PM Modi in Mysore: 45 ನಿಮಿಷದಲ್ಲಿ 19 ಆಸನ; ಮೈಸೂರಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಯೋಗಾಭ್ಯಾಸ
6.30ರಿಂದ 7.45ರ ವರೆಗೂ ಯೋಗಭ್ಯಾಸ ನಡೆಸಿದ ಮೋದಿ ಅವರು, 45 ನಿಮಿಷಗಳಲ್ಲಿ 15,000 ಮಂದಿಯೊಂದಿಗೆ 19 ಆಸನಗಳನ್ನು ಮಾಡಿದರು.
ಮೈಸೂರು: ವಿಶ್ವ ಯೋಗದಿನದ ಪ್ರಯುಕ್ತ ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಮೈಸೂರು ಅರಮನೆ ಮೈದಾನದಲ್ಲಿ (Mysore Palace) ನಡೆದ ವಿಶೇಷ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಪೂರ್ವ ನಿಗದಿತ 6.30ರ ಒಳಗೆ ಮೋದಿ ಮೈಸೂರು ಅರಮನೆಗೆ ಬಂದ ಮೋದಿ ಅವರನ್ನು ರಾಜಮಾತೆ ಪ್ರಮೋದ ದೇವಿ ಸ್ವಾಗತಿಸಿದರು. 6.30ರಿಂದ 7.45ರ ವರೆಗೂ ಯೋಗಭ್ಯಾಸ ನಡೆಸಿದ ಮೋದಿ ಅವರು, 45 ನಿಮಿಷಗಳಲ್ಲಿ 15,000 ಮಂದಿಯೊಂದಿಗೆ 19 ಆಸನಗಳನ್ನು ಮಾಡಿದರು.
ಮುಂಜಾನೆ 7ರಿಂದ 7.45ರ ವರೆಗೆ ನಡೆದ ಕಾರ್ಯಕ್ರಮದಲ್ಲಿ ಸಾಂಪ್ರದಾಯಿಕ ಯೋಗ ಪದ್ಧತಿಯಂತೆ ಯೋಗಚಕ್ರದ ವಿವಿಧ ಅಂಗಗಳನ್ನು ಪ್ರದರ್ಶಿಸಲಾಯಿತು. 1 ನಿಮಿಷ ಪ್ರಾರ್ಥನೆ, 4 ನಿಮಿಷ ಚಲನಕ್ರಿಯೆ, 25 ನಿಮಿಷ ವಿವಿಧ ಯೋಗಾಸನಗಳು, ಬಳಿಕ 14 ನಿಮಿಷ ಪ್ರಾಣಾಯಾಮ, ಧ್ಯಾನ, ಸಂಕಲ್ಪದ ಕ್ರಿಯೆಗಳು ನಡೆದವು. ಶಾಂತಿಮಂತ್ರದೊಂದಿಗೆ ಯೋಗ ಪ್ರದರ್ಶನ ಮುಕ್ತಾಯವಾಯಿತು.
ನೆರೆದಿದ್ದ 15 ಸಾವಿರ ಯೋಗಾಭ್ಯಾಸಿಗಳೊಂದಿಗೆ ಪ್ರಧಾನಿ ಸಹ ತಾಡಾಸನ, ವೃಕ್ಷಾಸನ, ಪಾದಹಸ್ತಾಸನ-1, ಪಾದಹಸ್ತಾಸನ-2, ಅರ್ಧಚಕ್ರಾಸನ, ತ್ರಿಕೋನಾಸನ, ಸಮದಂಡಾಸನ, ಭದ್ರಾಸನ, ವಜ್ರಾಸನ, ಅರ್ಧಉಷ್ಟ್ರಾಸನ, ಉಷ್ಟ್ರಾಸನ, ಶಶಂಕಾಸನ, ಉತ್ಥಾನ ಮಂಡೂಕಾಸನ, ವಕ್ರಾಸನ, ಮಕರಾಸನ, ಸರಳ ಭುಜಂಗಾಸನ, ಭುಜಂಗಾಸನ, ಶಲಭಾಸನ, ಸೇತುಬಂಧಾಸನ, ಉತ್ಥಾನ ಪಾದಾಸನ, ಅರ್ಧಹಲಾಸನ, ಪವನಮುಕ್ತಾಸನ, ಶವಾಸನ ಮಾಡಿದರು.
Participated in the Yoga Day programme in Mysuru. #YogaForHumanity pic.twitter.com/SJxDfEHeOx
— Narendra Modi (@narendramodi) June 21, 2022
ಯೋಗಾಸನ ಅಭ್ಯಾಸಕ್ಕೂ ಮೊದಲು ನಡೆದ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದ ಮೋದಿ, ಭಾರತವು ಸದಾ ವಿಶ್ವದ ಒಳಿತು ಬಯಸಿದೆ. ಈ ಬಾರಿಯ ವಿಶ್ವ ಯೋಗದಿನದ ಆಶಯವೂ ಇದಕ್ಕೆ ಪೂರಕವಾಗಿದೆ. ಮಾನವತೆಗೆ ಯೋಗ ಎನ್ನುವುದು ಈ ವರ್ಷದ ಆಶಯ. ನಮ್ಮ ಋಷಿಮುನಿಗಳು ‘ಯೋಗದಿಂದ ವಿಶ್ವಕ್ಕೆ ಶಾಂತಿ’ ಎಂದು ಪ್ರತಿಪಾದಿಸಿದ್ದರು. ಯೋಗದಿಂದ ಸಮಾಜಕ್ಕೆ, ದೇಶಕ್ಕೆ, ವಿಶ್ವಕ್ಕೆ ಶಾಂತಿ ದೊರೆಯುತ್ತದೆ. ಇದನ್ನು ಕೆಲವರು ವಿಪರೀತದ ಚಿಂತನೆ ಎಂದುಕೊಳ್ಳಬಹುದು. ಆದರೆ ಭಾರತೀಯರಿಗೆ ಇದು ಹೊಸದಲ್ಲ. ಪಿಂಡದಲ್ಲಿರುವುದು ಬ್ರಹ್ಮಾಂಡದಲ್ಲಿದೆ ಎನ್ನುವುದು ಭಾರತೀಯರ ಚಿಂತನೆ. ನಾವು ಬದಲಾಗಲು ಆರಂಭಿಸಿದರೆ ಜಗತ್ತು ಬದಲಾಗುವುದು ಆರಂಭಿಸುತ್ತದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ರಾಜ್ಯಪಾಲ ಥಾವರ್ಚಂದ್ ಗೆಹ್ಲೋಟ್, ಸಿಎಂ ಬೊಮ್ಮಾಯಿ ರಾಜವಂಸ್ಥರಾದ ಪ್ರಮೋದಾದೇವಿ, ಯದುವೀರ್ ಒಡೆಯರ್, ಕೇಂದ್ರ ಆಯುಷ್ ಇಲಾಖೆ ಸಚಿವ ಸರ್ಬಾನಂದ ಸೋನೊವಾಲ, ಸಚಿವರಾದ ಡಾ.ಕೆ.ಸುಧಾಕರ್, ಎಸ್.ಟಿ.ಸೋಮಶೇಖರ್, ಸಂಸದ ಪ್ರತಾಪ್ ಸಿಂಹ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.
ಕರ್ನಾಟಕದ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ. ದೇಶದ ಇತರ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