ್ಫ್ಯೂ ಪಾಲಿಸಲು ಒಪ್ಪಿದ್ದಾರೆ.
ಸೋಮವಾರ ಈ ವಿಚಾರವಾಗಿ ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಜತೆ ಚರ್ಚಿಸಿ ಆದೇಶವನ್ನು ಹಿಂಪಡೆಯುವ ಭರವಸೆಯನ್ನು ಸಚಿವ ಎಸ್.ಟಿ ಸೋಮಶೇಖರ್ ನೀಡಿದ್ದಾರೆ. ಇದಕ್ಕೆ ಸ್ಪಂದಿಸಿದ ವರ್ತಕರು ಇಂದಿನ ಕರ್ಫ್ಯೂಗೆ ಸಹಕಾರ ನೀಡಿದ್ದಾರೆ. ಹೀಗಾಗಿ ಇಂದು ಮೈಸೂರಿನಲ್ಲಿ ವೀಕೆಂಡ್ ಲಾಕ್‌ಡೌನ್ ರಾಜ್ಯ ಸರ್ಕಾರದ ಆದೇಶದ ಅನ್ವಯ ಮುಂದುವರೆಯಲಿದ್ದು ಅಂಗಡಿ ಮುಂಗಟ್ಟುಗಳು ಮುಚ್ಚಲಿವೆ.
ಕೇರಳದಿಂದ ಬಂದ ನರ್ಸಿಂಗ್ ವಿದ್ಯಾರ್ಥಿಗಳಲ್ಲಿ ಕೊರೊನಾ ಸೋಂಕು
ಮೈಸೂರಿನಲ್ಲಿ ಕೊವಿಡ್ ಸೋಂಕು ಹೆಚ್ಚಳವಾಗುತ್ತಿದ್ದು, ತೀವ್ರ ಆತಂಕಕ್ಕೆ ಕಾರಣವಾಗಿದೆ. ಹೀಗಾಗಿ ಕೇರಳದಿಂದ ಬರುವ ನರ್ಸಿಂಗ್ ವಿದ್ಯಾರ್ಥಿಗಳ ಮೇಲೆ ತೀವ್ರ ನಿಗಾ ಇಡಲಾಗಿದೆ. ಖಾಸಗಿ ಆಸ್ಪತ್ರೆಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ಕೇರಳ ನರ್ಸಿಂಗ್ ವಿದ್ಯಾರ್ಥಿಗಳಲ್ಲಿ ಸೋಂಕು ಹೆಚ್ಚಾಗಿ ಕಾಣಿಸಿಕೊಂಡಿದ್ದು, ಕಳೆದ ವಾರದಿಂದ 25 ಕ್ಕೂ ಹೆಚ್ಚು ನರ್ಸಿಂಗ್ ವಿದ್ಯಾರ್ಥಿಗಳಿಗೆ ಸೊಂಕು ಧೃಡಪಟ್ಟಿದೆ.
