Narendra Modi: ಪ್ರಲ್ಹಾದ್ ಜೋಶಿಗೂ ಒಂದು ಕುರ್ತಾ ಹೊಲಿದುಕೊಡಿ; ಮೈಸೂರಿನಲ್ಲಿ ತಮಾಷೆ ಮಾಡಿದ ಪ್ರಧಾನಿ ಮೋದಿ
ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆಯ ಶ್ರೇಷ್ಠತಾ ಕೇಂದ್ರದ ಉದ್ಘಾಟನೆ ಮಾಡಿದ ಮೋದಿ ಕೇಂದ್ರ ಸರ್ಕಾರದ ಹಲವು ಯೋಜನೆಗಳ 20 ಫಲಾನುಭವಿಗಳ ಜೊತೆ ಸಂವಾದ ನಡೆಸಿದರು.
ಮೈಸೂರು: ನಿನ್ನೆ ಬೆಂಗಳೂರಿಗೆ ಆಗಮಿಸಿದ್ದ ಪ್ರಧಾನಿ ನರೇಂದ್ರ ಮೋದಿ (Narendra Modi) ನಿನ್ನೆ ಸಂಜೆಯ ಬಳಿಕ ಮೈಸೂರಿಗೆ ಭೇಟಿ ನೀಡಿದ್ದರು. ಈ ವೇಳೆ ಮೈಸೂರಿನಲ್ಲಿ ಸರ್ಕಾರದ ಯೋಜನೆಗಳ ಫಲಾನುಭವಿಗಳೊಂದಿಗೆ ಮೋದಿ ಸಂವಾದ ನಡೆಸಿದ್ದರು. ಪ್ರಧಾನ ಮಂತ್ರಿ ಆವಾಸ್ ಯೋಜನೆ, ಪ್ರಧಾನ ಮಂತ್ರಿ ಮುದ್ರಾ ಯೋಜನೆ ಮತ್ತು ಆಯುಷ್ಮಾನ್ ಭಾರತ್ ಯೋಜನೆಯಂತಹ ವಿವಿಧ ಯೋಜನೆಗಳ ಫಲಾನುಭವಿಗಳೊಂದಿಗೆ ಪ್ರಧಾನಿ ಮೋದಿ ಸಂವಾದ ನಡೆಸಿದ್ದರು.
ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆಯ ಶ್ರೇಷ್ಠತಾ ಕೇಂದ್ರದ ಉದ್ಘಾಟನೆ ಮಾಡಿದ ಮೋದಿ ಕೇಂದ್ರ ಸರ್ಕಾರದ ಹಲವು ಯೋಜನೆಗಳ 20 ಫಲಾನುಭವಿಗಳ ಜೊತೆ ಸಂವಾದ ನಡೆಸಿದರು. ಈ ವೇಳೆ ಪ್ರಧಾನಮಂತ್ರಿ ಮುದ್ರಾ ಯೋಜನೆಯ ಫಲಾನುಭವಿಯಾದ ಚಾಮರಾಜನಗರದ ಅಂಬಿಕಾ ಎಂಬ ಮಹಿಳೆಯ ಜೊತೆ ಮಾತುಕತೆ ನಡೆಸುವಾಗ ಆ ಮಹಿಳೆ, ನಾನು ಟೈಲರ್ ಕೆಲಸ ಮಾಡುತ್ತೇನೆ. ಪಿಯುಸಿವರೆಗೆ ಓದಿದ್ದೇನೆ. ನಂತರ ನನ್ನ ಹಳ್ಳಿಯಲ್ಲಿ ಟೈಲರಿಂಗ್ ಕಲಿತಿದ್ದೇನೆ. ನಾನು ಕೇಂದ್ರ ಸರ್ಕಾರದ ಹಲವು ಯೋಜನೆಗಳ ಪ್ರಯೋಜನ ಪಡೆದಿದ್ದೇನೆ. ನಾನು ಮತ್ತು ನನ್ನ ಗಂಡ ಸೇರಿ ಹೊಲಿಗೆ ಕೆಲಸ ಮಾಡುತ್ತೇವೆ ಎಂದು ಹೇಳಿದರು.
