ಮೈಸೂರು ಅ.07: ಲಿಂಗಾಯತ (Lingayat) ಅಧಿಕಾರಿಗಳಿಗೆ ಕಡೆಗಣಿಸಲಾಗುತ್ತಿದೆ ಎಂಬ ಹಿರಿಯ ಕಾಂಗ್ರೆಸ್ ನಾಯಕ, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ರಾಷ್ಟ್ರೀಯ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ (Shamanur Shivashankarappa) ಹೇಳಿಕೆ ರಾಜ್ಯ ಕಾಂಗ್ರೆಸ್ನಲ್ಲಿ (Congress) ಸಂಚಲನ ಸೃಷ್ಟಿಸಿದೆ. ಶಾಮನೂರು ಅವರ ಹೇಳಿಕೆಯಿಂದ ರಾಜ್ಯ ನಾಯಕರಿಗೆ ಇರಿಸುಮುರಿಸು ಉಂಟುಮಾಡಿದೆ. ಇಷ್ಟೇ ಅಲ್ಲದೆ ಶಾಮನೂರು ಶಿವಶಂಕರಪ್ಪ ಹೇಳಿಕೆಗೆ ವಿರೋಧ ಪಕ್ಷದ ನಾಯಕರು ಮತ್ತು ಕೂಡಲಸಂಗಮ ಪೀಠದ ಜಗದ್ಗುರು ಬಸವ ಜಯಮೃತ್ಯುಂಜಯ ಸ್ವಾಮೀಜಿ ಧ್ವನಿಗೂಡಿಸಿದ್ದು ಸರ್ಕಾರವನ್ನು ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿಸಿದೆ. ಆದರೆ ಇದಾವುದಕ್ಕೂ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರು ಮಾತ್ರ ತಲೆಕೆಡಿಸಿಕೊಂಡಿಲ್ಲ.
ಈ ಮಧ್ಯೆ ಮೈಸೂರಿನ ಕಲಾಮಂದಿರದಲ್ಲಿ ಇಂದು (ಅ.07) ಆಯೋಜಿಸಲಾಗಿರುವ ಬಸವ ಜಯಂತಿ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭಾಗಿಯಾಗಲಿದ್ದಾರೆ. ಅಖಿಲ ಭಾರತ ವೀರಶೈವ ಮಹಾಸಭಾ ಲಿಂಗಾಯತ ಸಂಘ, ಸಂಸ್ಥೆಗಳು ಮತ್ತು ಬಸವ ಬಳಗಗಳ ಒಕ್ಕೂಟದಿಂದ ಬಸವ ಜಯಂತಿ ಕಾರ್ಯಕ್ರಮ ಆಯೋಜಿಸಲಾಗಿದೆ. ಈ ಕಾರ್ಯಕ್ರಮದಲ್ಲಿ ಸರ್ವಪಕ್ಷದ ಲಿಂಗಾಯತ ನಾಯಕರು ಪಾಲ್ಗೊಳ್ಳಲಿದ್ದಾರೆ. ಬಸವ ಜಯಂತಿ ಕಾರ್ಯಕ್ರಮದ ಮೆರವಣಿಗೆಗೆ ಬಿಎಸ್ ಯಡಿಯೂರಪ್ಪ ಪುತ್ರ, ಶಾಸಕ ಬಿವೈ ವಿಜಯೇಂದ್ರ ಚಾಲನೆ ನೀಡಲಿದ್ದಾರೆ.
ಇದನ್ನೂ ಓದಿ: ದಾವಣಗೆರೆಯಲ್ಲೇ ತುಂಬಿ ತುಳುಕುತ್ತಿದ್ದಾರೆ ಲಿಂಗಾಯತ ಅಧಿಕಾರಿಗಳು: ಪಟ್ಟಿ ವೈರಲ್
ವಿವಿಧ ಕಾರ್ಯಕ್ರಮ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬೆಳಿಗ್ಗೆ 10:55ಕ್ಕೆ ವಿಶೇಷ ವಿಮಾನದ ಮೂಲಕ ತವರು ಜಿಲ್ಲೆಗೆ ಪ್ರಯಾಣ ಬೆಳಸಲಿದ್ದಾರೆ. 11.15ಕ್ಕೆ ಬಸವ ಜಯಂತಿ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಸಂಜೆ 4 ಗಂಟೆಗೆ ಪರಿಸರ ಇಲಾಖೆಯಿಂದ ಪೊಲೀಸ್ ಅಕಾಡೆಮಿ ಸಭಾಂಗಣದಲ್ಲಿ ಆಯೋಜಿಸಲಾಗಿರುವ 69ನೇ ವನ್ಯಜೀವಿ ಸಪ್ತಾಹ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಾರೆ. ಇಂದು ಮೈಸೂರಿನಲ್ಲೇ ವಾಸ್ತವ್ಯ ಹೂಡಿ, ಅ.8 ರಂದು ಬೆಳಿಗ್ಗೆ 10 ಗಂಟೆಗೆ ರಸ್ತೆ ಮೂಲಕ ಬೆಂಗಳೂರಿಗೆ ವಾಪಾಸ್ ಆಗಲಿದ್ದಾರೆ.
ಈ ಕಾರ್ಯಕ್ರಮಗಳಲ್ಲಿ ಸಚಿವರಾದ ಡಾ.ಹೆಚ್.ಸಿ.ಮಹದೇವಪ್ಪ, ಕೆ.ವೆಂಕಟೇಶ್, ಎಂ.ಬಿ.ಪಾಟೀಲ್, ಶರಣಪ್ರಕಾಶ್ ಪಾಟೀಲ್, ಎಸ್.ಎಸ್.ಮಲ್ಲಿಕಾರ್ಜುನ ಸೇರಿ ಹಲವರು ಭಾಗಿಯಾಗಲಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