ಮೈಸೂರು, ಡಿಸೆಂಬರ್ 14: ಪಂಚಮಸಾಲಿ 2ಎ ಮೀಸಲಾತಿ ಹೋರಾಟದ ಬಗ್ಗೆ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ಅಧ್ಯಕ್ಷ ಕೆಎಸ್ ಶಿವರಾಮು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮೀಸಲಾತಿ ಹೋರಾಟ ವಿಚಾರವಾಗಿ ಮೈಸೂರಿನಲ್ಲಿ ಪ್ರತಿಕ್ರಿಯಿಸಿದ ಅವರು, ನಮ್ಮ ಅನ್ನದ ತಟ್ಟೆಗೆ ಕೈ ಹಾಕಿದರೆ ಕೈ ಕತ್ತರಿಸುತ್ತೇವೆ ಎಂದು ಬಸವ ಜಯಮೃತ್ಯುಂಜಯ ಸ್ವಾಮೀಜಿಗೆ ಎಚ್ಚರಿಕೆ ನೀಡಿದ್ದಾರೆ. ಜಯಮೃತ್ಯುಂಜಯ ಸ್ವಾಮೀಜಿ ಹೋರಾಟವನ್ನು ಖಂಡಿಸುತ್ತಿದ್ದೇವೆ. ಸ್ವಾಮೀಜಿಗಳು ರಾಜಕೀಯ ಪುಢಾರಿ ರೀತಿ ನಡೆದುಕೊಳ್ಳುತ್ತಿದ್ದಾರೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಬಗ್ಗೆ ಜಯಮೃತ್ಯುಂಜಯ ಸ್ವಾಮೀಜಿ ಅವಹೇಳನಕಾರಿಯಾಗಿ ಮಾತನಾಡುತ್ತಾರೆ. ಅವರು ಸನ್ಯಾಸಿಯಾಗಿ ಒಂದು ಜಾತಿ ಪರವಾಗಿ ಕೆಲಸ ಮಾಡುವುದು ಸರಿಯಲ್ಲ. ಸ್ವಾಮೀಜಿಯಾಗಲು ನಾಲಾಯಕ್. ಕಾವಿ ಬಟ್ಟೆ ಬಿಚ್ವಿಟ್ಟು ಬರುವುದು ಉತ್ತಮ ಎಂದು ಕೆಎಸ್ ಶಿವರಾಮು ಹೇಳಿದ್ದಾರೆ.
ಕಾವಿ ಬಟ್ಟೆಗೆ ನಾವು ಗೌರವ ಕೊಡುತ್ತಾ ಇದ್ದೇವೆ. ಅದನ್ನು ಉಳಿಸಿಕೊಳ್ಳಿ. ಮೀಸಲಾತಿ ವಿಚಾರ ಸುಪ್ರೀಂ ಕೋರ್ಟ್ನಲ್ಲಿ ಇದೆ. ಸ್ವಾಮೀಜಿಯಾಗಿ ಹಿಂಸಾಚಾರಕ್ಕೆ ಕುಮ್ಮಕ್ಕು ಕೊಡುತ್ತಾ ಇದ್ದೀರಿ. ಇದೇನಾ ನಿಮ್ಮ ರೀತಿ ನೀತಿ? ಹಿಂದುಳಿದ ವರ್ಗಗಳು ವೀರಶೈವರು, ಲಿಂಗಾಯತರು ಒಂದಾಗಿ ಇದ್ದೇವೆ. ನಮ್ಮಗಳ ಮಧ್ಯೆ ಜಗಳ ತಂದು ಹಾಕುತ್ತಾ ಇದ್ದೀರಿ ಎಂದು ಶಿವರಾಮು ಕಿಡಿಕಾರಿದ್ದಾರೆ.
ಜಯಮೃತ್ಯುಂಜಯ ಸ್ವಾಮೀಜಿ ಬಿಜೆಪಿ ಏಜೆಂಟ್ ರೀತಿ ಕೆಲಸ ಮಾಡುತ್ತಾ ಇದ್ದಾರೆ. ಸಿಎಂ ಹುದ್ದೆಯಿಂದ ಸಿದ್ದರಾಮಯ್ಯರನ್ನು ಕೆಳಗಿಳಿಸಲು ಸುಪಾರಿ ಪಡೆದುಕೊಂಡಿದ್ದಾರೆ ಎಂದು ಶಿವರಾಮು ಆರೋಪಿಸಿದ್ದಾರೆ.
ಇದನ್ನೂ ಓದಿ: ಶಾಂತಿಯುತ ಅಲ್ಲ, ಇನ್ಮೇಲೆ ಕ್ರಾಂತಿಯುತ ಹೋರಾಟ: ಜಯಮೃತ್ಯುಂಜಯ ಶ್ರೀ ಎಚ್ಚರಿಕೆ
ಬೆಳಗಾವಿಯಲ್ಲಿ ನಡೆಯುತ್ತಿರುವ ಕರ್ನಾಟಕ ವಿಧಾನಮಂಡಲ ಚಳಿಗಾಲದ ಅಧಿವೇಶನದ ಸಂದರ್ಭದಲ್ಲೇ ಪಂಚಮಸಾಲಿ ಮೀಸಲಾತಿ ಹೋರಾಟ ತೀವ್ರಗೊಂಡಿದೆ. ಬೆಳಗಾವಿಯಲ್ಲಿ ಪ್ರತಿಭಟನಾಕಾರರ ಮೇಲೆ ಲಾಠಿಚಾರ್ಜ್ ಮಾಡಿದ ವಿಚಾರ ತೀವ್ರ ರಾಜಕೀಯ ಕೋಲಾಹಲಕ್ಕೆ ಕಾರಣವಾಗಿತ್ತು. ಈ ಎಲ್ಲ ಬೆಳವಣಿಗೆಗಳ ಬೆನ್ನಲ್ಲೇ ಮೈಸೂರಿನಲ್ಲಿ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ಸಭೆ ನಡೆಸಿದೆ. ಸಭೆಯ ಬಳಿಕ ಮಾತನಾಡಿದ ಶಿವರಾಮು, ಜಯಮೃತ್ಯುಂಜಯ ಸ್ವಾಮೀಜಿಗೆ ಎಚ್ಚರಿಕೆ ನೀಡಿದ್ದಲ್ಲದೆ, ವಿವಾದಾತ್ಮಕ ಹೇಳಿಕೆಯನ್ನೂ ನೀಡಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:01 pm, Sat, 14 December 24