ಆಗ ಆ ಮಹಿಳೆಯ ಜೊತೆ ತಮಾಷೆಯಾಗಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ನಾನು ಹಾಕುವ ರೀತಿಯ ಕುರ್ತಾವನ್ನು ನೀವು ಹೊಲಿಯುತ್ತೀರಾ? ಎಂದು ಕೇಳಿದರು. ಅದಕ್ಕೆ ಆಕೆ ಹೊಲಿಯುತ್ತೇನೆ ಸರ್ ಎಂದು ಹೇಳಿದರು. ಆಗ ತಮ್ಮ ಪಕ್ಕದಲ್ಲೇ ಕುಳಿತಿದ್ದ ಕೇಂದ್ರ ಸಚಿವ ಪ್ರಲ್ಹಾದ್ ಜೋಷಿಯವರನ್ನು ತೋರಿಸಿ, ಹಾಗಾದರೆ ಪ್ರಲ್ಹಾದ್ ಜೀಗೂ ಒಂದು ಕುರ್ತಾ ಹೊಲಿದುಕೊಡಿ ಎಂದು ಹೇಳಿದರು. ಆಗ ಏನು ಹೇಳಬೇಕೆಂದು ತೋಚದೆ ಆ ಮಹಿಳೆ ಸುಮ್ಮನೆ ಕುಳಿತಿದ್ದನ್ನು ನೋಡಿ ಮೋದಿ ನಸುನಕ್ಕರು.
ಪ್ರಧಾನಮಂತ್ರಿ ಆವಾಸ್ ಯೋಜನೆಯ ಫಲಾನುಭವಿಯೊಂದಿಗೆ ಸಂವಾದ ನಡೆಸಿದ ಪ್ರಧಾನಿ ಮೋದಿ, ಮನೆಗೆ ವಿದ್ಯುತ್ ಮತ್ತು ಶೌಚಾಲಯದಂತಹ ಮೂಲಭೂತ ಸೌಕರ್ಯಗಳಿವೆಯೇ ಎಂದು ಕೇಳಿದರು. ನಾನು ನಿಮ್ಮ ಮನೆಗೆ ಭೇಟಿ ನೀಡಿದರೆ ನನಗೆ ಆಹಾರವನ್ನು ನೀಡುತ್ತೀರಾ? ಎಂದು ಕೇಳಿದರು. ಅದಕ್ಕೆ ಫಲಾನುಭವಿ ಖಂಡಿತ ಸ್ವಾಮಿ ಎಂದು ಹೇಳಿದರು.
ಇದನ್ನೂ ಓದಿ: PM Modi in Mysore: 45 ನಿಮಿಷದಲ್ಲಿ 19 ಆಸನ; ಮೈಸೂರಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಯೋಗಾಭ್ಯಾಸ
ಶುದ್ಧ ಕುಡಿಯುವ ನೀರು ಸಿಗುತ್ತಿದ್ದು, ಪ್ರತಿನಿತ್ಯ ನೀರು ಸಿಗುತ್ತಿರುವುದು ಗ್ರಾಮಸ್ಥರಲ್ಲಿ ಸಂತಸ ತಂದಿದೆ ಎಂದು ಜಲ ಜೀವನ್ ಮಿಷನ್ ಫಲಾನುಭವಿ ಪ್ರಧಾನಿ ಮೋದಿಗೆ ತಿಳಿಸಿದರು. ಫಲಾನುಭವಿಗಳು ಗ್ರಾಮಸ್ಥರೊಂದಿಗೆ ಸಂವಾದ ನಡೆಸಬೇಕು. ಸರ್ಕಾರದ ಯೋಜನೆಗಳ ಬಗ್ಗೆ ತಿಳಿದಿಲ್ಲದವರಿಗೆ ಅದರ ಬಗ್ಗೆ ತಿಳಿಸುವಂತೆ ಪ್ರಧಾನಿ ಮೋದಿ ಒತ್ತಾಯಿಸಿದರು.
ಇಂತಹ ಯೋಜನೆಗಳ ಬಗ್ಗೆ ಅರಿವಿಲ್ಲದ ಇತರ ಗ್ರಾಮಸ್ಥರಿಗೆ ತಿಳಿಸುವಂತೆ ನಾನು ನಿಮ್ಮೆಲ್ಲರಲ್ಲಿ ವಿನಂತಿಸುತ್ತೇನೆ, ಹೆಚ್ಚಿನ ಬಡವರು ಇದರ ಪ್ರಯೋಜನ ಪಡೆಯಬೇಕು ಎಂದು ಆ ಫಲಾನುಭವಿಗಳಿಗೆ ಮೋದಿ ಹೇಳಿದರು. ಎಲ್ಲ ಫಲಾನುಭವಿಗಳು ಕನ್ನಡದಲ್ಲೇ ತಮ್ಮ ಅನುಭವ ಹಂಚಿಕೊಂಡಿದ್ದು, ಅದನ್ನು ಹಿಂದಿಗೆ ಟ್ರಾನ್ಸ್ಲೇಟ್ ಮಾಡಿ ಪ್ರಧಾನಿ ಮೋದಿಗೆ ತಿಳಿಸಲಾಯಿತು. ನಂತರ ಮೋದಿ ಹೇಳಿದ್ದನ್ನು ಆ ಫಲಾನುಭವಿಗಳಿಗೆ ಕನ್ನಡದಲ್ಲಿ ಹೇಳಲಾಯಿತು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:26 am, Tue, 21 June 22