ಅಪಾಯದ ಹೊಸ್ತಿಲಲ್ಲಿ ಬೆಂಗಳೂರು
ಬೆಂಗಳೂರು: ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಕೊರೊನಾ ಸೋಂಕಿತರ ಪ್ರಮಾಣ ಏರುಗತಿಯಲ್ಲಿ ಸಾಗುತ್ತಿದ್ದು, ರಾಜ್ಯ ರಾಜಧಾನಿ ಬೆಂಗಳೂರು ಅಪಾಯದ ಹೊಸ್ತಿಲಲ್ಲಿ ನಿಂತಿದೆ. ರಾಜಧಾನಿಯ ಮಾರುಕಟ್ಟೆಗಳು ಕೊರೊನಾ ಹಾಟ್ಸ್ಪಾಟ್ಗಳಾಗಿ ಮಾರ್ಪಾಡಾಗುವಂತೆ ಕಾಣುತ್ತಿದ್ದು, ಮಾರುಕಟ್ಟೆಗಳಿಂದ ಸಿಲಿಕಾನ್ ಸಿಟಿಯ ಮೂಲೆ ಮೂಲೆಗೆ ಕೊರೊನಾ ಸಾಗುವ ಭಯ ಶುರುವಾಗಿದೆ. ಜನರ ನಿರ್ಲಕ್ಷ್ಯ ಧೋರಣೆಯೇ ಈ ಅಪಾಯಕ್ಕೆ ಮೂಲ ಕಾರಣವಾಗುವ ಸಾಧ್ಯತೆ ದಟ್ಟವಾಗಿದ್ದು, ಮೂರನೇ ಅಲೆಯ ಸಂಭಾವ್ಯತೆ ಹೆಚ್ಚುತ್ತಿದ್ದರೂ ಜನ ಎಚ್ಚೆತ್ತುಕೊಳ್ಳದಿರುವುದು ಅಧಿಕಾರಿಗಳಿಗೆ, ಸರ್ಕಾರಕ್ಕೆ ತಲೆನೋವಾಗಿದೆ.
ಮಾರುಕಟ್ಟೆಗಳಲ್ಲಿ ಕೊರೊನಾ ನಿಯಮಾವಳಿಗಳನ್ನು ಸಂಪೂರ್ಣ ಗಾಳಿಗೆ ತೂರಲಾಗಿದ್ದು, ಯಶವಂತಪುರ, ಕೆ.ಆರ್. ಮಾರುಕಟ್ಟೆಗಳಲ್ಲಿ ಜನ ಜಾತ್ರೆ ಇದೆ. ಕೊರೊನಾ ನಿಯಂತ್ರಣಕ್ಕೆ ಪಾಲಿಸಬೇಕಾದ ಕ್ರಮಗಳನ್ನು ಜನ ಸಂಪೂರ್ಣ ಮರೆತಿದ್ದು, ವಾಣಿಜ್ಯೋದ್ಯಮಕ್ಕೆ ಅನುಕೂಲ ಆಗಲಿ ಎಂದು ಮಾರುಕಟ್ಟೆ ತೆರೆದರೆ ಅದನ್ನು ಅಪಾಯಕ್ಕೆ ನೂಕುತ್ತಿದ್ದಾರೆ. ಮುಂದಿನ ವಾರದಿಂದ ಹಬ್ಬಗಳು ಶುರುವಾಗುತ್ತಿರುವುದರಿಂದ ಅಗತ್ಯ ವಸ್ತುಗಳನ್ನ ಕೊಂಡುಕೊಳ್ಳಲು ಜನರು ಮುಗಿಬೀಳುತ್ತಿದ್ದು, ನಗರದ ಸುತ್ತಮುತ್ತಲಿನ ಜನರೂ ರಾಜಧಾನಿಗೆ ಆಗಮಿಸುತ್ತಿರುವುದು ಜನಸಂದಣಿ ಹೆಚ್ಚಲು ಕಾರಣವಾಗಿದೆ.
ಇದನ್ನೂ ಓದಿ:
‘ಇಂದಿನಿಂದ ನಾನು ಯಾವುದೇ ಸಮಾರಂಭದಲ್ಲಿ ಭಾಗಿಯಾಗಲ್ಲ; ಕೊರೊನಾ ತಡೆಗೆ ಸ್ವಯಂ ನಿರ್ಬಂಧ ವಿಧಿಸಿಕೊಳ್ಳಿ’
Karnataka Covid19 Update: ಕರ್ನಾಟಕದಲ್ಲಿ ಹೊಸದಾಗಿ 1,610 ಕೊರೊನಾ ಕೇಸ್ ಪತ್ತೆ; 32 ಮಂದಿ ಸಾವು
(Mysuru traders agree to support weekend curfew Meanwhile no rules in Bengaluru Market)
Published On - 7:25 am, Sun, 8 August 21